ADVERTISEMENT

ಹೊನ್ನಾಳಿ: ಅನಧಿಕೃತ ಕ್ಲಿನಿಕ್‌– ಇಬ್ಬರು ನಕಲಿ ವೈದ್ಯರ ಮೇಲೆ ಕ್ರಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 14:41 IST
Last Updated 11 ಸೆಪ್ಟೆಂಬರ್ 2024, 14:41 IST
<div class="paragraphs"><p>  ಆದೇಶ ಕಾಯ್ದಿರಿಸಿದ ನ್ಯಾಯಾಲಯ</p></div>

ಆದೇಶ ಕಾಯ್ದಿರಿಸಿದ ನ್ಯಾಯಾಲಯ

   

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಹಾಗೂ ಲಿಂಗಾಪುರದಲ್ಲಿ ಅನಧಿಕೃತ ಕ್ಲಿನಿಕ್‌ ತೆರೆದು ವೈದ್ಯಕೀಯ ಸೇವೆ ಒದಗಿಸುತ್ತಿದ್ದ ಇಬ್ಬರು ನಕಲಿ ವೈದ್ಯರಿಗೆ ತಲಾ ₹ 1 ಲಕ್ಷ ದಂಡ ವಿಧಿಸಿದ ಕೆಪಿಎಂಇ ನೋಂದಣಿ ಪ್ರಾಧಿಕಾರ ಹಾಗೂ ಸಾರ್ವಜನಿಕ ಕುಂದು ಕೊರತೆ ನಿವಾರಣಾ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.

ಭದ್ರಾವತಿ ತಾಲ್ಲೂಕಿನ ಸನ್ಯಾಸಿಕೊಡಮಗ್ಗಿ ಗ್ರಾಮದ ಫಾರ್ಮಾಸಿಸ್ಟ್ ಶ್ರೀನಿವಾಸ್ (57) ಹಾಗೂ ಹಿರೆಕೇರೂರು ತಾಲ್ಲೂಕಿನ ಹಿರೆಮೊರಬ ಗ್ರಾಮದ ಲಕ್ಷ್ಮಣ (45) ದಂಡ ತೆತ್ತಿರುವ ನಕಲಿ ವೈದ್ಯರು. ಶ್ರೀನಿವಾಸ್ ನಡೆಸುತ್ತಿದ್ದ ಔಷಧ ಅಂಗಡಿಯನ್ನು ಮುಚ್ಚಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ADVERTISEMENT

ಹೊನ್ನಾಳಿ ತಾಲ್ಲೂಕಿನ ಲಿಂಗಾಪುರದಲ್ಲಿ ‘ರಾಮಾಂಜನೇಯ ಮೆಡಿಕಲ್ಸ್ ಮತ್ತು ಜನರಲ್ ಸ್ಟೋರ್’ ಪರವಾನಗಿ ಪಡೆದಿದ್ದ ಫಾರ್ಮಸಿಸ್ಟ್‌ ಶ್ರೀನಿವಾಸ್, ವೈದ್ಯಕೀಯ ಸೇವೆಯನ್ನು ಒದಗಿಸುತ್ತಿದ್ದರು. ಕ್ಯಾಸಿನಕೆರೆ ಗ್ರಾಮದ ದೇಗುಲದ ಬಳಿ ಲಕ್ಷ್ಮಣ್‌ ಕ್ಲಿನಿಕ್‌ ತೆರೆದಿದ್ದರು. ಎರಡು ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದಾಗ ಲಕ್ಷ್ಮಣ್‌, ಬಿಎಎಂಎಸ್‌ ಪ್ರಮಾಣ ಪತ್ರ ಹಾಜರುಪಡಿಸಿದ್ದರು. ಇದು ಅಮಾನ್ಯ ಪ್ರಮಾಣ ಪತ್ರ ಎಂಬುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್‌ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗಿರೀಶ್ ಸ್ಥಳ ಮಹಾಜರು ನಡೆಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಅವರಿಗೆ ಸಮಗ್ರ ವರದಿ ನೀಡಿದ್ದರು. ಈ ವರದಿಯನ್ನು ಆಧರಿಸಿ ಜಿಲ್ಲಾಧಿಕಾರಿ ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.