ADVERTISEMENT

ಸೂಳೆಕೆರೆ: ಮೂಲ ಸೌಲಭ್ಯಗಳಿಗೆ ಬರ

ತಂಗುದಾಣವಿಲ್ಲದೇ ಪ್ರಯಾಣಿಕರ ಪರದಾಟ; ರಾತ್ರಿ ವಿದ್ಯುತ್ ಬೆಳಕಿಲ್ಲದೇ ಪೇಚಾಟ

ಎನ್‌.ವಿ ರಮೇಶ್‌
Published 1 ಡಿಸೆಂಬರ್ 2023, 5:02 IST
Last Updated 1 ಡಿಸೆಂಬರ್ 2023, 5:02 IST
ಬಸವಾಪಟ್ಟಣ ಸಮೀಪದ ಸೂಳೆಕೆರೆ ಬಸ್ ನಿಲ್ದಾಣದಲ್ಲಿ ಬಿರು ಬಿಸಿಲಿನಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು
ಬಸವಾಪಟ್ಟಣ ಸಮೀಪದ ಸೂಳೆಕೆರೆ ಬಸ್ ನಿಲ್ದಾಣದಲ್ಲಿ ಬಿರು ಬಿಸಿಲಿನಲ್ಲಿ ಬಸ್‌ಗಾಗಿ ಕಾಯುತ್ತಿರುವ ಪ್ರಯಾಣಿಕರು   

ಬಸವಾಪಟ್ಟಣ: ಸಮೀಪದ ಪ್ರಸಿದ್ಧ ಪ್ರವಾಸಿತಾಣ ಸೂಳೆಕೆರೆಯಲ್ಲಿ ಮೂಲಸೌಲಭ್ಯಗಳಿಲ್ಲದೇ ಸಾರ್ವಜನಿಕರು ಮತ್ತು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ದಾವಣಗೆರೆ, ಚನ್ನಗಿರಿ, ಸಂತೇಬೆನ್ನೂರು, ಹೊನ್ನಾಳಿ ಮತ್ತು ಬಸವಾಪಟ್ಟಣದ ಕಡೆಯಿಂದ ಬರುವ ಪ್ರಯಾಣಿಕರಿಗೆ ಸೂಳೆಕೆರೆ ಕೇಂದ್ರವೆನಿಸಿದೆ. ಇಲ್ಲಿ ಪ್ರಯಾಣಿಕರು ನಿಂತುಕೊಳ್ಳಲು ಸ್ಥಳವಿಲ್ಲ. ಕುಳಿತುಕೊಳ್ಳಲು  ಸೌಲಭ್ಯಗಳಿಲ್ಲದೇ ಮಳೆ, ಬಿಸಿಲು ಗಾಳಿಯಲ್ಲೇ ನಿಲ್ಲಬೇಕಾದ ಪರಿಸ್ಥಿತಿ ಇದೆ.

‘ಎನ್‌.ಜಿ.ಹಾಲಪ್ಪ ಅವರು ಶಾಸಕರ ಅನುದಾನದಲ್ಲಿ ನಿರ್ಮಿಸಿದ್ದ ಸುಭದ್ರ ಬಸ್‌ ತಂಗುದಾಣವನ್ನು ಒಂದು ವರ್ಷದ ಹಿಂದೆ ರಸ್ತೆ ಅಗಲೀಕರಣದ ಕಾರಣಕ್ಕೆ ನೆಲಸಮ ಮಾಡಲಾಗಿತ್ತು. ಈ ತಂಗುದಾಣವನ್ನು ಧ್ವಂಸ ಮಾಡದೆ ಹಾಗೇ ಉಳಿಸಿಕೊಂಡು ರಸ್ತೆ ನಿರ್ಮಿಸಬಹುದಿತ್ತು. ಇಷ್ಟು ದಿನ ಕಳೆದರೂ ಲೋಕೋಪಯೋಗಿ ಇಲಾಖೆಯು ಪ್ರಯಾಣಿಕರಿಗಾಗಿ ತಂಗುದಾಣ ನಿರ್ಮಿಸುವ ಯೋಚನೆ ಮಾಡಿಲ್ಲ. ಇದರಿಂದ ಇಲ್ಲಿಗೆ ಬರುವ ಪ್ರಯಾಣಿಕರ ಗೋಳನ್ನು ಕೇಳುವವರಿಲ್ಲದಂತಾಗಿದೆ’ ಎನ್ನುತ್ತಾರೆ ಸಂತೇಬೆನ್ನೂರಿನ ಪ್ರಯಾಣಿಕ ಮಹಾದೇವಪ್ಪ.

ADVERTISEMENT

‘ಬಸ್‌ಗಾಗಿ ಕಾಯುವ ಪ್ರಯಾಣಿಕರು ಹಾಗೂ ಇಲ್ಲಿನ ಸಿದ್ಧೇಶ್ವರಸ್ವಾಮಿ ದೇವಾಲಯಕ್ಕೆ ಬಂದವರಿಗೆ ಮೂತ್ರ ವಿಸರ್ಜನೆಗೆ ಎಲ್ಲಿಯೂ ಸ್ಥಳವಿಲ್ಲ. ಶೌಚಾಲಯ ಇಲ್ಲದ ಕಾರಣ ಹೆಣ್ಣುಮಕ್ಕಳು ಸಮಸ್ಯೆ ಎದುರಿಸುತ್ತಿದ್ದಾರೆ. ನೀರು ಕುಡಿಯಬೇಕು ಎನಿಸಿದರೆ, ಕೆರೆಗೆ ಇಳಿದುಹೋಗಿ ದಾಹ ತಣಿಸಿಕೊಳ್ಳುವ ಸ್ಥಿತಿ ಇದೆ. ಕುಡಿಯುವ ನೀರಿಗಾಗಿ ಹೆಣ್ಣುಮಕ್ಕಳು ಹಾಗೂ ಮಕ್ಕಳು ಮಕ್ಕಳು ಕೆರೆಗೆ ಇಳಿಯಲು ಹೇಗೆ ಸಾಧ್ಯ’  ಎಂದು ಪ್ರಶ್ನಿಸುತ್ತಾರೆ ನಲ್ಲೂರಿನ ಹೇಮಾವತಿ ಮತ್ತು ವಿಜಯಮ್ಮ.

‘ಇಲ್ಲಿ ರಾತ್ರಿ ವೇಳೆ ಬೀದಿ ದೀಪದ ಸೌಲಭ್ಯ ಇಲ್ಲದ ಕಾರಣ, ಇಡೀ ಕೆರೆಯ ಏರಿ ಕಗ್ಗತ್ತಲಿನಿಂದ ಕೂಡಿರುತ್ತದೆ. ರಾತ್ರಿ ಬಸ್‌ಗೆ ಹತ್ತಲು ಬಂದ ಪ್ರಯಾಣಿಕರು ಅದರಲ್ಲೂ ಮಹಿಳೆಯರು ಭೀತಿಯಲ್ಲೇ ಇರಬೇಕಿದೆ. ಕಳೆದ ವಾರ ನಾವು ತ್ಯಾವಣಿಗೆಯಿಂದ ರಾತ್ರಿ ಏಳು ಗಂಟೆಯ ಬಸ್‌ಗೆ ಹೊನ್ನಾಳಿಗೆ ಹೋಗಬೇಕಿತ್ತು. ನಿಲ್ದಾಣಕ್ಕೆ ಬಂದಾಗ ಆಗಲೇ ಕತ್ತಲೆಯಾಗಿ ಹೆದರಿಕೆ ಹುಟ್ಟಿಸಿತು. ಈ ಬಗ್ಗೆ ಇಲ್ಲಿನ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು’ ಎನ್ನುತ್ತಾರೆ ತ್ಯಾವಣಿಗೆಯ ಸಿದ್ಧರಾಮಪ್ಪ ಮತ್ತು ಅವರ ಪತ್ನಿ ರೇವಮ್ಮ.

ಸೂಳೆಕೆರೆಯು ಕೆರೆಬಿಳಚಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದ್ದು, ಆಡಳಿತ ಮಂಡಳಿಯವರು ಪ್ರಯಾಣಿಕರಿಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ಕೂಡಲೇ ಕಲ್ಪಿಸಬೇಕು ಎನ್ನುತ್ತಾರೆ ಸಾರ್ವಜನಿಕರು.

ಅನುದಾನ ಕೊರತೆ: ಪಿಡಿಒ ಅಸಹಾಯಕತೆ

ಸೂಳೆಕೆರೆ ಬಸ್‌ ನಿಲ್ದಾಣದಲ್ಲಿ ಬೀದಿ ದೀಪ ಅಳಡಿಸಲಾಗಿದ್ದು ಪ್ರತಿ ಸಂಜೆ ಅವುಗಳನ್ನು ಬೆಳಗಿಸಲು ಹತ್ತಿರದ ಕ್ಯಾಂಪ್‌ನ ನೀರಗಂಟಿಯನ್ನು ನೇಮಿಸಿದ್ದೇವೆ. ಆದರೆ ಅವರು ಕೆಲವೊಮ್ಮೆ ಬಾರದ ದಿನಗಳಲ್ಲಿ ದೀಪಗಳನ್ನು ಉರಿಸುವುದು ಸಮಸ್ಯೆಯಾಗುತ್ತದೆ ಎಂದು  ಕೆರೆಬಿಳಚಿ ಗ್ರಾಮ ಪಂಚಾಯಿತಿ ಪಿಡಿಒ ಶರಣಪ್ಪ ಸ್ಪಷ್ಟನೆ ನೀಡಿದರು.  ‘ಹೈಮಾಸ್ಟ್‌ ದೀಪ ಅಳವಡಿಕೆ ಕುಡಿಯುವ ನೀರಿನ ವ್ಯವಸ್ಥೆ ಹೈಟೆಕ್‌ ಶೌಚಾಲಯ ನಿರ್ಮಾಣಕ್ಕೆ ಜನರಿಂದ ಬೇಡಿಕೆ ಇದೆ. ಆದರೆ ಅದಕ್ಕೆ ನಮ್ಮ ಬಳಿ ಅಗತ್ಯ ಅನುದಾನವಿಲ್ಲ. ತಾಲ್ಲೂಕು ಆಡಳಿತ ಮತ್ತು ಶಾಸಕರು ಅನುದಾನ ನೀಡಿ ಎಲ್ಲ ಸವಲತ್ತುಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಬೇಕು’ ಎಂದು ಶರಣಪ್ಪ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.