ADVERTISEMENT

ಮೀಸಲಾತಿ | ಆಯೋಗ ನಿಖರ ದತ್ತಾಂಶ ಸಂಗ್ರಹಿಸಲಿ: ಮಾಜಿ ಸಚಿವ ಎಚ್.ಆಂಜನೇಯ

ಮಾಜಿ ಸಚಿವ ಎಚ್.ಆಂಜನೇಯ ಹೇಳಿಕೆ, ಜನಸಂಖ್ಯೆ ಆಧಾರಿತ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2024, 12:28 IST
Last Updated 15 ನವೆಂಬರ್ 2024, 12:28 IST
<div class="paragraphs"><p>ಎಚ್.ಆಂಜನೇಯ</p></div>

ಎಚ್.ಆಂಜನೇಯ

   

ದಾವಣಗೆರೆ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಅನುಷ್ಠಾನಕ್ಕೆ ಅಗತ್ಯ ದತ್ತಾಂಶ ಸಂಗ್ರಹಿಸಲು ಆಯೋಗ ರಚಿಸಿರುವ ರಾಜ್ಯ ಸರ್ಕಾರದ ನಡೆ ಸ್ವಾಗತಾರ್ಹ. ಜನಸಂಖ್ಯೆಗೆ ಅನುಗುಣವಾದ ಮೀಸಲಾತಿ ಸೌಲಭ್ಯ ಕಲ್ಪಿಸಲು ನಿಖರ ದತ್ತಾಂಶಗಳನ್ನು ಆಯೋಗ ಸಂಗ್ರಹಿಸಬೇಕು ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದರು.

‘ಆಯೋಗಕ್ಕೆ ನ್ಯಾಯಮೂರ್ತಿ ನಾಗಮೋಹನದಾಸ್‌ ನೇಮಕ ಮಾಡಿರುವುದು ಸಮುದಾಯದಲ್ಲಿ ಆಶಾಕಿರಣ ಮೂಡಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳಕ್ಕೆ ಶಿಫಾರಸು ಮಾಡಿದ್ದ ಅವರ ಮೇಲೆ ಭರವಸೆ ಇದೆ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ADVERTISEMENT

‘ಪರಿಶಿಷ್ಟ ಜಾತಿಯಲ್ಲಿ ಮಾದಿಗ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಮಾದಿಗ ಹಾಗೂ ಛಲವಾದಿ ಸಮುದಾಯ ಕೆಲ ಜಿಲ್ಲೆಯಲ್ಲಿ ಆದಿ ಕರ್ನಾಟಕ ಎಂದು ಗುರುತಿಸಿಕೊಂಡಿವೆ. ಈ ವಿಷಯದಲ್ಲಿ ಆಯೋಗವು ಆಳವಾದ ಅಧ್ಯಯನ ನಡೆಸುವ ಅಗತ್ಯವಿದೆ. ಮಾದಿಗ ಮತ್ತು ಅದರ ಉಪ ಜಾತಿಗಳನ್ನು ಗುರುತಿಸುವ ಕೆಲಸ ಮಾಡುವ ಮೂಲಕ ನೊಂದ ಜನರಿಗೆ ನ್ಯಾಯ ಒದಗಿಸುವ ವಿಶ್ವಾಸ ಇದೆ’ ಎಂದು ಹೇಳಿದರು.

‘2011ರಲ್ಲಿ ಕೇಂದ್ರ ಸರ್ಕಾರ ನಡೆಸಿದ ಜನಗಣತಿ, ಎಲ್.ಜಿ.ಹಾವನೂರು, ನ್ಯಾಯಮೂರ್ತಿ ಸದಾಶಿವ ಹಾಗೂ ಕಾಂತರಾಜ್ ಆಯೋಗದ ವರದಿಗಳನ್ನು ಅಧ್ಯಯನ ನಡೆಸಬೇಕು. ಈ ಎಲ್ಲ ವರದಿಗಳಲ್ಲಿ ಜನಸಂಖ್ಯೆಗೆ ಸಂಬಂಧಿಸಿದ ನಿಖರ ಮಾಹಿತಿ ಲಭ್ಯವಾಗಲಿವೆ. ಒಳಮೀಸಲಾತಿ ಜಾರಿಗೆ ಇರುವ ಅಡ್ಡಿಗಳನ್ನು ಇದರಿಂದ ನಿವಾರಿಸಲು ಸಾಧ್ಯವಿದೆ’ ಎಂದರು.

‘ಸಮಾಜ ಕಲ್ಯಾಣ ಸಚಿವರಾಗಿದ್ದ ಸಂದರ್ಭದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಕಾಂತರಾಜ್‌ ಆಯೋಗ ರಚಿಸಲಾಗಿತ್ತು. 1.5 ಲಕ್ಷ ಜನರನ್ನು ಬಳಸಿಕೊಂಡು ನಡೆಸಿದ ಸಮೀಕ್ಷೆಯ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಬೇಕು. ಟೀಕೆ, ಆರೋಪ ಹಾಗೂ ವಿರೋಧಗಳಿಗೆ ಮಣಿಯಬಾರದು’ ಎಂದರು.

ಶಾಸಕ ಕೆ.ಎಸ್‌.ಬಸವಂತಪ್ಪ, ಮುಖಂಡರಾದ ಎಸ್.ಮಲ್ಲಿಕಾರ್ಜುನ್, ಅಳಗವಾಡಿ ನಿಂಗಪ್ಪ, ಕಣ್ಣಾಳ್ ಅಂಜಿನಪ್ಪ, ವೀರಣ್ಣ ಹಾಜರಿದ್ದರು.

‘ಕೆನೆಪದರಕ್ಕೆ ಒಪ್ಪಿಗೆ ಇಲ್ಲ’

ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿಯಲ್ಲಿ ಕೆನೆಪದರ ಅನುಷ್ಠಾನಗೊಳಿಸುವುದಕ್ಕೆ ಒಪ್ಪಿಗೆ ಇಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯೊಬ್ಬರು ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಯೇ ಹೊರತು ತೀರ್ಪು ಪ್ರಕಟಿಸಿಲ್ಲ ಎಂದು ಮಾಜಿ ಸಚಿವ ಎಚ್‌.ಆಂಜನೇಯ ತಿಳಿಸಿದರು.

‘ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರು ಈಗಷ್ಟೇ ಏಳಿಗೆ ಕಾಣುತ್ತಿದ್ದಾರೆ. ಈ ಸಮುದಾಯದಲ್ಲಿ ಉಳ್ಳವರ ಸಂಖ್ಯೆ ಕಡಿಮೆ ಇದೆ. ಕೆನೆಪದರ ಅನುಷ್ಠಾನಗೊಳಿಸುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ಬಗ್ಗೆ ಚರ್ಚಿಸುವುದು ಅನಗತ್ಯ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ವರದಿ ಬಹಿರಂಗಪಡಿಸಿ’

ಒಳಮೀಸಲಾತಿಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಬಿಜೆಪಿ ಅಧಿಕಾರವಧಿಯಲ್ಲಿ ತಿರಸ್ಕರಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಆಯೋಗದ ವರದಿಯನ್ನು ಸ್ವೀಕರಿಸಿ ಬಹಿರಂಗಪಡಿಸಬೇಕು ಎಂದು ಮಾಜಿ ಸಚಿವ ಎಚ್‌.ಆಂಜನೇಯ ಆಗ್ರಹಿಸಿದರು.

‘ಸದಾಶಿವ ಆಯೋಗದ ವರದಿಯನ್ನು ತಿರಸ್ಕರಿಸಿ ಬಿಜೆಪಿ ಅನ್ಯಾಯ ಮಾಡಿದೆ. ಈ ವರದಿಯಲ್ಲಿ ಏನಿದೆ ಎಂಬುದು ಎಲ್ಲರಿಗೂ ಗೊತ್ತಾಗಬೇಕಿದೆ. ಇದನ್ನು ಪುನಃ ತೆರೆದು ವರದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಇದರಿಂದ ಊಹಾಪೋಹಗಳಿಗೆ ತೆರೆಬೀಳಲಿದೆ’ ಎಂದು ಒತ್ತಾಯಿಸಿದರು.

ಒಳಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಇಡುತ್ತಿರುವ ಹೆಜ್ಜೆಗಳು ಭರವಸೆ ಮೂಡಿಸಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡಲಿದ್ದಾರೆ.
ಎಚ್‌.ಆಂಜನೇಯ, ಮಾಜಿ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.