ADVERTISEMENT

ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಮಳೆ: ಭತ್ತ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ

ಜಿ.ಬಿ.ನಾಗರಾಜ್
Published 1 ಜುಲೈ 2024, 6:51 IST
Last Updated 1 ಜುಲೈ 2024, 6:51 IST
ಭತ್ತ ನಾಟಿಗೆ ಸಸಿ ಸಿದ್ಧಪಡಿಸುತ್ತಿರುವುದು – ಸಂಗ್ರಹ ಚಿತ್ರ
ಭತ್ತ ನಾಟಿಗೆ ಸಸಿ ಸಿದ್ಧಪಡಿಸುತ್ತಿರುವುದು – ಸಂಗ್ರಹ ಚಿತ್ರ   

ದಾವಣಗೆರೆ: ಭದ್ರಾ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಜಿಲ್ಲೆಯ ರೈತರಲ್ಲಿ ಭರವಸೆ ಮೂಡಿಸುತ್ತಿಲ್ಲ. ಮುಂಗಾರು ಹಂಗಾಮಿನ ಭತ್ತದ ನಾಟಿಗೆ ಸಸಿ ಮಡಿ ಮಾಡಿಕೊಳ್ಳುವ ಕಾರ್ಯಕ್ಕೆ ರೈತರು ಉತ್ಸುಕತೆ ತೋರುತ್ತಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಮಳೆಯಿಂದಾಗಿ ಭತ್ತ ಬೆಳೆಗಾರರಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಬರುವ ಜಿಲ್ಲೆಯಲ್ಲಿ 65,847 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತ ನಾಟಿಯ ಗುರಿ ಹೊಂದಲಾಗಿದೆ. ಜುಲೈ ಅಂತ್ಯಕ್ಕೆ ಆರಂಭವಾಗುವ ಭತ್ತದ ನಾಟಿಗೆ ಸಸಿ ಮಡಿ ಮಾಡಿಕೊಳ್ಳುವ ಕಾರ್ಯ ಜೂನ್‌ ಕೊನೆಯ ವಾರದಿಂದ ಆರಂಭವಾಗುವುದು ವಾಡಿಕೆ. ಭದ್ರಾ ಜಲಾಶಯದ ನೀರಿನ ಮಟ್ಟ ಏರಿಕೆಯಾಗದಿರುವುದು ಹಾಗೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಸುರಿಯದೇ ಇರುವುದು ರೈತರನ್ನು ಚಿಂತೆಗೀಡು ಮಾಡಿದೆ.

ತುಂಗಭದ್ರಾ ನದಿ ಸಮೀಪದ ಜಮೀನುಗಳಲ್ಲಿ ಮಾತ್ರ ಭತ್ತದ ಸಸಿ ಮಡಿ ಮಾಡಿಕೊಳ್ಳುವ ಕಾರ್ಯ ಆರಂಭವಾಗಿದೆ. ಕೊಳವೆಬಾವಿ ಹೊಂದಿದವರು, ಜಲಮೂಲದ ಖಾತರಿ ಇರವರು ಸಸಿ ಬೆಳೆಸುತ್ತಿದ್ದಾರೆ. ಉಳಿದ ರೈತರು ಭತ್ತದ ಬಿತ್ತನೆ ಬೀಜ ಖರೀದಿಗೂ ಮುಂದಾಗಿಲ್ಲ. ಮಳೆ ಹಾಗೂ ಜಲಾಶಯದ ನೀರಿನ ಪ್ರಮಾಣ ಗಮನಿಸಿ ಮುಂದುವರಿಯಲು ನಿರ್ಧರಿಸಿದಂತೆ ಕಾಣುತ್ತಿದೆ.

ADVERTISEMENT

186 ಅಡಿ ಸಾಮರ್ಥ್ಯದ ಭದ್ರ ಜಲಾಶಯದಲ್ಲಿ ಸದ್ಯ 123 ಅಡಿ ನೀರು ಇದೆ. ಪ್ರಸಕ್ತ 3,186 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. 2023ರ ಜೂನ್‌ 30ರ ವೇಳೆಗೆ 137 ಅಡಿಗೂ ಹೆಚ್ಚು ನೀರಿತ್ತು. ಜಲಾಶಯದಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ಪ್ರಮಾಣದ ನೀರು ಇರುವುದು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಜುಲೈ ಅಂತ್ಯ ಅಥವಾ ಆಗಸ್ಟ್‌ ಹೊತ್ತಿಗೆ ಜಲಾಶಯ ಭರ್ತಿಯಾಗುವ ನಿರೀಕ್ಷೆಯೂ ಹುಸಿಯಾಗಬಹುದೇ ಎಂಬ ಚರ್ಚೆ ರೈತರಲ್ಲಿ ನಡೆಯುತ್ತಿದೆ.

ಬರ ಪರಿಸ್ಥಿತಿಯ ಕಾರಣಕ್ಕೆ ಕಳೆದ ವರ್ಷ ಜಲಾಶಯ ಭರ್ತಿಯಾಗಲಿಲ್ಲ. ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ನೀರು ಹರಿಸುವುದು ಕೂಡ ವಿಳಂಬವಾಗಿತ್ತು. 100 ದಿನ ನಿರಂತರವಾಗಿ ನೀರು ಹರಿಸುವುದಾಗಿ ಭರವಸೆ ನೀಡಿ ಅರ್ಧಕ್ಕೆ ಸ್ಥಗಿತಗೊಳಿಸಲಾಗಿತ್ತು. ವರ್ಷದಲ್ಲಿ ಎರಡು ಬೆಳೆ ಬೆಳೆಯುತ್ತಿದ್ದ ರೈತರಿಗೆ ಹಿಂಗಾರು ಹಂಗಾಮಿನ ಭತ್ತಕ್ಕೆ ನೀರು ಸಿಗಲಿಲ್ಲ. ಪ್ರಸಕ್ತ ಮುಂಗಾರು ಮೇಲೆ ಆಶಾಭಾವನೆ ಇಟ್ಟುಕೊಂಡಿದ್ದ ರೈತರು ನಿರಾಸೆಯತ್ತ ಜಾರುತ್ತಿದ್ದಾರೆ.

21 ದಿನಗಳ ಭತ್ತದ ಸಸಿ ನಾಟಿಗೆ ಸೂಕ್ತ. ರೈತರು 25ರಿಂದ 30 ದಿನಗಳವರೆಗಿನ ಸಸಿಯನ್ನು ನಾಟಿ ಮಾಡುತ್ತಾರೆ. ಸಸಿ ಮಡಿ ಮಾಡಿಕೊಳ್ಳುವ ಕಾರ್ಯಕ್ಕೆ ನೀರಿನ ಅಗತ್ಯವಿದೆ. ಮಳೆ ನೀರು ಅವಲಂಬಿಸಿ ಅನೇಕರು ಸಸಿ ಮಡಿ ಸಿದ್ಧಪಡಿಸುತ್ತಿದ್ದರು. ಕೊಳವೆಬಾವಿ ನೀರು ಎರವಲು ಪಡೆದು ಸಸಿ ಬೆಳೆಸಿಕೊಳ್ಳುತ್ತಿದ್ದರು. ಮಳೆ ಕೊರತೆಯ ಕಾರಣಕ್ಕೆ ಇಂತಹ ಪ್ರಯತ್ನಕ್ಕೆ ರೈತರು ಮುಂದಾಗುತ್ತಿಲ್ಲ.

ಹೊಳೆ ಸಮೀಪದ ಜಮೀನುಗಳಲ್ಲಿ ಭತ್ತದ ಸಸಿ ಮಡಿ ಮಾಡಿಕೊಳ್ಳಲಾಗಿದೆ. ನೀರಿನ ಖಾತರಿ ಇರುವವರು ಸಸಿ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಉಳಿದ ರೈತರು ಭದ್ರಾ ಜಲಾಶಯದ ನೀರಿಗೆ ಕಾಯುತ್ತಿದ್ದಾರೆ.
ಶ್ರೀನಿವಾಸ್‌ ಚಿಂತಾಲ್‌ ಜಂಟಿ ನಿರ್ದೇಶಕ ಕೃಷಿ ಇಲಾಖೆ
ಭದ್ರ ಜಲಾಶಯದ ಒಳಹರಿವಿನ ಪ್ರಮಾಣ ಭರವಸೆ ಮೂಡಿಸುತ್ತಿಲ್ಲ. ಭತ್ತ ಸಸಿ ಮಡಿ ಮಾಡಿಕೊಳ್ಳಲು ಇನ್ನೂ 15 ದಿನ ಕಾಯುತ್ತೇವೆ. ಇಲ್ಲವಾದರೆ ಮೆಕ್ಕೆಜೋಳದಂತಹ ಪರ್ಯಾಯ ಬೆಳೆ ಅನಿವಾರ್ಯ.
ಕೊಳೇನಹಳ್ಳಿ ಬಿ.ಎಂ.ಸತೀಶ್‌ ರೈತ ಮುಖಂಡ
ಚಲ್ಲು ಪದ್ಧತಿಯತ್ತ ರೈತರ ಚಿತ್ತ
ಸಮಯ ಉಳಿತಾಯ ಹಾಗೂ ವೆಚ್ಚ ಕಡಿತಗೊಳಿಸಲು ಭತ್ತದ ಚಲ್ಲು ಪದ್ಧತಿ ಕುರಿತು ಕೃಷಿ ಇಲಾಖೆ ಮೂಡಿಸಿದ ಜಾಗೃತಿಗೆ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷ 10 ಸಾವಿರ ಎಕರೆ ಭತ್ತವನ್ನು ಈ ಪದ್ಧತಿಯ ಮೂಲಕ ಬೆಳೆಯಲಾಗಿದೆ. ಪ್ರಸಕ್ತ ವರ್ಷವೂ ಚಲ್ಲು ಭತ್ತದ ಪದ್ಧತಿಯತ್ತ ರೈತರು ಆಸಕ್ತಿ ತೋರುವ ಸಾಧ್ಯತೆ ಇದೆ. ‘ಭತ್ತದ ಸಸಿ ನಾಟಿ ಮಾಡುವ ವ್ಯವಸ್ಥೆಗೆ ಪರ್ಯಾಯವಾಗಿ ಚಲ್ಲು ಪದ್ಧತಿ ಮುನ್ನೆಲೆಗೆ ಬಂದಿದೆ. ಸಮಯ ಹಾಗೂ ನಾಟಿ ಕಾರ್ಯಕ್ಕೆ ರೈತರು ಮಾಡುತ್ತಿದ್ದ ವೆಚ್ಚಕ್ಕೆ ಕಡಿವಾಣ ಬೀಳುತ್ತಿದೆ. ಯಾಂತ್ರೀಕೃತ ಪದ್ಧತ್ತಿಯಲ್ಲಿ 15 ದಿನದ ಸಸಿಯನ್ನು ನಾಟಿ ಮಾಡಬಹುದಾಗಿದೆ. ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಭತ್ತದ ನಾಟಿ ಆರಂಭವಾಗುತ್ತದೆ. ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದ್ದು ಮುಂಗಾರು ಮೇಲೆ ಭರವಸೆ ಇದೆ’ ಎನ್ನುತ್ತಾರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.