ADVERTISEMENT

ಹೊನ್ನಾಳಿ | ಗಬ್ಬೆದ್ದು ನಾರುವ ತಾಲ್ಲೂಕು ಆಡಳಿತ ಕಚೇರಿಯ ಶೌಚಾಲಯ

ಜನತೆಗೆ ಸ್ವಚ್ಛತೆಗೆ ಪಾಠ ಹೇಳುವ ತಾಲ್ಲೂಕು ಆಡಳಿತದ ಕಚೇರಿ ಸ್ಥಿತಿ

ಎನ್.ಕೆ.ಆಂಜನೇಯ
Published 12 ಜೂನ್ 2024, 6:55 IST
Last Updated 12 ಜೂನ್ 2024, 6:55 IST
ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿರುವ ಸಿಂಕ್‌ಗಳಿಂದ ನೀರು ಪೋಲಾಗುತ್ತಿರುವುದು
ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿರುವ ಸಿಂಕ್‌ಗಳಿಂದ ನೀರು ಪೋಲಾಗುತ್ತಿರುವುದು   

ಹೊನ್ನಾಳಿ: ತಾಲ್ಲೂಕಿನ ಜನತೆಗೆ ಸ್ವಚ್ಛತೆಯ ಪಾಠ ಹೇಳುವ ತಾಲ್ಲೂಕು ಆಡಳಿತ ತನ್ನ ಕಚೇರಿಯಲ್ಲಿನ ಶೌಚಾಲಯಗಳ ಸ್ಥಿತಿಗತಿಯನ್ನು ಮರೆತಿದೆ.

ಸ್ವಚ್ಛತೆ ಇಲ್ಲದೇ ಗಬ್ಬೆದ್ದು ಹೋಗಿರುವ ಶೌಚಾಲಯಗಳು, ಅರ್ಧಭಾಗ ಮುರಿದುಹೋಗಿರುವ ಶೌಚಾಲಯದ ಕೊಠಡಿಗಳ ಬಾಗಿಲುಗಳು ತಾಲ್ಲೂಕು ಆಡಳಿತದ ಅನೈರ್ಮಲ್ಯವನ್ನು ಎತ್ತಿ ತೋರುತ್ತದೆ.

ಶೌಚದ ಕೊಠಡಿಗಳು ಸಂಪೂರ್ಣ ಕೆಂಪು, ಹಳದಿ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿವೆ. ಇನ್ನು ಕೈ ತೊಳೆದುಕೊಳ್ಳುವ ಸಿಂಕುಗಳಿಂದ ನೀರು ಸೋರಿಕೆಯಾಗುತ್ತಿದ್ದು, ಅವುಗಳಿಂದ ಸಣ್ಣ ಪ್ರಮಾಣದಲ್ಲಿ ಹರಿದು ಹೋಗುವ ನೀರನ್ನು ತಡೆಗಟ್ಟುವ, ನಿಯಂತ್ರಿಸುವ ಕೆಲಸಕ್ಕೆ ಕಚೇರಿಯ ಸಿಬ್ಬಂದಿ ಮುಂದಾಗದಿರುವುದು ಸೋಜಿಗದ ಸಂಗತಿ.

ADVERTISEMENT

ಇನ್ನು ಮೂತ್ರಾಲಯಕ್ಕೆ ಹೋಗಲು ಪುರುಷರಿಗೆಂದೇ ಮೀಸಲಾಗಿರುವ ಜಾಗಗಳಲ್ಲಿ ನೀರಿನ ಪೂರೈಕೆ ಇಲ್ಲ ಎನ್ನುವ ದೂರುಗಳು ಕೇಳಿಬಂದಿವೆ. ಮೂತ್ರಕ್ಕೆ ಹೋಗದಂತೆ ಅಡ್ಡಲಾಗಿ ಅನುಪಯುಕ್ತ ವಸ್ತುಗಳನ್ನು ಇಟ್ಟಿರುವುದರಿಂದ ಅಲ್ಲಿಗೆ ಯಾರೂ ಹೋಗಲಾಗುತ್ತಿಲ್ಲ.

ತಾಲ್ಲೂಕು ಕಚೇರಿಯಲ್ಲಿ ಒಟ್ಟು ನಾಲ್ಕು ಮೂತ್ರಾಲಯಗಳಿದ್ದು, ಒಂದನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ. ಅಲ್ಲಿ ಅಷ್ಟೊಂದು ಸಮಸ್ಯೆ ಇಲ್ಲ ಎನ್ನಲಾಗಿದೆ. ಖಜಾನೆ ಶಾಖೆ ಸಿಬ್ಬಂದಿಗೆ ಮೀಸಲಿರುವ ಇನ್ನೊಂದು ಶೌಚಾಲಯದಲ್ಲೂ  ಸಮಸ್ಯೆ ಇದೆ.

‌ಡಿ. ದರ್ಜೆ ನೌಕರರಿಂದ ತಹಶೀಲ್ದಾರ್‌ವರೆಗಿನ ಸುಮಾರು 29 ಸಿಬ್ಬಂದಿ ಕಚೇರಿಯಲ್ಲಿ ಇದ್ದಾರೆ. ಕಚೇರಿಗೆ ಆಗಾಗ್ಗೆ ಬಂದು ಹೋಗುವ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿ ಒಟ್ಟು 40 ಸಿಬ್ಬಂದಿ ಈ ಶೌಚಾಲಯಕ್ಕೆ ಬಂದು ಹೋಗುತ್ತಾರೆ.

ಬಹುತೇಕ ಸಿಬ್ಬಂದಿ ಅನಿವಾರ್ಯವಾಗಿ ಮೂಗು ಮುಚ್ಚಿಕೊಂಡು ಮೂತ್ರಕ್ಕೆ ಮತ್ತು ಶೌಚಕ್ಕೆ ಹೋಗುತ್ತಿರುವುದು ಕಂಡು ಬರುತ್ತಿದೆ. ಈ ಕಚೇರಿಯ ಹಿರಿಯ ಅಧಿಕಾರಿಗಳಾದ ಗ್ರೇಡ್– 2 ತಹಶೀಲ್ದಾರ್ ಹಾಗೂ ಶಿರಸ್ತೇದಾರ್‌ಗಳು ಶೌಚಾಲಯದ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ ತೋರಿರುವುದು ಅಚ್ಚರಿಯ ಸಂಗತಿ.

ತಹಶೀಲ್ದಾರ್ ಕೊಠಡಿಯಲ್ಲಿ ಪ್ರತ್ಯೇಕ ಶೌಚಾಲಯ ಇರುವುದರಿಂದ ಅವರಿಗೆ ಸಿಬ್ಬಂದಿ ಬಳಸುವ ಶೌಚಾಲಯದ ವಾಸ್ತವ ಸ್ಥಿತಿ ಗಮನಕ್ಕೆ ಬಂದಿಲ್ಲ. ಈ ವಿಷಯವನ್ನು ಗ್ರೇಡ್–2 ತಹಶೀಲ್ದಾರ್ ಆಗಲಿ ಅಥವಾ ಶಿರಸ್ತೇದಾರ್ ಆಗಲಿ ತಹಶೀಲ್ದಾರ್ ಗಮನಕ್ಕೆ ತರುವ ಕೆಲಸ ಮಾಡಬಹುದಿತ್ತು ಎನ್ನುವ ಒತ್ತಾಯ ಸಿಬ್ಬಂದಿಯದ್ದು.

ಕುಡಿಯುವ ನೀರಿನ ವ್ಯವಸ್ಥೆ ಇಲ್ಲ: ನಿತ್ಯ ತಾಲ್ಲೂಕು ಕಚೇರಿಗೆ ಬಂದು ಹೋಗುವ ಸಿಬ್ಬಂದಿಗೆ ಹಾಗೂ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ.

ಕಚೇರಿಯಲ್ಲಿ ತಹಶೀಲ್ದಾರ್‌ ಇದ್ದಾಗ ಮಾತ್ರ ಕಾಣಿಸಿಕೊಳ್ಳುವ ಜವಾನರು, ಅವರು ಇಲ್ಲದಿದ್ದಾಗ ಕಾಣೆಯಾಗಿರುತ್ತಾರೆ ಎನ್ನುವ ಆರೋಪ ಸಾರ್ವಜನಿಕರದ್ದು. ತಾಲ್ಲೂಕು ಕಚೇರಿ ಸೇರಿ ಶೌಚಾಲಯದ ಸ್ವಚ್ಛತೆ, ಕುಡಿಯುವ ನೀರು, ‘ಡಿ’ ದರ್ಜೆ ಮತ್ತು ವಾಹನ ಚಾಲಕರ ಇತಿಮಿತಿಗಳ ಬಗ್ಗೆ ಕಚೇರಿಯ ಶಿರಸ್ತೇದಾರ್, ಇಲ್ಲವೇ ಗ್ರೇಡ್– 2 ತಹಶೀಲ್ದಾರ್‌ಗಳು ತಮ್ಮ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎನ್ನುವ ಅಭಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿವೆ.

ಹೊನ್ನಾಳಿ ತಾಲ್ಲೂಕು ಕಚೇರಿಯಲ್ಲಿ ಪುರುಷರು ಮೂತ್ರಕ್ಕೆ ಹೋಗಬೇಕಾದ ಜಾಗದಲ್ಲಿ ನುಪಯುಕ್ತ ವಸ್ತುಗಳನ್ನು ಇಟ್ಟಿರುವುದು

Quote - ತಾಲ್ಲೂಕು ಕಚೇರಿಯಲ್ಲಿನ ಶೌಚಾಲಯವನ್ನು ಸ್ವಚ್ಛ ಮಾಡುವಂತೆ ಆಗಾಗ್ಗೆ ಪುರಸಭೆಯ ಆರೋಗ್ಯ ನಿರೀಕ್ಷಕರಿಗೆ ಹಾಗೂ ಕಿರಿಯ ಎಂಜಿನಿಯರ್‌ಗೆ ಪತ್ರ ಬರೆದರೂ ಏನೂ ಪ್ರಯೋಜನವಾಗುತ್ತಿಲ್ಲ. ಸುರೇಶ್‍ನಾಯ್ಕ ಗ್ರೇಡ್– 2 ತಹಶೀಲ್ದಾರ್

Quote - ಶೌಚಾಲಯ ಸ್ವಚ್ಛ ಮಾಡುವ ಕುರಿತು ತಾಲ್ಲೂಕು ಕಚೇರಿಯಿಂದ ಪುರಸಭೆಗೆ ಪತ್ರ ಬಂದಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಹರ್ಷವರ್ಧನ್ ಕಿರಿಯ ಆರೋಗ್ಯ ನಿರೀಕ್ಷಕ ಪುರಸಭೆ ಹೊನ್ನಾಳಿ

Cut-off box - ಸಮಸ್ಯೆ ಸರಿಪಡಿಸುವವರಾರು ಮಿನಿ ವಿಧಾನಸೌಧದಲ್ಲಿರುವ ಶೌಚಾಲಯದ ಸ್ಥಿತಿಯನ್ನು ನಾನು ಕಣ್ಣಾರೆ ನೋಡಿದ್ದೇನೆ. ಅಲ್ಲಿ ಸ್ವಚ್ಛತೆ ಇಲ್ಲ ನಲ್ಲಿಗಳಲ್ಲಿ ನೀರಿಲ್ಲ. ನೀರಿನ ಪೈಪ್‍ಲೈನ್‌ಗಳು ಸರಿ ಇಲ್ಲ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಅಲ್ಲಿ ಕೆಲಸ ಮಾಡುತ್ತಿರುವ ನೌಕರರು ಕಣ್ಣುಮುಚ್ಚಿಕೊಂಡು ಹೋಗಿ ಬರುತ್ತಿದ್ದಾರೆ. ಹಾಗಾದರೆ ಇದನ್ನು ಸರಿಪಡಿಸುವವರಾರು. ಎಂ. ವಾಸಪ್ಪ ಮಾಜಿ ಸೈನಿಕ ಹೊನ್ನಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.