ADVERTISEMENT

ದಾವಣಗೆರೆ: ಸದ್ದಿಲ್ಲದೇ ಹೆಚ್ಚಿದ ಬಸ್‌ ಟಿಕೆಟ್‌ ದರ!

ಹೆದ್ದಾರಿ ಟೋಲ್‌ ಶುಲ್ಕ, ಅಪಘಾತ ವಿಮೆ ವಂತಿಗೆ ಪ್ರಯಾಣಿಕರಿಗೆ ವರ್ಗಾವಣೆ

ಜಿ.ಬಿ.ನಾಗರಾಜ್
Published 17 ಜುಲೈ 2024, 5:35 IST
Last Updated 17 ಜುಲೈ 2024, 5:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಟೋಲ್‌ ಶುಲ್ಕ ಏರಿಕೆ, ಅಪಘಾತ ವಿಮೆಯ ವಂತಿಗೆ ಸಂಗ್ರಹದ ಪರಿಣಾಮವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್‌ಗಳ ಟಿಕೆಟ್‌ ದರ ಸದ್ದಿಲ್ಲದೇ ಏರಿಕೆಯಾಗುತ್ತಿದೆ. ಟಿಕೆಟ್‌ ಮೂಲ ದರವನ್ನು ಸರ್ಕಾರ ಹೆಚ್ಚಿಸದಿದ್ದರೂ ಬಸ್‌ ಪ್ರಯಾಣ ಹೊರೆಯಾಗಿ ಪರಿಣಮಿಸಿದೆ.

14 ತಿಂಗಳಲ್ಲಿ ದಾವಣಗೆರೆ– ಚಿತ್ರದುರ್ಗ ಕೆಎಸ್‌ಆರ್‌ಟಿಸಿ ಬಸ್‌ಗಳ ಟಿಕೆಟ್‌ ದರ ₹ 5 ಹಾಗೂ ರಾಣೆಬೆನ್ನೂರು–ದಾವಣಗೆರೆ ಟಿಕೆಟ್‌ ದರ ₹ 4 ಏರಿಕೆ ಕಂಡಿದೆ. ಟಿಕೆಟ್‌ ದರವನ್ನು ಗೋಪ್ಯವಾಗಿ ಏರಿಕೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಪ್ರಯಾಣಿಕರನ್ನು ಕಾಡತೊಡಗಿದೆ.

ರಾಷ್ಟ್ರೀಯ ಹೆದ್ದಾರಿಯ ಟೋಲ್ ಶುಲ್ಕ 2023ರ ಏ.17 ಹಾಗೂ 2024ರ ಜೂನ್‌ 11ರಂದು ಪರಿಷ್ಕರಣೆಗೊಂಡಿದೆ. ಪ್ರತಿ ವರ್ಷ ಹೆಚ್ಚಾಗುತ್ತಿರುವ ಟೋಲ್‌ ಶುಲ್ಕಕ್ಕೆ ಅನುಗುಣವಾಗಿ ಟಿಕೆಟ್‌ ದರವನ್ನು ಏರಿಕೆ ಮಾಡಲಾಗುತ್ತಿದೆ.

ADVERTISEMENT

ಈ ನಡುವೆ ಪ್ರಯಾಣಿಕರ ಅಪಘಾತ ವಿಮೆಯ ಪರಿಹಾರದ ಮೊತ್ತವನ್ನು ₹ 3 ಲಕ್ಷದಿಂದ ₹ 10 ಲಕ್ಷಕ್ಕೆ ಏರಿಸಿ ಪ್ರಯಾಣಿಕರಿಂದ ವಂತಿಗೆ ಸಂಗ್ರಹಿಸುವ ಮಾನದಂಡದಲ್ಲಿ ತಂದಿರುವ ಬದಲಾವಣೆ ಕೂಡ ಟಿಕೆಟ್‌ ದರ ಗಗನಮುಖಿ ಆಗುವಂತೆ ಮಾಡಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲ ಟಿಕೆಟ್‌ ದರ ರಾಣೆಬೆನ್ನೂರು– ದಾವಣಗೆರೆ ನಡುವೆ ₹ 45 ಹಾಗೂ ಚಿತ್ರದುರ್ಗ–ದಾವಣಗೆರೆ ನಡುವೆ ₹ 65 ಇದೆ. 2020 ಫೆಬ್ರುವರಿಯಿಂದ ಟಿಕೆಟ್ ಮೂಲ ದರ ಸ್ಥಿರವಾಗಿದೆ. ಹೆಚ್ಚಾಗುತ್ತಿರುವ ಟೋಲ್‌ ಶುಲ್ಕವನ್ನು ಪ್ರಯಾಣಿಕರಿಗೆ ವರ್ಗಾಯಿಸುತ್ತಿರುವುದರಿಂದ ಟಿಕೆಟ್‌ ದರ ಏರಿಕೆಯಾಗುತ್ತಿದೆ. ಟೋಲ್‌ ಶುಲ್ಕವನ್ನು ಪ್ರತಿ ಪ್ರಯಾಣಿಕರಿಂದ ದಾವಣಗೆರೆ–ಚಿತ್ರದುರ್ಗ ನಡುವೆ ₹ 13 ಹಾಗೂ ದಾವಣಗೆರೆ–ರಾಣೆಬೆನ್ನೂರು ನಡುವೆ ₹ 15 ಸಂಗ್ರಹಿಸಲಾಗುತ್ತಿದೆ. ದಾವಣಗೆರೆ–ಚಿತ್ರದುರ್ಗ ನಡುವಿನ ಹೆಬ್ಬಾಳ ಟೋಲ್‌ನಲ್ಲಿ ಪ್ರತಿ ಬಸ್‌ಗೆ ₹ 440 ಟೋಲ್‌ ಶುಲ್ಕ ನಿಗದಿಪಡಿಸಲಾಗಿದೆ.

‘2023ರ ಏಪ್ರಿಲ್‌ನಲ್ಲಿ ಟೋಲ್‌ ಶುಲ್ಕ ಏರಿಕೆಯಾಗಿದ್ದರಿಂದ ಟಿಕೆಟ್‌ ದರವೂ ಪರಿಷ್ಕರಣೆಗೊಂಡಿತು. ರಾಣೆಬೆನ್ನೂರು–ದಾವಣಗೆರೆ ನಡುವೆ ಪ್ರತಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ಟೋಲ್‌ ಶುಲ್ಕ ₹ 11ರಿಂದ 14ಕ್ಕೆ ಹೆಚ್ಚಳವಾಯಿತು. 2024ರ ಜೂನ್‌ನಲ್ಲಿ ಏರಿದ ಟೋಲ್‌ ಶುಲ್ಕಕ್ಕೆ ಅನುಗುಣವಾಗಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ದರ ₹ 15ಕ್ಕೆ ಏರಿಕೆಯಾಯಿತು. ₹ 45 ಮೂಲ ಟಿಕೆಟ್‌ ದರದೊಂದಿಗೆ ಟೋಲ್‌ ಶುಲ್ಕ ಸೇರಿಸಿ ಟಿಕೆಟ್‌ ದರವನ್ನು ₹ 60 ನಿಗದಿಪಡಿಸಲಾಯಿತು’ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ವಿವರಿಸಿದರು.

‘ದಾವಣಗೆರೆ–ಚಿತ್ರದುರ್ಗ ನಡುವೆ ಪ‍್ರತಿ ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ₹ 10 ಟೋಲ್‌ ಶುಲ್ಕ 2023ರ ಏಪ್ರಿಲ್‌ ಬಳಿಕ 13ಕ್ಕೆ ಏರಿಕೆ ಕಂಡಿತು. ಟಿಕೆಟ್‌ ಮೂಲದರ ₹ 65ರ ಜೊತೆಗೆ ₹ 13 ಟೋಲ್‌ ಶುಲ್ಕವನ್ನು ಸೇರಿಸಿ ₹ 78 ನಿಗದಿಪಡಿಸಲಾಗಿತ್ತು. ಪ್ರಯಾಣಿಕರ ಅಪಘಾತ ವಿಮೆ ವಂತಿಗೆ ₹ 2 ಸೇರಿಸಿದ ಪರಿಣಾಮ ಟಿಕೆಟ್‌ ದರ ₹ 80ಕ್ಕೆ ತಲುಪಿದೆ. 2024 ಜೂನ್‌ನಲ್ಲಿ ಟೋಲ್‌ ದರ ಹೆಚ್ಚಿದರೂ ಈ ಮಾರ್ಗದ ಟಿಕೆಟ್‌ ದರವನ್ನು ಏರಿಸಿಲ್ಲ’ ಎಂಬುದು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ವಿವರಣೆ.

Quote - ಟಿಕೆಟ್‌ ಮೂಲ ದರವನ್ನು ಹಲವು ವರ್ಷಗಳಿಂದ ಏರಿಕೆ ಮಾಡಿಲ್ಲ. ಡೀಸೆಲ್‌ ಆಟೊಮೊಬೈಲ್‌ ಬೆಲೆ ಹೆಚ್ಚಾದರೂ ಪ್ರಯಾಣಿಕರಿಗೆ ಹೊರೆಯುಂಟು ಮಾಡಿಲ್ಲ. ರಾಷ್ಟ್ರೀಯ ಹೆದ್ದಾರಿಯಲ್ಲಿ ಹೆಚ್ಚಳವಾಗಿರುವ ಟೋಲ್‌ ಶುಲ್ಕವನ್ನು ಮಾತ್ರ ಪ್ರಯಾಣಿಕರಿಗೆ ವರ್ಗಾಯಿಸಲಾಗಿದೆ. ಸಿದ್ದೇಶ್ವರ ಎನ್‌.ಹೆಬ್ಬಾಳ್‌ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

ಅಪಘಾತ ವಿಮೆ ವಂತಿಗೆ

ಬಸ್‌ ಅಪಘಾತಕ್ಕೀಡಾದ ಸಂದರ್ಭದಲ್ಲಿ ಗಾಯಗೊಂಡ ಅಥವಾ ಮೃತಪಟ್ಟ ಪ್ರಯಾಣಿಕರಿಗೆ ಪರಿಹಾರ ನೀಡಲು ಕೆಎಸ್‌ಆರ್‌ಟಿಸಿ ವಿಮೆ ವ್ಯವಸ್ಥೆ ಅಳವಡಿಸಿಕೊಂಡಿದೆ. ಮೃತ ಪ್ರಯಾಣಿಕರ ಕುಟುಂಬಕ್ಕೆ ಪರಿಹಾರವಾಗಿ ನೀಡುವ ಮೊತ್ತವನ್ನು ₹ 3 ಲಕ್ಷದಿಂದ ₹ 10 ಲಕ್ಷಕ್ಕೆ ಹೆಚ್ಚಿಸಿದೆ. ಈ ಪರಿಷ್ಕೃತ ಆದೇಶ 2024ರ ಜನವರಿಯಿಂದ ಅನುಷ್ಠಾನಕ್ಕೆ ಬಂದಿದೆ. ₹ 3ಲಕ್ಷ ವಿಮಾ ಪರಿಹಾರ ಮೊತ್ತವಿದ್ದಾಗ ₹ 100ವರೆಗಿನ ಮೂಲ ಟಿಕೆಟ್‌ ದರಕ್ಕೆ ಪ್ರಯಾಣಿಕರಿಂದ ವಿಮಾ ವಂತಿಕೆ ಸಂಗ್ರಹಿಸುತ್ತಿರಲಿಲ್ಲ. ವಿಮಾ ಪರಿಹಾರದ ಮೊತ್ತವನ್ನು ₹ 10 ಲಕ್ಷಕ್ಕೆ ಏರಿಸಿದ ಬಳಿಕ ₹ 50ಮೇಲ್ಪಟ್ಟ ಮೂಲ ಟಿಕೆಟ್‌ ದರ ಹೊಂದಿದ ಪ್ರಯಾಣಿಕರಿಂದ ₹ 2 ವಿಮಾ ವಂತಿಗೆ ಸಂಗ್ರಹಿಸಲಾಗುತ್ತಿದೆ. ಚಿತ್ರದುರ್ಗ–ದಾವಣಗೆರೆ ನಡುವಿನ ಟಿಕೆಟ್‌ ದರಕ್ಕೆ ಮಾತ್ರ ವಿಮಾ ವಂತಿಗೆ ಅನ್ವಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.