ಜಗಳೂರು: ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರವಾಗಿರುವ ಬಿಳಿಚೋಡು ಗ್ರಾಮದ ನಾಡ ಕಚೇರಿಯಲ್ಲಿ ಕಾಯಂ ಅಧಿಕಾರಿಗಳ ಕೊರತೆ ಹಾಗೂ ನಿರಂತರ ವಿದ್ಯುತ್ ಸೌಲಭ್ಯದ ಕೊರತೆಯಿಂದಾಗಿ 70ಕ್ಕೂ ಹೆಚ್ಚು ಹಳ್ಳಿಗಳ ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗೆ ನಿತ್ಯ ಕಚೇರಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬಿಳಿಚೋಡು ಗ್ರಾಮದಲ್ಲಿ ಆರೇಳು ದಶಕಗಳಷ್ಟು ಹಳೆಯದಾದ ಶಿಥಿಲಗೊಂಡ ನಾಡಕಚೇರಿ ಕಟ್ಟಡವನ್ನು ತೆರವುಗೊಳಿಸಿ ಇತ್ತೀಚೆಗೆ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಕಂಪ್ಯೂಟರ್ ಕೊಠಡಿ, ದಾಖಲೆ ಕೊಠಡಿ, ಅಧಿಕಾರಿಗಳ ಕೊಠಡಿ ಸೇರಿದಂತೆ ಸುಸಜ್ಜಿತ ಕಟ್ಟಡ ನಿರ್ಮಾಣವಾದರೂ ಸಹ ತಮ್ಮ ಕೆಲಸ ಕಾರ್ಯಗಳಿಗೆ ನಿತ್ಯ ಕಚೇರಿಗೆ ಬರುವ ಗ್ರಾಮಸ್ಥರು ನಿರಂತರ ಸರ್ವರ್ ಸಮಸ್ಯೆ, ವಿದ್ಯುತ್ ಸಮಸ್ಯೆ ಮುಂತಾದ ಕಾರಣಗಳಿಂದಾಗಿ ಸಕಾಲದಲ್ಲಿ ಕೆಲಸಗಳಾಗದೇ ಸಮಸ್ಯೆಗಳು ಹೆಚ್ಚಾಗಲು ಕಾರಣವಾಗಿವೆ.
ಬಿಳಿಚೋಡು ನಾಡಕಚೇರಿ ವ್ಯಾಪ್ತಿಯಲ್ಲಿ ಹಾಲೇಕಲ್ಲು, ದೇವಿಕೆರೆ, ಮೆದಿಕೆರೇನಹಳ್ಳಿ, ಮೆದಗಿನಕೆರೆ, ಚದರಗೊಳ್ಳ, ಗುತ್ತಿದುರ್ಗ, ಅಸಗೋಡು, ಮರಿಕುಂಟೆ ಸೇರಿದಂತೆ ಒಟ್ಟು 10 ಫಿರ್ಕಾಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿದ್ದು, ಕೆಲವರು ಜನಸಾಮಾನ್ಯರ ಕೈಗೆ ಸಿಗುತ್ತಿಲ್ಲ ಎಂಬ ಬಗ್ಗೆ ಆರೋಪಗಳಿವೆ.
‘ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ನಿವಾಸಿ ದೃಢೀಕರಣ ಪ್ರಮಾಣಪತ್ರ, ಬೋನಾಫೈಡ್ ಪ್ರಮಾಣಪತ್ರ, ಭೂ ಹಿಡುವಳಿ, ಭೂಮಾಪನ ನಕ್ಷೆ ಮುಂತಾದ ಕೆಲಸಗಳು ತ್ವರಿತಗತಿಯಲ್ಲಿ ಆಗುತ್ತಿಲ್ಲ ಎಂಬ ಬಗ್ಗೆ ದೂರುಗಳಿವೆ. ಮುಖ್ಯವಾಗಿ ನಾಡಕಚೇರಿಯ ಕಂದಾಯ ನಿರೀಕ್ಷಕರು ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲೂ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಸಕಾಲದಲ್ಲಿ ಕಡತಗಳ ವಿಲೇವಾರಿಗೆ ತೊಂದರೆಯಾಗಿದ್ದು, ಅಧಿಕಾರಿಯ ಪ್ರಭಾರಿಯನ್ನು ರದ್ದುಪಡಿಸಬೇಕು’ ಎಂದು ಬಿಳಿಚೋಡು ಪಂಚಾಯಿತಿ ವ್ಯಾಪ್ತಿಯ ಗೋವಿಂದಪ್ಪ ಒತ್ತಾಯಿಸಿದ್ದಾರೆ.
‘ಕಚೇರಿಯಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆ ಇದೆ. ಯು.ಪಿ.ಎಸ್. ಸೌಲಭ್ಯ ಇಲ್ಲ. ಕೆಲವೊಮ್ಮೆ ಸರ್ವರ್ ಸಮಸ್ಯೆ ಎದುರಾಗುತ್ತದೆ. ಆದಾಗ್ಯೂ ಸಾರ್ವಜನಿಕರ ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಲಾಗುತ್ತದೆ. ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸೇರಿದಂತೆ ಈವರೆಗೆ 27 ಅರ್ಜಿಗಳು ಮಾತ್ರ ಬಾಕಿ ಇದೆ. ವಿಲೇವಾರಿಗೆ 21 ದಿನಗಳ ಕಾಲ ಅವಕಾಶ ಇದ್ದರೂ ಕೇವಲ ಮೂರು, ನಾಲ್ಕು ದಿನಗಳೊಳಗಾಗಿ ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಕೆಲವು ಹೊಸ ಕಂದಾಯ ಗ್ರಾಮಗಳ ಘೊಷಣೆಯಿಂದಾಗಿ ಸ್ವಲ್ಪ ವಿಳಂಬವಾಗಿದೆ’ ಎಂದು ಎಂದು ತಹಶೀಲ್ದಾರ್ ಕಲೀಂ ಉಲ್ಲಾ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
ಎಲ್ಲಾ ಸಿಬ್ಬಂದಿ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಕಂದಾಯ ನಿರೀಕ್ಷಕರು ಮಾತ್ರ ಪ್ರಭಾರಿಯಾಗಿ ಜಗಳೂರಿನ ತಹಶೀಲ್ದಾರ್ ಕಚೇರಿಯಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ.–ಕಲೀಂ ಉಲ್ಲಾ, ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.