ದಾವಣಗೆರೆ: ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ‘ಇ-ಕಚೇರಿ’ ತಂತ್ರಾಂಶಕ್ಕೆ ಸೋಮವಾರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಚಾಲನೆ ನೀಡಿದರು.
ಬೆಂಗಳೂರು ಎಸ್‌ಸಿಆರ್‌ಬಿ ಇದರ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ್ ಎನ್. ಮಾತನಾಡಿ, ‘ಕಾಗದ ರಹಿತ ಆಡಳಿತಕ್ಕಾಗಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಇ- ಕಚೇರಿ ತಂತ್ರಾಂಶವನ್ನು ಅಳವಡಿಸಲಾಗುತ್ತಿದೆ. ರಾಜ್ಯಾದ್ಯಂತ ಇ- ಕಚೇರಿಗಳನ್ನು ಚಾಲನೆಗೊಳಿಸುತ್ತಿದ್ದು, ದಾವಣಗೆರೆ ಜಿಲ್ಲಾ ಪೊಲೀಸ್ ಕಚೇರಿ 43ನೇ ಘಟಕ’ ಎಂದು ತಿಳಿಸಿದರು.
ಹಲವೆಡೆ ಈ ವ್ಯವಸ್ಥೆ ಅತ್ಯಂತ ಯಶಸ್ವಿಯಾಗಿದೆ. ಉಡುಪಿಯಲ್ಲಿ ಕಾಗದ ಕಡತ ವ್ಯವಹಾರವನ್ನು ನಿಲ್ಲಿಸಿ, ಸಂಪೂರ್ಣವಾಗಿ ಕಾಗದರಹಿತ ಆಡಳಿತ ಜಾರಿಗೊಂಡಿದೆ ಎಂದರು.
ಇ-ಕಚೇರಿ ವ್ಯವಸ್ಥೆಯಲ್ಲಿ ಅರ್ಜಿದಾರರಿಂದ ಅರ್ಜಿಯನ್ನು ಆನ್‌ಲೈನ್ ಮೂಲಕವೇ ಪಡೆಯಲಾಗುತ್ತದೆ. ಸ್ಥಳದಲ್ಲಿಯೇ ರಶೀದಿ ನೀಡಿ ಮೊಬೈಲ್ ಸಂಖ್ಯೆ ಪಡೆದು ಕಡತದ ಪ್ರತಿ ಹಂತದ ಮಾಹಿತಿಯನ್ನು ಮೊಬೈಲ್ ಮೂಲಕ ಕಾಲ ಕಾಲಕ್ಕೆ ಕಳುಹಿಸಲಾಗುವುದು. ಅರ್ಜಿದಾರರು ತಮ್ಮ ಕಡತದ ಕುರಿತಾದ ಮಾಹಿತಿಯನ್ನು ಆನ್‌ಲೈನ್ ಮೂಲಕ ತಾವು ಇರುವಲ್ಲಿಯೇ ನೋಡಬಹುದು ಎಂದು ವಿವರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇ-ಕಚೇರಿಯನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಲಾಗುವುದು ಎಂದರು.
ಕಚೇರಿ ಸಹಾಯಕ ಆಡಳಿತಾಧಿಕಾರಿ ಕೆ.ಎಸ್. ನಾಗೇಶ್ ಮಾತನಾಡಿ, ‘ಇದೇ ಮೊದಲ ಬಾರಿಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಇ- ತಂತ್ರಾಂಶವನ್ನು ಪರಿಚಯಿಸಲಾಗಿದ್ದು, ಇ-ಕಚೇರಿ ತಂತ್ರಾಂಶ ನಿರ್ವಹಣೆ ಕುರಿತು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತರಬೇತಿಯನ್ನು ನೀಡಲಾಗಿದೆ. ಈ ವ್ಯವಸ್ಥೆಯು ಕಾಗದ ರಹಿತವಾಗಿದ್ದು, ಅರ್ಜಿದಾರರು ತಮ್ಮ ಕಡತದ ಮಾಹಿತಿ ಮತ್ತು ಕಡತವು ಯಾವ ಹಂತದಲ್ಲಿದೆ ಎಂಬುದನ್ನು ಆನ್‌ಲೈನ್ ಮೂಲಕ ತಿಳಿಯಬಹುದಾಗಿದೆ. ಇದರಿಂದಾಗಿ ಅರ್ಜಿದಾರರು ಕಚೇರಿಗಳಿಗೆ ಅಲೆಯುವುದು ಹಾಗೂ ಸಮಯ ಉಳಿತಾಯವಾಗುತ್ತದೆ’ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಇ-ಕಚೇರಿಯ ಕುರಿತು ತರಬೇತಿ ಪಡೆದ ಜಿಲ್ಲಾ ಪೊಲೀಸ್ ಕಚೇರಿಯ ಅಧಿಕಾರಿ ಹಾಗೂ ಸಿಬ್ಬಂದಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಎಎಸ್‌ಪಿ ರಾಜೀವ್, ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಗ್ರಾಮಾಂತರ ಡಿವೈಎಸ್‌ಪಿ ಮಂಜುನಾಥ್ ಗಂಗಲ್ ಮತ್ತು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.