ಹರಪನಹಳ್ಳಿ: ಅಬ್ಬಾ! ಅಕ್ಷರಶಃ ಅದು ಜಲಪ್ರಳಯವೇ! ಆಕಾಶದಲ್ಲಿ ಕಾರ್ಮೋಡ. ಎಲ್ಲಿ ನೋಡಿದರೂ ನೀರು. ಕತ್ತಲ ಜಗತ್ತು ಆವರಿಸಿತ್ತು. ರಪರಪನೇ ಬೀಳುತ್ತಿದ್ದ ಮಳೆಯ ಹನಿಗಳು ಮಾರ್ದನಿಸುತ್ತಿದ್ದವು. ಅಲ್ಲಿನ ಭಯಾನಕ ವಾತಾವರಣ ಎಂತಹ ಧೈರ್ಯಶಾಲಿಯನ್ನಾದರೂ ಭೀತಿಗೊಳಿಸುತ್ತಿದ್ದವು.
–ಅತಿವೃಷ್ಟಿಯಿಂದ ನಲುಗಿದ ಕೇರಳ ರಾಜ್ಯದ ಈ ಕಥೆಯನ್ನು ಬಿಚ್ಚಿಟ್ಟವರು ಹರಪನಹಳ್ಳಿ ತಾಲ್ಲೂಕಿನ ಉಮೇಶ್ ನಾಯ್ಕ. ಸದ್ಯ ಕೇರಳದ ಪತ್ತನಂತಿಟ್ಟಾ ಜಿಲ್ಲೆಯ ತಿರುವಳ್ಳಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಆಗಿ ಅವರು ಕೆಲಸ ಮಾಡುತ್ತಿದ್ದಾರೆ. ನೆರೆ ಹಾವಳಿಗೆ ಸಿಕ್ಕು ನಂತರ ಕೆಲದಿನಗಳ ಕಾಲ ಗ್ರಾಮಕ್ಕೆ ಬಂದಿರುವ ಅವರು ಅಲ್ಲಿನ ಕಷ್ಟದ ದಿನಗಳ ಬಗ್ಗೆ ಅನುಭವ ಹಂಚಿಕೊಂಡಿದ್ದಾರೆ.
‘ಇಡೀ ಊರೇ ಪ್ರವಾಹದಲ್ಲಿ ಮುಳುಗಡೆಯಾಗಿತ್ತಾದರೂ ನಾವು ಇದ್ದ ಎತ್ತರದ ಮನೆಯ ತಡೆಗೋಡೆಯವರಿಗೆ ನೀರು ಹರಿಯುತ್ತಿತ್ತು. ವಿದ್ಯುತ್ ಇಲ್ಲ, ಮಳೆಯ ಮಾಹಿತಿ ಅರಿವಿಗೆ ಬರುತ್ತಿರಲಿಲ್ಲ. ಮನೆಯಿಂದ ಹೊರಹೋಗುವಂತಿಲ್ಲ. ಯಾರೊಂದಿಗೂ ಸಂಪರ್ಕವೇ ಇಲ್ಲದಂತಾಗಿತ್ತು. ಇದ್ದ ಮೊಬೈಲ್‌ನ್ನು ಸಂಬಂಧಿಕರೊಂದಿಗೆ ಸಂಪರ್ಕಕ್ಕೆ ಮಾತ್ರ ಬಳಸಿಕೊಂಡಿದ್ದೆ’ ಎನ್ನುತ್ತಾರೆ ಉಮೇಶ್.
‘ತಿಂಗಳಿಗಾಗುವಷ್ಟು ದಿನಸಿ ಶೇಖರಣೆ ಮಾಡಿದ್ದರಿಂದ ಹಗಲು ಹೊತ್ತು ಮಾತ್ರ ಊಟದ ಸಿದ್ಧತೆ ಮಾಡಿಕೊಳ್ಳಬಹುದಾಗಿತ್ತು. ರಾತ್ರಿ ವಿದ್ಯುತ್ ಇಲ್ಲದೇ ಕುಳಿತ ಜಾಗದಲ್ಲೇ ಕಾಲ ಕಳೆದಿದ್ದೆವು. ಕತ್ತಲಲ್ಲಿ ವಿಷಜಂತುಗಳ ಭಯವೂ ನಮ್ಮನ್ನು ಕಾಡುತ್ತಿತ್ತು. ನಾನು-ನನ್ನ ಮಡದಿ ಹಾಗೂ ಮೂರುವರೆ ವರ್ಷದ ಮಗ. ನಮ್ಮೂರನ್ನು ನಾವು ಮತ್ತೆ ನೋಡುತ್ತೇವೆ ಎಂದು ಅನಿಸಿರಲಿಲ್ಲ’ ಎಂದು ಅಚ್ಚರಿ ವ್ಯಕ್ತಪಡಿಸಿದರು.
ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಅಣೆಕಟ್ಟುಗಳು ತುಂಬಿದ್ದವು. ಜಲಾಶಯಗಳಿಂದ ಹೆಚ್ಚುವರಿ ನೀರು ಬಿಡಲಾಗುತ್ತಿತ್ತು. ಬಿಸಿಲೂರಿನಿಂದ ತೆರಳಿದ್ದ ಇವರಿಗೆ ತಂಪಾದ ವಾತಾವರಣ ಹಿಡಿಸಿತ್ತಾದರೂ ಅತಿವೃಷ್ಟಿಯಿಂದ ತೊಂದರೆಗೀಡಾಗುವ ಯೋಚನೆಯೂ ಇರಲಿಲ್ಲ. ತಿರುವಳ್ಳಿಯ ಜನಜೀವನ ಅಸ್ತವ್ಯಸ್ತವಾಗಿತ್ತು. ಬಡವರಿಗೆ, ತಗ್ಗು ಪ್ರದೇಶದ ಜನರಿಗೆ ನಿರಾಶ್ರಿತರ ಪುನರ್ವಸತಿ ಕೇಂದ್ರ ವರದಾನವಾಗಿತ್ತು.
ತಾಲ್ಲೂಕಿನ ಹಾರಕನಾಳು ತಾಂಡಾದ ನಿವಾಸಿ ಉಮೇಶ್ ನಾಯ್ಕ್ ಪಟ್ಟಣದ ಎಚ್.ಪಿ.ಎಸ್ ಕಾಲೇಜಿನಲ್ಲಿ ಪಿಯುಸಿ ಮುಗಿಸಿ, ಶಿವಮೊಗ್ಗದಲ್ಲಿ ಬಿಎಸ್‌ಸಿ ಪದವಿ ಮುಗಿಸಿದ್ದರು. ನಂತರ ಬೆಂಗಳೂರಲ್ಲಿ ಎಂಎಸ್‌ಸಿ ಪದವಿ ಪೂರ್ಣಗೊಳಿಸಿ ಬ್ಯಾಂಕ್ ನೌಕರಿ ಸೇರಿಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ಚಿತ್ರದುರ್ಗ ಶಾಖೆಯಿಂದ ಕೇರಳಕ್ಕೆ ವರ್ಗವಾಗಿತ್ತು.
‘ಮೊದಲು ತಗ್ಗುಪ್ರದೇಶದ ಮನೆಯಲ್ಲಿ ವಾಸುಸುತ್ತಿದ್ದೆ. ಒಂದೂವರೆ ತಿಂಗಳ ಹಿಂದೆ ಎತ್ತರದ ಪ್ರದೇಶದಲ್ಲಿನ ಮನೆಯೊಂದಕ್ಕೆ ಶಿಫ್ಟ್ ಆಗಿದ್ದೆ. ಇದೇ ನನ್ನನ್ನು ಇಂದು ಪಾರು ಮಾಡಲು ಸಾಧ್ಯವಾಯಿತೇನೋ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.