ದಾವಣಗೆರೆ: ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗ ಹಾಗೂ ತುರ್ತು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಉದ್ಘಾಟನೆ ಭಾಗ್ಯ ಕೂಡಿಬಂದಿಲ್ಲ.
ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿ ಅಂದಾಜು ₹ 35 ಕೋಟಿ ವೆಚ್ಚದಲ್ಲಿ ಮಹಿಳೆಯರ ಮತ್ತು ಮಕ್ಕಳ ವಿಭಾಗದ ಕಟ್ಟಡ ನಿರ್ಮಾಣ ಕಾಮಗಾರಿ 2021ರಲ್ಲಿ ಆರಂಭವಾಗಿತ್ತು. ಕಾಮಗಾರಿ ಪೂರ್ಣಗೊಂಡು ಆರು ತಿಂಗಳು ಕಳೆದಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ₹ 13 ಕೋಟಿ ವೆಚ್ಚದಲ್ಲಿ ತುರ್ತು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ 2021ರ ಜೂನ್‌ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಬೈರತಿ ಬಸವರಾಜ ಭೂಮಿಪೂಜೆ ನೆರವೇರಿಸಿದ್ದರು. 2023ರ ಮೇ ವೇಳೆಗೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದರೂ ಜನರ ಸೇವೆಗೆ ಲಭ್ಯವಾಗಿಲ್ಲ.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕಳೆದ ಜುಲೈನಲ್ಲಿ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ತುರ್ತು ಚಿಕಿತ್ಸಾ ಕೇಂದ್ರದ ನೂತನ ಕಟ್ಟಡವನ್ನು ಶೀಘ್ರ ಲೋಕಾರ್ಪಣೆಗೊಳಿಸಲಾಗುವುದು ಎಂದು ಹೇಳಿದ್ದರು. ಅವರು ಬಂದು ಹೋಗಿ ಮೂರು ತಿಂಗಳುಗಳಾಗಿದ್ದರೂ ಕಟ್ಟಡಗಳ ಉದ್ಘಾಟನಾ ದಿನಾಂಕ ಇದುವರೆಗೂ ನಿಗದಿಯಾಗಿಲ್ಲ.
ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯ ಹಳೆಯ ಕಟ್ಟಡಕ್ಕೆ 60ಕ್ಕೂ ಹೆಚ್ಚು ವರ್ಷಗಳಾಗಿದ್ದು, ಶಿಥಿಲಗೊಂಡಿದೆ. ಮಳೆ ಬಂದರೆ ಅಲ್ಲಲ್ಲಿ ಸೋರುತ್ತದೆ. ಮಕ್ಕಳ ಚಿಕಿತ್ಸೆಗಾಗಿನ ಎನ್‌ಐಸಿಯು, ಪಿಐಸಿಯು ವಿಭಾಗಗಳು ಒಂದೊಂದು ದಿಕ್ಕಿನಲ್ಲಿವೆ. ನೂತನ ಕಟ್ಟಡದಲ್ಲಿ ಮಹಿಳೆಯರು ಮತ್ತು ಮಕ್ಕಳ ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಕೇಳಿದ್ದೇವೆ. ನೂತನ ಆಸ್ಪತ್ರೆಯನ್ನು ಶೀಘ್ರ ಉದ್ಘಾಟಿಸಿದಲ್ಲಿ ಗುಣಮಟ್ಟದ ಚಿಕಿತ್ಸೆ ಪಡೆದುಕೊಳ್ಳಲು ಅನುಕೂಲವಾಗುತ್ತದೆ ಎಂದು ಬಡ ರೋಗಿಗಳು ಮನವಿ ಮಾಡಿದರು.
ಬಡವರಿಗೆ ಜಿಲ್ಲಾ ಆಸ್ಪತ್ರೆ ಆಧಾರವಾಗಿದೆ. ದಾವಣಗೆರೆಯೇ ಅಲ್ಲದೇ ಹಾವೇರಿ, ಹರಪನಹಳ್ಳಿ, ಚಿತ್ರದುರ್ಗ, ಶಿವಮೊಗ್ಗ ಮುಂತಾದೆಡೆಯಿಂದ ರೋಗಿಗಳು ಇಲ್ಲಿಗೆ ಬರುತ್ತಾರೆ. ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ತಿಂಗಳಲ್ಲಿ ಅಂದಾಜು 500ಕ್ಕೂ ಹೆಚ್ಚು ಹೆರಿಗೆಗಳಾಗುತ್ತವೆ. ನಿತ್ಯವೂ ಮಹಿಳೆ ಮತ್ತು ಮಕ್ಕಳು ಸೇರಿ 300ಕ್ಕೂ ಹೆಚ್ಚು ಜನರು ಹೊರರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಾರೆ. ಅವರೆಲ್ಲರಿಗೂ ಉತ್ತಮ ಚಿಕಿತ್ಸೆ ನೀಡುವುದು ಜಿಲ್ಲಾ ಆಡಳಿತದ ಜವಾಬ್ದಾರಿ. ಜನಪ್ರತಿನಿಧಿಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಮೀನ–ಮೇಷ ಎಣಿಸದೆ ನೂತನ ಕಟ್ಟಡಗಳ ಉದ್ಘಾಟನೆಗೆ ದಿನಾಂಕವನ್ನು ಶೀಘ್ರ ಗೊತ್ತುಪಡಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಂ.ಕರಿಬಸಪ್ಪ ಆಗ್ರಹಿಸಿದರು.
ಮೂರಂತಸ್ತಿನ ಅತ್ಯಾಧುನಿಕ ವಿಭಾಗ
ಮಹಿಳೆಯರ ಮತ್ತು ಮಕ್ಕಳ ವಿಭಾಗದ ನೂತನ ಕಟ್ಟಡವು ಮೂರು ಅಂತಸ್ತುಗಳಲ್ಲಿ ನಿರ್ಮಾಣವಾಗಿದ್ದು ಒಟ್ಟು 330 ಹಾಸಿಗೆ ಸೌಲಭ್ಯ ಒಳಗೊಂಡಿದೆ. ಇದರಲ್ಲಿ 100ಕ್ಕೂ ಹೆಚ್ಚು ಹಾಸಿಗೆಗಳನ್ನು ಮಕ್ಕಳಿಗಾಗಿ ಮೀಸಲಿರಿಸಲಾಗಿದೆ. ನೆಲಮಹಡಿಯಲ್ಲಿ ಮಹಿಳೆಯರ ಹೊರರೋಗಿ ವಿಭಾಗ ತುರ್ತು ಚಿಕಿತ್ಸಾ ಘಟಕ ಹೆರಿಗೆ ಕೊಠಡಿ ತೀವ್ರ ನಿಗಾ ಘಟಕ ಹಾಗೂ ಶಸ್ತ್ರ ಚಿಕಿತ್ಸಾ ಕೊಠಡಿಗಳಿವೆ. ಮೊದಲ ಮಹಡಿಯಲ್ಲಿ ಮಹಿಳೆಯರ ವಾರ್ಡ್‌ಗಳಿವೆ. ಮೂರನೇ ಮಹಡಿಯಲ್ಲಿ ಮಕ್ಕಳಿಗೆ ಚಿಕಿತ್ಸೆ ಸಿಗಲಿದೆ. ಹಳೆಯ ಕಟ್ಟಡದ ಎನ್‌ಐಸಿಯು (ನವಜಾತ ಶಿಶು ತೀವ್ರ ನಿಗಾ ಘಟಕ)ನಲ್ಲಿ 30 ಹಾಸಿಗೆಗಳಿದ್ದವು. ನೂತನ ಕಟ್ಟಡದಲ್ಲಿ 60 ಹಾಸಿಗೆಗಳು ಲಭ್ಯವಾಗಲಿವೆ. ಕಾಂಗರೂ ಮದರ್ ಕೇರ್ (ಮಗುವನ್ನು ಬೆಚ್ಚಗಿರಿಸುವ ವಿಧಾನ) ಹಾಗೂ ಮಗುವಿಗೆ ಹಾಲುಣಿಸಲು ತಾಯಂದಿರಿಗೆ ತರಬೇತಿ ನವಜಾತ ಶಿಶುಗಳಲ್ಲಿನ ಕಿವುಡುತನ ಪತ್ತೆ ಹಚ್ಚುವಿಕೆಗೆ ಪ್ರತ್ಯೇಕ ಕೊಠಡಿಗಳನ್ನು ಒದಗಿಸಲಾಗಿದೆ. ಮಕ್ಕಳ ತೀವ್ರ ನಿಗಾ ಘಟಕ ಜನರಲ್ ವಾರ್ಡ್ ಪ್ರಯೋಗಾಲಯ ಔಷಧಾಲಯ ಸ್ಕ್ಯಾನಿಂಗ್ ಸೌಲಭ್ಯಗಳನ್ನು ಒಂದೇ ಸೂರಿನಡಿ ಕಲ್ಪಿಸಲಾಗಿದೆ. ಮೂರು ಸುಸಜ್ಜಿತ ಶಸ್ತ್ರ ಚಿಕಿತ್ಸಾ ಕೊಠಡಿಗಳಿದ್ದು ಎರಡು ಅತ್ಯಾಧುನಿಕವಾದವು. ತಲಾ ₹ 40 ಲಕ್ಷ ವೆಚ್ಚದಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ನಿರ್ಮಿಸಿದ್ದು ಸೂರು ಮತ್ತು ಗೋಡೆಯನ್ನು ಉಕ್ಕಿನಿಂದ ನಿರ್ಮಿಸಲಾಗಿದೆ ಎಂದು ವೈದ್ಯಕೀಯ ಅಧೀಕ್ಷಕರಾದ ಡಾ.ಎಂ.ಬಿ. ನಾಗೇಂದ್ರಪ್ಪ ವಿವರಿಸಿದರು.
50 ಹಾಸಿಗೆ ಸಾಮರ್ಥ್ಯದ ಕೇಂದ್ರ
ತುರ್ತು ಚಿಕಿತ್ಸಾ ಕೇಂದ್ರದ ನೂತನ ಕೇಂದ್ರವು 50 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ. ನೆಲಮಹಡಿಯಲ್ಲಿ ಔಷಧಾಲಯ ಹಾಗೂ ಸಭಾಭವನ ನಿರ್ಮಿಸಲಾಗಿದೆ. ನೆಲಮಹಡಿಯಲ್ಲಿ ಚಿಕಿತ್ಸಾ ಕೊಠಡಿ ಪ್ರಯೋಗಾಲಯ ನಿಗಾ ಘಟಕ ಹಾಗೂ ಶಸ್ತ್ರಚಿಕಿತ್ಸಾ ಕೊಠಡಿ ಇದೆ. ಮೊದಲ ಮಹಡಿಯಲ್ಲಿ ತೀವ್ರ ನಿಗಾ ಘಟಕ ಹಾಗೂ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಎಕ್ಸ್–ರೇ ಸಿ.ಟಿ. ಸ್ಕ್ಯಾನ್ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಲಭ್ಯವಿರಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಶೀಘ್ರದಲ್ಲಿಯೇ ಬೆಂಗಳೂರಿಗೆ ತೆರಳಿ ಆರೋಗ್ಯ ಸಚಿವರೊಂದಿಗೆ ಚರ್ಚಿಸಿ ಆಸ್ಪತ್ರೆಯ ನೂತನ ಕಟ್ಟಡಗಳ ಉದ್ಘಾಟನಾ ದಿನಾಂಕ ಗೊತ್ತುಪಡಿಸಲಾಗುವುದು.ಡಾ.ಎಂ.ಬಿ. ನಾಗೇಂದ್ರಪ್ಪ, ಅಧೀಕ್ಷಕರು, ಚಿಗಟೇರಿ ಜಿಲ್ಲಾ ಆಸ್ಪತ್ರೆ ದಾವಣಗೆರೆ
ತುರ್ತು ಚಿಕಿತ್ಸಾ ಕೇಂದ್ರದ ನಿರ್ಮಾಣ ಸ್ಥಳ ಹಾಗೂ ವಿನ್ಯಾಸದಲ್ಲಿನ ಗೊಂದಲಗಳ ಕಾರಣ ಕಾಮಗಾರಿ ಆರಂಭ ತಡವಾಯಿತು. ಪ್ರಸ್ತುತ ವೈದ್ಯಕೀಯ ಉಪಕರಣ ಹಾಗೂ ಅನಿಲ ಪೂರೈಕೆ ಪೈಪ್‌ಲೈನ್ ಅಳವಡಿಕೆ ಕೆಲಸ ನಡೆಯುತ್ತಿದೆ.ಹೇಮಂತ್ ಕೆ.ಜಿ.ಡಿ, ಸಹಾಯಕ ಎಂಜಿನಿಯರ್, ಸ್ಮಾರ್ಟ್ ಸಿಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.