ಜಗಳೂರು: ತಾಲ್ಲೂಕಿನ 166 ಗ್ರಾಮಗಳಿಗೆ ₹480 ಕೋಟಿ ವೆಚ್ಚದ ಬಹುಗ್ರಾಮ ಯೋಜನೆಯಡಿ ತುಂಗಭದ್ರಾ ನದಿಯಿಂದ ಫ್ಲೋರೈಡ್ ಮುಕ್ತ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾವುದು ಎಂದು ಸಂಸದೆ ಡಾ. ಪ್ರಭಾಮಲ್ಲಿಕಾರ್ಜುನ್ ಹೇಳಿದರು.
ತಾಲ್ಲೂಕಿನ ಮಹಾರಾಜನಹಟ್ಟಿ ಬಳಿ ಸಂತೆಮುದ್ದಾಪುರ ಮತ್ತು ಇತರೆ 166 ಜನವಸತಿಗಳ ‘ಬಹುಗ್ರಾಮ ಕುಡಿಯುವ ನೀರಿನ ಯೋಜನೆ’ಯ ಕಾಮಗಾರಿಗೆ ಶುಕ್ರವಾರ ಶಂಕಸ್ಥಾಪನೆ ನೆರವೇರಿಸಿ ಮಾತನಾಡಿದರು.
‘ಗ್ರಾಮೀಣ ಭಾಗದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೂ ಇದುವರೆಗೂ ನೀರು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಯೋಜನೆಯಡಿ ಹರಿಹರ ತಾಲ್ಲೂಕಿನ ರಾಜನಹಳ್ಳಿ ಬಳಿ ತುಂಗಭದ್ರಾ ನದಿಯಿಂದ ಪೈಪಲೈನ್ ಮೂಲಕ ಹರಿದು ಬರಲಿರುವ ನೀರು ಬಾತಿಯಲ್ಲಿ ಶುದ್ಧೀಕರಣಗೊಂಡು, ಜಗಳೂರು ತಾಲ್ಲೂಕಿನ 166, ದಾವಣಗೆರೆ ತಾಲ್ಲೂಕಿನ 20 ಹಾಗೂ ಹರಿಹರ ತಾಲ್ಲೂಕಿನ 11 ಹಳ್ಳಿಗಳಿಗೆ ಪೂರೈಕೆಯಾಗಲಿದೆ. ಇದರಿಂದ ಫ್ಲೋರೈಡ್ ನೀರಿಗೆ ಮುಕ್ತಿ ಸಿಗಲಿದೆ. ಈ ಯೋಜನೆಯಡಿ ಜಗಳೂರು ಪಟ್ಟಣವನ್ನೂ ಸೇರ್ಪಡೆಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಅತ್ಯಂತ ಹಿಂದುಳಿದ ತಾಲ್ಲೂಕಿಗೆ ಭದ್ರಾ ಮೇಲ್ದಂಡೆ ಯೋಜನೆ ಸಾಕಾರದ ಹಂತದಲ್ಲಿದೆ. ಜೆಜೆಎಂ, ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನೊಳಗೊಂಡಂತೆ ಮಹತ್ವದ ನಾಲ್ಕು ನೀರಾವರಿ ಯೋಜನೆಗಳು ತಾಲ್ಲೂಕಿನ ಚಿತ್ರಣವನ್ನೇ ಬದಲಿಸಲಿವೆ. 57 ಕೆರೆಗಳನ್ನು ತುಂಬಿಸುವ ಯೋಜನೆಯಡಿ 30ಕ್ಕೂ ಅಧಿಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಶೀಘ್ರವೇ ಎಲ್ಲಾ ಕೆರೆಗಳಿಗೂ ನೀರು ಹರಿಯಲಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಹಿಟ್ನಾಳ್, ಬಂಜಾರ ತಾಂಡಾ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ, ಬ್ರಾಹ್ಮಣ ಅಭಿವೃದ್ದಿ ನಿಗಮದ ಅಧ್ಯಕ್ಷ ಅಸಗೋಡು ಜಯಸಿಂಹ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್, ಎಸ್.ಮಂಜುನಾಥ್, ಕಾಂಗ್ರೆಸ್ ಮುಖಂಡರಾದ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಲ್ಲಾಗಟ್ಟೆ ಶೇಖರಪ್ಪ, ಬಿ. ಮಹೇಶ್ವರಪ್ಪ, ವೀರನಗೌಡ, ವೀರೇಂದ್ರ ಪಾಟೀಲ್, ಕುಮಾರನಾಯ್ಕ, ಕಲ್ಪನಾ, ಎಇಇ ಸಾಧಿಕ್ ಉಲ್ಲಾ, ತಹಶೀಲ್ದಾರ್ ಸೈಯದ್ ಕಲೀಂ ಉಲ್ಲಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.