ADVERTISEMENT

ಹೊನ್ನಾಳಿ: ಅಡಿಕೆ ತೋಟಗಳ ಜೀವ ಉಳಿಸಿದ ಮಳೆ 

ಹೊನ್ನಾಳಿ ತಾಲ್ಲೂಕಿನ ಕೆಲವೆಡೆ ಉತ್ತಮ, ಕೆಲವೆಡೆ ಸಾಧಾರಣ ಮಳೆ

​ಪ್ರಜಾವಾಣಿ ವಾರ್ತೆ
Published 16 ಮೇ 2024, 13:47 IST
Last Updated 16 ಮೇ 2024, 13:47 IST
ಹೊನ್ನಾಳಿ ತಾಲ್ಲೂಕಿನ ಹತ್ತೂರು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತಿರುವುದು
ಹೊನ್ನಾಳಿ ತಾಲ್ಲೂಕಿನ ಹತ್ತೂರು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಮೀನುಗಳಲ್ಲಿ ನೀರು ನಿಂತಿರುವುದು   

ಹೊನ್ನಾಳಿ: ಹೊನ್ನಾಳಿ ಪಟ್ಟಣದಲ್ಲಿ ಸುಮಾರು 45 ನಿಮಿಷ ಸಾಧಾರಣ ಮಳೆಯಾಗಿದೆ. ತಾಲ್ಲೂಕಿನ ಸುತ್ತಮುತ್ತ ಕೆಲವೆಡೆ ಸಾಧಾರಣ ಹಾಗೂ ಮತ್ತೆ ಕೆಲವೆಡೆ ಉತ್ತಮ ಮಳೆಯಾಗಿದೆ. 

ಗುರುವಾರ ಸಂಜೆ 4 ಗಂಟೆಗೆ ಗುಡುಗು ಸಿಡಿಲಿನಿಂದ ಆರಂಭವಾದ ಮಳೆ ರೈತರಲ್ಲಿ ಹರ್ಷ ಮೂಡಿಸಿತು. ತಾಲ್ಲೂಕಿನ ಕೆಂಗಲಹಳ್ಳಿ, ಮುಕ್ತೇನಹಳ್ಳಿ ಹಾಗೂ ಬನ್ನಿಕೋಡು ಸುತ್ತಮುತ್ತ 20 ರಿಂದ 30 ನಿಮಿಷಗಳ ಕಾಲ ಉತ್ತಮ ಮಳೆಯಾಗಿದೆ. ಆದರೆ ಕುಂದೂರು, ಕುಂಬಳೂರು ಭಾಗದಲ್ಲಿ ಮಳೆಯಾಗಿಲ್ಲ. ತಾಲ್ಲೂಕಿನ ಸಾಸ್ವೇಹಳ್ಳಿ ಕುಳಗಟ್ಟೆ ಭಾಗದಲ್ಲಿ ಉತ್ತಮ ಮಳೆಯಾಗಿದ್ದರೆ, ಜಮೀನು, ತೋಟದ ಕಡೆಗೆ ಮಳೆಯಾಗಿಲ್ಲ ಎಂದು ಸ್ಥಳೀಯರಾದ ಕುಳಗಟ್ಟೆ ನಾಗರಾಜ್ ತಿಳಿಸಿದ್ದಾರೆ. 

ತಾಲ್ಲೂಕಿನ ಮಾರಿಕೊಪ್ಪ, ಹತ್ತೂರು ಭಾಗದಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ. ತಾಲ್ಲೂಕಿನ ಬೇಲಿಮಲ್ಲೂರು, ಕೋಟೆಮಲ್ಲೂರು ಭಾಗದಲ್ಲಿ ಜೋರು ಮಳೆಯಾಗಿದೆ. ತಾಲ್ಲೂಕಿನ ಸಿಂಗಟಗೆರೆ, ತರಗನಹಳ್ಳಿ ಹಾಗೂ ಹನುಮನಹಳ್ಳಿ ಭಾಗದಲ್ಲಿ ಸುಮಾರು 25 ನಿಮಿಷಗಳ ಕಾಲ ಉತ್ತಮ ಮಳೆಯಾಗಿದೆ.

ADVERTISEMENT

ತೋಟಗಳಿಗೆ ಆಸರೆ: ‘ತೋಟ ಉಳಿಸಿಕೊಳ್ಳುವ ಅನಿವಾರ್ಯತೆಗೆ ಬಿದ್ದು 10 ಕೊಳವೆಬಾವಿಗಳನ್ನು ಕೊರೆಸಿದ್ದೆ. ಈ ಪೈಕಿ ಐದು ವಿಫಲವಾದವು. ಉಳಿದ ಐದರಲ್ಲಿ ಅಲ್ಪಸ್ವಲ್ಪ ನೀರು ಬಂತು. ಅದರಲ್ಲಿಯೇ ತೋಟ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ಗುರುವಾರ ಬಂದ ಮಳೆ ಅಡಿಕೆ ತೋಟದ ಜೀವ ಉಳಿಸಿದೆ. ಈ ಮಳೆ ನಾಲ್ಕೈದು ದಿನಗಳಿಗೆ ತೊಂದರೆ ಇಲ್ಲ’ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ ಹೇಳಿದ್ದಾರೆ.

ಹೊನ್ನಾಳಿಯ ಕೋಟೆಮಲ್ಲೂರು ಭಾಗದ ತೋಟದ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.