ADVERTISEMENT

ಸಂತೇಬೆನ್ನೂರು | ಶಿಕ್ಷಕನ ಕೃಷಿ ಪ್ರೀತಿ; ಅಲ್ಪಾವಧಿಯಲ್ಲಿ ಅಧಿಕ ಲಾಭ

ಗೆದ್ದಲಹಟ್ಟಿ ಶಿಕ್ಷಕ ಎಸ್.ಎನ್.ರೇವಣ್ಣ ಅವರ ದಣಿವರಿಯದ ಕಾಯಕ

ಕೆ.ಎಸ್.ವೀರೇಶ್ ಪ್ರಸಾದ್
Published 19 ಜೂನ್ 2024, 6:00 IST
Last Updated 19 ಜೂನ್ 2024, 6:00 IST
ಸಮೃದ್ಧ ಮೆಣಸಿನಕಾಯಿ ಬೆಳೆದ ಸಂತೇಬೆನ್ನೂರು ಸಮೀಪದ ಗೆದ್ದಲಹಟ್ಟೆ ಶಿಕ್ಷಕ ಎಸ್.ಎನ್.ರೇವಣ್ಣ
ಸಮೃದ್ಧ ಮೆಣಸಿನಕಾಯಿ ಬೆಳೆದ ಸಂತೇಬೆನ್ನೂರು ಸಮೀಪದ ಗೆದ್ದಲಹಟ್ಟೆ ಶಿಕ್ಷಕ ಎಸ್.ಎನ್.ರೇವಣ್ಣ   

ಸಂತೇಬೆನ್ನೂರು: ಬೇಸಿಗೆ ರಜೆಯಲ್ಲಿ ಹೀರೆಕಾಯಿ, ಮೆಣಸಿನಕಾಯಿ ಬೆಳೆದು ಗರಿಷ್ಠ ಲಾಭ ಗಳಿಸಿದ ಗೆದ್ದಲಹಟ್ಟಿಯ ರೈತ ಎಸ್.ಎನ್. ರೇವಣ್ಣ ಶಿಕ್ಷಕರಾಗಿಯೂ ಕೆಲಸ ಮಾಡುತ್ತಿದ್ದು, ದಣಿವರಿಯದೆ ಕೆಲಸ ಮಾಡಿ ಯಶಸ್ಸಿನ ನಗು ಬೀರಿದ್ದಾರೆ.

ತರಕಾರಿ ಬೆಲೆ ಏರಿಕೆ ಗಮನಿಸಿ ಪಿಎಚ್‌ಎಸ್ ತಳಿಯ ಹಿರೇಕಾಯಿ ಸಸಿಗಳನ್ನು ಮಾರ್ಚ್ ಅಂತ್ಯದಲ್ಲಿ ನೆಟ್ಟ ಇವರು, ಒಂದು ಎಕರೆ ಜಮೀನಿನಲ್ಲಿ ಪಾತಿ ಮಾಡಿ ಬಳ್ಳಿಗಳಿಗೆ ಬಿದಿರು ಗೂಟದ ಆಸರೆ ನೀಡಿದರು. ಬಳ್ಳಿ ಹರಡಲು ತಂತಿಯಿಂದ ಗೂಟಗಳ ತುದಿ ಜೋಡಿಸಿದರು. ಇದರಿಂದ ಬಳ್ಳಿ ಹುಲುಸಾಗಿ ಬೆಳೆಯಿತು. ಕೇವಲ 40 ದಿನಗಳಲ್ಲಿಯೇ ಸಮೃದ್ಧ ಹೀರೆಕಾಯಿ ಇಳುವರಿ ಬಂದಿತ್ತು. ಎರಡು ತಿಂಗಳು ನಿರಂತರ ವಾರಕ್ಕೆ ಮೂರು ದಿನ ಹೀರೆಕಾಯಿ ಕಿತ್ತು ಮಾರಾಟ ಮಾಡಿದರು.

‘ಬೇಸಿಗೆಯಲ್ಲಿ ವಾರಕ್ಕೊಮ್ಮೆ ಕೊಳವೆಬಾವಿ ನೀರನ್ನು ಹನಿ ನೀರಾವರಿ ಪದ್ಧತಿಯಡಿ ಹರಿಸುತ್ತಿದ್ದೆ. ಒಂದು ಬಾರಿಗೆ 5 ಕ್ವಿಂಟಲ್ ಹೀರೆಕಾಯಿ ಇಳುವರಿ ಸಿಗುತ್ತಿತ್ತು. ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್ ಗೆ ₹ 4,000 ಧಾರಣೆ ಲಭಿಸಿತ್ತು. ಒಟ್ಟಾರೆ ಬೀಜ, ಗೊಬ್ಬರ, ಔಷಧಿಗೆ ₹ 15,000 ಖರ್ಚು ಮಾಡಲಾಗಿತ್ತು. 75 ದಿನಗಳಲ್ಲಿ ₹ 2 ಲಕ್ಷ ಲಾಭ ಗಳಿಸಿದೆ’ ಎಂದು ಹೆಮ್ಮೆಯಿಂದ ಹೇಳಿದರು ರೇವಣ್ಣ.

ADVERTISEMENT

‘ಮೆಣಸಿನಕಾಯಿ ಕೃಷಿಯಲ್ಲೂ ಸಮೃದ್ಧ ಇಳುವರಿ ಬರುತ್ತಿದೆ. ಒಂದೂವರೆ ಎಕರೆಯಲ್ಲಿ ‘ಸಕಾಟ’ ತಳಿಯ ಮೆಣಸಿನಕಾಯಿ ಬೆಳೆದಿದ್ದೇನೆ. ಸಸಿ ಪೋಷಣೆ ಮಾಡಿ ಎರಡೂವರೆ ತಿಂಗಳಲ್ಲಿ ಮೊದಲ ಬಾರಿಗೆ 6 ಕ್ವಿಂಟಲ್ ಮೆಣಸಿನಕಾಯಿ ಬಿಡಿಸಿ ಮಾರಾಟ ಮಾಡಿದ್ದೇನೆ. ದಾವಣಗೆರೆ ಸಗಟು ವ್ಯಾಪಾರದಲ್ಲಿ ಕೆ.ಜಿ.ಗೆ ₹ 70 ಬೆಲೆ ಸಿಕ್ಕಿದೆ. ವಾರಕ್ಕೊಮ್ಮೆ ಮೆಣಸಿನ ಕಾಯಿಯನ್ನು ಕೂಲಿ ಕಾರ್ಮಿಕರಿಂದ ಬಿಡಿಸಿ ಚೀಲಕ್ಕೆ ತುಂಬುತ್ತೇವೆ. ದಿನ ಕಳೆದಂತೆ 18 ಕ್ವಿಂಟಲ್‌ವರೆಗೆ ಇಳುವರಿ ಸಿಗಲಿದೆ. ಇದೇ ಬೆಲೆ ಇದ್ದರೆ ₹ 4 ಲಕ್ಷದವರೆಗೆ ಲಾಭ ಸಿಗಲಿದೆ. ಇದುವರೆಗೆ ₹ 40,000 ಖರ್ಚು ಮಾಡಿದ್ದೇನೆ’ ಎಂದು ವಿವರಿಸಿದರು.

ಚನ್ನಗಿರಿ ಸಮೀಪದ ಮಾವಿನಹೊಳೆ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ 11 ವರ್ಷಗಳಿಂದ ಶಿಕ್ಷಕ ವೃತ್ತಿ ಮಾಡುತ್ತಿರುವ ರೇವಣ್ಣ, ಬೆಳಿಗ್ಗೆ 6ರಿಂದ 8ರವರೆಗೆ ಕೃಷಿ ಕೆಲಸದಲ್ಲಿ ತೊಡಗುತ್ತಾರೆ. ಮತ್ತೆ ಸಂಜೆ 5ರಿಂದ 7ರವರೆಗೆ ಪತ್ನಿ ಪ್ರತಿಮಾ ಸಹಕಾರದೊಂದಿಗೆ ಕೃಷಿ ಚಟುವಟಿಕೆಯಲ್ಲಿ ಮಗ್ನರಾಗುತ್ತಾರೆ. ಕೃಷಿ ಕೆಲಸ ತಂದೆಯಿಂದ ಬಂದ ಬಳುವಳಿಯಾಗಿದೆ ಎಂದು ಅವರು ಹೇಳುತ್ತಾರೆ.

ಸಮಾಜ ವಿಜ್ಞಾನ ಶಿಕ್ಷಕರಾಗಿರುವ ಇವರ ಶಾಲೆಯಲ್ಲಿ ಪ್ರತಿ ವರ್ಷ ಶೇ 100ರಷ್ಟು ಫಲಿತಾಂಶ ಬರುತ್ತಿದ್ದು, ಶಿಕ್ಷಕರಾಗಿಯೂ ಉತ್ತಮ ಹೆಸರು ಪಡೆದಿದ್ದಾರೆ.

ರೇವಣ್ಣನ ಹೊಲದಲ್ಲಿ ಸಮೃದ್ಧವಾಗಿ ಬೆಳೆದ ಹೀರೆಕಾಯಿ ಬಳ್ಳಿ
ಮಾರುಕಟ್ಟೆಗೆ ರವಾನಿಸಲು ಸಿದ್ಧವಾದ ಹೀರೆಕಾಯಿ ರಾಶಿ
ಹುಲುಸಾಗಿ ಬೆಳೆದ ಮೆಣಸಿನ ಕಾಯಿ ಗಿಡ
ಶಿಕ್ಷಕ ರೇವಣ್ಣ ಹೊಲದ ಮೆಣಸಿನ ಕಾಯಿ ಚೀಲಕ್ಕೆ ತುಂಬಿ ಮಾರಾಟಕ್ಕೆ ಸಿದ್ಧ

40 ದಿನಗಳಲ್ಲಿಯೇ ಸಮೃದ್ಧ ಹೀರೆಕಾಯಿ ಬೆಳೆ 75 ದಿನಗಳಲ್ಲಿ ₹ 2 ಲಕ್ಷ ಲಾಭ 11 ವರ್ಷಗಳಿಂದ ಶಿಕ್ಷಕ ವೃತ್ತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.