ADVERTISEMENT

ದಾವಣಗೆರೆ | ಬೆಳೆಗಳ ಆಪೋಷನ ಪಡೆದ ವರುಣ; ರಾಗಿ, ಈರುಳ್ಳಿ, ಮೆಕ್ಕೆಜೋಳ ನೀರುಪಾಲು

ಜಿ.ಬಿ.ನಾಗರಾಜ್
Published 23 ಅಕ್ಟೋಬರ್ 2024, 6:18 IST
Last Updated 23 ಅಕ್ಟೋಬರ್ 2024, 6:18 IST
ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಗ್ರಾಮದಲ್ಲಿ ಮಳೆಗೆ ಹಾಳಾಗಿರುವ ರಾಗಿ ಬೆಳೆ
ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಗ್ರಾಮದಲ್ಲಿ ಮಳೆಗೆ ಹಾಳಾಗಿರುವ ರಾಗಿ ಬೆಳೆ   

ದಾವಣಗೆರೆ: ‘ಸತತವಾಗಿ ಸುರಿಯುತ್ತಿರುವ ಮಳೆಗೆ ಈರುಳ್ಳಿ ಕೊಳೆತು ಹೋಗಿದೆ. ಕೊಯ್ಲಿಗೆ ಬಂದಿರುವ ರಾಗಿ ಮಣ್ಣುಪಾಲಾಗಿ ಮೊಳಕೆಯೊಡೆಯುತ್ತಿದೆ. ಮೆಕ್ಕೆಜೋಳವನ್ನು ಫಂಗಸ್‌ ಆವರಿಸತೊಡಗಿದೆ. ಹುಲುಸಾಗಿ ಬೆಳೆದಿದ್ದ ಫಸಲು ಕೈಸೇರುತ್ತಿಲ್ಲ...’ ಎನ್ನುವಾಗ ರೈತ ಎಂ.ಲಕ್ಷ್ಮಣ್‌ ನಾಯ್ಕ ಧ್ವನಿ ಕ್ಷೀಣಿಸಿತ್ತು.

ದಾವಣಗೆರೆ ತಾಲ್ಲೂಕಿನ ಆಲೂರುಹಟ್ಟಿಯ ಲಕ್ಷ್ಮಣ್‌ ಎರಡೂವರೆ ಎಕರೆಯಲ್ಲಿ ಈರುಳ್ಳಿ, ಮೂರು ಎಕರೆಯಲ್ಲಿ ರಾಗಿ ಹಾಗೂ ನಾಲ್ಕು ಎಕರೆಯಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಮುಂಗಾರು ಉತ್ತಮವಾಗಿದ್ದರಿಂದ ಕೈತುಂಬ ಬೆಳೆ ಸಿಗುವ ನಿರೀಕ್ಷೆಯಲ್ಲಿದ್ದರು. ಎರಡು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಬೆಳೆ ಸಂಪೂರ್ಣ ಹಾಳಾಗಿದೆ. ಇದೇ ಕೊರಗಿನಲ್ಲಿ ಮಂಗಳವಾರ ಅವರು ಜಮೀನಿನತ್ತ ಕಣ್ಣು ಹಾಯಿಸಿದಾಗ ಮೊಗದಲ್ಲಿ ಬೇಸರ ಕಾಣಿಸಿಕೊಂಡಿತು.

ಚಿತ್ತ ಮಳೆ ಜಿಲ್ಲೆಯಲ್ಲಿ ಆರ್ಭಟಿಸಿದೆ. ಮುಂಗಾರು ಹಂಗಾಮಿನ ಬೆಳೆಗಳು ಕೊಯ್ಲಿಗೆ ಬಂದ ಸಂದರ್ಭದಲ್ಲಿ ಸುರಿದ ವರ್ಷಧಾರೆ ಬೆಳೆಗಳನ್ನು ಹಾಳು ಮಾಡುತ್ತಿದೆ. ಮಳೆ ಮುಂದುವರಿದರೆ ಬೆಳೆ ನಷ್ಟದ ಪ್ರಮಾಣ ಹೆಚ್ಚಲಿದೆ. ಅಧಿಕ ನೀರು ಬೇಡುವ ಭತ್ತವು ಸೇರಿ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ. ವರುಣ ಬಿಡುವು ನೀಡಲಿ ಎಂದು ರೈತರು ಆಗಸದತ್ತ ಮೊರೆಯಿಡುತ್ತಿದ್ದಾರೆ.

ADVERTISEMENT

ಜೂನ್‌ ಮತ್ತು ಜುಲೈ ತಿಂಗಳಲ್ಲಿ ಬಿದ್ದ ಮಳೆಗೆ ಜಿಲ್ಲೆಯ ರೈತರು ಬಿತ್ತನೆ ಕಾರ್ಯ ಮುಗಿಸಿದ್ದರು. ಮೆಕ್ಕೆಜೋಳ 1.26 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬಿತ್ತನೆಯಾಗಿದೆ. ರಾಗಿ, ಶೇಂಗಾ, ಈರುಳ್ಳಿ, ತೊಗರಿ, ಹತ್ತಿ ಸೇರಿ ಹಲವು ಬೆಳೆಗಳು ನಳನಳಿಸುತ್ತಿದ್ದವು. ಕೆರೆ, ಕಟ್ಟೆ, ಚೆಕ್‌ಡ್ಯಾಂ ಭರ್ತಿಯಾಗಿದ್ದರಿಂದ ಮುಂಗಾರು ಬೆಳೆಗಳನ್ನು ಕೊಯ್ಲು ಮಾಡಿ ಹಿಂಗಾರು ಬಿತ್ತನೆಯ ಲೆಕ್ಕಾಚಾರದಲ್ಲಿದ್ದರು. ಚಿತ್ತ ಮಳೆ ರೈತರ ಈ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ಕಳೆದ ವರ್ಷ ಭೀಕರ ಬರದಿಂದ ತತ್ತರಿಸಿದ್ದ ಕೃಷಿಕರು, ಪ್ರಸಕ್ತ ವರ್ಷ ಅತಿವೃಷ್ಟಿಗೆ ತುತ್ತಾಗಿದ್ದಾರೆ.

‘ಮೂರು ಎಕರೆಯಲ್ಲಿ ಬಿತ್ತನೆ ಮಾಡಿದ್ದ ರಾಗಿ ಬಿರುಗಾಳಿ ಮಳೆಗೆ ಬಿದ್ದಿದೆ. ತೆನೆ ನೆಲಕಚ್ಚಿ ಮೊಳಕೆಯೊಡೆಯುತ್ತಿದೆ. ಎರಡು ವಾರಗಳಿಂದ ಜಮೀನಿನಲ್ಲಿ ತೇವಾಂಶ ಆರುತ್ತಿಲ್ಲ. ಹುಲ್ಲು ಕೊಳೆಯುತ್ತಿದ್ದು, ಜಾನುವಾರು ಮೇವಿಗೂ ಪರದಾಡುವ ಸ್ಥಿತಿ ನಿರ್ಮಾಣವಾಗಬಹುದು’ ಎಂಬುದು ಹಾಲುವರ್ತಿಯ ರೈತ ಪರಮೇಶ್‌ ಅವರ ಕಳವಳ.

ಮೂರು ಎಕರೆಯಲ್ಲಿ ಬಿತ್ತನೆ ಮಾಡಿದ್ದ ರಾಗಿಯನ್ನು ದೀಪಾವಳಿಗೂ ಮುನ್ನ ಕೊಯ್ಲು ಮಾಡುವ ಸಿದ್ಧತೆಯಲ್ಲಿ ತೊಡಗಿದ್ದರು. ಕೆಲ ದಿನಗಳಿಂದ ಬೀಳುತ್ತಿರುವ ಮಳೆಗೆ ರಾಗಿ ಸಂಪೂರ್ಣ ಹಾಳಾಗಿದೆ. ಕೊಯ್ಲಿಗೂ ಸಾಧ್ಯವಾಗದಷ್ಟು ಚಾಪೆಹಾಸಿದೆ.

‘ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಹತ್ತಿಗೆ ತೇವಾಂಶ ಹೆಚ್ಚಾಗಿದೆ. ಕಾಯಿ ಒಡೆದು ಹೂ ಹೊರಬರುತ್ತಿಲ್ಲ. ಮೊದಲ ಹಂತದ ಫಸಲು ಸಂಪೂರ್ಣ ಹಾಳಾಗಿದೆ. ಮತ್ತೆ ಹೂ ಅರಳಿ, ಕಾಯಿ ಕಟ್ಟಲು ತಿಂಗಳವರೆಗೆ ಕಾಯಬೇಕು’ ಎನ್ನುವಾಗ ಕೆಂಚಮ್ಮನಹಳ್ಳಿಯ ರೈತ ಹನುಮಂತ ಅವರ ಮೊಗದಲ್ಲಿ ದುಗುಡವಿತ್ತು. 2 ಎಕರೆಯಲ್ಲಿ ಬೆಳೆದಿರುವ ಹತ್ತಿ ಇಳುವರಿ ಕಡಿಮೆಯಾಗುವ ಭೀತಿ ಅವರನ್ನು ಆವರಿಸಿತ್ತು.

ಎರಡು ಎಕರೆಯಲ್ಲಿ ಹತ್ತಿ ಬೆಳೆದಿರುವ ಇವರು ಈವರೆಗೆ ₹ 30 ಸಾವಿರಕ್ಕೂ ಹೆಚ್ಚು ವೆಚ್ಚ ಮಾಡಿದ್ದಾರೆ. ಎಕರೆಗೆ 15 ಕ್ವಿಂಟಲ್‌ ಹತ್ತಿ ಇಳುವರಿಯ ನಿರೀಕ್ಷೆಯಲ್ಲಿದ್ದರು. ಈಗ ಎಕರೆಗೆ ಎರಡು ಕ್ವಿಂಟಲ್‌ ಹತ್ತಿ ಸಿಕ್ಕರೆ ಹೆಚ್ಚಾಗಿದೆ.

ದಾವಣಗೆರೆ ತಾಲ್ಲೂಕಿನ ಕೆಂಚಮ್ಮನಹಳ್ಳಿಯ ಅಡಿಕೆ ತೋಟವೊಂದರಲ್ಲಿ ಮಂಗಳವಾರವೂ ನಿಂತಿದ್ದ ಮಳೆನೀರು
ಕಾಳು ಕಟ್ಟದೇ ಹಾಳಾಗಿರುವ ಮೆಕ್ಕೆಜೋಳ

ಜಗಳೂರಿನಲ್ಲಿ ದುಪ್ಪಟ್ಟು ಮಳೆ

ಜನವರಿಯಿಂದ ಅಕ್ಟೋಬರ್‌ 22ರವರೆಗೆ ಜಿಲ್ಲೆಯಲ್ಲಿ 587 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ವಾಸ್ತವವಾಗಿ 910 ಮಿ.ಮೀ ಮಳೆಯಾಗಿದ್ದು ಶೇ 55ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ನ್ಯಾಮತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. 749 ಮಿ.ಮೀ ವಾಡಿಕೆ ಮಳೆಯ ಬದಲು 1032 ಮಿ.ಮೀ ಮಳೆಯಾಗಿದೆ. ಜಗಳೂರು ತಾಲ್ಲೂಕಿನಲ್ಲಿ ವಾಡಿಕೆ ಮಳೆಗಿಂತ ಎರಡು ಪಟ್ಟು ಹೆಚ್ಚು ವರ್ಷಧಾರೆಯಾಗಿದೆ. 464 ಮಿ.ಮೀ ಮಳೆಯಾಗಬೇಕಿದ್ದ ತಾಲ್ಲೂಕಿನಲ್ಲಿ 984 ಮಿ.ಮೀ ಮಳೆ ದಾಖಲಾಗಿದೆ. 567 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದ ದಾವಣಗೆರೆ ತಾಲ್ಲೂಕಿನಲ್ಲಿ 918 ಮಿ.ಮೀ 558 ಮಿ.ಮೀ ವಾಡಿಕೆ ಮಳೆಯಾಗಬೇಕಿದ್ದ ಹರಿಹರ ತಾಲ್ಲೂಕಿನಲ್ಲಿ 836 ಮಿ.ಮೀ 576 ವಾಡಿಕೆ ಮಳೆ ಸುರಿಯಬೇಕಿದ್ದ ಹೊನ್ನಾಳಿ ತಾಲ್ಲೂಕಿನಲ್ಲಿ 918 ಮಿ.ಮೀ ಹಾಗೂ 749 ವಾಡಿಕೆ ವರ್ಷಧಾರೆಯಾಗಿಬೇಕಿದ್ದ ಚನ್ನಗಿರಿ ತಾಲ್ಲೂಕಿನಲ್ಲಿ 860 ಮಿ.ಮೀ ಮಳೆಯಾಗಿದೆ.

ಬೇಸಿಗೆ ಬೆಳೆಗೆ ಅನುಕೂಲ

ಉತ್ತಮ ಮಳೆಯಿಂದಾಗಿ ಜಿಲ್ಲೆಯ ಜಲಮೂಲಗಳು ಭರ್ತಿಯಾಗಿದ್ದು ಹಿಂಗಾರು ಹಾಗೂ ಬೇಸಿಗೆ ಬೆಳೆಗಳಿಗೆ ಅನುಕೂಲ ಆಗಬಹುದು ಎಂಬ ಸಂಗತಿ ರೈತರಲ್ಲಿ ಆಶಾಭಾವ ಮೂಡಿಸಿದೆ. ಹಲವು ವರ್ಷಗಳ ಬಳಿಕ ಹಳ್ಳಗಳು ತುಂಬಿ ಹರಿದಿವೆ. ದೊಡ್ಡ ಕೆರೆಗಳು ಕೋಡಿ ಬಿದ್ದಿವೆ. ಹೊಂಡ ಕಟ್ಟೆ ಚೆಕ್‌ಡ್ಯಾಂಗಳು ಭರ್ತಿಯಾಗಿವೆ. ಅಂತರ್ಜಲ ಮಟ್ಟ ಏರಿಕೆಯಾಗಿದ್ದು ಕೊಳವೆ ಬಾವಿಗಳು ಮರಪೂರಣವಾಗಿವೆ. ಬೇಸಿಗೆಯಲ್ಲಿ ತರಕಾರಿ ಬೆಳೆಯುವ ರೈತರು ತೋಟಗಾರಿಕೆ ಬೆಳೆಗಾರರು ಹರ್ಷಗೊಂಡಿದ್ದಾರೆ.

ಹಿಂಗಾರು ವಿಳಂಬ ಸಾಧ್ಯತೆ

ಮುಂಗಾರು ಬೆಳೆಗಳ ಕೊಯ್ಲು ತಡವಾಗುತ್ತಿರುವುದರಿಂದ ಹಿಂಗಾರು ಹಂಗಾಮು ಬಿತ್ತನೆ ವಿಳಂಬವಾಗುವ ಸಾಧ್ಯತೆ ಇದೆ. ಹಿಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಳ್ಳಲು ರೈತರು ಮಳೆ ಬಿಡುವಿಗಾಗಿ ಕಾಯುತ್ತಿದ್ದಾರೆ. ‘ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿಗೆ ಕಡಲೆ ಹಾಗೂ ಜೋಳ ಬಿತ್ತನೆ ಮಾಡಲಾಗುತ್ತದೆ. ಕಪ್ಪು ಮಣ್ಣು ಹೊಂದಿರುವ ಹೊನ್ನಾಳಿ ಹಾಗೂ ಜಗಳೂರು ತಾಲ್ಲೂಕಿನಲ್ಲಿ ಬಿತ್ತನೆಗೆ ರೈತರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಭೂಮಿಯಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಹಿಂಗಾರು ಬೆಳೆಗಳಿಗೆ ಅನುಕೂಲವಾಗಲಿದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌.

ಬಿಟ್ಟೂಬಿಡದೇ ಸುರಿಯುತ್ತಿರುವ ಮಳೆಯಿಂದ ಹತ್ತಿಗೆ ಶೀಥ ಹೆಚ್ಚಾಗಿದೆ. ಕಾಯಿ ಒಡೆಯದೇ ಹತ್ತಿ ಕಪ್ಪಾಗುತ್ತಿದೆ. ಈವರೆಗೆ ಒಮ್ಮೆಯೂ ಹತ್ತಿಯನ್ನು ಬಿಡಿಸಿಕೊಂಡಿಲ್ಲ.
-ಹನುಮಂತ, ಕೆಂಚಮ್ಮನಹಳ್ಳಿ ದಾವಣಗೆರೆ ತಾಲ್ಲೂಕು
ರಾಗಿ ಸಂಪೂರ್ಣ ನೆಲಕಚ್ಚಿದೆ. ಕಾಳು ಕಪ್ಪಾಗುತ್ತಿದ್ದು ಮೊಳಕೆ ಬರತೊಡಗಿದೆ. ಎಕರೆಗೆ ಕ್ವಿಂಟಲ್‌ ರಾಗಿ ಸಿಗುವುದು ಅನುಮಾನವಾಗಿದೆ.
-ಪರಮೇಶ, ರೈತ ಹಾಲುವರ್ತಿ ದಾವಣಗೆರೆ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.