ADVERTISEMENT

ಕುರುಬರಲ್ಲಿ ಪಂಗಡಗಳಿಲ್ಲ; ಎಚ್ಚೆತ್ತು ಒಗ್ಗಟ್ಟಾಗಿ

ಕನಕದಾಸರ 535ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಸಚಿವ ಎಂ.ಟಿ.ಬಿ.ನಾಗರಾಜ್

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2022, 6:22 IST
Last Updated 12 ಡಿಸೆಂಬರ್ 2022, 6:22 IST
ಹೊನ್ನಾಳಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಶಾಸಕ ಎಂ.ಸಿ.ರಾಮಪ್ಪ ಡೊಳ್ಳುಬಾರಿಸಿ ಉದ್ಘಾಟಿಸಿದರು.
ಹೊನ್ನಾಳಿಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮವನ್ನು ಸಚಿವ ಎಂ.ಟಿ.ಬಿ.ನಾಗರಾಜ್ ಹಾಗೂ ಶಾಸಕ ಎಂ.ಸಿ.ರಾಮಪ್ಪ ಡೊಳ್ಳುಬಾರಿಸಿ ಉದ್ಘಾಟಿಸಿದರು.   

ಹೊನ್ನಾಳಿ: ‘ಹೊನ್ನಾಳಿಯಲ್ಲಿ ಕುರುಬ ಸಮಾಜದಲ್ಲಿ ಎರಡು ಪಂಗಡಗಳಿವೆ ಎಂದು ತಿಳಿದುಬಂದಿದೆ. ಹಾಲುಮತದಲ್ಲಿ ಎಂದಿಗೂ ಪಂಗಡಗಳಿಲ್ಲ. ಈ ಬಗ್ಗೆ ಕನಕದಾಸರು ತಮ್ಮ ಕೀರ್ತನೆಯಲ್ಲಿ ಕೂಡ ತಿಳಿಸಿದ್ದು, ಸಮಾಜದವರು ಎಚ್ಚೆತ್ತುಕೊಂಡು ಒಗ್ಗಟ್ಟಾಗಿರಬೇಕು’ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ್ ಹೇಳಿದರು.

ಹೊನ್ನಾಳಿಯಲ್ಲಿ ಭಾನುವಾರ ಕರ್ನಾಟಕ ಕುರುಬ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಕನಕದಾಸರ 535ನೇ ಜಯಂತ್ಯುತ್ಸವ ಸಮಾರಂಭವನ್ನು ಡೊಳ್ಳು ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ಸಮಾಜದ ಮುಖಂಡರು ಯಾವುದೇ ಪಕ್ಷದಲ್ಲಿ ಇರಲಿ; ಸಮಾಜ ಎಂದು ಬಂದಾಗ ಎಲ್ಲರೂ ಒಂದಾಗಬೇಕು. ಜತೆಗೆ ಓಗ್ಗಟ್ಟಿನ ಮಂತ್ರ ಜಪಿಸಬೇಕು’ ಎಂದು ಹೇಳಿದರು.

ADVERTISEMENT

‘ಹೊನ್ನಾಳಿ– ನ್ಯಾಮತಿ ಅವಳಿ ತಾಲ್ಲೂಕುಗಳಲ್ಲಿ ಕುರುಬ ಸಮಾಜ ಅತಿ ದೊಡ್ಡ ಸಂಖ್ಯೆಯಲ್ಲಿದ್ದರೂ ಇದೂವರೆಗೆ ಒಂದು ಸಮುದಾಯ ಭವನ ಇಲ್ಲ. ಹೊನ್ನಾಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹25 ಲಕ್ಷ ನೀಡುವೆ. ಜತೆಗೆ ಕನಕದಾಸರ ಪುತ್ಥಳಿ ನಿರ್ಮಾಣಕ್ಕೆ ₹2 ಲಕ್ಷ ನೀಡಲಾಗುವುದು’ ಎಂದು ಘೋಷಿಸಿದರು.

‘ಸ್ಥಳೀಯ ಶಾಸಕ ರೇಣುಕಾಚಾರ್ಯ ಅವರು ಸಮುದಾಯ ಭವನ ನಿರ್ಮಾಣಕ್ಕೆ ಸೂಕ್ತ ನಿವೇಶವನ್ನು ಸರ್ಕಾರದಿಂದ ಮಂಜೂರು ಮಾಡಿಸಬೇಕು. ಅವರೊಂದಿಗೆ ನಾನೂ ಕೈ ಜೋಡಿಸುವೆ’ ಎಂದು ಹೇಳಿದರು.

‘ಸಮಾಜದ ಮಾಜಿ ಹಾಗೂ ಹಾಲಿ ಸಚಿವರು ಸೇರಿ ಸಮಾಜದ ಗುರುಗಳ ನೇತೃತ್ವದಲ್ಲಿ ಮೀಸಲಾತಿಗಾಗಿ ದೊಡ್ಡ ಹೋರಾಟ ಮಾಡಿದ್ದು, ಬ್ರಿಟಿಷರ ಕಾಲದಿಂದಲೂ ಸಮಾಜಕ್ಕೆ ಮೀಸಲಾತಿ ಕೈತಪ್ಪಿದೆ. ರಾಜ್ಯ ಸರ್ಕಾರದಿಂದ ಈಗ ಸಾಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ’ ಎಂದು ಹೇಳಿದರು.

ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. ಕನಕದಾಸ ಜಯಂತ್ಯುತ್ಸವವ ಸ್ವಾಗತ ಸಮಿತಿ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಪಟ್ಟಣದ ಟಿ.ಬಿ.ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತದವರೆಗೆ ಅಲಂಕೃತ ಸಾರೋಟ್‌ನಲ್ಲಿ ಸ್ವಾಮೀಜಿಗಳು, ಸಚಿವರ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ
ಮೇಳಗಳು ಮೆರವಣಿಗೆಗೆ ಮೆರುಗು ನೀಡಿದವು.

ಕಾರ್ಯಕ್ರಮದಲ್ಲಿ ಶಾಸಕ ಎಂ.ಸಿ.ರಾಮಪ್ಪ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಪಟ್ಟಣ ಪಂಚಾಯಿತಿಮಾಜಿ ಅಧ್ಯಕ್ಷೆ ಶ್ರೀದೇವಿ ಧರ್ಮಪ್ಪ ಮಾತನಾಡಿದರು. ಕುರುಬ ಸಮಾಜದ ಅಧ್ಯಕ್ಷ ಎಸ್.ಬೀರಪ್ಪ, ಶಿವಮೊಗ್ಗ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಕಾಂತ್, ಮಾಜಿ ಶಾಸಕ ಡಿ.ಬಿ.ಗಂಗಪ್ಪ, ಗೋಣಿಮಾಲತೇಶ್, ಬಿ.ರೇವಣಸಿದ್ದಪ್ಪ, ಡಿ.ಮಹೇಶ್ ದೊಡ್ಡಗಣ್ಣಾರ್, ಮಾದಪ್ಪ, ಕುರುಬ ಸಮಾಜದ ಕಾರ್ಯಾಧ್ಯಕ್ಷ ಧರ್ಮಪ್ಪ, ಕುರುಬ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಯಿತು. ಪತಂಜಲಿ ಮಾಸಿಕ ಪತ್ರಿಕೆ ಹಾಗೂ ಕಂಬಳಿ ಮಹತ್ವ ಕ್ಯಾಸೆಟ್ ಬಿಡುಗಡೆ ಮಾಡಲಾಯಿತು. ಗೊಲ್ಲರಹಳ್ಳಿ ಮಂಜುನಾಥ್ ಕನಕದಾಸರ ಜೀವನಚರಿತ್ರೆ ಕುರಿತು ಉಪನ್ಯಾಸ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.