ಹರಿಹರ: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಮುಗಿಸಿದ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಬುಧವಾರ ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠಕ್ಕೆ ಮರಳಿದರು. ಭಕ್ತರು ಬೈಕ್ ರ‍್ಯಾಲಿ ಮೂಲಕ ಸ್ವಾಮೀಜಿಯನ್ನು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ವಾಮೀಜಿ, ‘ಕುರುಬರಿಗೆ ಪರಿಶಿಷ್ಟ ಪಂಗಡದ ಮೀಸಲಾತಿಗೆ ಆಗ್ರಹಿಸಿ ಆರಂಭಿಸಿದ ಪಾದಯಾತ್ರೆ ಸಾರ್ಥಕವಾಗಿದೆ. ನಾವು ಹೊಸದಾಗಿ ಮೀಸಲಾತಿ ಕೇಳುತ್ತಿಲ್ಲ. ಈಗ ಇರುವ ಎಸ್.ಟಿ ಮೀಸಲಾತಿ ಪಟ್ಟಿಯಲ್ಲಿ ಕುರುಬ ಎಂಬ ಪದ ಬಿಟ್ಟು ಹೋಗಿದೆ. ಅದನ್ನು ಸೇರ್ಪಡೆ ಮಾಡಿ ಎಂಬುದು ನಮ್ಮ ಬೇಡಿಕೆಯಾಗಿದೆ’ ಎಂದರು.
‘ಕುರುಬರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಲು ಕುಲಶಾಸ್ತ್ರ ಅಧ್ಯಯನ ಅಗತ್ಯವಿಲ್ಲ. ಒಂದು ವೇಳೆ ಕುಲಶಾಸ್ತ್ರ ಅಧ್ಯಯನ ಬೇಕು ಎಂದರೆ ಅದಕ್ಕೂ ಸಿದ್ಧ. ಈಗಾಗಲೇ ಕುಲಶಾಸ್ತ್ರ ಅಧ್ಯಯನ ಶೇ 90ರಷ್ಟು ಮುಕ್ತಾಯವಾಗಿದ್ದು, ಒಂದೆರಡು ತಿಂಗಳಲ್ಲಿ ಮುಕ್ತಾಯವಾಗಲಿದೆ’ ಎಂದು ಹೇಳಿದರು.
‘ಈಗ ಪಾದಯಾತ್ರೆ ಮುಕ್ತಾಯವಾಗಿದೆ. ಮುಂದಿನ ಹೋರಾಟ ಕುರಿತು ಸಮಿತಿಗಳ ಸಭೆ ಮಾಡಿ ನಿರ್ಧರಿಸಲಾಗುವುದು. ನಾವು ಹೇಳಿದಾಗ ಹೋರಾಟ ನಡೆಸಲು ಭಕ್ತರು ಸಜ್ಜಾಗಬೇಕು’ ಎಂದು ಸ್ವಾಮೀಜಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.