ADVERTISEMENT

ದಾವಣಗೆರೆ | ಮುಂದಾಳತ್ವದ ಕೊರತೆ: ಕಳೆಗುಂದಿದ ಬಿಜೆಪಿ

ನಾಯಕರ ಬಣ ರಾಜಕಾರಣದಿಂದ ಬಸವಳಿದ ಕಮಲ ಪಡೆಯ ಕಾರ್ಯಕರ್ತರು

ಜಿ.ಬಿ.ನಾಗರಾಜ್
Published 26 ಜೂನ್ 2024, 6:09 IST
Last Updated 26 ಜೂನ್ 2024, 6:09 IST
ಬಿಜೆಪಿ
ಬಿಜೆಪಿ   

ದಾವಣಗೆರೆ: ಬಿಜೆಪಿಯು ಜಿಲ್ಲೆಯಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ಸೋಲು ಪಕ್ಷದೊಳಗಿನ ಒಡಕನ್ನು ಬೀದಿಗೆ ತಂದಿದೆ. ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ ಸಾರಥಿ ಯಾರು? ಎಂಬ ಪ್ರಶ್ನೆ ಉದ್ಭವಿಸಿದ್ದು, ಕಮಲ ಪಾಳೆಯದ ಪ್ರಾಬಲ್ಯ ಕುಸಿಯುತ್ತಿದೆಯೇ? ಎಂಬ ಅನುಮಾನ ಮೂಡಿದೆ.

ಲೋಕಸಭೆ ಚುನಾವಣೆಗೂ ಮುನ್ನ ಟಿಕೆಟ್‌ ವಿಚಾರದಲ್ಲಿ ಬಹಿರಂಗವಾದ ಭಿನ್ನಮತ, ಫಲಿತಾಂಶದ ಬಳಿಕ ಸ್ಫೋಟಗೊಂಡಿದೆ. ಜಿಲ್ಲಾ ಬಿಜೆಪಿಯಲ್ಲಿ ಎರಡು ಬಣಗಳು ರೂಪುಗೊಂಡಿದ್ದು, ನಾಯಕರು ಮತ್ತು ಬೆಂಬಲಿಗರು ಪರಸ್ಪರ ಆರೋಪ– ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಒಳಜಗಳದಿಂದ ಬೇಸತ್ತಿದ್ದಾರೆ.

ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಯಾವುದೇ ಕ್ಷಣ ಎದುರಾಗುವ ಸಾಧ್ಯತೆ ಇದೆ. ಮಹಾತ್ವಕಾಂಕ್ಷೆ ಹೊಂದಿದ ಪಕ್ಷದ ಕಾರ್ಯಕರ್ತರು ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಲೋಕಸಭೆಯ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷ ಸಜ್ಜಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಮುಂಬರುವ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುವ ಬದಲು ಒಡಕಿನ ಮಾತುಗಳನ್ನು ಆಡುತ್ತಿರುವುದು ಬಹುತೇಕ ಕಾರ್ಯಕರ್ತರಲ್ಲಿ ಆತಂಕ ಮೂಡಿಸಿದೆ.

ADVERTISEMENT
ಪಕ್ಷದ ಮುಖಂಡರು ಬಣಗಳ ನೆಲೆಯಲ್ಲಿ ಗುರುತಿಸಿಕೊಂಡಿರುವುದು ಬೇಸರದ ಸಂಗತಿ. ಬಹಿರಂಗ ಹೇಳಿಕೆಗಳನ್ನು ನೀಡದಂತೆ ಸೂಚಿಸಿದ ಬಳಿಕವೂ ಶಿಸ್ತು ಉಲ್ಲಂಘಿಸಲಾಗಿದೆ. ಇದನ್ನು ರಾಜ್ಯ ಘಟಕದ ಗಮನಕ್ಕೆ ತರಲಾಗಿದೆ.
ಎನ್‌.ರಾಜಶೇಖರ್‌, ಅಧ್ಯಕ್ಷ, ಬಿಜೆಪಿ ಜಿಲ್ಲಾ ಘಟಕ, ದಾವಣಗೆರೆ

ಲೋಕಸಭೆ ಚುನಾವಣೆಯಲ್ಲಿ ನಾಲ್ಕು ಬಾರಿ ಗೆದ್ದಿದ್ದ ಜಿ.ಎಂ. ಸಿದ್ದೇಶ್ವರ ಪಕ್ಷದಲ್ಲಿ ಪ್ರಬಲ ಹಿಡಿತ ಸಾಧಿಸಿದ್ದರು. ಮಾಜಿ ಸಚಿವ ಎಸ್‌.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ ಹಾಗೂ ಮಾಡಾಳ್‌ ವಿರೂಪಾಕ್ಷಪ್ಪ ಪರ್ಯಾಯ ನೆಲೆಯಾಗಿ ರೂಪುಗೊಂಡಿದ್ದರು. 2ನೇ ಹಂತದ ನಾಯಕರ ಕೊರತೆ ಇದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವವರು ಯಾರು ಎಂಬುದನ್ನು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ.

ಒಂದು ವರ್ಷದಿಂದ ಭಿನ್ನಮತ: 2018ರ ಚುನಾವಣೆಯಲ್ಲಿ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಗೆದ್ದಿದ್ದ ಬಿಜೆಪಿ ಪ್ರಬಲವಾಗಿ ರೂಪುಗೊಂಡಿತ್ತು. ಲೋಕಸಭೆ ಹಾಗೂ ಬಹುತೇಕ ವಿಧಾನಸಭೆ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿದ್ದವು. 2023ರಲ್ಲಿ ನಡೆದ  ಚುನಾವಣೆಯಲ್ಲಿ ಹೊನ್ನಾಳಿ, ಚನ್ನಗಿರಿ, ದಾವಣಗೆರೆ ಉತ್ತರ, ಜಗಳೂರು ಹಾಗೂ ಮಾಯಕೊಂಡ ವಿಧಾನಸಭೆ ಕ್ಷೇತ್ರಗಳು ಬಿಜೆಪಿಯ ಕೈಜಾರಿದವು. ಪಕ್ಷ ಹರಿಹರ ಕ್ಷೇತ್ರ ಮರಳಿ ಗಳಿಸಿತಾದರೂ, ಈ ಚುನಾವಣೆಯಿಂದಲೇ ಭಿನ್ನಮತ ಮೊಳಕೆಯೊಡೆಯಿತು. ಲೋಕಸಭೆ ಚುನಾವಣೆಯ ಹೊತ್ತಿಗೆ ಹೆಮ್ಮರವಾಯಿತು.

ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ ಸೋಲು ಬಿಜೆಪಿಯಲ್ಲಿದ್ದ ಅಸಮಾಧಾನವನ್ನು ಇನ್ನಷ್ಟು ಹೆಚ್ಚಿಸಿತು. ಕೃತಜ್ಞತಾ ಸಮಾರಂಭದಲ್ಲಿ ಮುಖಂಡರು ಆಡಿದ ಮಾತು ಕೆಲವರನ್ನು ಕೆರಳಿಸಿತು. ಬೂದಿ ಮುಚ್ಚಿದ ಕೆಂಡದಂತಿದ್ದ ಭಿನ್ನಮತ ಜ್ವಾಲೆಯ ರೂಪ ಪಡೆದಿದೆ. ಮಾಜಿ ಸಚಿವರಾದ ಎಂ.ಪಿ. ರೇಣುಕಾಚಾರ್ಯ, ಎಸ್‌.ಎ. ರವೀಂದ್ರನಾಥ್ ಹಾಗೂ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಬಿ.ಪಿ. ಹರೀಶ್‌ ಬೆಂಬಲಿಗರ ನಡುವಿನ ಒಳಜಗಳ ತಾರಕಕ್ಕೇರಿದೆ. ಇದು ಪಕ್ಷಕ್ಕೆ ಮುಜುಗರವುಂಟು ಮಾಡಿದೆ.

ಬಣ ರಾಜಕಾರಣಕ್ಕೆ ಕಿಡಿ: ಪಕ್ಷದ ನಾಯಕರ ಒಳಜಗಳ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸಿದೆ. ಬಣಗಳಾಗಿ ಗುರುತಿಸಿ ಕೊಂಡ ಬಹುತೇಕರು ಅಧಿಕಾರ ಅನುಭವಿಸಿದವರು ಎಂಬ ಬೇಸರ ಕಾರ್ಯಕರ್ತರಲ್ಲಿದೆ. ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯ ಬಗ್ಗೆ ಆಸಕ್ತಿ ಇಟ್ಟುಕೊಂಡಿರುವವರಿಗೆ ಈ ಒಡಕು ಬೇಡವಾಗಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಡೆದ ಮತಗಳು ಇಂಥವರಲ್ಲಿ ಆಶಾಭಾವ ಮೂಡಿಸಿವೆ. ಸೋಲು ಸ್ವೀಕರಿಸಿ ಪಕ್ಷ ಕಟ್ಟುವತ್ತ ಗಮನ ಹರಿಸುವಂತೆ ಹೈಕಮಾಂಡ್‌ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

‘ಪಕ್ಷದ ನಾಯಕರ ಚುನಾವಣೆಗಳು ಮುಗಿದಿವೆ. ಕಾರ್ಯಕರ್ತರ ಚುನಾವಣೆಗಳೆಂದೇ ಗುರುತಿಸಿಕೊಂಡ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮೀಪಿಸುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಪಕ್ಷ ಸಂಘಟನೆ ಮಾಡಬೇಕಿತ್ತು. ಬಣ ರಾಜಕೀಯದಿಂದ ಬೇಸರ ಮೂಡಿದೆ’ ಎಂದು ಬಿಜೆಪಿಯ ಶಿವನಗೌಡ ಟಿ.ಪಾಟೀಲ್‌ ಬೇಸರ ವ್ಯಕ್ತಪಡಿಸಿದ್ದಾರೆ.

‘ಪಕ್ಷದ ತತ್ವ, ಸಿದ್ಧಾಂತದ ಬಗ್ಗೆ ಅರಿವಿರುವವರು ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಹೊರಗಿನಿಂದ ಬಂದವರಲ್ಲಿ ಕೆಲವರು ಒಳಜಗಳದಲ್ಲಿ ತೊಡಗಿದ್ದಾರೆ. ಇದೊಂದು ಮುಜುಗರದ ಸಂಗತಿ. ಬಿಜೆಪಿ ಕಾರ್ಯಕರ್ತರಿಗೆ ಇದರಿಂದ ಯಾವುದೇ ತೊಂದರೆ ಇಲ್ಲ’ ಎನ್ನುತ್ತಾರೆ ಆವರಗೆರೆಯ ಡಿ.ಕರಿಯಪ್ಪ.

ವಿಜಯೇಂದ್ರ ಶೀಘ್ರ ಭೇಟಿ

ಬಣ ರಾಜಕಾರಣ ಬಿಜೆಪಿ ರಾಜ್ಯ ಘಟಕದ ಅಂಗಳ ತಲುಪಿದೆ. ಭಿನ್ನಮತ ಶಮನಗೊಳಿಸಲು ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಶೀಘ್ರದಲ್ಲೇ ದಾವಣಗೆರೆಗೆ ಆಗಮಿಸುವ ಸಾಧ್ಯತೆ ಇದೆ.

ಶಿಸ್ತು ಪಾಲನೆ ಮಾಡುವಂತೆ ಬಿಜೆಪಿ ಜಿಲ್ಲಾ ಘಟಕ ಎರಡು ಬಣಗಳ ನಾಯಕರಿಗೆ ಸೂಚನೆ ನೀಡಿತ್ತು. ಇದಕ್ಕೆ ಸ್ಪಂದಿಸದೇ ಮತ್ತೆ ಸುದ್ದಿಗೋಷ್ಠಿ, ಪತ್ರಿಕಾ ಹೇಳಿಕೆಗಳನ್ನು ನೀಡಲಾಗಿದೆ. ಪಕ್ಷದ 2ನೇ ಹಂತದ ನಾಯಕರು ಹಾಗೂ ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧದ ಚರ್ಚೆಗಳನ್ನು ನಡೆಸುತ್ತಿದ್ದಾರೆ. ಇದು ಪಕ್ಷಕ್ಕೆ ಮುಜುಗರ ಉಂಟು ಮಾಡಿದೆ.

‘ಪಕ್ಷದ ಬಲವರ್ದನೆ ದೃಷ್ಟಿಯಿಂದ ಚರ್ಚಿಸಲು ದಾವಣಗೆರೆಯಲ್ಲಿ ಸಭೆ ಏರ್ಪಡಿಸುವುದಾಗಿ ಬಿ.ವೈ. ವಿಜಯೇಂದ್ರ ಮಾಹಿತಿ ನೀಡಿದ್ದರು. ಇದು ತಿಂಗಳ ಹಿಂದೆಯೇ ನಿಗದಿಯಾದ ಭೇಟಿ. ಪಕ್ಷದ ನಾಯಕರಲ್ಲಿ ಸೃಷ್ಟಿಯಾಗಿರುವ ಭಿನ್ನಮತದ ಬಗ್ಗೆಯೂ ಅವರು ಚರ್ಚೆ ನಡೆಸಬಹುದು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.