ADVERTISEMENT

ಅಪರೂಪದ ನಿಸರ್ಗ ಚಿತ್ರ ನಿಪುಣ ಬಿ.ಆರ್‌. ಕೊರ್ತಿ

ವಿಜಯಪುರದ ಜಿನಗಾರ ಗಲ್ಲಿಯಲ್ಲಿ ಜನಿಸಿದ್ದ ಕೊರ್ತಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ತಂದ ಖ್ಯಾತ ಚಿತ್ರ ಕಲಾವಿದ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 2:56 IST
Last Updated 25 ಜೂನ್ 2021, 2:56 IST
ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದ್ದ ಪ್ರೊ.ಬಿ.ಆರ್‌. ಕೊರ್ತಿ (ಎಡಚಿತ್ರ). ದಾವಣಗೆರೆಯ ಹಿರಿಯ ಕಲಾವಿದ ಬಿ.ಆರ್‌. ಕೊರ್ತಿ ಅವರು ಬಿಡಿಸಿದ್ದ ನಿಸರ್ಗದ ಕಲಾಕೃತಿ.
ಕಲಾವಿದರ ಕೈಚಳಕದಲ್ಲಿ ಮೂಡಿಬಂದಿದ್ದ ಪ್ರೊ.ಬಿ.ಆರ್‌. ಕೊರ್ತಿ (ಎಡಚಿತ್ರ). ದಾವಣಗೆರೆಯ ಹಿರಿಯ ಕಲಾವಿದ ಬಿ.ಆರ್‌. ಕೊರ್ತಿ ಅವರು ಬಿಡಿಸಿದ್ದ ನಿಸರ್ಗದ ಕಲಾಕೃತಿ.   

ಅವರ ಚಿತ್ರಕಲಾ ನೈಪುಣ್ಯ ಎಂತಹವರನ್ನೂ ಬೆರಗುಗೊಳಿಸುತ್ತಿತ್ತು. ಅವರ ಕೈಚಳಕದಲ್ಲಿ ಮೂಡಿಬಂದ ಅಪರೂಪದ ಕಲಾಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿದ್ದವು. ಜಲವರ್ಣದಲ್ಲಿ ಮೂಡಿಬರುತ್ತಿದ್ದ ಅವರ ಕೃತಿಗಳು ಪ್ರಸಿದ್ಧ ಕಲಾ ವಿಮರ್ಶಕರ ಮುಕ್ತ ಪ್ರಶಂಸೆಗೆ ಒಳಗಾಗುತ್ತಿದ್ದವು. ಅಂತಹ ಅಪರೂಪದ ಕಲಾ ಪ್ರತಿಭೆ ಹಿರಿಯ ಕಲಾವಿದ ಪ್ರೊ. ಬಿ.ಆರ್‌. ಕೊರ್ತಿ.

ಕಲೆಯ ಬೀಡು ಎಂಬ ಖ್ಯಾತಿಗೆ ಒಳಗಾದ ವಿಜಯಪುರದ ಜಿನಗಾರ ಗಲ್ಲಿ ಕೊರ್ತಿಯವರ ಹುಟ್ಟೂರು. ಎಳವೆಯಿಂದಲೇ ಕಲೆಯ ನಂಟು ಅವರಿಗೆ ಮೈಗೂಡಿತ್ತು. ತಮ್ಮ ಚಿಕ್ಕ ಅಂಗವೈಕಲ್ಯವನ್ನು ಯಶಸ್ವಿಯಾಗಿ ಸಾಧನೆಯ ಮೆಟ್ಟಿಲನ್ನಾಗಿಸಿಕೊಂಡಿದ್ದು, ಅವರ ಉತ್ಕಟ ಕಲಾಪ್ರೇಮದ ದ್ಯೋತಕವಾಗಿತ್ತು.

ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ಅಂಗಳದಲ್ಲಿ ರೂಪುಗೊಂಡು ರಾಜ್ಯಕ್ಕೆ, ರಾಷ್ಟ್ರಕ್ಕೆ ಕೀರ್ತಿ ತಂದ ಖ್ಯಾತ ಚಿತ್ರಕಲಾವಿದರಾದ ಚಿ.ಸು. ಕೃಷ್ಣಸೆಟ್ಟಿ, ಸೊಲಬಕ್ಕನವರ, ವಿ.ಬಿ. ಹಿರೇಗೌಡರ, ಸೂಗೂರು, ಶಂಕರಪಾಟೀಲ ಅವರ ಸಾಲಿನಲ್ಲಿ ಸ್ಥಾನ ಪಡೆದಿದ್ದ ಕೊರ್ತಿ ಅವರು ಅದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಚಿತ್ರಕಲಾ ವಿಭಾಗದ ಮುಖ್ಯಸ್ಥರಾಗಿ 1979ರಿಂದ 2004ರ ವರೆಗೆ ಸುದೀರ್ಘ ಸೇವೆ ಸಲ್ಲಿಸಿ ಅಲ್ಲಿಯೇ ನಿವೃತ್ತಿಯಾಗಿದ್ದರು. ಇದಕ್ಕೂ ಮುನ್ನ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 9 ವರ್ಷ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು.

ADVERTISEMENT

ಆರಂಭದಲ್ಲಿ 1980, 1983, 1995, 2000ರಲ್ಲಿ ದಾವಣಗೆರೆಯಲ್ಲಿ ಆಯೋಜಿಸಿದ್ದ ಅವರ ಜಲವರ್ಣದ ನಿಸರ್ಗದ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಅಪಾರ ಜನಮನ್ನಣೆ ಗಳಿಸಿತ್ತು. 2003ರಲ್ಲಿ ಧಾರವಾಡದ ಕಲಾ ಗ್ಯಾಲರಿಯಲ್ಲಿ ನಡೆದ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಅಂದಿನ ಸಚಿವ ಹಿಂಡಸಗೇರಿಯವರು ಉದ್ಘಾಟಿಸಿ ಸನ್ಮಾನಿಸಿದ್ದರು. ಮೈಸೂರು ದಸರಾ ವಸ್ತು ಪ್ರದರ್ಶನ, ಸಾಹಿತ್ಯ ಸಮ್ಮೇಳನಗಳು, 1999ರಲ್ಲಿ ನವದೆಹಲಿಯಲ್ಲಿ ನಡೆದ ರಾಷ್ಟ್ರಮಟ್ಟದ ವಸ್ತುಪ್ರದರ್ಶನದಲ್ಲಿ ಕೊರ್ತಿ ಅವರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು.

25 ವರ್ಷಗಳ ಅಧ್ಯಾಪಕ ವೃತ್ತಿಯಲ್ಲಿ ಕಲಾ ವಿದ್ಯಾರ್ಥಿಗಳ ಅಚ್ಚುಮೆಚ್ಚಾಗಿದ್ದ ಅವರು ನೂರಾರು ಕಲಾವಿದರನ್ನು ತಯಾರು ಮಾಡಿದ ಕೀರ್ತಿಗೆ ಭಾಜನರಾಗಿದ್ದರು.

ವಿಜಯಪುರ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಮೈಸೂರು, ಬೆಂಗಳೂರುಗಳಲ್ಲಿ ಅವರಹಲವು ಚಿತ್ರಕಲಾ ಶಿಬಿರಗಳು, ಪ್ರಾತ್ಯಕ್ಷಿಕೆಗಳು ಯಶಸ್ವಿಯಾಗಿ ನಡೆದಿದ್ದು ಈಗ ನೆನಪು.

ಅವರು ಬೆಂಗಳೂರಿನ ಮೈಸೂರು ಆರ್ಟ್‌ ಕೌನ್ಸಿಲ್‌ ಸದಸ್ಯರಾಗಿ, 1998–2000 ಅವಧಿಯಲ್ಲಿ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯರಾಗಿದ್ದರು. ಅಲ್ಲದೇ ಕುವೆಂಪು ವಿಶ್ವವಿದ್ಯಾಲಯದ ಲಲಿತ ಕಲಾ ನಿಕಾಯದ ಅಧ್ಯಯನ ಮಂಡಳಿ ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಗಣನೀಯ ಸೇವೆ ಸಲ್ಲಿಸಿದ್ದ ಅಪರೂಪದ ನಿಸರ್ಗ ಚಿತ್ರ ನಿಪುಣ.

‘ವರ್ಣಕ್ಕಿರುವ ಶಕ್ತಿ ಅಗಾಧವಾದದ್ದು. ಈಗೀಗ ಈ ವರ್ಣಕಲೆಯ ಕಡೆ ಯುವಜನರು ಹೆಚ್ಚು ಆಕರ್ಷಿತರಾಗುತ್ತಿರುವುದು ಉತ್ತಮ ಬೆಳವಣಿಗೆ. ಹಸಿ ಮಣ್ಣಿನಂತಿರುವ ಅವರ ಮನಸ್ಸಿನಲ್ಲಿ ಬಣ್ಣದ ಚಿತ್ತಾರ ಮೂಡಿಸುವ ಕೈಗಳು ಪರಿಪಕ್ವವಾಗಿರಬೇಕು. ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮುಖ್ಯ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.

ಕಲಾಕ್ಷೇತ್ರಕ್ಕೆ ಅವರ ಸೇವೆ ಪರಿಗಣಿಸಿ ಹಲವು ಪ್ರಶಸ್ತಿಗಳು ಸಂದಿದ್ದವು. ಕರ್ನಾಟಕ ಲಲಿತಕಲಾ ಅಕಾಡೆಮಿಯ ‘ಗೌರವ ಪ್ರಶಸ್ತಿ’, ಕರ್ನಾಟಕ ವಿಶ್ವವಿದ್ಯಾಲಯ ಕಲಾ ಪ್ರಶಸ್ತಿ, ಡೈಕೋ ಪ್ರಶಸ್ತಿ, ಮೈಸೂರು ದಸರಾ ಕಲಾ ಪ್ರಶಸ್ತಿ (1980, 81, 82, 83, 84), ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ಮೈಸೂರಿನ ದಿ.ಪಿ.ಆರ್‌. ತಿಪ್ಪೇಸ್ವಾಮಿ ಸ್ಮಾರಕ ಪ್ರತಿಷ್ಠಾನದ ಕಲಾ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಸಮಾಜದ ಅಲಕ್ಷಿತ ಸಮುದಾಯದಿಂದ ಬಂದು ತಮ್ಮದೇ ಪರಿಶ್ರಮದಿಂದ ಅಗಾಧ ಸಾಧನೆ ಮಾಡಿದ ಕೊರ್ತಿಯವರ ಅಗಲಿಕೆ ಕಲಾಪ್ರೇಮಿಗಳಿಗೆ ಅತೀವ ನೋವು ತಂದಿದೆ.

(ಲೇಖಕರು, ಸಾಹಿತಿ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು)

ಕಲಾಪ್ರೇಮಿಗಳ ಶ್ರದ್ಧಾಂಜಲಿ

ಬೆಂಗಳೂರಿನಲ್ಲಿ ಗುರುವಾರ ನಿಧನರಾದ ಹಿರಿಯ ಚಿತ್ರ ಕಲಾವಿದ ಪ್ರೊ.ಬಿ.ಆರ್‌. ಕೊರ್ತಿ ಅವರಿಗೆ ಹಲವು ಕಲಾವಿದರು ನುಡಿನಮನದ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಹಿರಿಯ ಕಲಾವಿದಮಹಲಿಂಗಪ್ಪ ಅವರು, ‘ಕುಂಚ ಬ್ರಹ್ಮನೆಂದೇ ಖ್ಯಾತಿ ಪಡೆದಿದ್ದ ಕೊರ್ತಿ ಅವರು ತಮ್ಮ ಚಿಕ್ಕ ಅಂಗವೈಕಲ್ಯದ ನಡುವೆಯೂ ಸಾಧನೆ ಮಾಡಿದವರು. ತಮ್ಮ ಇಳಿವಯಸ್ಸಿನಲ್ಲಿಯೂ ಕಲೆಯ ಆರಾಧನೆ ಬಿಟ್ಟಿರಲಿಲ್ಲ. ಅವರ ಅಗಲಿಕೆ ಕಲಾ ಪ್ರಪಂಚಕ್ಕೆ ತುಂಬಲಾರದ ನಷ್ಟ’ ಎಂದು ಸಂತಾಪ ಸೂಚಿಸಿದ್ದಾರೆ.

‘ದಾವಣಗೆರೆಯ ಕುಂಚ ಬ್ರಹ್ಮ ಕೊರ್ತಿ ಅವರ ಅಗಲಿಕೆ ಕುಂಚ ಕ್ಷೇತ್ರಕ್ಕೆ ತುಂಬಲಾರದ ನಷ್ಟ’ ಎಂದುಕನ್ನಡಪರ ಸಂಘಟಕ ಕೆ.ರಾಘವೇಂದ್ರ ನಾಯರಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಹಿರಿಯ ವ್ಯಂಗ್ಯಚಿತ್ರಗಾರ ಎಚ್‌.ಬಿ. ಮಂಜುನಾಥ ಹಾಗೂ ಅವರ ಶಿಷ್ಯರು, ಕಲಾವಿದರು ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.