ಚನ್ನಗಿರಿ: ಮಕ್ಕಳು ಹಾಗೂ ಮಹಿಳೆಯರನ್ನು ಅಪಹರಿಸಿ ಬಲವಂತದ ದುಡಿಮೆ, ಅನೈತಿಕ ಚಟುವಟಿಕೆ ಹಾಗೂ ಭಿಕ್ಷಾಟನೆಗೆ ತೊಡಗಿಸುತ್ತಿರುವುದು ಬೇಸರದ ಸಂಗತಿ. ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಮಾರ್ಪಟ್ಟಿದೆ ಎಂದು ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಶ್ರಮ ಶ್ರೀವತ್ಸ ಅಭಿಪ್ರಾಯಪಟ್ಟರು.
ಪಟ್ಟಣದ ನವಚೇತನ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನವ ಕಳ್ಳ ಸಾಗಾಣಿಕೆಗೆ ಮಹಿಳೆಯರು ಮತ್ತು ಮಕ್ಕಳು ಹೆಚ್ಚಾಗಿ ಬಲಿಯಾಗುತ್ತಿದ್ದು, ಎಲ್ಲರೂ ಎಚ್ಚೆತ್ತುಕೊಳ್ಳಬೇಕಿದೆ. ಬಡತನದಲ್ಲಿರುವ ಮಹಿಳೆಯರಿಗೆ ಹಣದ ಅಗತ್ಯವಿದ್ದು, ಅದನ್ನೇ ದುರುಪಯೋಗಪಡಿಸಿಕೊಂಡು ಆಮಿಷ ಒಡ್ಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿದೆ. ಪಾಲಕರು ಮಕ್ಕಳ ಬಗ್ಗೆ ಜಾಗೃತರಾಗಿರಬೇಕು. ಆಮಿಷಗಳಿಗೆ ಬಲಿಯಾಗಿ ಮೋಸ ಹೋಗದಂತೆ ತಡೆಯಬೇಕು. ಈ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಲ್. ಜಯಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಆರ್. ನಿರ್ಮಲಾ, ನವಚೇತನ ಪ್ರೌಢಶಾಲೆ ಮುಖ್ಯಶಿಕ್ಷಕಿ ಸಿಸ್ಟರ್ ಓಪಿಲಿಯ, ವಕೀಲರ ಸಂಘದ ಉಪಾಧ್ಯಕ್ಷ ಆರ್. ಬಾಬುಜಾನ್, ಕಾರ್ಯದರ್ಶಿ ಎಂ.ಎಸ್. ಜಗದೀಶ್, ಖಜಾಂಚಿ ವಿ.ಎ. ಮಲ್ಲಿಕಾರ್ಜುನ್, ಎಚ್. ಸೋಮಶೇಖರ್, ಎ.ಎಲ್. ಶಿವರಾಜ್ ಉಪಸ್ಥಿತರಿದ್ದರು.
ವಕೀಲ ಸಿ.ತಿಪ್ಪೇಶ್ ಉಪನ್ಯಾಸ ನೀಡಿದರು. ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ. ರಾಜಪ್ಪ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.