ಜಗಳೂರು: ಅಳಿವಿನ ಅಂಚಿನಲ್ಲಿರುವ ಅಪರೂಪದ ವನ್ಯಪ್ರಾಣಿ ಕೊಂಡುಕುರಿ ಸಂತತಿಯ ಸಂರಕ್ಷಣೆಗಾಗಿ ರಾಜ್ಯ ಅರಣ್ಯ ಇಲಾಖೆ ವಿಶೇಷ ಯೋಜನೆ ರೂಪಿಸುತ್ತಿದೆ.
ದೇಶದ ಏಕೈಕ ಕೊಂಡುಕುರಿ ವನ್ಯಜೀವಿಧಾಮವಾದ ತಾಲ್ಲೂಕಿನ ರಂಗಯ್ಯನದುರ್ಗ ಅರಣ್ಯ ಪ್ರದೇಶದಲ್ಲಿ ಶತಮಾನಗಳಿಂದ ನೆಲೆ ಕಂಡುಕೊಂಡಿರುವ ನಾಲ್ಕುಕೊಂಬುಗಳ ಕೊಂಡುಕುರಿ (ಫೋರ್ ಹಾರ್ನಡ್ ಆಂಟಿಲೋಪ್) ಆವಾಸ ಸ್ಥಾನಕ್ಕೆ ಈಚೆಗೆ ಕೇಂದ್ರದ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ವನ್ಯಧಾಮ ಘೋಷಣೆಯಾಗಿ 13 ವರ್ಷಗಳಾಗಿದ್ದು, ಸಂರಕ್ಷಣಾ ಕಾರ್ಯಗಳ ಸ್ಥಿತಿಗತಿ ಹಾಗೂ ವನ್ಯಧಾಮದಲ್ಲಿ ಭವಿಷ್ಯದಲ್ಲಿ ಕೈಗೊಳ್ಳಬೇಕಿರುವ ಕಾರ್ಯ ಯೋಜನೆ ಬಗ್ಗೆ ಸ್ಥಳೀಯ ಅಧಿಕಾರಿಗಳು ಮತ್ತು ಅರಣ್ಯದಂಚಿನ ಗ್ರಾಮಸ್ಥರೊಂದಿಗೆ ತಂಡ ವಿಸ್ತೃತ ಚರ್ಚೆ ನಡೆಸಿತು.
ಅರಣ್ಯ ಇಲಾಖೆಯು ಈ ವನ್ಯಜೀವಿಧಾಮವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ, ತಜ್ಞರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸುವ ಬಗ್ಗೆ ವಿಸ್ತೃತ ಕಾರ್ಯ ಯೋಜನೆ (ಡಿಪಿಆರ್) ರೂಪಿಸಲು ಮುಂದಾಗಿದೆ.
80 ಚದರ ಕಿ.ಮೀ. ವ್ಯಾಪ್ತಿಯಲ್ಲಿರುವ ವನ್ಯಧಾಮದಲ್ಲಿ ಪರಿಸರಸ್ನೇಹಿ ಪ್ರವಾಸೋದ್ಯಮ ಪರಿಚಯಿಸುವುದು ಮತ್ತು ಅದರಿಂದ ಬರುವ ಆದಾಯದಿಂದ ವಿನೂತನ ಸಂರಕ್ಷಣಾ ಕ್ರಮಗಳನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಇಲಾಖೆ ಚಿಂತನೆ ನಡೆಸಿದೆ.
‘ಕೊಂಡುಕುರಿ ವನ್ಯಜೀವಿಧಾಮದ ಬಗ್ಗೆ ಡಿಪಿಆರ್ ರೂಪಿಸುವಂತೆ ಇಲಾಖೆಯಿಂದ ಸೂಚನೆ ದೊರತಿದೆ. ಈ ಪ್ರದೇಶವನ್ನು ಬಫರ್ ಜೋನ್ (ಅರಣ್ಯದಂಚಿನ ಪ್ರದೇಶ), ಕೋರ್ ಜೋನ್ (ದಟ್ಟಾರಣ್ಯ) ಮತ್ತು ಟೂರಿಸ್ಟ್ ಜೋನ್ (ಪ್ರವಾಸಿಗರ ಓಡಾಟದ ಪ್ರದೇಶ) ಎಂದು ವಿಂಗಡಿಸುವುದು, ಕೊಂಡುಕುರಿ ಮತ್ತು ಸಸ್ಯ ಪ್ರಬೇಧಗಳ ಬಗ್ಗೆ ಮಾಹಿತಿ ಕೇಂದ್ರ ತೆರೆಯುವುದು ಹಾಗೂ ನಮ್ಮ ಭಾಗದ ಹೆಮ್ಮೆಯ ಪ್ರಾಣಿಯನ್ನು ಜಗತ್ತಿಗೆ ಪರಿಚಯಿಸುವ ನಿಟ್ಟಿನಲ್ಲಿ ಅಧಿಕೃತ ವೆಬ್‌ಸೈಟ್ ಪ್ರಾರಂಭಿಸುವ ಕುರಿತೂ ಚಿಂತನೆ ನಡೆಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಅರಣ್ಯದಲ್ಲಿ ಚಿತ್ರದುರ್ಗ ಪಾಳೇಗಾರರ ಕಾಲದ ಐತಿಹಾಸಿಕ ಕೋಟೆ ಪ್ರದೇಶ ಮತ್ತು ದೇವಸ್ಥಾನ ಇದೆ. ಸುಂದರವಾದ ನಾಲ್ಕೈದು ಕೆರೆಗಳಿವೆ. ಈ ಭಾಗದಲ್ಲಿ ಸಫಾರಿ ಆರಂಭಿಸುವುದು, ಪ್ರವಾಸಿಗರ ವಸತಿಗಾಗಿ 10 ಕಾಟೇಜ್ ಮತ್ತು ಮಾಹಿತಿ ಕೇಂದ್ರ ಸ್ಥಾಪಿಸುವ ಬಗ್ಗೆ ಈಗಾಗಲೇ ಸ್ಥಳ ಪರಿಶೀಲನೆ ನಡೆಸಲಾಗಿದೆ. 5 ವರ್ಷಗಳ ಅವಧಿಗೆ ಕೈಗೊಳ್ಳಬೇಕಾದ ವೈಜ್ಞಾನಿಕ ತಳಹದಿಯ ಕಾರ್ಯಕ್ರಮ ರೂಪಿಸಲಾಗುವುದು’ ಎಂದು ಅವರು ವಿವರಿಸಿದರು.
ಕೊಂಡುಕುರಿ ಗಣತಿಗೆ ಕ್ರಮ:
ವನ್ಯಜೀವಿಧಾಮದಲ್ಲಿನ ಕೊಂಡುಕುರಿಗಳ ನಿಖರ ಸಂಖ್ಯೆ ಅರಿಯಲು ಗಣತಿ ಕಾರ್ಯ ನಡೆದಿಲ್ಲ. ಅಲ್ಲಲ್ಲಿ ಅಳವಡಿಸಿರುವಕ್ಯಾಮೆರಾಗಳಲ್ಲಿ ಕೊಂಡುಕುರಿ ಮತ್ತಿತರ ಪ್ರಾಣಿಗಳ ಚಲನವಲನ ಪತ್ತೆಯಾಗಿದೆ. ಇದರಿಂದ ಕೊಂಡುಕುರಿ ಸಂಖ್ಯೆಗಳನ್ನು ಅಂದಾಜಿಸಲು ಸಾಧ್ಯವಿಲ್ಲ. ಬೇರೆ ಪ್ರಾಣಿಗಳಿಗಿಂತ ವಿಶಿಷ್ಟ ಸ್ವಭಾವ ಹೊಂದಿರುವ ಕೊಂಡುಕುರಿ ಇಡೀ ದಿನ ಅರಣ್ಯವೆಲ್ಲಾ ಸುತ್ತಾಡಿದರೂ ನಿರ್ದಿಷ್ಟವಾದ ಒಂದು ಜಾಗದಲ್ಲಿ ಮಾತ್ರ ಹಿಕ್ಕೆಗಳನ್ನು ಹಾಕುತ್ತದೆ. ಹಿಕ್ಕೆಗಳ ರಾಶಿಯಲ್ಲಿ ಕೆಲವೊಮ್ಮೆ ತಾಯಿ, ಮರಿಗಳು ಒಟ್ಟಿಗೆ ಹಿಕ್ಕೆ ಹಾಕುವ ಸಾಧ್ಯತೆ ಇದೆ. ಇದರಿಂದಲೂ ನಿಖರವಾದ ಸಂಖ್ಯೆ ಪತ್ತೆ ಹಚ್ಚಲು ಸಾಧ್ಯವಿಲ್ಲ. ಪ್ರತ್ಯಕ್ಷ ಮತ್ತು ಪರೋಕ್ಷ ಗಣತಿಯಿಂದ ನಿಖರ ಸಂಖ್ಯೆ ಲಭ್ಯವಾಗಲಿದೆ. ಕೊಂಡುಕುರಿ ಗಣತಿ ಕಾರ್ಯ ಕೈಗೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.