ದಾವಣಗೆರೆ: ಬೇಟೆಯನ್ನು ಬೆಂಬಿಡದೇ ಬೆನ್ನಟ್ಟುವ ಚಿರತೆಯಂತೆ ದಾಳಿಯಿಡುವ ಚೇಸರ್‌ಗಳು. ಪೊದೆಗಳ ನಡುವೆ ನುಸುಳುತ್ತ ತಪ್ಪಿಸಿಕೊಳ್ಳಲು ಯತ್ನಿಸುವ ಜಿಂಕೆಗಳಂತೆ ಕಂಡುಬರುವ ಡಿಫೆಂಡರ್‌ಗಳು. ಚೆಂಗನೆ ಜಿಗಿದು ಎದುರಾಳಿಯನ್ನು ಬೇಟೆಯಾಡಿದರೂ ಮರುಕ್ಷಣವೇ ಮತ್ತೆ ಬೇಟೆಯಾಡಲು ಮುನ್ನುಗ್ಗುವ ಆಟಗಾರರ ಕೈ ಮತ್ತು ಕಾಲ್ಚಳಕ ರೋಮಾಂಚನಗೊಳಿಸುತ್ತದೆ.
ಗುಜರಾತ್‌ನ ಅಹಮದಾಬಾದ್‌ನಲ್ಲಿ ಸೆಪ್ಟೆಂಬರ್ 30ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 36ನೇ ರಾಷ್ಟ್ರೀಯ ಕ್ರೀಡಾಕೂಟದ (ನ್ಯಾಷನಲ್ ಗೇಮ್ಸ್) ಕೊಕ್ಕೊ ಟೂರ್ನಿಗೆ ತೆರಳಲು ಸಜ್ಜಾಗುತ್ತಿರುವ ರಾಜ್ಯದ ಪುರುಷರ ತಂಡದ ಕ್ರೀಡಾಪಟುಗಳು ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 17ರಿಂದ ತಾಲೀಮು ಆರಂಭಿಸಿದ್ದು, ಅಲ್ಲೀಗ ಕೊಕ್ಕೊ ಕಲರವ ಕೇಳಿಬರುತ್ತಿದೆ. ಮ್ಯಾಟ್ ಹಾಸಿನ ಮೇಲೆ ಕ್ರೀಡಾಪಟುಗಳು ತೋರುತ್ತಿರುವ ಕೌಶಲ ಕ್ರೀಡಾಪ್ರೇಮಿಗಳಲ್ಲಿ ಬೆರಗು ಮೂಡಿಸುತ್ತಿದೆ.
ತಂಡಕ್ಕೆ ಆಯ್ಕೆಯಾಗಿರುವ 15 ಆಟಗಾರರ ಪೈಕಿ 13 ಕ್ರೀಡಾಪಟುಗಳು ಅಭ್ಯಾಸ ಮಾಡುತ್ತಿದ್ದಾರೆ. ಗಾಯಗೊಂಡಿರುವ ಕಾರಣ ಇಬ್ಬರು ತರಬೇತಿಗೆ ಗೈರಾಗಿದ್ದಾರೆ. ‘4 ವರ್ಷಕ್ಕೊಮ್ಮೆ ನಡೆಯುವ ನ್ಯಾಷನಲ್ ಗೇಮ್ಸ್‌ನಲ್ಲಿ ಪದಕಕ್ಕೆ ಕೊರಳು ಒಡ್ಡಬೇಕು’ ಎಂಬ ಸಂಕಲ್ಪದೊಂದಿಗೆ ಕ್ರೀಡಾಪಟುಗಳು ಬೆವರು ಹರಿಸುತ್ತಿದ್ದಾರೆ. ಈಚೆಗೆ ನಡೆದ ‘ಅಲ್ಟಿಮೇಟ್ ಕೊಕ್ಕೊ’ ಟೂರ್ನಿಯಲ್ಲಿ ಭಾಗಿಯಾಗಿದ್ದ ಏಳು ಆಟಗಾರರು ರಾಜ್ಯದ ತಂಡದಲ್ಲಿ ಸ್ಥಾನ ಪಡೆದುಕೊಂಡಿರುವುದು ಈ ಬಾರಿ ಚಿನ್ನದ ಪದಕದ ನಿರೀಕ್ಷೆಯನ್ನು ಹುಟ್ಟುಹಾಕಿದೆ. ರಾಜ್ಯದ ಮಹಿಳಾ ತಂಡವು ಮೈಸೂರಿನಲ್ಲಿ ಅಭ್ಯಾಸ ನಡೆಸುತ್ತಿದೆ.
ರಾಜ್ಯ ತಂಡದ ತರಬೇತುದಾರ ಶ್ರೀಧರ್ ಆರ್. ಹಾಗೂ ವ್ಯವಸ್ಥಾಪಕ ಒ.ಶ್ರೀನಿವಾಸ್ ನೇತೃತ್ವದಲ್ಲಿ ದಾವಣಗೆರೆಗೆ ಬಂದಿರುವ ಕ್ರೀಡಾಪಟುಗಳು ನಿತ್ಯ ಬೆಳಿಗ್ಗೆ 7ರಿಂದ ಅಭ್ಯಾಸ ಆರಂಭಿಸುತ್ತಿದ್ದಾರೆ. ವಿವಿಧ ವ್ಯಾಯಾಮ ಮಾಡಿ ದೇಹವನ್ನು ಆಟಕ್ಕೆ ಅಣಿಗೊಳಿಸಿದ ಬಳಿಕ ಮ್ಯಾಟ್ ಹಾಸಿನ ಮೇಲೆ ಸುಮಾರು ಒಂದು ಗಂಟೆ ಕಾಲ ಕೊಕ್ಕೊ ಅಭ್ಯಾಸದಲ್ಲಿ ತೊಡಗುತ್ತಿದ್ದಾರೆ. ಮತ್ತೆ ಸಂಜೆ 5ರಿಂದ ಆಟ ಆಡುತ್ತಿದ್ದಾರೆ.
‘ರಾಜ್ಯ ಕೊಕ್ಕೊ ಸಂಸ್ಥೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಚಾಲೆಂಜರ್ಸ್ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಸೆಪ್ಟೆಂಬರ್ 17ರಂದು ದಾವಣಗೆರೆಯಲ್ಲಿ ತರಬೇತಿ ಶಿಬಿರ ಆರಂಭಿಸಿದ್ದೇವೆ. ಎಲ್ಲಾ ಆಟಗಾರರೂ ಉತ್ತಮ ತರಬೇತಿ ಪಡೆಯುತ್ತಿದ್ದಾರೆ. ಸೆ.25ರವರೆಗೂ ಇಲ್ಲಿ ಅಭ್ಯಾಸ ಮಾಡಿ ಗುಜರಾತ್‌ನತ್ತ ತೆರಳುತ್ತೇವೆ’ ಎಂದು ತರಬೇತುದಾರ ಶ್ರೀಧರ್ ಆರ್. ‘ಪ್ರಜಾವಾಣಿ’ಗೆ ತಿಳಿಸಿದರು.
‘ಮ್ಯಾಟ್ ಕೊರತೆಯಿಂದಾಗಿ ಅಭ್ಯಾಸ ಸಾಧ್ಯವಾಗುತ್ತಿಲ್ಲ ಎಂಬ ಕೊರಗು ನಮ್ಮ ಕ್ರೀಡಾಪಟುಗಳಲ್ಲಿ ಇತ್ತು. ಇದೀಗ ಸ್ಮಾರ್ಟ್ ಸಿಟಿ ಯೋಜನೆ ನೆರವಿನಿಂದ ₹ 15 ಲಕ್ಷ ವೆಚ್ಚದಲ್ಲಿ ಮ್ಯಾಟ್ ಸೌಲಭ್ಯ ಕಲ್ಪಿಸಲಾಗಿದ್ದು, ಅದರಲ್ಲೇ ಈಗ ತರಬೇತಿ ಶಿಬಿರ ನಡೆಯುತ್ತಿದೆ’ ಎಂದು ಕ್ರೀಡಾ ವಸತಿನಿಲಯದ ಕೊಕ್ಕೊ ತರಬೇತುದಾರ ರಾಮಲಿಂಗಪ್ಪ ಜೆ. ಮಾಹಿತಿ ನೀಡಿದರು.
‘ರಾಷ್ಟ್ರೀಯ ಟೂರ್ನಿಗಳಲ್ಲಿ ಪ್ರತಿ ಬಾರಿಯೂ ರಾಜ್ಯದ ತಂಡ ಮೊದಲ ಮೂರು ಸ್ಥಾನಗಳಲ್ಲಿ ಒಂದನ್ನು ಪಡೆಯುತ್ತಿದೆ. ಈ ವರ್ಷವೂ ಪದಕ ಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ’ ಎನ್ನುತ್ತಾರೆ ರಾಜ್ಯ ಕೊಕ್ಕೊ ತಂಡದ ಆಟಗಾರ ಸುದರ್ಶನ್.
‘ಇದೇ ಮೊದಲ ಬಾರಿಗೆ ಸೀನಿಯರ್ಸ್ ತಂಡಕ್ಕೆ ಆಯ್ಕೆಯಾಗಿದ್ದೇನೆ. ಶಿಬಿರದಲ್ಲಿ ಹಿರಿಯ ಆಟಗಾರರು ಚೆನ್ನಾಗಿ ಹೇಳಿಕೊಡುತ್ತಿದ್ದಾರೆ’ ಎಂದು ಇನ್ನೊಬ್ಬ ಆಟಗಾರ ದಿನೇಶ್ ನಾಯಕ ನಗೆ ಬೀರುತ್ತಾರೆ.
ಕ್ರೀಡಾಪಟುಗಳ ವಿವರ
ನ್ಯಾಷನಲ್ ಗೇಮ್ಸ್‌ಗೆ ರಾಜ್ಯ ಕೊಕ್ಕೊ ತಂಡವನ್ನು 13 ಕ್ರೀಡಾಪಟುಗಳು ಪ್ರತಿನಿಧಿಸುತ್ತಿದ್ದು, ದಾವಣಗೆರೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿರುವ ಕ್ರೀಡಾಪಟುಗಳ ವಿವರ ಇಲ್ಲಿದೆ:
ಪ್ರಜ್ವಲ್ ಕೆ.ಎಚ್. (ಕ್ಲಬ್: ಯಂಗ್ ಪಯೋನೀರ್ಸ್, ಬೆಂಗಳೂರು), ಸುದರ್ಶನ್ ಗೌಡ (ಕ್ಲಬ್: ಹಾಸನಾಂಬ, ಹಾಸನ), ಗೌತಮ್ ಎಂ.ಕೆ. (ಯಂಗ್ ಪಯೋನೀರ್ಸ್, ಬೆಂಗಳೂರು), ದಿನೇಶ್ ನಾಯಕ (ಸರ್ ಎಂ.ವಿ. ಸ್ಪೋರ್ಟ್ಸ್ ಕ್ಲಬ್, ಭದ್ರಾವತಿ), ಮಹೇಶ ಪಿ. (ಆಳ್ವಾಸ್, ಮೂಡಬಿದರೆ), ಮೊಹಮ್ಮದ್ ತಾಸೀನ್ (ಡಿವೈಇಎಸ್, ದಾವಣಗೆರೆ), ವೇಣುಗೋಪಾಲ್ ಎಸ್. (ಡಿವೈಇಎಸ್, ದಾವಣಗೆರೆ), ಶಶಿಕುಮಾರ್ ತಳವಾರ (ಬೆಂಗಳೂರು ಪಯೋನೀರ್ಸ್, ಬೆಂಗಳೂರು), ಸಂಜಯ ಕುಮಾರ್ ವಿ. (ಚಾಮುಂಡೇಶ್ವರಿ, ಮೈಸೂರು), ಸೊಬಗು ವಿ. ಶ್ರೀಗಂಧ (ಸರ್ ಎಂ.ವಿ. ಸ್ಪೋರ್ಟ್ಸ್ ಕ್ಲಬ್, ಭದ್ರಾವತಿ), ವಿಜಯ್ ಎಸ್. (ಬೆಂಗಳೂರು ಪಯೋನೀರ್ಸ್), ರೋಹಿತ್ ವಿ. (ಬೆಂಗಳೂರು ಪಯೋನೀರ್), ವೀರೇಶ್ ಲೋಟಗೇರಿ (ಡಿವೈಇಎಸ್ ದಾವಣಗೆರೆ).
*
ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ತಂಡ ಪದಕ ಗೆಲ್ಲುವ ಸಾಧ್ಯತೆ ಹೆಚ್ಚಾಗಿದ್ದು, ಗುರಿ ಸಾಧಿಸುವ ನಿಟ್ಟಿನಲ್ಲಿ ತರಬೇತಿ ಸಾಗಿದೆ.
– ಶ್ರೀಧರ್ ಆರ್., ರಾಜ್ಯ ಕೊಕ್ಕೊ ತಂಡದ ತರಬೇತುದಾರ
*
ತರಬೇತಿ ಶಿಬಿರದಲ್ಲಿ ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಆಟಗಾರರೊಂದಿಗೆ ಕ್ರೀಡಾ ವಸತಿನಿಲಯದ ಮಕ್ಕಳು ಆಡುತ್ತಿರುವುದರಿಂದ ಹೊಸತನ್ನು ಕಲಿಯಲು ಅವರಿಗೆ ಅನುಕೂಲವಾಗುತ್ತಿದೆ.
- ರಾಮಲಿಂಗಪ್ಪ ಜೆ., ಕ್ರೀಡಾ ವಸತಿನಿಲಯದ ಕೊಕ್ಕೊ ತರಬೇತುದಾರ
*
ಈ ಬಾರಿ ಮೊದಲ ಇಲ್ಲವೇ ಎರಡನೇ ಸ್ಥಾನ ಪಡೆಯಲೇಬೇಕು ಎಂದು ಅಭ್ಯಾಸ ಮಾಡುತ್ತಿದ್ದೇವೆ. ಶಿಬಿರದಲ್ಲಿ ವಸತಿ, ಊಟದ ಸೌಲಭ್ಯವೂ ಚೆನ್ನಾಗಿದೆ.
– ಗೌತಮ್ ಎಂ.ಕೆ., ರಾಜ್ಯ ಕೊಕ್ಕೊ ತಂಡದ ಆಟಗಾರ
*
ಇದೇ ಮೊದಲ ಬಾರಿಗೆ ಸೀನಿಯರ್ಸ್ ತಂಡಕ್ಕೆ ಆಡುತ್ತಿದ್ದೇನೆ. ಅಭ್ಯಾಸ ಚೆನ್ನಾಗಿ ನಡೆಯುತ್ತಿದೆ. ಸರ್ಕಾರವು ನೌಕರಿ ನೀಡುವ ಮೂಲಕ ಕೊಕ್ಕೊ ಹುಡುಗರಿಗೆ ಪ್ರೋತ್ಸಾಹ ನೀಡಬೇಕು.
- ವೇಣುಗೋಪಾಲ್ ಎಸ್., ರಾಜ್ಯ ಕೊಕ್ಕೊ ತಂಡದ ಕ್ರೀಡಾಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.