ADVERTISEMENT

ಭದ್ರಾ ಜಲಾಶಯದ ಸುರಕ್ಷತೆ, ನಾಲೆ ಆಧುನೀಕರಣಕ್ಕೆ ಒತ್ತಾಯ

24ರಂದು ಹೆದ್ದಾರಿ ಬಂದ್‌ಗೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 21 ಜುಲೈ 2024, 14:17 IST
Last Updated 21 ಜುಲೈ 2024, 14:17 IST
   

ದಾವಣಗೆರೆ: ನೀರು ಸೋರಿಕೆಯಾಗುತ್ತಿರುವ ಭದ್ರಾ ಜಲಾಶಯದ ಸುರಕ್ಷತೆಗೆ ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳನ್ನು ಆಧುನೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಜುಲೈ 24ರಂದು ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್‌ ನಡೆಸಲು ರೈತರ ಸಭೆ ತೀರ್ಮಾನಿಸಿದೆ.

ಇಲ್ಲಿನ ಸರ್ಕಾರಿ ಅತಿಥಿ ಗೃಹದಲ್ಲಿ ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಜಿಲ್ಲಾ ರೈತ ಒಕ್ಕೂಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜಲಾಶಯದ ಮಟ್ಟ 170 ಅಡಿ ತಲುಪಿದ ತಕ್ಷಣ ನೀರಾವರಿ ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸುವ ವೇಳಾಪಟ್ಟಿ ಸಿದ್ಧಪಡಿಸಬೇಕು ಎಂದು ಸಭೆ ಆಗ್ರಹಿಸಿತು.

‘ಜುಲೈ 24ರಂದು ಬೆಳಿಗ್ಗೆ 11ಕ್ಕೆ ಹೆದ್ದಾರಿ ಬಂದ್‌ ನಡೆಸಲು ತೀರ್ಮಾನಿಸಲಾಗಿದೆ. ಬಾಡಾ ಕ್ರಾಸ್‌ ಬಳಿ ಜಮಾಯಿಸಿ ರಾಷ್ಟ್ರೀಯ ಹೆದ್ದಾರಿ ತಡೆಯಲಾಗುವುದು. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಹೋರಾಟ ಕೈಗೆತ್ತಿಕೊಳ್ಳಲಾಗಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಭದ್ರಾ ಅಣೆಕಟ್ಟೆಯ 100 ಅಡಿ ಆಳದಲ್ಲಿ ಬಿರುಕು ಕಾಣಿಸಿಕೊಂಡಿದೆ. ಜಲಾಶಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಕಣ್ಣಾರೆ ಕಂಡಿದ್ದೇವೆ. ಈ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದರೆ ಮುಂಬರುವ ದಿನಗಳಲ್ಲಿ ಅಪಾಯ ಎದುರಿಸುವುದು ನಿಶ್ಚಿತ. ಕೂಡಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಇದಕ್ಕೆ ಸುಮಾರು ₹ 150 ಕೋಟಿ ಅನುದಾನದ ಅಗತ್ಯವಿದ್ದು, ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

‘ಸ್ಲುಸ್‌ ಗೇಟ್‌ ದುರಸ್ತಿಯನ್ನು ತಾತ್ಕಾಲಿಕವಾಗಿ ಕೈಗೊಳ್ಳಲಾಗಿದೆ. ತುರ್ತು ಗೇಟ್‌ ಬಳಿ ಕಾಂಕ್ರೀಟ್‌ ಹಾಕುವ ಅಗತ್ಯವಿದೆ. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ನಾಲೆಗಳ ದುರಸ್ತಿ ಕಾರ್ಯ 2009ರಿಂದ ನಡೆದಿಲ್ಲ. ನಾಲೆಯಲ್ಲಿ ಹೂಳು ತುಂಬಿದ್ದು, ಕಳೆ ಗಿಡಗಳು ಬೆಳೆದಿವೆ. ತೂಬುಗಳಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ’ ಎಂದು ಆರೋಪಿಸಿದರು.

‘ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಪ್ರತಿ ಬೆಳೆಗೆ 31 ಟಿಎಂಸಿ ಅಡಿ ನೀರಿನ ಅಗತ್ಯವಿದೆ. ಮುಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳೆಗೆ ಅಗತ್ಯ ಇರುವಷ್ಟು ನೀರು ಭದ್ರಾ ಜಲಾಶಯಕ್ಕೆ ಹರಿದುಬಂದಿದೆ. ಅಧಿಕಾರಿಗಳು ನೀರು ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು. ಈ ಹಿಂದಿನಂತೆ ದುರುಪಯೋಗ ಆಗಲು ಬಿಡುವುದಿಲ್ಲ’ ಎಂದು ಮಾಜಿ ಸಚಿವ ಎಸ್‌.ಎ.ರವೀಂದ್ರನಾಥ್‌ ಎಚ್ಚರಿಕೆ ನೀಡಿದರು.

‘ಭದ್ರಾ ನಾಲೆ ಹಾಗೂ ಜಲಾಶಯ ಉಳಿಸಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಕ್ಷಮಿಸಲಾರದು. ಚಳವಳಿ ಮೂಲಕವೇ ಸರ್ಕಾರದ ಗಮನ ಸೆಳೆಯಬೇಕಿದೆ. 15 ಸದಸ್ಯರ ಸಮಿತಿ ರಚಿಸಿದರೆ ಹೋರಾಟದ ರೂಪುರೇಷ ಸಿದ್ಧಪಡಿಸಲು ಹಾಗೂ ತೀರ್ಮಾನ ಕೈಗೊಳ್ಳಲು ಅನುಕೂಲವಾಗಲಿದೆ’ ಎಂದು ಸಲಹೆ ನೀಡಿದರು.

‘ಕೇಂದ್ರ, ರಾಜ್ಯ ಸರ್ಕಾರ ಪ್ರಶ್ನಿಸೋಣ’

ಭದ್ರಾ ಜಲಾಶಯದ ರಕ್ಷಣೆ ಹಾಗೂ ನಾಲೆಗಳ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡನ್ನೂ ಪ್ರಶ್ನಿಸುವ ಅಗತ್ಯವಿದೆ. ರೈತರ ಹಿತದೃಷ್ಟಿಯಿಂದ ಹೋರಾಟ ನಡೆಯಬೇಕೆ ಹೊರತು ರಾಜಕೀಯ ಉದ್ದೇಶದಿಂದಲ್ಲ ಎಂದು ರೈತ ಮುಖಂಡ ತೇಜಸ್ವಿ ಪಟೇಲ್ ಅಭಿಪ್ರಾಯಪಟ್ಟರು.

‘ಭದ್ರಾ ಮೇಲ್ದಂಡೆ ಯೋಜನೆಗೆ ₹ 5,300 ಕೋಟಿ ನೀಡುವುದಾಗಿ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು. ಈ ಅನುದಾನ ಸಿಕ್ಕಿದ್ದರೆ ತುಂಗಾ ಜಲಾಶಯದಿಂದ ಭದ್ರಾ ಜಲಾಶಯಕ್ಕೆ ನೀರು ಹರಿಸುವ ಕಾಮಗಾರಿಗೆ ವೇಗ ಬರುತ್ತಿತ್ತು. ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಅಚ್ಚುಕಟ್ಟು ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗ ಜಿಲ್ಲೆಯ ರೈತರು ಹೋರಾಟಕ್ಕೆ ಕೂಜೋಡಿಸಬೇಕು’ ಎಂದು ಮನವಿ ಮಾಡಿದರು.

ರೈತ ಮುಖಂಡ ನಾಗೇಶ್ವರರಾವ್‌, ಬಿಜೆಪಿ ಮುಖಂಡ ಕೊಳೇನಹಳ್ಳಿ ಬಿ.ಎಂ.ಸತೀಶ್, ಚಂದ್ರಶೇಖರ ಪೂಜಾರ ಮಾತನಾಡಿದರು.

ಭದ್ರಾ ಜಲಾಶಯ ರಕ್ಷಿಸಿಕೊಳ್ಳುವ ತುರ್ತು ಎದುರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ರೈತರ ಹಿತರಕ್ಷಣೆಗೆ ಭದ್ರವಾಗಿ ನಿಲ್ಲಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು.
-ಬಸವರಾಜ ನಾಯ್ಕ, ಮಾಜಿ ಶಾಸಕ
ಭದ್ರಾ ಜಲಾಶಯದ ಸುರಕ್ಷತೆಗೆ ಅಧಿಕಾರಿಗಳು ಅಂದಾಜು ₹ 100 ಕೋಟಿ ವೆಚ್ಚದ ಯೋಜನೆ ಸಿದ್ಧಪಡಿಸಿದ್ದಾರೆ. ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳದೇ ಕಾಲಾಹರಣ ಮಾಡುತ್ತಿದೆ.
-ಲೋಕಿಕೆರೆ ನಾಗರಾಜ, ಉಪಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.