ಹೊನ್ನಾಳಿ: ಮುಡಾ ನಿವೇಶನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ನೋಟಿಸ್ ನೀಡಿರುವ ಕ್ರಮವನ್ನು ವಿರೋಧಿಸಿ ಮಂಗಳವಾರ ಕರೆ ನೀಡಿದ್ದ ಹೊನ್ನಾಳಿ ಬಂದ್ ವೇಳೆ ಸಿದ್ದರಾಮಯ್ಯ ಅಭಿಮಾನಿ ಬಳಗ ಹಾಗೂ ಅಹಿಂದ ಒಕ್ಕೂಟದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಪಾಲರು ನೋಟಿಸ್ ಹಿಂಪಡೆಯದಿದ್ದರೆ ಕಾಂಗ್ರೆಸ್ ಪಕ್ಷದಿಂದ ದೊಡ್ಡ ಮಟ್ಟದ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶಾಸಕ ಡಿ.ಜಿ. ಶಾಂತನಗೌಡ ಅವರು ಹೇಳಿದರು.
‘ಪಾದಯಾತ್ರೆ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ಜನಾರ್ಧನರೆಡ್ಡಿ ಸೇರಿದಂತೆ ಕೆಲವು ಮಾಜಿ ಸಚಿವರು ಹಾಗೂ ಶಾಸಕರು ಜೈಲಿಗೆ ಹೋಗಿಬಂದವರು. ಅಂಥವರ ಮಾತನ್ನು ಕೇಳಿ ರಾಜ್ಯಪಾಲರು ನೋಟಿಸ್ ನೀಡಿದ್ದು ಸರಿಯಲ್ಲ’ ಎಂದರು.
‘ಹೊನ್ನಾಳಿ ಬಂದ್ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇದು ಗಾಂಧಿ ತತ್ವದ ಆಧಾರದಲ್ಲಿ ಆಚರಿಸಿದ ಬಂದ್. ಶಾಲಾ ಕಾಲೇಜುಗಳ ತರಗತಿಗಳಿಗೆ ಅಡ್ಡಿಪಡಿಸದೇ, ಪಟ್ಟಣದ ಹೊರವಲಯದಲ್ಲಿ ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟು ವ್ಯವಸ್ಥಿತವಾಗಿ ಬಂದ್ ಆಚರಿಸಿದ್ದು ಅಭಿನಂದನೀಯ’ ಎಂದರು.
ಮಾದಿಗ ದಂಡೋರ ಸಮಿತಿಯ ಅಧ್ಯಕ್ಷ ದಿಡಗೂರು ತಮ್ಮಣ್ಣ, ಹೊನ್ನಾಳಿ, ನ್ಯಾಮತಿ ಅಲ್ಪಸಂಖ್ಯಾತ ಸಮಿತಿ ಅಧ್ಯಕ್ಷ ಚೀಲೂರು ವಾಜೀದ್, ಉಪ್ಪಾರ ಸಂಘದ ಅಧ್ಯಕ್ಷ ಷಣ್ಮುಖಪ್ಪ, ಬಣಜಾರ್ ಸಮುದಾಯದ ಅಧ್ಯಕ್ಷ ಅಂಜುನಾಯ್ಕ, ಹಾಲುಮತ ಸಮುದಾಯದ ಅಧ್ಯಕ್ಷ ರಾಜು ಕಡಗಣ್ಣಾರ್, ಪ್ರಜಾಪರಿವರ್ತನ ವೇದಿಕೆಯ ರಾಜ್ಯ ಘಟಕದ ಕಾರ್ಯದರ್ಶಿ ಎ.ಡಿ. ಈಶ್ವರಪ್ಪ, ಎಚ್.ಎ. ಉಮಾಪತಿ ಮಾತನಾಡಿದರು.
ಕುರುಬ ಸಮುದಾಯದ ಖಜಾಂಚಿ ಎಚ್.ಎ. ನರಸಿಂಹಪ್ಪ, ಉಪಾಧ್ಯಕ್ಷ ಪುಟ್ಟಪ್ಪ, ಎ.ಡಿ. ವಿಜೇಂದ್ರಪ್ಪ, ಬೇಲಿಮಲ್ಲೂರು ನರಸಪ್ಪ, ಎಚ್.ಬಿ. ಅಣ್ಣಪ್ಪ, ಮಾದಪ್ಪ, ಕತ್ತಿಗೆ ನಾಗರಾಜ್, ಸತ್ತಿಗೆ ಸುರೇಶ್, ಕರವೇ ಯುವಸೇನೆ ಅಧ್ಯಕ್ಷ ಮಂಜು, ಮಾಜಿ ಸೈನಿಕ ಎಂ. ವಾಸಪ್ಪ, ಬೆನಕಪ್ಪ ಹರಳಹಳ್ಳಿ ಸೇರಿದಂತೆ ಸಾವಿರಾರು ಜನರು ಬಂದ್‌ನಲ್ಲಿ ಭಾಗಿಯಾಗಿದ್ದರು. ಉಪವಿಭಾಗಾಧಿಕಾರಿ ವಿ. ಅಭಿಷೇಕ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ವಜನಾಂಗದ ನಾಯಕ ಸಿದ್ದರಾಮಯ್ಯ ವಿರುದ್ಧ ಪಿತೂರಿ ನಡೆಸುತ್ತಿರುವವರಿಗೆ ಮುಂದಿನ ದಿನಗಳಲ್ಲಿ ಆಯಾ ಕ್ಷೇತ್ರದಲ್ಲಿ ಅಹಿಂದ ವರ್ಗ ತಕ್ಕ ಪಾಠ ಕಲಿಸಲಿದ್ದಾರೆ
-ನೆಲಹೊನ್ನೆ ಮೋಹನ್ ಕುರುಬರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ
ಬಂದ್‌ಗೆ ವರ್ತಕರ ಬೆಂಬಲ
ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಆರಂಭವಾಗಿದ್ದ ಬಂದ್ ಮಧ್ಯಾಹ್ನ 3 ಗಂಟೆಯವರೆಗೆ ನಡೆಯಿತು. ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಪೋಸ್ಟರ್ ಹಿಡಿದುಕೊಂಡು ನೂರಾರು ಜನ ಬೈಕ್‌ಗಳಲ್ಲಿ ಇಡೀ ಪಟ್ಟಣದ ಪ್ರತಿ ಬೀದಿಗಳಲ್ಲಿ ಸಂಚರಿಸಿದರು. ಪಟ್ಟಣದ ಬೀದಿಬದಿ ವ್ಯಾಪಾರಿಗಳು ಬೆಂಬಲ ಸೂಚಿಸಿದ್ದರು. ಹೊಟೇಲ್ ತರಕಾರಿ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಕೆಲ ಬಸ್‌ಗಳನ್ನು ಹೊರತುಪಡಿಸಿದರೆ ಉಳಿದವು ಟಿ.ಬಿ. ವೃತ್ತದಿಂದ ಹೊರವಲಯದ ಮೂಲಕ ಸಂಚರಿಸಿದವು. ಖಾಸಗಿ ಬಸ್‌ಗಳು ಹಿರೇಮಠದಿಂದ ಹೊರವಲಯದ ಮೂಲಕ ಸಂಚರಿಸಿದವು. ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಕಲ್ಪಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.