ಮಲೇಬೆನ್ನೂರು:ಕೊರೊನಾ ನೋವು, ದುಃಖ, ಶೋಕದ ವಾತಾವರಣ ಸೃಷ್ಟಿಸಿ ಜನರ ಬದುಕನ್ನು ಕಸಿದಿದೆ. ಎಲ್ಲರೂ ಇನ್ನೂ ಮೂರುತಿಂಗಳು ಜಾಗ್ರತೆಯಿಂದ ಇರಬೇಕುಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.
ಇಲ್ಲಿನ ಶ್ರೀಗುರು ರೇಣುಕ ರೈಸ್ ಇಂಡಸ್ಟ್ರೀಸ್‌ನಿಂದ ದೀಪಾವಳಿ ಹಬ್ಬದ ಅಂಗವಾಗಿ ಭಾನುವಾರ ಆಯೋಜಿಸಿದ್ದ 29ನೇ ವರ್ಷದ ಇಷ್ಟಲಿಂಗ ಪೂಜೆ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಮುಂಬರುವ ದಿನ ವಿಶ್ವದ ಜನರಿಗೆ ಒಳಿತು ಮಾಡಲಿ. ಜಗತ್ತನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿ ಎಂದು ಆಶಿಸಿದ ಅವರು, ‘ ಜನರು ಆಡಂಬರದ ಜೀವನಕ್ಕೆ ಮಾರುಹೋಗದೆ, ಧಾರ್ಮಿಕ ತಳಹದಿಯ ಮೇಲೆ ಆದರ್ಶ ಜೀವನ ಸಾಗಿಸಬೇಕು’ ಎಂದು ಸಲಹೆ ನೀಡಿದರು.
‘ಕೊರೊನಾ ಕಾರಣ ಪ್ರತಿಯೊಬ್ಬರೂ ಸರ್ಕಾರ ರೂಪಿಸಿರುವ ಕಾನೂನು ಪಾಲಿಸಿ. ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳಿ. ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.
‘ಅಸಾಧ್ಯವಾದುದನ್ನು ಸಾಧ್ಯವಾಗಿಸುವ ದಾರಿಯನ್ನು ಹಿರಿಯ ಗುರುಗಳು ರಚಿಸಿದ ಸಿದ್ಧಾಂತ ಶಿಖಾಮಣಿಯಲ್ಲಿ ಉಲ್ಲೇಖಿಸಿದ್ದಾರೆ. ಅದರಂತೆ ನಡೆಯೋಣ.ಸಾಕಷ್ಟು ಸಮಸ್ಯೆ ನಡುವೆಯೂ ಭಕ್ತರು ಮಠದಲ್ಲಿ ಅನ್ನ, ಜ್ಞಾನ ದಾಸೋಹ ನಿರಂತರವಾಗಿ ನಡೆಸಲು ದೇಣಿಗೆ, ನೆರವು ನೀಡಿದ್ದಾರೆ. ಎಲ್ಲರಿಗೂ ದೇವರು ಒಳಿತು ಮಾಡಲಿ’ ಎಂದು ಭಕ್ತರ ಸಹಕಾರ ಸ್ಮರಿಸಿದರು.
ಶ್ರೀಗುರು ರೇಣುಕ ರೈಸ್ ಇಂಡಸ್ಟ್ರೀಸ್ ಮಾಲೀಕ ಬಿ.ಎಂ. ನಂಜಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಬಿ.ಪಿ. ಹರೀಶ್, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎ.ಎಚ್.ಶಿವಯೋಗಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎಂ. ವಾಗೀಶಸ್ವಾಮಿ, ಮುಖಂಡರಾದ ಬಿ.ಎಂ. ಚನ್ನೇಶ್, ಜಗದೀಶ್ವರ ಸ್ವಾಮಿ, ಚಂದ್ರಶೇಖರ ಪೂಜಾರ್, ಜಿ.ಪಿ. ಹನುಮಗೌಡ, ಪುರಸಭಾ ಸದಸ್ಯರು, ಜನಪ್ರತಿನಿಧಿಗಳು, ಭಕ್ತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.