ADVERTISEMENT

ಅಧಿಸೂಚನೆ ಹೊರಡಿಸಿದ ನೇಮಕಾತಿ ಸ್ಥಗಿತಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2024, 16:12 IST
Last Updated 10 ನವೆಂಬರ್ 2024, 16:12 IST

ದಾವಣಗೆರೆ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವವರೆಗೆ ಅಧಿಸೂಚನೆ ಹೊರಡಿಸಲಾದ ನೇಮಕಾತಿ ಪ್ರಕ್ರಿಯೆ ಕೂಡ ಸ್ಥಗಿತಗೊಳಿಸಬೇಕು. ಒಳಮೀಸಲಾತಿ ಹಂಚಿಕೆ ತೀರ್ಮಾನವಾದ ಬಳಿಕ ಮರುಪರೀಕ್ಷೆ ನಡೆಸಬೇಕು ಎಂದು ಮಾದಿಗ ಸಮುದಾಯದ ಮಠಾಧೀಶರು ಒತ್ತಾಯಿಸಿದರು.

‘ಒಳಮೀಸಲಾತಿ ಜಾರಿಗೊಳಿಸಲು ಆಯೋಗ ರಚಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ. ಮೂರು ತಿಂಗಳ ಕಾಲಮಿತಿಯಲ್ಲಿ ವರದಿ ಪಡೆದು ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಆಶ್ವಾಸನೆ ನೀಡಿ ಎರಡು ವಾರ ಕಳೆದಿದೆ. ಮತ್ತೊಂದೆಡೆ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿದೆ’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

‘ಕೆಲ ನೇಮಕಾತಿಗೆ ಈಗಾಗಲೇ ಅಧಿಸೂಚನೆ ಹೊರಡಿಸಿ ಪರೀಕ್ಷೆ ಕೂಡ ನಡೆಸಲಾಗಿದೆ. ಇಂತಹ ಪರೀಕ್ಷೆ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳ್ಳಬೇಕು. ಒಳಮೀಸಲಾತಿ ವಿಚಾರ ನಿರ್ಧಾರವಾದ ಬಳಿಕ ಮರುಪರೀಕ್ಷೆ ನಡೆಸಬೇಕು. ಮಾದಿಗ ಸಮುದಾಯಕ್ಕೆ ನ್ಯಾಯ ಕೊಡಿಸುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಮಾಜಿಕ ಬದ್ಧತೆ ತೋರಬೇಕು’ ಎಂದು ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.