ADVERTISEMENT

ದಾವಣಗೆರೆ ‌| ತಾಲ್ಲೂಕು ಕಚೇರಿಗಿಲ್ಲ ಉದ್ಘಾಟನೆ ಭಾಗ್ಯ!

ಆಮೆಗತಿಯಲ್ಲಿ ಕಾಮಗಾರಿ, ಹೊಸ ಕಟ್ಟಡದಲ್ಲೇ ಕಚೇರಿ ಆರಂಭಿಸಲು ಒತ್ತಾಯ

ಚಂದ್ರಶೇಖರ ಆರ್‌.
Published 29 ಸೆಪ್ಟೆಂಬರ್ 2024, 6:58 IST
Last Updated 29 ಸೆಪ್ಟೆಂಬರ್ 2024, 6:58 IST
ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯ ಎದುರು ನಿರ್ಮಿಸಿರುವ ನೂತನ ತಾಲ್ಲೂಕು ಆಡಳಿತ ಸೌಧ ಕಟ್ಟಡ
ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯ ಎದುರು ನಿರ್ಮಿಸಿರುವ ನೂತನ ತಾಲ್ಲೂಕು ಆಡಳಿತ ಸೌಧ ಕಟ್ಟಡ   

ದಾವಣಗೆರೆ: ಇಲ್ಲಿನ ಮಂಡಿಪೇಟೆ ಪ್ರದೇಶದಲ್ಲಿರುವ ಪ್ರಧಾನ ಅಂಚೆ ಕಚೇರಿಯ ಎದುರು ಹಳೆಯ ಕಟ್ಟಡ ಕೆಡವಿ ನಿರ್ಮಿಸಿರುವ ತಾಲ್ಲೂಕು ಕಚೇರಿಯ ಆಡಳಿತ ಸೌಧದ ನೂತನ ಕಟ್ಟಡ ವರ್ಷಗಳೇ ಕಳೆದರೂ ಉದ್ಘಾಟನೆ ಆಗಿಲ್ಲ.

2018ರಲ್ಲಿ ಆರಂಭವಾದ ಈ ಕಟ್ಟಡದ ಕಾಮಗಾರಿಯು 6 ವರ್ಷ ಕಳೆದರೂ ಈವರೆಗೆ ಪೂರ್ಣಗೊಂಡಿಲ್ಲ. ಈ ಕಟ್ಟಡದ ಕಾಮಗಾರಿ ಆರಂಭಕ್ಕೆ ಮೊದಲೇ ಎಪಿಎಂಸಿಯ ರೈತ ಭವನದ ಬಾಡಿಗೆ ಕಟ್ಟಡದಲ್ಲೇ ತಾಲ್ಲೂಕು ಕಚೇರಿ ಕಾರ್ಯನಿರ್ವಹಿಸುತ್ತಿದೆ.

ಇದರ ನಡುವೆಯೇ ‘ಹೊಸ ಕಟ್ಟಡದ ಬದಲಿಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವ ಜಿಲ್ಲಾ ಪಂಚಾಯಿತಿ ಸಂಕೀರ್ಣಕ್ಕೆ ತಾಲ್ಲೂಕು ಕಚೇರಿ ಸ್ಥಳಾಂತರಗೊಳ್ಳಲಿದೆ’ ಎಂಬ ಮಾತು ಕೇಳಿಬರುತ್ತಿದೆ. ಹೀಗಾದಲ್ಲಿ ನಗರದ ಜನತೆ ಅಲ್ಲಿಗೆ ಹೋಗುವುದಕ್ಕೂ ಪ್ರಯಾಸ ಪಡಬೇಕಾಗುತ್ತದೆ.

ADVERTISEMENT

ಈಗ ತಾಲ್ಲೂಕು ಕಚೇರಿ ಇರುವ ಎಪಿಎಂಸಿಯ ರೈತ ಭವನದ ಕಟ್ಟಡವೂ ಶಿಥಿಲಗೊಂಡಿದೆ. ಅದನ್ನು ನೋಡಿದರೆ ತಾಲ್ಲೂಕು ಕಚೇರಿ ಅನ್ನಿಸುವುದಿಲ್ಲ. ಯಾವುದೇ ಪಾಳು ಕಟ್ಟಡದಂತೆ ಕಾಣುವ ಇಲ್ಲಿ ಸಮರ್ಪಕ ವ್ಯವಸ್ಥೆಗಳಿಲ್ಲ. ಕಟ್ಟಡ ಶಿಥಿಲಗೊಂಡ ಕಾರಣ ಕೆಲ ಕೊಠಡಿಗಳ ಬಾಗಿಲು ಮುಚ್ಚಲಾಗಿದೆ. ಶೌಚಾಲಯ ವ್ಯವಸ್ಥೆಯೂ ಸಮರ್ಪಕವಾಗಿಲ್ಲ.

ಈ ಕಟ್ಟಡದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಈಚೆಗೆ ನಡೆದ ಸ್ವಚ್ಛತಾ ಅಭಿಯಾನದಲ್ಲಿ ದಾವಣಗೆರೆ ಜಿಲ್ಲಾ ಸಿವಿಕ್‌ ಫೋರಂನಿಂದ ತಾಲ್ಲೂಕು ಕಚೇರಿಯ ಸ್ವಚ್ಛತೆ ಕೈಗೊಳ್ಳಲಾಗಿತ್ತು. ಇದು ಇಲ್ಲಿನ ಅನೈರ್ಮಲ‌್ಯಕ್ಕೆ ಸಾಕ್ಷಿ.

ಕತ್ತಲೆಯಲ್ಲಿರುವ ಕಾರಣ ಮೂಲೆಯಲ್ಲಿರುವ ದಾಖಲೆಗಳ ಕೊಠಡಿಗೆ ಹೋಗಲು ಭಯಪಡುವಂತಿದೆ. ಇಷ್ಟೆಲ್ಲಾ ಅವ್ಯವಸ್ಥೆ ಇರುವ ಕಟ್ಟಡದಲ್ಲಿನ ಕಚೇರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂಬ ಕೂಗಿಗೆ ಮನ್ನಣೆ ದೊರಕಿಲ್ಲ.

ಸುಸಜ್ಜಿತ ಕಟ್ಟಡ: 

2018ರಲ್ಲಿ ₹ 5 ಕೋಟಿ ವೆಚ್ಚದಲ್ಲಿ G+3 (ನೆಲಮಹಡಿ + 3 ಅಂತಸ್ತು) ಮಾದರಿಯ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಸದ್ಯ G+1 ಮಾದರಿಯಲ್ಲಿ ಕಟ್ಟಡ ಪೂರ್ಣಗೊಂಡಿದೆ. G+3 ಕಟ್ಟಡ ನಿರ್ಮಿಸಲು ಹೆಚ್ಚಿನ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಹೊಸ ಕಟ್ಟಡ ಸುಸಜ್ಜಿತವಾಗಿದ್ದು, ಅಲ್ಲಿಯೇ ತಾಲ್ಲೂಕು ಕಚೇರಿ ಆರಂಭಿಸಬೇಕು. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂಬುದು ಸಾರ್ವಜನಿಕರ ಒತ್ತಾಯ.

ಕಾಮಗಾರಿಗೆ 6 ವರ್ಷ:

ನಗರದ ಪ್ರಧಾನ ಅಂಚೆ ಕಚೇರಿಯ ಎದುರು ಜಿಲ್ಲಾ ಕಾರಾಗೃಹ ಸಮೀಪದಲ್ಲಿ ತಾಲ್ಲೂಕು ಕಚೇರಿಯ ಹೊಸ ಕಟ್ಟಡ ನಿರ್ಮಿಸಲಾಗಿದೆ. G+1 ಮಾದರಿಯಲ್ಲಿ ಬಹುತೇಕ ಕಾಮಗಾರಿ ಮುಗಿದಿದೆ. ಆದರೂ ಕಟ್ಟಡ ಉದ್ಘಾಟನೆಯಾಗಿಲ್ಲ.

ನಗರದ ಗಡಿಯಾರ ಕಂಬದ ಬಳಿಯ ಪ್ರಧಾನ ಅಂಚೆ ಕಚೇರಿಯ ಎದುರು ತಾಲ್ಲೂಕು ಕಚೇರಿ ಹಾಗೂ ರೈತ ಭವನದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದ್ದವು. ಕಟ್ಟಡ ಶಿಥಿಲಗೊಂಡ ಕಾರಣ ಹೊಸ ಕಟ್ಟಡ ಕಾಮಗಾರಿ ಆರಂಭವಾಗಿತ್ತು.

ಜಿಲ್ಲಾಧಿಕಾರಿ ಕಚೇರಿ ಕರೂರು ಕೈಗಾರಿಕಾ ಪ್ರದೇಶದ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡರೆ, ತಾಲ್ಲೂಕು ಕಚೇರಿ ಎಪಿಎಂಸಿಯ ರೈತ ಭವನಕ್ಕೆ ಸ್ಥಳಾಂತರಗೊಂಡಿತ್ತು. ಅಂದಿನಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಈ ಕಟ್ಟಡವೂ ಶಿಥಿಲಗೊಂಡ ಕಾರಣ ಹೊಸ ಕಟ್ಟಡ ಕಾಮಗಾರಿ ಶುರುವಾಗಿತ್ತು.

‘ತಾಲ್ಲೂಕು ಕಚೇರಿಯನ್ನು ಬೇರೆಡೆ ಸ್ಥಳಾಂತರಿಸಬಾರದು. ಮೊದಲಿದ್ದ ಜಾಗದಲ್ಲೇ ಆರಂಭಿಸಬೇಕು. ರೈಲು, ಬಸ್‌ ನಿಲ್ದಾಣಕ್ಕೆ ಸಮೀಪ ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ’ ಎಂದು ಸ್ಥಳೀಯರಾದ ಪ್ರವೀಣ್‌ ಕುಲಕರ್ಣಿ ಕೋರಿದ್ದಾರೆ.

‘ಅಗತ್ಯ ಕಾಮಗಾರಿ ಬಾಕಿ’

‘ಮೇಲಂತಸ್ತಿನ ಕಟ್ಟಡಕ್ಕೆ ಹೆಚ್ಚಿನ ಅನುದಾನ ಕೋರಿ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. ಹೆಚ್ಚುವರಿಯಾಗಿ ಅಗತ್ಯವಿರುವ ₹ 4.17 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಈಗಿನ G+1 ಕಟ್ಟಡದಲ್ಲಿ ಪೀಠೋಪಕರಣ ಭೂಮಿ ಕೇಂದ್ರ ಪಹಣಿ ಕೇಂದ್ರ ಕೌಂಟರ್‌ ಕ್ಯಾಬಿನ್‌ ಸೇರಿದಂತೆ ಅಗತ್ಯ ಕಾಮಗಾರಿಗಳು ಬಾಕಿ ಇದ್ದು ಅದನ್ನು ಶೀಘ್ರ ಪೂರ್ಣಗೊಳಿಸುವಂತೆ ಮನವಿ ಮಾಡಿದ್ದೇವೆ. ಪೀಠೋಪಕರಣ ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ₹ 70 ಲಕ್ಷಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ರೈತ ಭವನದ ಕಟ್ಟಡ ಶಿಥಿಲಗೊಂಡಿದೆ. ದೂಳು ಇದೆ. ಈ ಕಾರಣ ಬೇಗ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಉತ್ಸುಕತೆ ನಮಗೂ ಇದೆ’ ಎಂದು ತಹಶೀಲ್ದಾರ್ ಎಂ.ಬಿ. ಅಶ್ವಥ್‌ ತಿಳಿಸಿದರು.

‘ತಾಲ್ಲೂಕು ಕಚೇರಿ ಹೊಸ ಕಟ್ಟಡದಲ್ಲೇ ಇರಲಿ’

ತಾಲ್ಲೂಕು ಕಚೇರಿಯನ್ನು ಹೊಸ ಕಟ್ಟಡದಲ್ಲೇ ಆರಂಭಿಸಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ. ಮೊದಲು ಇದ್ದಂತೆ ಉಪ ನೋಂದಣಾಧಿಕಾರಿ ಕಚೇರಿಯನ್ನೂ ಅಲ್ಲೇ ಪ್ರಾರಂಭಿಸಬೇಕು. ಬೇಕಿದ್ದರೆ ಜಿಲ್ಲಾ ಕಾರಾಗೃಹವನ್ನು ಬೇರೆಡೆ ಸ್ಥಳಾಂತರಿಸಬಹುದು. ಉಪ ನೋಂದಣಾಧಿಕಾರಿ ಕಚೇರಿ ಹಾಗೂ ತಾಲ್ಲೂಕು ಕಚೇರಿ ಒಂದೇ ಕಡೆ ಇದ್ದರೆ ಅನುಕೂಲ ಎಂಬುದು ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ವಾಸು ಅವರ ಆಗ್ರಹ. ‘ಎಲ್ಲ ಕಚೇರಿಗಳೂ ಒಂದೇ ಕಡೆ ಇರಲಿ’ ರೈತ ಭವನಕ್ಕೆ ತಾಲ್ಲೂಕು ಕಚೇರಿಯ ₹ 65 ಲಕ್ಷ ಬಾಡಿಗೆ ಕಟ್ಟಿಲ್ಲ. ಕಟ್ಟಡವನ್ನೂ ಹಾಳು ಮಾಡಲಾಗಿದೆ. ಉಪ ವಿಭಾಗಾಧಿಕಾರಿ ಕಚೇರಿ ಸರ್ವೆ ಕಚೇರಿ ಉಪ ನೋಂದಣಾಧಿಕಾರಿ ಕಚೇರಿ ಒಂದೇ ಕಡೆ ಇದ್ದರೆ ಅನುಕೂಲ ಎಂಬುದು ರೈತ ಸಂಘದ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಅವರ ಅಭಿಪ್ರಾಯ.

ಜಿಲ್ಲಾ ಪಂಚಾಯಿತಿ ಕಟ್ಟಡಕ್ಕೆ ತಾಲ್ಲೂಕು ಕಚೇರಿ ಸ್ಥಳಾಂತರಿಸುವ ಯಾವುದೇ ಪ್ರಸ್ತಾವ ಇಲ್ಲ. ಹೊಸ ಕಟ್ಟಡದಲ್ಲೇ ನವೆಂಬರ್‌– ಡಿಸೆಂಬರ್‌ ವೇಳೆಗೆ ಕಚೇರಿ ಕಾರ್ಯಾರಂಭ ಮಾಡಲಿದೆ
ಎಂ.ಬಿ. ಅಶ್ವಥ್‌, ತಹಶೀಲ್ದಾರ್ 
ಕಚೇರಿಗಳು ಜನಸ್ನೇಹಿಯಾಗಿರಬೇಕು. ಹೊಸ ಕಟ್ಟಡದಲ್ಲೇ ತಾಲ್ಲೂಕು ಕಚೇರಿ ಆರಂಭಿಸಬೇಕು. ರೈಲು ಬಸ್‌ ನಿಲ್ದಾಣ ಸಮೀಪದಲ್ಲೇ ಇರುವ ಕಾರಣ ಜನತೆಗೆ ಅನುಕೂಲವಾಗಲಿದೆ.
ತೇಜಸ್ವಿ ಪಟೇಲ್‌, ರೈತ ಮುಖಂಡ
ದಾವಣಗೆರೆಯ ಪ್ರಧಾನ ಅಂಚೆ ಕಚೇರಿಯ ಎದುರು ನಿರ್ಮಿಸಿರುವ ನೂತನ ತಾಲ್ಲೂಕು ಆಡಳಿತ ಸೌಧ ಕಟ್ಟಡ      ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.