ADVERTISEMENT

ದಾವಣಗೆರೆ: ಈಶ್ವರಪ್ಪ ಅವರ ನಾಲಿಗೆಗೆ ಹಿಡಿತವಿಲ್ಲ- ಎಚ್‌.ಎಂ.ರೇವಣ್ಣ

ಚಿತ್ರದುರ್ಗ–ದಾವಣಗೆರೆ ವಿಧಾನ ಪರಿಷತ್‌ ಕಾಂಗ್ರೆಸ್‌ ಕೋಟೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 4:39 IST
Last Updated 30 ನವೆಂಬರ್ 2021, 4:39 IST
ಎಚ್‌.ಎಂ. ರೇವಣ್ಣ
ಎಚ್‌.ಎಂ. ರೇವಣ್ಣ   

ದಾವಣಗೆರೆ: ‘ಕೆ.ಎಸ್‌. ಈಶ್ವರಪ್ಪ ಅವರ ನಾಲಿಗೆಗೆ ಹಿಡಿತವಿಲ್ಲ. ಅವರು ಹಿಂದೆ ಮಾತನಾಡಿದ್ದನ್ನೆಲ್ಲ ತುಲನೆ ಮಾಡಿ ನೋಡಿ. ಏನೇನೋ ಮಾತನಾಡಿರುತ್ತಾರೆ. ಕಾಂಗ್ರೆಸ್‌ನ ಪಕ್ಷಕ್ಕೂ ಕಾಂಗ್ರೆಸ್‌ ಅಭ್ಯರ್ಥಿಗೂ ಸಂಬಂಧವಿಲ್ಲ ಎಂದು ಸುಮ್ಮನೆ ಆರೋಪ ಮಾಡಿದ್ದಾರೆ. ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ’ ಎಂದು ಸ್ಥಳೀಯ ಸಂಸ್ಥೆ ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನ ಚಿತ್ರದುರ್ಗ–ದಾವಣಗೆರೆ ಉಸ್ತುವಾರಿ ಎಚ್‌.ಎಂ. ರೇವಣ್ಣ ಹೇಳಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಚಿತ್ರದುರ್ಗ–ದಾವಣಗೆರೆಯ ಕಾಂಗ್ರೆಸ್‌ ಅಭ್ಯರ್ಥಿ ಬಿ. ಸೋಮಶೇಖರ್‌ ಅವರು ಎನ್‌ಎಸ್‌ಯುಐ ನಾಯಕರಾಗಿ, ಯುವಕಾಂಗ್ರೆಸ್‌ ಕಾರ್ಯಕರ್ತನಾಗಿ, ಗ್ರಾಮ ಪಂಚಾಯಿತಿ ಸದಸ್ಯರಾಗಿ, ಅಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿ ಕೆಲಸ ಮಾಡಿದವರು. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ಅನುಭವ ಇರುವವರನ್ನೇ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ’ ಎಂದು ತಿಳಿಸಿದರು.

ಚಿತ್ರದುರ್ಗ–ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮೂರು ಬಾರಿ ಗೆದ್ದಿದೆ. ಇದು ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಒಟ್ಟು 4,510 ಮತಗಳಿವೆ. ಅದರಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಬಿ. ಸೋಮಶೇಖರ್‌ಗೆ ನೀಡಬೇಕು. ಅವರು ಗೆಲ್ಲುವ ವಾತಾವರಣ ನಿರ್ಮಾಣಗೊಂಡಿದೆ ಎಂದರು.

ADVERTISEMENT

‘ಪ್ರಣಾಳಿಕೆಯಲ್ಲಿ ತಿಳಿಸಿದ್ದ ಎಲ್ಲ ಕಾರ್ಯಕ್ರಮಗಳನ್ನು ಜಾರಿ ಮಾಡಿದ್ದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಿದ್ದರು. ಅವರು ಅತ್ಯುತ್ತಮ ಆಡಳಿತ ನೀಡುತ್ತಿರುವ ಸಂದರ್ಭದಲ್ಲಿ ನರೇಂದ್ರ ಮೋದಿ ಕರ್ನಾಟಕಕ್ಕೆ ಬಂದು 10 ಪರ್ಸೆಂಟ್‌ ಸರ್ಕಾರ ಎಂದು ಗೇಲಿ ಮಾಡಿದ್ದರು. ಈಗಿನ ಸರ್ಕಾರ ಶೇ 40 ಕಮಿಷನ್‌ ಕೇಳುತ್ತಿದೆ ಎಂದು ಗುತ್ತಿಗೆದಾರರೇ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಲಿಖಿತ ಪತ್ರವೇ ಇರುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟಾಚಾರ ಆಗಿದ್ದರೆ ದಾಖಲೆ ಕೊಡಿ ಎಂದು ಏನು ಅರಿವಿಲ್ಲದಂತೆ ಕೇಳುತ್ತಿದ್ದಾರೆ’ ಎಂದು ಟೀಕಿಸಿದರು.

ನಿರಾಣಿ ಮುಂದಿನ ಮುಖ್ಯಮಂತ್ರಿ ಎಂದು ಕೆ.ಎಸ್‌. ಈಶ್ವರಪ್ಪ ಹೇಳುವ ಮೂಲಕ ಬಿಜೆಪಿ ಮೂರನೇ ಮುಖ್ಯಮಂತ್ರಿ ನೀಡುವ ಬಗ್ಗೆ ಚರ್ಚೆ ಆರಂಭಿಸಿದ್ದಾರೆ ಎಂದು ಲೇವಡಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಜಬ್ಬಾರ್, ಪಿ. ರಾಜಕುಮಾರ್, ಎಂ.ಟಿ. ಸುಭಾಶ್ಚಂದ್ರ, ವೆಂಕಟೇಶ್, ಎಚ್. ಲಿಂಗಣ್ಣ ಅವರೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.