ADVERTISEMENT

‘ಕನ್ನಡ ಜಾತ್ಯತೀತ ಮತ್ತು ಸಾಮರಸ್ಯದ ಭಾಷೆ’

ಹೊನ್ನಾಳಿ ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2023, 13:10 IST
Last Updated 22 ನವೆಂಬರ್ 2023, 13:10 IST
ಹೊನ್ನಾಳಿಯಲ್ಲಿ ನಡೆದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಮಾರಂಭದಲ್ಲಿ ಪ್ರೊ. ಜಿ.ಎನ್. ಧನಂಜಯಮೂರ್ತಿ ಮಾತನಾಡಿದರು
ಹೊನ್ನಾಳಿಯಲ್ಲಿ ನಡೆದ ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಸಮಾರಂಭದಲ್ಲಿ ಪ್ರೊ. ಜಿ.ಎನ್. ಧನಂಜಯಮೂರ್ತಿ ಮಾತನಾಡಿದರು   

ಹೊನ್ನಾಳಿ: ಕನ್ನಡ ಜಾತ್ಯತೀತ ಮತ್ತು ಸಾಮರಸ್ಯದ ಭಾಷೆ ಎಂದು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ. ಜಿ.ಎನ್. ಧನಂಜಯಮೂರ್ತಿ ಹೇಳಿದರು.

ಮೃತ್ಯುಂಜಯ ಶಿವಾಚಾರ್ಯ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೊನ್ನುಡಿ ಕನ್ನಡ ವೇದಿಕೆ, ಸುವರ್ಣ ಕರ್ನಾಟಕ ಸಂಭ್ರಮಾಚರಣೆ ಮತ್ತು ಶಾಲಾ ಕಾಲೇಜುಗಳ ಸಹಯೋಗದೊಂದಿಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಮಂಗಳವಾರ ಅವರು ಮಾತನಾಡಿದರು.

‘ಕನ್ನಡಕ್ಕೆ ಜ್ಞಾನಪೀಠ ತಂದುಕೊಟ್ಟ ಎಂಟು ಸಾಹಿತಿಗಳಲ್ಲಿ ನಾಲ್ವರ ಮಾತೃಭಾಷೆ ಕನ್ನಡವಲ್ಲ. ಹೀಗೆ ಅದು ಎಲ್ಲರನ್ನೂ ಎಲ್ಲವನ್ನೂ ಸೈರಣೆಯಿಂದ ಕಾಣುತ್ತಿದೆ. ಕನ್ನಡವನ್ನು ಸಾಮರಸ್ಯದ ಮತ್ತು ಯಾವುದೇ ಜಾತಿಗೆ ಸೀಮಿತಗೊಳಿಸದೇ ನೋಡುವ ದೃಷ್ಟಿಕೋನ ಈ ಹೊತ್ತಿಗೆ ಮಹತ್ವದ್ದು’ ಎಂದು ಅವರು ಹೇಳಿದರು.

ADVERTISEMENT

ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಪ್ರೊ. ಎಂ. ನಾಗರಾಜನಾಯ್ಕ ಮಾತನಾಡಿ, ‘ಹುಯಿಲಗೋಳ ನಾರಾಯಣರಾಯರಿಂದ ಪ್ರಾರಂಭವಾದ ಕರ್ನಾಟಕ ಏಕೀಕರಣ ಸುವರ್ಣ ಕರ್ನಾಟಕದ ಸಂದರ್ಭದಲ್ಲಿದ್ದು, ಇದರ ಹಿಂದಿನ ವಿಕಾಸದ ಪರಿ ಚೇತೋಹಾರಿಯಾದುದು. ಈ ಭವ್ಯ ಪರಂಪರೆಯ ವಾರಸುದಾರರಾಗಿರುವ ನಾವೆಲ್ಲರೂ ಭಾಗ್ಯವಂತರು. ಕನ್ನಡದಲ್ಲಿ ಅತಿರಥ ಮಹಾರಥ ಸಾಹಿತಿಗಳು ಹುಟ್ಟಿದ್ದಾರೆ. ಗ್ರಂಥಾಲಯದಲ್ಲಿ ಅವರ ಪುಸ್ತಕಗಳನ್ನು ನೋಡಿದಾಗ ಅಸದಳವಾದ ಆನಂದವಾಗುತ್ತದೆ. ಈ ಪುಸ್ತಕಗಳಲ್ಲಿರುವ ಸಂದೇಶಗಳನ್ನು ನಾವೆಲ್ಲರೂ ಓದಿ ಅಳವಡಿಸಿಕೊಂಡರೆ ಒಂದು ಆದರ್ಶವಾದ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ’ ಎಂದರು.

ಸಾಹಿತಿ ಸಂಗನಾಳ ಮಠ ಅವರು ಕನ್ನಡ ಭಾಷೆಯ ವೈಶಿಷ್ಟ್ಯತೆ ಮತ್ತು ಚರಿತ್ರೆಯನ್ನು ವಿವರಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರವೀಣ್ ದೊಡಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಂ.ಪಿ.ಎಂ. ಷಣ್ಮುಖಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿ.ಎಂ. ಮಂಜಪ್ಪ, ಕನ್ನಡ ವಿಭಾಗದ ಮುಖ್ಯಸ್ಥರಾದ ಕೆ. ನಾಗೇಶ, ಕೆ. ರುದ್ರಪ್ಪ, ರೇವಣಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಪ್ರಕಾಶ ಎನ್ ನರಗಟ್ಟಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.