ದಾವಣಗೆರೆ: ಸರ್ಕಾರಿ ಕಚೇರಿಗಳಲ್ಲಿ ಮೂಲಸೌಲಭ್ಯ ನಗಣ್ಯ
Published 1 ಜನವರಿ 2024, 7:23 IST Last Updated 1 ಜನವರಿ 2024, 7:23 IST ದಾವಣಗೆರೆಯ ತಹಶೀಲ್ದಾರ್ ಕಚೇರಿಯ ಅವ್ಯವಸ್ಥೆಯ ಒಂದು ನೋಟ
ದಾವಣಗೆರೆ: ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಮೂಲಸೌಲಭ್ಯಗಳು ಇಲ್ಲ. ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನಗಳು, ಅರ್ಜಿ ಸಲ್ಲಿಕೆಯ ಸಾಕಷ್ಟು ಕೌಂಟರ್‌ಗಳು ಇಲ್ಲದೇ ನಾಗರಿಕರು ಪರಿತಪಿಸುವಂತಾಗಿದೆ.
ನಗರದ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ, ಮಹಾನಗರಪಾಲಿಕೆ, ಪರಿಶಿಷ್ಟ ಜಾತಿಹಾಗೂ ಹಿಂದುಳಿದ ವರ್ಗದವರ ನಿಗಮ, ಡೆಂಟಲ್ ಕಾಲೇಜು ಬಳಿಯ ವಾಲ್ಮೀಕಿ ನಿಗಮ, ಕಾರ್ಮಿಕರ ಇಲಾಖೆಯ ಸ್ಥಳೀಯ ಕಚೇರಿ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ, ವಾರ್ತಾ ಇಲಾಖೆಯ ಕಚೇರಿಗಳು ಸೇರಿದಂತೆ ಹಲವು ಸಾರ್ವಜನಿಕ ಕಚೇರಿಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದೇ ಪರಿತಪಿಸುತ್ತಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಹಣಕೊಟ್ಟು ಬಳಸುವ ಶೌಚಾಲಯವಿದೆ. ಆದರೆ ಕೆಲವು ಸಲ ಅವುಗಳೂ ಮುಚ್ಚಿರುತ್ತವೆ. ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಮಾತ್ರ ಸೌಲಭ್ಯಗಳು ಇವೆ.
ನಗರದ ತಹಶೀಲ್ದಾರ್ ಕಚೇರಿಯು ರೈತ ಭವನದ ಕಟ್ಟಡದಲ್ಲೇ ನಡೆಯುತ್ತಿದ್ದು, ಇಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ. ಶೌಚಾಲಯ ಹುಡುಕಿಕೊಂಡು ಹೋಗಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಶಿಥಿಲ ಕಟ್ಟಡದಲ್ಲಿ ನಡೆಯುತ್ತಿದ್ದು, ಕಸವೂ ಅಲ್ಲಲ್ಲಿ ಬಿದ್ದಿರುತ್ತದೆ. ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಹಲವು ರೈತರು ಮನವಿ ಮಾಡಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲೂ ಸಮಸ್ಯೆ ಹೇಳತೀರದು. ಪ್ರವಾಸೋದ್ಯಮ ಇಲಾಖೆಯ ಕಚೇರಿಯೂ ಅಲ್ಲಿ ಇದೆ. ನಗರದಲ್ಲಿ ಹಲವಾರು ಪ್ರತಿಭಟನೆಗಳು ನಡೆಯುತ್ತಿದ್ದು, ಮನವಿ ಬರುವ ಜನರಿಗೆ ಮೂಲಸೌಲಭ್ಯಗಳು ಇಲ್ಲ.
ನಗರದ ಶಂಕರ ವಿಹಾರ ಬಡಾವಣೆಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡವನ್ನು ಒಮ್ಮೆ ನೋಡಿದರೆ ಮೇಲ್ನೋಟಕ್ಕೆ ಉಗ್ರಾಣದಂತೆ ಕಾಣುತ್ತದೆ. ಕಚೇರಿಯಲ್ಲಿ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಕುಡಿಯಲು ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಬಲು ದೂರ. ಇನ್ನು ಕಚೇರಿಗೆ ಹೋಗುವ ರಸ್ತೆ ಕೂಡ ಸಮರ್ಪಕವಾಗಿಲ್ಲ. ಮಳೆ ಬಂದರೆ ಕೆಸರಿನ ರಸ್ತೆಯಲ್ಲಿ ಸಾಗಬೇಕು. ಸುತ್ತ ಗಿಡಗಂಟಿಗಳು ಬೆಳೆದಿವೆ. ವೃದ್ಧರು, ಮಹಿಳೆಯರು ಕೂರಲು ಸ್ಥಳವಿಲ್ಲದೆ ಮಳೆ, ಬಿಸಿಲಿನಲ್ಲಿ ನಿಲ್ಲುವ ಸ್ಥಿತಿ ಇದೆ. ಪಾರ್ಕಿಂಗ್ ಜಾಗ ಇಲ್ಲದೇ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಬೇಕಿದೆ.
ಕೂಡಲೇ ಸರ್ಕಾರಿ ಕಚೇರಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ದಾವಣಗೆರೆಯ ತಹಶೀಲ್ದಾರ್ ಕಚೇರಿಯಲ್ಲಿ ಕುಳಿತುಕೊಳ್ಳಲು ಚೇರುಗಳಿಲ್ಲದೇ ನೆಲದ ಮೇಲೆ ಕುಳಿತಿರುವುದು.
ದಾವಣಗೆರೆಯ ಕೆಲವು ಕಚೇರಿಗಳಲ್ಲಿ ಡಿ.ಸಿ. ಜಿಲ್ಲಾ ಪಂಚಾಯಿತಿ ಬಿಟ್ಟರೆ ಬೇರೆ ಎಲ್ಲೂ ಸೌಲಭ್ಯಗಳು ಇಲ್ಲ. ವಯಸ್ಸಾದ ರೈತರು ಬರುತ್ತಾರೆ. ಮಧುಮೇಹ ಇರುತ್ತದೆ. ಆಗಾಗ್ಗೆ ಶೌಚಾಲಯಕ್ಕೆ ಹೋಗಬೇಕಿರುತ್ತದೆ. ಕೂಡಲೇ ಸರ್ಕಾರಿ ಕಚೇರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು.
ಬಲ್ಲೂರು ರವಿಕುಮಾರ್ ರೈತಮುಖಂಡಅತಿ ಹೆಚ್ಚು ಆದಾಯ ತಂದುಕೊಡುವ ಉಪನೋಂದಣಾಧಿಕಾರಿ ಕಚೇರಿಯಲ್ಲೂ ಸಾರ್ವಜನಿಕರಿಗೆ ಶೌಚಾಲಯ ಆಸನಗಳ ವ್ಯವಸ್ಥೆ ಇಲ್ಲ. ಕೂಡಲೇ ಹೊಸ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಬೇಕು ಆವರಗೆರೆ
ಚಂದ್ರು ಕಾರ್ಮಿಕ ಮುಖಂಡಮಹಿಳೆಯರ ಪರಿಸ್ಥಿತಿ ಹೇಳತೀರದು
‘ಸರ್ಕಾರಿ ಕಚೇರಿಗಳೆಲ್ಲಾ ಹೊಸ ದಾವಣಗೆರೆ ಭಾಗದಲ್ಲಿ ಇದ್ದು ಹಳೇ ದಾವಣಗೆರೆ ಭಾಗದಿಂದ ಬರುವ ಜನರಿಗೆ ಸಮಸ್ಯೆಯಾಗಿದೆ. ಪಿಂಚಣಿ ಸೇರಿದಂತೆ ಪ್ರತಿಯೊಂದು ಹಲವು ಸೌಲಭ್ಯಗಳನ್ನು ಪಡೆಯಲು ಹೊಸ ದಾವಣೆಗೆರೆಗೆ ಬರಬೇಕು. ಸರ್ಕಾರಿ ಕಚೇರಿಗಳಲ್ಲಿ ಮಹಿಳೆಯರಿಗೆ ಶೌಚಾಲಯವಿಲ್ಲದೇ ಅವರ ಪರಿಸ್ಥಿತಿ ಹೇಳತೀರದು. ಅನೇಕ ಬಾರಿ ಪ್ರತಿಭಟನೆ ಹೋರಾಟಗಳು ನಡೆದಾಗ ಮಹಿಳೆಯರು ಶೌಚಾಲಯ ಹುಡುಕಿಕೊಂಡು ಹೋಗಬೇಕಾಗಿದೆ. ಜನರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಕೊಡುವ ಮನಸ್ಥಿತಿ ಸರ್ಕಾರಕ್ಕೆ ಇರಬೇಕು’ ಎಂದು ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾಖಾನಂ ತಿಳಿಸಿದರು.
ಸಾರ್ವಜನಿಕಸೇಹಿ ಕಚೇರಿ ಮಾಡಲು ಕ್ರಮ
ಕಂದಾಯ ಇಲಾಖೆ ಹಾಗೂ ತಹಶೀಲ್ದಾರ್ ಕಚೇರಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಚರ್ಚಿಸಲಾಗಿದೆ. ಅನುದಾನ ನಿರ್ವಹಣೆಗೆ 3ನೇ ಕಂತಿನ ಹಣ ಬಂದಿದ್ದು ಅದರಲ್ಲಿ ಕುಡಿಯುವ ನೀರು ಶೌಚಾಲಯ ಚೇರ್ ವ್ಯವಸ್ಥೆ ಸ್ಕ್ಯಾನರ್ ವ್ಯವಸ್ಥೆ ಸೇರಿ ಎರಡು ತಿಂಗಳಲ್ಲಿ ಸೌಲಭ್ಯ ಕಲ್ಪಿಸಲಿದ್ದು ಸಾರ್ವಜನಿಕ ಸ್ನೇಹಿ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. 6 ತಾಲ್ಲೂಕುಗಳ ಕಂದಾಯ ಇಲಾಖೆ ಕಚೇರಿಗಳಿಗೆ ಅನುದಾನ ನೀಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ‘ನಗರದ ಗಡಿಯಾರ ಕಂಬದ ಬಳಿ ಲೋಕೋಪಯೋಗಿ ಇಲಾಖೆಯಿಂದ ನೂತನವಾಗಿ ಕಟ್ಟಡ ನಿರ್ಮಾಣವಾಗುತ್ತಿದ್ದು ಸಣ್ಣಪುಟ್ಟ ಕೆಲಸಗಳು ನಡೆಯುತ್ತಿವೆ. ಕೆಲಸಗಳು ಪೂರ್ಣಗೊಂಡ ಬಳಿಕ ಸ್ಥಳಾಂತರ ಮಾಡಲಾಗುವುದು. ಎಲ್ಲಾ ಸೌಲಭ್ಯಗಳು ಒಂದೇ ಸೂರಿನಡಿ ಸಿಗಬೇಕು ಎಂಬುದು ನಮ್ಮ ಉದ್ದೇಶ’ ಎಂದು ಹೇಳಿದರು.
ಚನ್ನಗಿರಿ: ಸೌಲಭ್ಯಗಳಿಲ್ಲದ ಸರ್ಕಾರಿ ಕಚೇರಿಗಳು ಎಚ್.ವಿ. ನಟರಾಜ್
ಚನ್ನಗಿರಿ: ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಕ್ಕೆ ಕಾಲಿಟ್ಟರೂ ಇನ್ನೂ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ವಿಫಲವಾಗಿರುವುದನ್ನು ಕಚೇರಿಗಳಿಗೆ ಭೇಟಿ ನೀಡಿದರೆ ಗೊತ್ತಾಗುತ್ತದೆ. ಸರ್ಕಾರಿ ಕೆಲಸ ದೇವರ ಕೆಲಸ ಸಾರ್ವಜನಿಕರೇ ನಮ್ಮ ಪ್ರಭುಗಳು ಎಂದು ಹೇಳುವ ಸರ್ಕಾರಿ ಅಧಿಕಾರಿಗಳು ತಮ್ಮ ಕಾರ್ಯಾಲಯಗಳನ್ನು ಮಾತ್ರ ಹೈಟೆಕ್ ಸೌಲಭ್ಯಗಳನ್ನು ಒದಗಿಸಿಕೊಂಡು ಕೆಲಸ ಕಾರ್ಯಗಳಿಗೆಂದು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಅಗತ್ಯವಾದ ಶೌಚಾಲಯ ಕುಡಿಯುವ ನೀರು ಹಾಗೂ ಆಸನಗಳ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿರುವುದು ಯಾವುದೇ ಸರ್ಕಾರಿ ಕಚೇರಿಗಳಿಗೆ ಹೋಗಿ ನೀಡಿದರೆ ಸ್ಪಷ್ಟವಾಗಿ ಗೋಚರವಾಗುತ್ತದೆ. ತಾಲ್ಲೂಕು ಪಂಚಾಯಿತಿ ಪ್ರಮುಖ ಸರ್ಕಾರಿ ಕಚೇರಿಯಾಗಿದ್ದು ಇಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಹಾಗೂ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಇರುವುದಿಲ್ಲ. ಇರುವ ಶೌಚಾಲಯಗಳ ಒಳಗೆ ಹೋಗಲು ಆಗದೇ ಇರುವಂತಹ ಕೆಟ್ಟ ಪರಿಸ್ಥಿತಿ. ಇದೇ ರೀತಿ ಸಮಾಜ ಕಲ್ಯಾಣ ಹಿಂದುಳಿದ ವರ್ಗಗಳ ಕಲ್ಯಾಣ ಮಕ್ಕಳ ಮತ್ತು ಮಹಿಳಾ ಅಭಿವೃದ್ಧಿ ಪಶು ವೈದ್ಯ ತೋಟಗಾರಿಕೆ ಕೃಷಿ ಮೀನುಗಾರಿಕೆ ಕೈಗಾರಿಕೆ ಅರಣ್ಯ ಪುರಸಭೆ ಮುಂತಾದ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಲ್ಲ. ಆದರೆ ಮುಖ್ಯಸ್ಥರ ಕಾರ್ಯಾಲಯದಲ್ಲಿ ಹೈಶಾರಾಮಿ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಯಾವುದೇ ಕಚೇರಿಗಳಿಗೆ ಸಾರ್ವಜನಿಕರು ಕೆಲಸ ಕಾರ್ಯಗಳಿಗೆಂದು ಹೋದರೇ ಸಾರ್ವಜನಿಕರು ನಿಂತುಕೊಂಡೇ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಕೆಲಸ ಕಾರ್ಯಗಳಿಗೆಂದು ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೂ ಮೂಲ ಸೌಕರ್ಯಗಳನ್ನು ಸರ್ಕಾರಿ ಕಚೇರಿಗಳು ಒದಗಿಸಲು ಆದ್ಯತೆ ಕೊಡಬೇಕಾಗಿದೆ ಎಂದು ಪಟ್ಟಣದ ನಿವಾಸಿ ಕಲ್ಲೇಶ್ ಗೌಡ್ರು ಅವರು ಆಗ್ರಹಿಸಿದರು.
‘ಮೂಲಸೌಲಭ್ಯ ಉಚಿತವಾಗಿ ಸಿಗಲಿ’
ಕೆಲವು ಹಣ ಕೊಟ್ಟು ಬಳಸುವ ಶೌಚಾಲಯಗಳು ಇರುತ್ತದೆ. ಬಡವರು ವೃದ್ಧರು ಕಾರ್ಮಿಕರು ಹಾಗೂ ರೈತಾಪಿ ವರ್ಗದವರಿಗೆ ಹಣ ಕೊಡಲು ಆಗುವುದಿಲ್ಲ. ಮೂಲಸೌಲಭ್ಯಗಳನ್ನು ಉಚಿತವಾಗಿ ಕಲ್ಪಿಸಬೇಕು. ನಗರಸಭೆ ಅವಧಿಯಲ್ಲಿ 20 ವರ್ಷ ಆಡಳಿತ ನಡೆಸಿದ ಸಿಪಿಐ ಓಣಿಗೊಂದು ಶೌಚಾಲಯ ನಿರ್ಮಿಸಿತ್ತು. ಮುಂದೆ ಅವುಗಳನ್ನು ಕೆಡವಿದರು. ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು’ ಎಂದು ಕಾರ್ಮಿಕ ಮುಖಂಡ ಆವರೆಗೆರ ವಾಸು ಹೇಳಿದರು.