ADVERTISEMENT

ಇತಿಹಾಸದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ: ಪುರುಷೋತ್ತಮ ಬಿಳಿಮಲೆ ಅಭಿಮತ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2024, 10:58 IST
Last Updated 15 ಅಕ್ಟೋಬರ್ 2024, 10:58 IST
   

ದಾವಣಗೆರೆ: ಬ್ರಿಟಿಷರು ಹಾಗೂ ಇಂಗ್ಲಿಷ್‌ ಭಾಷೆಯನ್ನು ಏಕಕಾಲಕ್ಕೆ ವಿರೋಧಿಸಿದವರು ಮುಸ್ಲಿಮರು. ತೀವ್ರಗಾಮಿ ಪಂಥದಲ್ಲಿ ಅತಿ ಹೆಚ್ಚು ಮುಸ್ಲಿಂ ಹೋರಾಟಗಾರರಿದ್ದರು. ದೇಶದ ಸ್ವಾತಂತ್ರ್ಯ ಚಳವಳಿಯ ಚರಿತ್ರೆಯಲ್ಲಿ ಇದು ಸರಿಯಾಗಿ ದಾಖಲಾಗಿಲ್ಲ. ಮುಸ್ಲಿಂ ಸಮುದಾಯಕ್ಕೆ ಇತಿಹಾಸದಲ್ಲಿ ಬಹುದೊಡ್ಡ ಅನ್ಯಾಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಹಾಗೂ ಹರಿಹರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ಪರಸ್ಪರ ಬಳಗ ಮತ್ತು ಮಾನವ ಬಂಧುತ್ವ ವೇದಿಕೆ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕ ಜೆ.ಕಲೀಂ ಬಾಷ ಅವರು ಅನುವಾದಿಸಿರುವ ‘ಕ್ರಾಂತಿಕಾರಿ ಸ್ವಾತಂತ್ರ್ಯ ಹುತಾತ್ಮ ಕವಿ ರಾಮ್ ಪ್ರಸಾದ್ ಬಿಸ್ಮಿಲ್’ (ಆತ್ಮಕಥೆ) ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಮೊಘಲರ ಕೊನೆಯ ದೊರೆ ಬಹದ್ದೂರ್ ಷಾ ಜಾಫರ್‌ನನ್ನು ಬ್ರಿಟಿಷರು ಕ್ರೂರವಾಗಿ ಕೊಂದು ಹಾಕಿದರು. ದೇಶದ ಮುಸ್ಲಿಂ ಸಮುದಾಯಕ್ಕೆ ಇದು ದೊಡ್ಡ ಘಾಸಿ‌ಯುಂಟು ಮಾಡಿತು. ಹೀಗಾಗಿ, ಮುಸ್ಲಿಮರು ಸ್ವಾತಂತ್ರ್ಯ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿದರು. ಅವರು ಇಂಗ್ಲಿಷರನ್ನು ಮಾತ್ರವಲ್ಲ, ಅವರ ಭಾಷೆಯನ್ನೂ ವಿರೋಧಿಸಿದರು. ಬಹುತೇಕ ಮುಸ್ಲಿಮರು ಇಂಗ್ಲಿಷ್ ಶಾಲೆಗೆ ಸೇರಲೇ ಇಲ್ಲ. ಇಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಇತಿಹಾಸದಲ್ಲಿ ನ್ಯಾಯ ಸಿಕ್ಕಿಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

‘ಮುಸ್ಲಿಮರು ಸರ್ಕಾರದ ಅಧಿಕಾರಯುತ ಹುದ್ದೆಗಳಿಗೆ ಏರದಂತೆ ಬ್ರಿಟಿಷರು ಎಚ್ಚರವಹಿಸಿದ್ದರು. ಉರ್ದು ಬದಲಾಗಿ ಹಿಂದಿ ಭಾಷೆಗೆ ಪ್ರಾಮುಖ್ಯತೆ ನೀಡಲಾಯಿತು. ಬ್ರಿಟಿಷರ ಈ ಅನ್ಯಾಯವನ್ನು ಜವಾಹರಲಾಲ್‌ ನೆಹರೂ ಗುರುತಿಸಿದ್ದರು. ಬ್ರಿಟಿಷರ ನೀತಿಯನ್ನು ಬಿಜೆಪಿ ಸರ್ಕಾರ ಅನುಷ್ಠಾನಕ್ಕೆ ತರುತ್ತಿದೆ. ಆಡಳಿತಾತ್ಮಕ ಸೇವೆಗೆ ಮುಸ್ಲಿಮರು ಬರದಂತೆ ನೋಡಿಕೊಳ್ಳುವ ವ್ಯವಸ್ಥೆಯೊಂದು ರೂಪುಗೊಳ್ಳುತ್ತಿದೆ. ಸ್ವಾತಂತ್ರ್ಯ ಹೋರಾಟದ ಬಗ್ಗೆ ಹಸಿ ಸುಳ್ಳುಗಳನ್ನು ಬಿತ್ತಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ 22 ಭಾಷೆಗಳಲ್ಲಿ ಪುಸ್ತಕಗಳನ್ನು ಹೊರತರುವ ಪ್ರಯತ್ನ ನಡೆಯಿತು. ತೆರೆಮರೆಗೆ ಸರಿದ ಹೋರಾಟಗಾರರ ಮೇಲೆ ಬೆಳಕು ಚೆಲ್ಲುವುದು ಇದರ ಉದ್ದೇಶವಾಗಿತ್ತು. ಆಗ ಕರ್ನಾಟಕದಿಂದ ಸರಿಯಾದ ಒಂದು ಪ್ರಸ್ತಾವ ಸಲ್ಲಿಕೆಯಾಗಲಿಲ್ಲ. 75 ವರ್ಷಗಳ ಹಿಂದೆ ದೇಶದಲ್ಲಿ ಏನು ನಡೆಯಿತು ಎಂಬುದರ ಬಗ್ಗೆ ಯುವ ಸಮೂಹಕ್ಕೆ ಗೊತ್ತಿಲ್ಲ. ಆದರೆ, ಸಾವಿರಾರು ವರ್ಷಗಳ ಹಿಂದಿನ ಅಯೋಧ್ಯೆಯ ಬಗ್ಗೆ ಮಾತನಾಡುತ್ತಾರೆ. ಪ್ರಖರ ಬೌದ್ಧಿಕ ಚಿಂತನಾ ಕ್ರಮ ಹುಟ್ಟದ ಹೊರತು ದೇಶದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಹೇಳಿದರು.

‘ಬ್ರಿಟಿಷರು ಹೆದರಿದ್ದು ಒಬ್ಬ ಹೋರಾಟಗಾರನಿಗಲ್ಲ. ಪ್ರತಿ ಹಳ್ಳಿಯಲ್ಲಿ ನಡೆಯುತ್ತಿದ್ದ ಚಳವಳಿಗೆ. ಮಹಾತ್ಮ ಗಾಂಧೀಜಿ ದೇಶಕ್ಕೆ ಇಂತಹ ಪ್ರೇರಣೆ ನೀಡಿದ್ದರು. ಬಿಸ್ಮಿಲ್ ಅವರಂತಹ ಲಕ್ಷಾಂತರ ಹೋರಾಟಗಾರರು ದೇಶದಲ್ಲಿದ್ದಾರೆ. ಒಂದು ದೇಶ, ಒಂದು ಸಂಸ್ಕೃತಿಯಂತಹ ಪರಿಕಲ್ಪನೆ ಪ್ರತಿಪಾದಿಸುತ್ತಿರುವ ಈ ಕಾಲದಲ್ಲಿ ಇಂತಹ ಕೃತಿಗಳ ಅಗತ್ಯವಿದೆ’ ಎಂದು ಸಾಹಿತಿ ಎ.ವಿ.ರಾಮಚಂದ್ರಪ್ಪ ಕೃತಿ ಕುರಿತು ಮಾತನಾಡಿದರು.

‘ದೇಶಪ್ರೇಮದ ವ್ಯಾಖ್ಯಾನ ಬದಲಾಯಿಸಲಾಗಿದೆ. ಸಂಸ್ಕೃತಿ, ಸಮುದಾಯ, ಹೋರಾಟದ ಪರಿಕಲ್ಪನೆ, ಸ್ವರೂಪ ಕೂಡ ಬದಲಾಗಿವೆ. ಬ್ರಿಟಿಷರ ಜೊತೆಗೆ ಹೊಂದಾಣಿಕೆ ಮಾಡಿಕೊಂಡವರು ದೇಶಕ್ಕೆ ಪಾಠ ಮಾಡುತ್ತಿದ್ದಾರೆ. ಅಸತ್ಯ ವಿಜೃಂಭಿಸುತ್ತಿದ್ದು, ಇತಿಹಾಸವನ್ನು ಕಲುಷಿತಗೊಳಿಸಲಾಗುತ್ತಿದೆ. ಒಬ್ಬರೇ ಸ್ವಾತಂತ್ರ್ಯ ಹೋರಾಟ ನಡೆಸಿದರು ಎಂಬುದನ್ನು ಇತ್ತೀಚೆಗೆ ಮುನ್ನೆಲೆಗೆ ತರಲಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ, ಪತ್ರಕರ್ತ ಬಿ.ಎನ್.ಮಲ್ಲೇಶ್, ಪ್ರೊ.ಎಚ್.ಎ.ಭಿಕ್ಷಾವರ್ದಮಠ, ಪ್ರೊ.ಸಿ.ವಿ.ಪಾಟೀಲ್, ಎಚ್.ನಿಜಗುಣ, ಮಹೇಶ ಬಳ್ಳಾರಿ, ಮಂಜುನಾಥಯ್ಯ, ಮಂಜಣ್ಣ, ಹೆಗ್ಗೆರೆ ರಂಗಪ್ಪ, ಅಂಜಿನಪ್ಪ ಲೋಕಿಕೆರೆ, ಆವರಗೆರೆ ಚಂದ್ರು ಇದ್ದರು.

ಸ್ವಾತಂತ್ರ್ಯ ಹೋರಾಟದ ಕಥೆ ಮಹಾಕಾವ್ಯ ಮೀರಿಸುತ್ತದೆ. ಮಹಾತ್ಮ ಗಾಂಧೀಜಿ ಅವರ ಪ್ರವೇಶದ ಬಳಿಕ ಸ್ವಾತಂತ್ರ್ಯ ಚಳವಳಿಗೆ ನೈತಿಕ ತಳಹದಿ ಹಾಗೂ ಆಯಾಮ ಸಿಕ್ಕಿತು.
ದಾದಾಪೀರ್ ನವಿಲೆಹಾಳ್, ಸಾಹಿತಿ
ಜವಾಹರಲಾಲ್‌ ನೆಹರೂ ಬಳಿಕ ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ ಆಗಿ ಬಳಸಿಕೊಂಡಿತು. ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತರ ನಡುವೆ ಕಂದಕ ಸೃಷ್ಟಿಯಾಯಿತು.
ಪುರುಷೋತ್ತಮ ಬಿಳಿಮಲೆ, ಅಧ್ಯಕ್ಷ ಕನ್ನಡ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.