ADVERTISEMENT

ಅಭಿಮಾನಿಗಳಿಂದ ‘ಸೌಹಾರ್ದ ಸಂಭ್ರಮ’

ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ 92ನೇ ಜನ್ಮದಿನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2022, 20:37 IST
Last Updated 1 ಅಕ್ಟೋಬರ್ 2022, 20:37 IST
ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ 92ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ‘ಸೌಹಾರ್ದ ಸಂಭ್ರಮ’ ಮೆರವಣಿಗೆ ನಡೆಯಿತು
ಮಾಜಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಅವರ 92ನೇ ಜನ್ಮದಿನದ ಪ್ರಯುಕ್ತ ದಾವಣಗೆರೆಯಲ್ಲಿ ‘ಸೌಹಾರ್ದ ಸಂಭ್ರಮ’ ಮೆರವಣಿಗೆ ನಡೆಯಿತು   

ದಾವಣಗೆರೆ: ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್‌. ಪಟೇಲ್‌ ಅವರ 92ನೇ ಜನ್ಮದಿನವನ್ನು ಅಭಿಮಾನಿಗಳು ಶನಿವಾರ ಜಾಥಾ ನಡೆಸಿ ಪಟೇಲರ ರಾಜಕೀಯೇತರ ವ್ಯಕ್ತಿತ್ವವನ್ನು ಸ್ಮರಿಸುವ ಮೂಲಕ ‘ಸೌಹಾರ್ದ ಸಂಭ್ರಮ’ವನ್ನಾಗಿ ಆಚರಿಸಿದರು.

‘ಮಸೀದಿಯಿಂದ ಮಂದಿರ’ದವರೆಗೆ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿತ್ತು. ಮೆಹಬೂಬ್‌ ನಗರದ ಮುಬಾರಕ್‌ ಮಸೀದಿ ಬಳಿ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಮಸೀದಿಯ ಮಹಮ್ಮದ್‌ ನೂರುಲ್ಲಾ, ಚರ್ಚ್‌ ಧರ್ಮಗುರು ಪಾಸ್ಟರ್‌ ರಾಜಶೇಖರ್‌, ರೈತ ನಾಯಕ ತೇಜಸ್ವಿ ಪಟೇಲ್‌, ಮಹಿಮ ಪಟೇಲ್‌, ಪರಿಶಿಷ್ಟ ಸಮುದಾಯದ ಮುಖಂಡ ಹೆಗ್ಗೆರೆ ರಂಗಪ್ಪ, ನೆರಳು ಬೀಡಿ ಕಾರ್ಮಿಕ ಯೂನಿಯನ್‌ನ ಜಬೀನಾಖಾನಂ ಮುಂತಾದವರು ಸೌಹಾರ್ದ ಜಾಥಾಕ್ಕೆ ಚಾಲನೆ ನೀಡಿದರು.

ಲಂಬಾಣಿ ನೃತ್ಯ, ಚಂಡೆ ವಾದನ, ನಾಸಿಕ್‌ ಡೋಲ್‌, ಎತ್ತಿನ ಗಾಡಿ, ಜಗ್ಗಲಗಿ, ನಗಾರಿ ವಾದನಗಳು ಮೆರವಣಿಗೆಗೆ ಮೆರುಗು ನೀಡಿದವು. ಇಪ್ಟಾ ಕಲಾವಿದರಾದ ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ, ಶರಣಪ್ಪ, ಬಾನಪ್ಪ, ಸುರೇಶ್‌ ಕ್ರಾಂತಿಗೀತೆಗಳನ್ನು ಹಾಡಿದರು. ಜಾಥಾವು ಶಿವಯೋಗ ಮಂದಿರದಲ್ಲಿ ಸಮಾಪನಗೊಂಡಿತು.

ADVERTISEMENT

ಮಧ್ಯಾಹ್ನದ ಬಳಿಕ ನಡೆದ ಸೌಹಾರ್ದ ಸಂಭ್ರಮ ಸಭಾ ಕಾರ್ಯಕ್ರಮವನ್ನು ಸಾಲುಮರದ ತಿಮ್ಮಕ್ಕ ಅವರು ಜೆ.ಎಚ್‌. ಪಟೇಲರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಉದ್ಘಾಟಿಸಿದರು. ಸಾಹಿತಿ ಕಾಳೇಗೌಡ ನಾಗವಾರ, ರೈತನಾಯಕ ಕೆ.ಟಿ. ಗಂಗಾಧರ್, ‘ಪ್ರಜಾವಾಣಿ’ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ, ಪತ್ರಕರ್ತ ಎಸ್‌.ಆರ್. ಆರಾಧ್ಯ, ಪಟೇಲರ ಸಹೋದರಿ ಅನಸೂಯಾ ಪಟೇಲ್‌ ಅವರು ಜೆ.ಎಚ್‌. ಪಟೇಲರ ಕೊಡುಗೆಗಳನ್ನು ಮೆಲುಕು ಹಾಕಿದರು. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಹೊಸದಾಗಿ ಏಳು ಜಿಲ್ಲೆಗಳನ್ನು ರಚಿಸಿದ್ದನ್ನು ಸ್ಮರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.