ADVERTISEMENT

ತ್ವರಿತ ಸ್ಪಂದನೆಯಿಂದ ಪೊಲೀಸ್ ಇಲಾಖೆಗೆ ಮಹತ್ವ

ನಿವೃತ್ತ ಡಿವೈಎಸ್‌ಪಿ ಸಿ.ಎನ್. ಬಸವರಾಜ್ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2024, 5:28 IST
Last Updated 3 ಏಪ್ರಿಲ್ 2024, 5:28 IST
<div class="paragraphs"><p>ದಾವಣಗೆರೆಯಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ದಾವಣಗೆರೆ ಪೂರ್ವ ವಲಯ ಐಜಿಪಿ ಕೆ. ತ್ಯಾಗರಾಜನ್ ಅವರು ಪೊಲೀಸ್ ಸಿಬ್ಬಂದಿ ಶ್ರೇಯೋಭಿವೃದ್ಧಿಗೆ ದೇಣಿಗೆ ಸಲ್ಲಿಸಿದರು. </p></div>

ದಾವಣಗೆರೆಯಲ್ಲಿ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ದಾವಣಗೆರೆ ಪೂರ್ವ ವಲಯ ಐಜಿಪಿ ಕೆ. ತ್ಯಾಗರಾಜನ್ ಅವರು ಪೊಲೀಸ್ ಸಿಬ್ಬಂದಿ ಶ್ರೇಯೋಭಿವೃದ್ಧಿಗೆ ದೇಣಿಗೆ ಸಲ್ಲಿಸಿದರು.

   

ದಾವಣಗೆರೆ: ‘ಸಾರ್ವಜನಿಕರ ಸಮಸ್ಯೆಗಳನ್ನು ಸಾವಧಾನದಿಂದ ಆಲಿಸಿ, ತ್ವರಿತವಾಗಿ ಸ್ಪಂದಿಸಿದಾಗ ಮಾತ್ರ ಪೊಲೀಸ್ ಇಲಾಖೆಗೆ ಮಹತ್ವ ಬರುತ್ತದೆ’ ಎಂದು ನಿವೃತ್ತ ಡಿವೈಎಸ್‌ಪಿ ಸಿ.ಎನ್. ಬಸವರಾಜ್ ತಿಳಿಸಿದರು.

ಜಿಲ್ಲಾ ಪೊಲೀಸ್ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ಪೊಲೀಸ್ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ADVERTISEMENT

‘ಜನರು ಪೊಲೀಸ್ ಇಲಾಖೆ ಮೇಲೆ ಅಪರಿಮಿತ ಭರವಸೆ ಹೊಂದಿದ್ದು, ತಮಗೆ ತೊಂದರೆ ಉಂಟಾದಾಗ ಠಾಣೆಗೆ ಬಂದು ಕಷ್ಟ ಕಾರ್ಪಣ್ಯ ಹೇಳಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಪೊಲೀಸರ ವರ್ತನೆ ಸರಿಯಿಲ್ಲದಿದ್ದರೆ ಇಡೀ ಪೊಲೀಸ್ ಇಲಾಖೆ ಮೇಲೆ ಅಪನಂಬಿಕೆ ಉಂಟಾಗುತ್ತದೆ’ ಎಂದು ಹೇಳಿದರು.

‘ಸರ್ಕಾರದ ಇತರೆ ಇಲಾಖೆಗಳಿಗಿಂತ ಪೊಲೀಸ್ ಇಲಾಖೆ ಮಹತ್ವದ್ದು. ದೇಶದೊಳಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಗಲು ರಾತ್ರಿ ಕೆಲಸ ಮಾಡುವ ಪೊಲೀಸರು ಕೆಲವೊಮ್ಮೆ ವೈದ್ಯರು, ಎಂಜಿನಿಯರ್ ಹಾಗೂ ನ್ಯಾಯಾಧೀಶರಾಗಿಯೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಪ್ರಾಸ್ತಾವಿಕವಾಗಿ ಮಾತನಾಡಿ, ‘1965ರಿಂದಲೂ ಪೊಲೀಸ್ ಧ್ವಜ ದಿನ ಆಚರಿಸಲಾಗುತ್ತಿದ್ದು, ಇಲಾಖೆಯಲ್ಲಿ ನಿರಂತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಸೇವೆ ಸ್ಮರಿಸುವ ದಿನವಾಗಿದೆ. ಹಿರಿಯ ಅಧಿಕಾರಿಗಳ ಸೇವೆ ಇಲಾಖೆಯ ಎಲ್ಲರಿಗೂ ಸ್ಪೂರ್ತಿ ಹಾಗೂ ಮಾದರಿ ಆಗಬೇಕು’ ಎಂದು ತಿಳಿಸಿದರು.

‘ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣವೇ ನಮ್ಮ ಗುರಿಯಾಗಿದ್ದು, ಪೊಲೀಸ್ ಧ್ವಜಗಳಿಂದ ಬಂದ ಶೇ 50ರಷ್ಟು ಹಣ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮನಿಧಿಗೂ ಮತ್ತು ಉಳಿದ ಶೇ50ರಷ್ಟು ಹಣ ಕೇಂದ್ರದ ನಿವೃತ್ತ ಕ್ಷೇಮ ನಿಧಿಗೆ ಜಮಾ ಮಾಡಲಾಗುತ್ತದೆ’ ಎಂದರು.

‘2023ನೇ ಸಾಲಿನಲ್ಲಿ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಸುಮಾರು ₹25.40 ಲಕ್ಷವನ್ನು ಪೊಲೀಸ್ ಕಲ್ಯಾಣ ನಿಧಿಗೆ ಹಾಗೂ ₹12.20 ಲಕ್ಷವನ್ನು ನಿವೃತ್ತ ಕಲ್ಯಾಣ ನಿಧಿಗೆ ಜಮಾ ಮಾಡಲಾಗಿದೆ. ಈ ವರ್ಷ ಜಿಲ್ಲೆಯಲ್ಲಿ 19 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನಿವೃತ್ತಿ ಹೊಂದಿದ್ದಾರೆ’ ಎಂದು ಮಾಹಿತಿ ನೀಡಿದರು.

ಪೂರ್ವ ವಲಯ ಪೊಲೀಸ್ ಮಹಾ ನಿರೀಕ್ಷಕ ಕೆ. ತ್ಯಾಗರಾಜನ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯಕುಮಾರ್ ಎಂ. ಸಂತೋಷ್, ಬಿ. ಮಂಜುನಾಥ್ ಇತರರು ಇದ್ದರು. ಇದೇ ಸಂದರ್ಭದಲ್ಲಿ 2023-24ನೇ ಸಾಲಿನಲ್ಲಿ ನಿವೃತ್ತಿ ಹೊಂದಿದ ಪೊಲೀಸ್ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು.

ಜಿಲ್ಲಾ ಪೊಲೀಸ್ ಸಶಸ್ತ್ರ ಮೀಸಲು ಪಡೆ, ನಗರ ಉಪವಿಭಾಗ ತಂಡ, ಮಹಿಳಾ ಪೊಲೀಸ್ ತಂಡ, ಚನ್ನಗಿರಿ ಉಪ ವಿಭಾಗ ತಂಡ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗ ತಂಡಗಳು ಆಕರ್ಷಕ ಪಥ ಸಂಚಲನ ನಡೆಸುವ ಮೂಲಕ ಗೌರವ ವಂದನೆ ಸಲ್ಲಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.