ಹೊನ್ನಾಳಿ: ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲು ಕೆಲವೇ ಗಂಟೆಗಳು ಬಾಕಿ ಇರುವಾಗ ಜಿಲ್ಲೆಯಲ್ಲಿ ಅಭ್ಯರ್ಥಿಗಳ ಪರ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ಹೊನ್ನಾಳಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಜಿ. ಶಾಂತನಗೌಡ ಅವರ ಪರ ಭರ್ಜರಿ ಬೆಟ್ಟಿಂಗ್‌ಗೆ ಬಹಿರಂಗ ಆಹ್ವಾನ ನೀಡಲಾಗಿದೆ.
ಈ ಕುರಿತು ಸವಾಲು ಹಾಕುತ್ತಿರುವ ವ್ಯಕ್ತಿಯ ವಿಡಿಯೊ ತುಣುಕನ್ನು ಶುಕ್ರವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ತಾಲ್ಲೂಕಿನ ಚಿಕ್ಕಗೋಣಿಗೆರೆ ಹೆಬ್ಬಾರ್ ನಾಗಣ್ಣ ಅವರು, ‘ಕಾಂಗ್ರೆಸ್‌ನ ಡಿ.ಜಿ. ಶಾಂತನಗೌಡ ಅವರು ಗೆಲ್ಲುತ್ತಾರೆ. ಅವರ ಪರವಾಗಿ 2 ಎಕರೆ ಜಮೀನು ಪಣಕ್ಕಿಡಲು ಸಿದ್ಧನಿದ್ದೇನೆ. ಬಿಜೆಪಿಯವರು ದಮ್ಮಿದ್ದರೆ ಬರಲಿ’ ಎಂದು ಗ್ರಾಮದ ಬೀದಿ ಬೀದಿಗಳಲ್ಲಿ ಹಲಗೆ ಬಾರಿಸುತ್ತ ಸಾಗಿದ್ದಾರೆ.
ಇದಕ್ಕೆ ಬಿಜೆಪಿ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನಲಾಗಿದೆ.
ನ್ಯಾಮತಿ ಟೌನ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಅವರು 1 ಎಕರೆ ಜಮೀನು ಪಣಕ್ಕಿಡುವುದಾಗಿ ತಮ್ಮ ಫೋಟೊ ಸಹಿತ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಗೋಣಿಗೆರೆಯ ಬೀರಪ್ಪಾರ ಸಿದ್ಧಾರೂಢ ಅವರು ತಮ್ಮ ಎರಡು ಕುರಿಗಳನ್ನು ಜೂಜು ಕಟ್ಟುವುದಾಗಿ ಹೇಳಿದ್ದಾರೆ. ಇವುಗಳಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ರಾಜಕಾರಣಿಯೊಬ್ಬರು ತಿಳಿಸಿದರು.
ಅಡಿಕೆ ತೋಟ ಪಣಕ್ಕೆ: ತಾಲ್ಲೂಕಿನ ನೇರಲಗುಂಡಿಯ ಹನುಮಂತಪ್ಪ ಬಸಪ್ಪ ಅವರು ಕಾಂಗ್ರೆಸ್‌ನ ಡಿ.ಜಿ.ಶಾಂತನಗೌಡ ಅವರು ಗೆದ್ದೇ ಗೆಲ್ಲುತ್ತಾರೆ ಎಂದು ತಮ್ಮ ಎರಡು ಎಕರೆ ಅಡಿಕೆ ತೋಟವನ್ನು ಪಣಕ್ಕಿಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡಿದ್ದಾರೆ. ಇದಕ್ಕೆ ಬಿಜೆಪಿ ಅಭ್ಯರ್ಥಿ ಎಂ.ಪಿ. ರೇಣುಕಾಚಾರ್ಯ ಅವರ ಪರವಾಗಿ ಶಿವಾನಂದಯ್ಯ ಅವರು ಎರಡು ಎಕರೆ ಅಡಿಕೆ ತೋಟವನ್ನು ಪಣಕ್ಕಿಟ್ಟಿದ್ದಾರೆ ಎಂದೂ ತಿಳಿದುಬಂದಿದೆ.
ಶಾಂತನಗೌಡ ಅವರು ಗೆಲ್ಲುತ್ತಾರೆ ಎಂದು ತಾಲ್ಲೂಕಿನ ಬಹುತೇಕ ಕಡೆಗಳಲ್ಲಿ ಸಾವಿರದಿಂದ ಲಕ್ಷದವರೆಗೂ ಬೆಟ್ಟಿಂಗ್ ನಡೆದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚನ್ನಗಿರಿ ಕ್ಷೇತ್ರದ ಪಾಂಡೊಮಟ್ಟಿ, ಹೊದಿಗೆರೆ ಹಾಗೂ ಬೊಪ್ಪೇನಹಳ್ಳಿ ಭಾಗಗಳಲ್ಲಿ ಬಾಜಿ ಶುರುವಾಗಿದೆ. ಇಲ್ಲಿ ₹ 1 ಲಕ್ಷದಿಂದ ₹ 5 ಲಕ್ಷದವರೆಗೂ ಪಣಕ್ಕಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚನ್ನಗಿರಿ ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ್ ಗೆಲ್ಲುತ್ತಾರೆ ಎಂದು ಕಾಂಗ್ರೆಸ್ ಮುಖಂಡರು ಸೆಲ್ಫಿ ವಿಡಿಯೊ ಮಾಡಿ ಆಹ್ವಾನ ನೀಡಿದ್ದಾರೆ. ಕಾಂಗ್ರೆಸ್ ಗೆಲ್ಲುವುದು ಖಚಿತ. ಬೇಕಿದ್ದವರು ಜೂಜು ಕಟ್ಟಬಹುದು ಎಂದು ಈ ಬಹಿರಂಗ ಸವಾಲ್ ಮೂಲಕ ಆಹ್ವಾನ ನೀಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.