ADVERTISEMENT

ದಾವಣಗೆರೆ | ‘ಶಕ್ತಿ’ಗೆ ವರ್ಷ: ₹ 90.05 ಕೋಟಿ ಆದಾಯ

ಮಹಿಳೆಯರಿಗೂ, ಸಾರಿಗೆ ನಿಗಮಕ್ಕೂ ‘ಶಕ್ತಿ’ ತುಂಬಿದ ಯೋಜನೆ

ಚಂದ್ರಶೇಖರ ಆರ್‌.
Published 30 ಜೂನ್ 2024, 7:43 IST
Last Updated 30 ಜೂನ್ 2024, 7:43 IST
ದಾವಣಗೆರೆಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಏರಲು ಮಹಿಳೆಯರು ಹಾಗೂ ಯುವತಿಯರು ಮುಗಿ ಬಿದ್ದಿರುವುದು   ಚಿತ್ರ/ ವಿಜಯ್‌ ಜಾಧವ್‌
ದಾವಣಗೆರೆಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಏರಲು ಮಹಿಳೆಯರು ಹಾಗೂ ಯುವತಿಯರು ಮುಗಿ ಬಿದ್ದಿರುವುದು   ಚಿತ್ರ/ ವಿಜಯ್‌ ಜಾಧವ್‌   

ದಾವಣಗೆರೆ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ’ ಯೋಜನೆ ಜಾರಿಯಾಗಿ ವರ್ಷ ಕಳೆದಿದೆ. ಜಿಲ್ಲೆಯಾದ್ಯಂತ ಯೋಜನೆಗೆ ಮಹಿಳೆಯರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. 2023ರ ಜೂನ್‌ 11ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮಹಿಳೆಯರು 2.85 ಕೋಟಿ ಬಾರಿ ಉಚಿತವಾಗಿ ಪ್ರಯಾಣ ಮಾಡಿದ್ದಾರೆ.

2023ರ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಘೋಷಿಸಿದ್ದ ‘ಗ್ಯಾರಂಟಿ’ಗಳಲ್ಲಿ ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಶಕ್ತಿ ಯೋಜನೆಯೂ ಒಂದಾಗಿತ್ತು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಜೂನ್‌ 11ರಂದು ಈ ಯೋಜನೆ ಜಾರಿಯಾಗಿತ್ತು. ಯೋಜನೆ ಅನುಷ್ಠಾನದ ಬಳಿಕ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿತ್ತು.

ಒಂದು ವರ್ಷದಲ್ಲಿ ಮಹಿಳೆಯರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಿದ ಟಿಕೆಟ್‌ ಮೌಲ್ಯ ₹ 99,05,81,000. ಅಂದರೆ ‘ಶಕ್ತಿ’ ಯೋಜನೆಯಿಂದ ಜಿಲ್ಲೆಯಲ್ಲಿ ಸಾರಿಗೆ ನಿಗಮಕ್ಕೆ ಬಂದ ಆದಾಯ ₹ 99.05 ಕೋಟಿ. 

ADVERTISEMENT

‘ಶಕ್ತಿ’ ಯೋಜನೆಯಿಂದ ನಿಗಮಕ್ಕೂ, ಮಹಿಳೆಯರಿಗೂ ‘ಶಕ್ತಿ’ ಬಂದಿದೆ. ಯೋಜನೆ ಜಾರಿಗೊಂಡ ನಂತರ ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗಿದೆ. ಮಹಿಳೆಯರ ಜೊತೆ ಪುರುಷರ ಓಡಾಟವೂ ಹೆಚ್ಚಾಗಿದ್ದು, ವಿಭಾಗಕ್ಕೆ ಬರುವ ಲಾಭದ ಪ್ರಮಾಣ ಹೆಚ್ಚಾಗಿದೆ. ಆರಂಭದಲ್ಲಿ ಇದ್ದ ಜನಜಂಗುಳಿ, ಗದ್ದಲ ಈಗ ಅಷ್ಟರ ಮಟ್ಟಿಗೆ ಇಲ್ಲ.

ಜಿಲ್ಲೆಯ ಎಲ್ಲ ವಿಭಾಗಗಳನ್ನೂ ಒಳಗೊಂಡು ಪ್ರತಿದಿನ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರು ಅಂದಾಜು 90,000 ಬಾರಿ ಸಂಚರಿಸುತ್ತಿದ್ದಾರೆ. ಇದು ಗಮನಾರ್ಹ.

ಯೋಜನೆಯಿಂದ ದುಡಿಯುವ ವರ್ಗದ ಮಹಿಳೆಯರಿಗೆ ಉಪಯೋಗವಾಗಿದೆ. ಜೊತೆಗೆ ಧಾರ್ಮಿಕ ಕೇಂದ್ರ, ಪ್ರವಾಸಿ ತಾಣಗಳ ಸಹಿತ ವಿವಿಧೆಡೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಳವಾಗಿದೆ. ಅಂತರರಾಜ್ಯಗಳ ಬಸ್‌ಗಳನ್ನು ಹೊರತುಪಡಿಸಿ ರಾಜ್ಯದೊಳಗೆ ಓಡಾಡುವ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. 

ಕೆಎಸ್ಆರ್‌ಟಿಸಿಗೆ ಆದಾಯವೂ ಹೆಚ್ಚಾಗಿರುವುದರಿಂದ ಬಸ್‌ಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹಲವು ಮಾರ್ಗಗಳಲ್ಲಿ ಟ್ರಿಪ್‌ಗಳ ಸಂಖ್ಯೆಯನ್ನೂ ಏರಿಸಲಾಗಿದೆ. ಒಂದು ವರ್ಷದಲ್ಲಿ ಜಿಲ್ಲೆಯಲ್ಲಿ 80 ರಿಂದ 100 ಹೆಚ್ಚುವರಿ ಟ್ರಿಪ್‌ಗಳನ್ನು ಮಾಡಲಾಗಿದೆ.

‘ಹೊಸ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ ಓಡಿಸಲಾಗುತ್ತಿದೆ. ಅಗತ್ಯ ಇದ್ದರೆ ಬೇಡಿಕೆ ಆಧರಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಲಾಗುವುದು. ರಾತ್ರಿ ವೇಳೆ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನಗರಗಳಿಗೆ ಹೆಚ್ಚುವರಿ ಬಸ್‌ಗಳನ್ನು ಓಡಿಸುವ ಸಂಬಂಧವೂ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ ಎನ್‌. ಹೆಬ್ಬಾಳ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬ್ಬಂದಿಯ ಸಂತಸ:

‘ಶಕ್ತಿ’ ಯೋಜನೆ ಜಾರಿಯಾದ ನಂತರ ಸಾರಿಗೆ ಸಂಸ್ಥೆ ಸಿಬ್ಬಂದಿಯಲ್ಲೂ ಸಂತಸ ಮೂಡಿದೆ. ಮೊದಲು ಬಸ್‌ಗೆ ನಿಗದಿತ ಸಂಖ್ಯೆಯ ಪ್ರಯಾಣಿಕರು ಬರಬೇಕು. ಇಂತಿಷ್ಟು ಟಿಕೆಟ್‌ ವಿತರಣೆ ಮಾಡಬೇಕು ಎಂಬ ಗುರಿ ಇರುತ್ತಿತ್ತು. ಆದರೆ ಈಗ ಪ್ರಯಾಣಿಕರ ಸಂಖ್ಯೆ ಹಾಗೂ ಟಿಕೆಟ್‌ ಗುರಿ ತಲುಪುವ ಬಗ್ಗೆ ನಿರ್ವಾಹಕರು ತಲೆಕೆಡಿಸಿಕೊಳ್ಳುವಂತಿಲ್ಲ. ಬಸ್‌ಗಳು ತುಂಬುವ ಕಾರಣ ಅವರು ಕೊಂಚ ನಿರಾಳರಾಗಿದ್ದಾರೆ.

‘ಈಗ ಬಸ್‌ಗಳನ್ನು ಖಾಲಿ ಓಡಿಸಬೇಕಾದ ಪ್ರಮೇಯ ಇಲ್ಲ. ನಿಲ್ದಾಣಕ್ಕೆ ಬಸ್‌ ತಂದು ನಿಲ್ಲಿಸಿದ ಕೆಲವೇ ನಿಮಿಷಗಳಲ್ಲಿ ತುಂಬಿ ಹೋಗುತ್ತದೆ. ಪ್ರಯಾಣಿಕರಿಗೆ ಕಾಯುವ, ನಿಲ್ದಾಣಗಳಲ್ಲಿ ಕೂಗುವ ಅಗತ್ಯ ಇಲ್ಲ. ಯೋಜನೆಯಿಂದ ನಿಗಮ ಲಾಭದಲ್ಲಿದೆ. ನಮಗೂ ಅನುಕೂಲವಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಿರ್ವಾಹಕರೊಬ್ಬರು ಸಂತಸ ವ್ಯಕ್ತಪಡಿಸಿದರು.

‘ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದೆ. ಇದುವರೆಗೂ ನೋಡದೇ ಇದ್ದ ಹಲವು ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರಗಳನ್ನು ನೋಡುವಂತಾಯಿತು. ಧರ್ಮಸ್ಥಳ, ಸಿಗಂದೂರು ಕ್ಷೇತ್ರಕ್ಕೆ ಹೋಗೋಣ ಬನ್ನಿ ಎಂದರೆ ಮೊದಲು ನಮ್ಮ ಜತೆ ಮನೆಯ ಪುರುಷ ಸದಸ್ಯರು ಬರುತ್ತಿರಲಿಲ್ಲ. ಈಗ ನಮಗೆ ಬಸ್‌ ಟಿಕೆಟ್‌ ಉಚಿತವಾಗಿದ್ದರಿಂದ ಅವರೂ ಬರುತ್ತಿದ್ದಾರೆ. ಇದರಿಂದ ಹಲವು ವರ್ಷಗಳಿಂದ ಹೋಗಲು ಆಗದಿದ್ದ ಧರ್ಮಸ್ಥಳಕ್ಕೆ ಹೋಗಿ ಬಂದೆವು’ ಎಂದು ಸಂತಸ ಹಂಚಿಕೊಂಡರು ಮುದಹದಡಿಯ ಗೌರಮ್ಮ.

‘ಪ್ರತಿದಿನ ಕೆಲಸಕ್ಕೆ ಫುಲ್‌ ಜಾರ್ಜ್‌ ಇಲ್ಲವೇ ಖಾಸಗಿ ಬಸ್‌ನಲ್ಲಿ ಅರ್ಧ ಜಾರ್ಜ್‌ ಕೊಟ್ಟು ಹೋಗುತ್ತಿದ್ದೆ. ಈಗ ಬಸ್‌ ಟಿಕೆಟ್ ಉಚಿತವಾದ ಕಾರಣ ಅನುಕೂಲವಾಗಿದೆ’ ಎಂದು ಹೊನ್ನಾಳಿಗೆ ಕೆಲಸಕ್ಕೆ ಹೋಗುವ ಲಕ್ಷ್ಮಿಬಾಯಿ ಹೇಳಿದರು.

ದಾವಣಗೆರೆಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಮಹಿಳೆಯರು ಬಸ್‌ಗೆ ಕಾಯುತ್ತಿರುವುದು         ಚಿತ್ರ/ ವಿಜಯ್‌ ಜಾಧವ್‌
ದಾವಣಗೆರೆಯ ಹೈಸ್ಕೂಲ್‌ ಮೈದಾನದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಬಸ್‌ ಏರಲು ಮಹಿಳೆಯರ ಪೈಪೋಟಿ              ಚಿತ್ರ/ ವಿಜಯ್‌ ಜಾಧವ್‌
ಸಿದ್ದೇಶ್ವರ ಎನ್‌.ಹೆಬ್ಬಾಳ್‌

‘ಶಕ್ತಿ’ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ನಿಗಮಕ್ಕೂ ಲಾಭವಾಗಿದೆ. ಬಸ್‌ಗಳು ಕಡಿಮೆ ಇದ್ದ ಕೆಲ ಮಾರ್ಗಗಳಿಗೆ ಈಗ ಹೆಚ್ಚು ಬಸ್‌ಗಳನ್ನು ಬಿಡಲಾಗಿದೆ. ಮೊದಲಿದ್ದ ರಶ್‌ ಈಗ ಇಲ್ಲ. 

–ಸಿದ್ದೇಶ್ವರ ಎನ್‌. ಹೆಬ್ಬಾಳ್‌ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

47 ಹೆಚ್ಚುವರಿ ಹೊಸ ಬಸ್‌ಗಳು ‘ಶಕ್ತಿ’ ಯೋಜನೆಯಿಂದ ಪ್ರತಿದಿನ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಿದೆ. ಇದನ್ನು ಆಧರಿಸಿ ಜಿಲ್ಲೆಯ ವಿವಿಧ ಮಾರ್ಗಗಳಲ್ಲಿ 47 ಹೊಸ ಹಾಗೂ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ. ಜಿಲ್ಲೆಯ ಕೆಎಸ್‌ಆರ್‌ಟಿಸಿ ವಿಭಾಗಕ್ಕೆ 37 ‘ಅಶ್ವಮೇಧ’ ಬಸ್‌ಗಳನ್ನು ಮಂಜೂರು ಮಾಡಲಾಗಿವೆ. 10 ಹೊಸ ಕರ್ನಾಟಕ ಸಾರಿಗೆ ಬಸ್‌ಗಳು ಬಂದಿವೆ. 27 ‘ಅಶ್ವಮೇಧ’ ಬಸ್‌ಗಳು ದಾವಣಗೆರೆ–ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿವೆ. 8 ‘ಅಶ್ವಮೇಧ’ ಬಸ್‌ಗಳು ದಾವಣಗೆರೆ–ಹುಬ್ಬಳ್ಳಿ 1 ಬಸ್‌ ದಾವಣಗೆರೆ–ಬೆಳಗಾವಿ ಹಾಗೂ 1 ಬಸ್‌ ದಾವಣಗೆರೆ–ಕೊಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿವೆ. ಬೇರೆ ವಿಭಾಗಗಳಲ್ಲಿ ಇರುವಂತೆ ‘ಅಶ್ವಮೇಧ’ ಬಸ್‌ಗಳನ್ನು ‘ಪಾಯಿಂಟ್‌ ಟು ಪಾಯಿಂಟ್ ಎಕ್ಸ್‌ಪ್ರೆಸ್‌’ನಂತೆ ಓಡಿಸುತ್ತಿಲ್ಲ. ಅಗತ್ಯ ಸ್ಟಾಪ್‌ಗಳನ್ನು ನೀಡಿ ಜನರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಸಿದ್ದೇಶ್ವರ ಎನ್‌. ಹೆಬ್ಬಾಳ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.