ದಾವಣಗೆರೆ: ಹೊಸ ಸಹಸ್ರಮಾನದ ಆರಂಭದಲ್ಲಿನ ಮೂರು ವರ್ಷಗಳ (2000–2022) ಕಾಲ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಂ ಅವರು ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಆಶ್ರಯ ಮನೆಗಳನ್ನು ನೀಡಿದ್ದರು. ಅಲ್ಲದೇ ಇವರು ‘ನಮ್ಮ ನಾಡು’ ‘ಜನರ ನಡುವೆ ಜಿಲ್ಲಾಡಳಿತ’ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದರು.
‘ಬಸ್‌ನಲ್ಲಿ ಅಧಿಕಾರಿಗಳು ದಿನಕ್ಕೆ ಇಂತಿಷ್ಟು ಹಳ್ಳಿ ನಿಗದಿಪಡಿಸಿಕೊಂಡು ಆ ಹಳ್ಳಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆಗಳನ್ನು ಗುರುತಿಸಿ ಬಗೆಹರಿಸುತ್ತಿದ್ದರು. ಈ ರೀತಿಯ ಜನಸ್ಪಂದನ ಹಿಂದೆ ಯಾವ ಅಧಿಕಾರಿಯೂ ಮಾಡಿರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ’ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಹೆಗ್ಗೆರೆ ರಂಗಪ್ಪ ಸ್ಮರಿಸಿದರು.
‘ಎಸ್‌ಒಜಿ ಕಾಲೊನಿ, ಎಸ್.ಎಂ.ಕೃಷ್ಣ ನಗರ, ಎಸ್.ಎಸ್.ಪಿ.ನಗರ, ಅಶ್ವತ್ಥ್ ರೆಡ್ಡಿ ನಗರ, ವೈ.ನಾಗಪ್ಪ ಬಡಾವಣೆಗಳಲ್ಲಿ ಸಾವಿರಾರು ಜನರಿಗೆ ಮನೆಗಳನ್ನು ಕೊಡಿಸುವಲ್ಲಿ ಕೆ.ಶಿವರಾಂ ಪ್ರಮುಖ ಪಾತ್ರವಹಿಸಿದ್ದಾರೆ’ ಎಂದು ಅವರು ಹೇಳಿದರು.
‘ದಲಿತರು, ಆರ್ಥಿಕವಾಗಿ ಹಿಂದುಳಿದವರು, ಅಂಗನವಾಡಿ ಕಾರ್ಯಕರ್ತೆಯರು, ಆಟೊ, ಲಾರಿ ಚಾಲಕರು, ಕ್ಲೀನರ್‌ಗಳು, ಕಡುಬಡವರಾದ ಹಾಗೂ ಕೂಲಿ ಕಾರ್ಮಿಕರನ್ನು ಗುರುತಿಸಿ ನಿವೇಶನಸಹಿತ ಮನೆಗಳ ಹಕ್ಕು ಪತ್ರ ನೀಡಿದ್ದರು. ಆವರಗೆರೆಯಲ್ಲಿ ಸ್ಮಶಾನ ನಿರ್ಮಾಣಕ್ಕಾಗಿ ಇಬ್ಬರಿಂದ ಒಟ್ಟು 7 ಎಕರೆ ಜಾಗ ಖರೀದಿಸಿ ಸ್ಮಶಾನ ನಿರ್ಮಿಸಿದ್ದರು. ಚಿಕ್ಕಬೂದಿಹಾಳು ಗ್ರಾಮಕ್ಕೂ ಜಾಗ ಕಾಯ್ದಿರಿಸಿದ್ದರು’ ಎಂದು ಕಾರ್ಮಿಕ ಮುಖಂಡ ಉಮೇಶ್ ಎಚ್.ಜಿ. ತಿಳಿಸಿದರು.
‘ಮಹಿಳೆಯರು ಮುಟ್ಟಿನ ಸಂದರ್ಭ ಹಾಗೂ ಬಾಣಂತಿಯರನ್ನು ಊರಿನಿಂದ ಹೊರಗಿಡುವ ಅನಿಷ್ಠ ಪದ್ಧತಿ ಆಗ ಚಾಲ್ತಿಯಲ್ಲಿತ್ತು. ವಿಷಯ ಗೊತ್ತಾಗುತ್ತಿದ್ದಂತೆ ಗೊಲ್ಲರಹಟ್ಟಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿರು. ಪರಿಶಿಷ್ಟರ ಮಕ್ಕಳಿಗೆ ಕ್ಷೌರ ಮಾಡಿಸುವ ಮೂಲಕ ಜಾಗೃತಿ ಮೂಡಿಸಿದ್ದರು’ ಎಂದು ಉಮೇಶ್ ನೆನಪಿಸಿಕೊಂಡರು.
‘ಕೆ.ಶಿವರಾಂ ಅವರು ಆರಂಭಿಸಿದ ‘ನಮ್ಮ ನಾಡು’ ಕಾರ್ಯಕ್ರಮವನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಉದ್ಘಾಟಿಸಿದ್ದರು. ಆ ಬಳಿಕ ಇದೇ ಮಾದರಿಯಲ್ಲಿ ರಾಜಕಾರಣಿಗಳು ಅಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿದ್ದರು. ನಗರದ ಹೈಸ್ಕೂಲ್ ಮೈದಾನದಲ್ಲಿ ಟೆನಿಸ್ ಕೋರ್ಟ್ ನಿರ್ಮಾಣ ಮಾಡುವಲ್ಲಿ ಕೆ.ಶಿವರಾಂ ಪ್ರಮುಖ ಪಾತ್ರವಹಿಸಿದ್ದರು. ದಾವಣಗೆರೆ ಜಿಲ್ಲೆಯಾದ ಕಾರಣ ಹಮ್ಮಿಕೊಳ್ಳುತ್ತಿದ್ದ ‘ದಾವಣಗೆರೆ ಹಬ್ಬ’ ಜಿಲ್ಲಾ ಉತ್ಸವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದರು’ ಎಂದು ಹಿರಿಯ ಪರ್ತಕರ್ತ ಎಚ್.ಬಿ.ಮಂಜುನಾಥ್ ಸ್ಮರಿಸಿದರು.
‘ಸುಧಾ’ ವಾರ ಪತ್ರಿಕೆಯಲ್ಲಿ ಎಚ್ಚೆಸ್ಕೆ ಅವರ ಅಂಕಣ ‘ವಾರದಿಂದ ವಾರಕ್ಕೆ’ ನನಗೆ ಐಎಎಸ್ ಮಾಡಲು ತುಂಬಾ ಸಹಕಾರಿಯಾಯಿತು. ವಾರದ ರಾಜಕೀಯ ವಿದ್ಯಮಾನವನ್ನು ಕಟ್ಟಿಕೊಡುತ್ತಿತ್ತು. ಎಂದು ನನ್ನ ಬಳಿ ಪ್ರಸ್ತಾಪಿಸಿದ್ದರು’ ಎಂದು ಅವರು ನೆನಪಿಸಿಕೊಂಡರು.
‘ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಳ್ಳತನ ಹೆಚ್ಚಾಗುತಿತ್ತು. ಬೆಳಿಗ್ಗೆ ಸಂಪರ್ಕ ಕಡಿತ ಮಾಡುವುದು, ರಾತ್ರಿ ವೇಳೆ ಸಂಪರ್ಕ ಪಡೆದುಕೊಳ್ಳುತ್ತಿದ್ದರು. ಇದು ಜಿಲ್ಲಾಡಳಿತ ಹಾಗೂ ಇಂಧನ ಇಲಾಖೆಗೆ ತಲೆನೋವು ತಂದಿತ್ತು. ಇದನ್ನು ಪತ್ತೆ ಹಚ್ಚಲು ಶಿವರಾಂ ಅವರು ಹಳ್ಳಿ ಜನರ ಬಳಿ ಹೋಗಿ ಅವರಿಂದಲೇ ಕರೆಂಟ್ ಹೇಗೆ ಪಡೆಯುವುದು? ಇದು ಕಾರ್ಯಸಾಧ್ಯನಾ? ಹೇಗೆ ಸಾಧ್ಯವಾಗುತ್ತೆ? ನೀವು ಕಡಿಮೆ ಏನಲ್ಲ ಬಿಡಿ ಎಂದು ಮಾತನಾಡುತ್ತಾ ಅವರಿಂದಲೇ ಮಾಹಿತಿ ಪಡೆಯುತ್ತಿದ್ದರು. ಬಡವರಾದರೆ ಎಚ್ಚರಿಕೆ ಕೊಟ್ಟು ಮುಂದೆ ತಪ್ಪೆಸಗದಂತೆ ಸೂಚನೆ ನೀಡುತ್ತಿದ್ದರು. ದೊಡ್ಡವರಾಗಿದ್ದರೆ ದಂಡ ವಿಧಿಸುತ್ತಿದ್ದರು’ ಎಂದು ಮಂಜುನಾಥ್ ಹೇಳಿದರು.
ಇವಿಷ್ಟೇ ಅಲ್ಲದೇ ಸಿಹಿ ತಯಾರಿಕೆ, ಮಂಡಕ್ಕಿ ಬಟ್ಟಿ, ಹೋಟೆಲ್ ಹಾಗೂ ಬಾರ್‌ಗಳಲ್ಲಿ ತೊಡಗಿದ್ದ ಬಾಲ ಕಾರ್ಮಿಕರ ರಕ್ಷಣೆ, ಸರ್ಕಾರಿ ಕಾಲೇಜು ಉಪನ್ಯಾಸಕರು ನಡೆಸುತ್ತಿದ್ದ ಟ್ಯೂಷನ್ ಹಾವಳಿ ನಿಲ್ಲಿಸಿದ ಕೀರ್ತಿಯು ಇವರಿಗೆ ಸಲ್ಲುತ್ತದೆ.
ನಾಳೆ ಶ್ರದ್ಧಾಂಜಲಿ ಸಭೆ
ಜಿಲ್ಲಾ ಛಲವಾದಿ ಮಹಾಸಭಾದಿಂದ ಮಾರ್ಚ್ 2ರಂದು ಬೆಳಿಗ್ಗೆ 11ಕ್ಕೆ ಶಿವರಾಂ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಿಜಲಿಂಗಪ್ಪ ಬಡಾವಣೆಯ ಛಲವಾದಿ ಮಹಾಸಭಾ ಭವನದಲ್ಲಿ ನಡೆಯಲಿದೆ. ಎಲ್ಲರೂ ಭಾಗವಹಿಸಬೇಕು ಎಂದು ಸಂಘಟಕರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.