ADVERTISEMENT

ದಾವಣಗೆರೆ: ಡೆಂಗಿ ಬಳಿಕ ಆತಂಕ ಸೃಷ್ಟಿಸಿದ ಇಲಿ ಜ್ವರ!

ರಾಮಮೂರ್ತಿ ಪಿ.
Published 21 ನವೆಂಬರ್ 2024, 7:01 IST
Last Updated 21 ನವೆಂಬರ್ 2024, 7:01 IST
ಇಲಿ ಮರಿಗಳು
ಇಲಿ ಮರಿಗಳು   

ದಾವಣಗೆರೆ: ಕೆಲ ದಿನಗಳ ಹಿಂದೆಯಷ್ಟೇ ಇನ್ನಿಲ್ಲದಂತೆ ಕಾಡಿದ ಡೆಂಗಿ ಬಳಿಕ, ಇದೀಗ ಇಲಿ ಜ್ವರವು ನಾಗರಿಕರಲ್ಲಿ ಭಯ ಸೃಷ್ಟಿಸುತ್ತಿದೆ. ಸದ್ಯ ಡೆಂಗಿ ಆರ್ಭಟ ಕ್ಷೀಣಿಸಿದ್ದು, ಇಲಿ ಜ್ವರದ ಪ್ರಕರಣಗಳು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಗ್ರಾಮೀಣ ಭಾಗದಲ್ಲಿ ಇಲಿ ಜ್ವರ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಹಳ್ಳಿ ಜನರಲ್ಲಿ ಆತಂಕ ಸೃಷ್ಟಿಸಿದೆ. ಸಾಮಾನ್ಯವಾಗಿ ಇಲಿ ಜ್ವರವು ರಾಜ್ಯದ ಕರಾವಳಿ ಪ್ರದೇಶ ಹಾಗೂ ಮಲೆನಾಡು ಭಾಗದಲ್ಲಿ ಹೆಚ್ಚು ಕಂಡುಬರುತ್ತದೆ.

2024ರ ಜನವರಿಯಿಂದ ನವೆಂಬರ್ 20ರ ವರೆಗೆ ಜಿಲ್ಲೆಯಲ್ಲಿ ಒಟ್ಟು 42 ಇಲಿ ಜ್ವರ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ 40 ಜನರು ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಈಗಾಗಲೇ ಗುಣಮುಖರಾಗಿದ್ದಾರೆ. ಸದ್ಯ ಇಬ್ಬರು ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

ಜಿಲ್ಲೆಯಲ್ಲಿ ಕಳೆದ 6 ವರ್ಷಗಳ ಪೈಕಿ ಈ ವರ್ಷವೇ ಅತೀ ಹೆಚ್ಚು ಪ್ರಕರಣಗಳು ವರದಿಯಾಗಿವೆ. 2019, 2020ರಲ್ಲಿ ತಲಾ 2 ಪ್ರಕರಣ, 2021ರಲ್ಲಿ 1, 2022ರಲ್ಲಿ 30, 2023ರಲ್ಲಿ 24 ಪ್ರಕರಣಗಳು ದೃಢಪಟ್ಟಿದ್ದವು.

‘ಇಲಿ ಜ್ವರ ಪ್ರಕರಣಗಳ ಸಂಖ್ಯೆ ಏರಿಕೆ ಕಂಡಿದ್ದರೂ, ಯಾವುದೇ ಸಾವು ಸಂಭವಿಸಿಲ್ಲ. ರೋಗಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಗ್ರಾಮೀಣ ಭಾಗದಲ್ಲಿ ದವಸ– ಧಾನ್ಯಗಳನ್ನು ಹೆಚ್ಚಾಗಿ ಮನೆಗಳಲ್ಲಿ ಸಂಗ್ರಹಿಸುವುದರಿಂದ ಹಾಗೂ ಹೊರಗಡೆ ಒಣ ಹಾಕುವುದರಿಂದ ಇಲಿ ಜ್ವರ ಹರಡುತ್ತಿದೆ. ಮನೆಗಳಲ್ಲಿ ಇಲಿ, ಹೆಗ್ಗಣಗಳು ಇರದಂತೆ ನೋಡಿಕೊಳ್ಳಬೇಕು’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್ ಅವರು ತಿಳಿಸುತ್ತಾರೆ.

‘ಸರ್ಕಾರಿ ಆಸ್ಪತ್ರೆಗಳಿಗೆ ಬರುವ ರೋಗಿಗಳಲ್ಲಿ ಇಲಿ ಜ್ವರ ಲಕ್ಷಣಗಳು ಕಂಡುಬಂದರೆ ಅವರ ರಕ್ತದ ಮಾದರಿ ಸಂಗ್ರಹಿಸಿ ಮಣಿಪಾಲ್‌ನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ವೈರಾಲಜಿಗೆ ಕೊರಿಯರ್ ಮೂಲಕ ಕಳಿಸಲಾಗುತ್ತಿದೆ. 24 ಗಂಟೆಯೊಳಗಡೆಯೇ ರಕ್ತ ಪರೀಕ್ಷೆಯ ವರದಿ ಕೈಸೇರುತ್ತಿದೆ. ರೋಗಿಗಳು ಹೆಚ್ಚು ಆತಂಕ ಪಡದೇ ಅಗತ್ಯ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.

ಏನಿದು ಇಲಿ ಜ್ವರ?: ಇಲಿ ಜ್ವರ ಎಂಬುದು ಮನುಷ್ಯರು ಹಾಗೂ ಪ್ರಾಣಿಗಳಿಗೆ ಬಾಧಿಸುವ ಬ್ಯಾಕ್ಟೀರಿಯಾದ ಸೋಂಕು. ಇದು ಲೆಪ್ಟೊಸ್ಪೈರಾ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಸಾಮಾನ್ಯವಾಗಿ ಸೋಂಕಿತ ಇಲಿ, ಹೆಗ್ಗಣ, ಬೆಕ್ಕು, ನಾಯಿ, ನರಿ, ತೋಳ ಮುಂತಾದ ಪ್ರಾಣಿಗಳ ಮೂಲಕ ಮನುಷ್ಯರಿಗೆ ಹರಡುತ್ತದೆ.

ಇಲಿ ಹಾಗೂ ಇತರೆ ಪ್ರಾಣಿಗಳ ಮಲ ಅಥವಾ ಮೂತ್ರದ ಮೂಲಕ ಹೊರಗೆ ಬರುವ ಬ್ಯಾಕ್ಟೀರಿಯಾ, ಮಣ್ಣು ಅಥವಾ ನೀರಿನ ಜೊತೆ ಸೇರಿ ನಂತರ ಮನುಷ್ಯನ ದೇಹ ಸೇರುತ್ತದೆ. ಮೂಗು, ಕಣ್ಣುಗಳ ಮೂಲಕ ರೋಗಾಣುಗಳು ದೇಹ ಸೇರುವ ಸಾಧ್ಯತೆ ಇರುತ್ತದೆ. ಕಲುಷಿತ ನೀರಿನಿಂದ ತೊಳೆಯುವ ತರಕಾರಿ ಮತ್ತು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಹಾಗೂ ಬರಿಗಾಲಿನಿಂದ ಓಡಾಡುವಾಗ ಮಣ್ಣಿನಲ್ಲಿರುವ ರೋಗಾಣುಗಳು ದೇಹ ಸೇರುವ ಸಾಧ್ಯತೆ ಇರುತ್ತದೆ. ಕೃಷಿಕರು, ಮಲೀನ ನೀರಿನಲ್ಲಿ ಕೆಲಸ ಮಾಡುವವರಿಗೆ ಈ ರೋಗ ತಗುಲುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವೈದ್ಯರು.

ರೋಗ ಹರಡದಂತೆ ತಡೆಗಟ್ಟುವುದು ಹಾಗೂ ರೋಗ ದೃಢಪಟ್ಟ ಬಳಿಕ ತೆಗೆದುಕೊಳ್ಳಬಹುದಾದ ಕ್ರಮಗಳ ಬಗ್ಗೆ ಅಧಿಕಾರಿಗಳು ಸಿಬ್ಬಂದಿಗೆ ಸೂಚಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸಲಾಗುತ್ತಿದೆ.
–ಎಸ್‌. ಷಣ್ಮುಖಪ್ಪ, ಡಿಎಚ್‌ಒ
ಇಲಿ ಜ್ವರದ ಲಕ್ಷಣಗಳು ಕಂಡುಬಂದ ತಕ್ಷಣ ಸಮೀಪದ ಸರ್ಕಾರಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಜಿಲ್ಲಾ ಆಸ್ಪತ್ರೆವರೆಗೆ ಎಲ್ಲ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದೆ.
–ಡಾ.ಜಿ.ಡಿ. ರಾಘವನ್, ಜಿಲ್ಲಾ ಸರ್ವೇಕ್ಷಣಾಧಿಕಾರಿ
ರೋಗದ ಲಕ್ಷಣಗಳು
ಚಳಿ ಜ್ವರ ಕೆಮ್ಮು ಮೈಕೈ ನೋವು ವಾಂತಿ ತಲೆನೋವು ಮಾಂಸಖಂಡಗಳಲ್ಲಿ ಸೆಳೆತ ಕೆಮ್ಮಿದಾಗ ನೋವು ಮೂಗಿನಲ್ಲಿ ರಕ್ತ ಸೋರುವುದು ಕಣ್ಣು ಕೆಂಪಾಗುವುದು (ವಾರದ ನಂತರ ಹಳದಿಯಾಗುವುದು) ರಕ್ತ ಕಫ ಕರುಳಿನಲ್ಲಿ ರಕ್ತಸ್ರಾವ ಮೂತ್ರಪಿಂಡ ಮತ್ತು ಹೃದಯ ಸಂಬಂಧಿತ ತೊಂದರೆ. ಮುಂಜಾಗ್ರತಾ ಕ್ರಮಗಳು ಪ್ರಾಣಿಗಳು ಒಡನಾಟ ನಡೆಸುವ ಕಲುಷಿತ ನೀರಿನಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಬೇಕು. ಕುಡಿಯುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ರೋಗ ಹರಡುವ ರೋಗಾಣುಗಳು ಸಾಕು ಪ್ರಾಣಿಗಳಲ್ಲಿ ಇರುವ ಸಾಧ್ಯತೆ ಇರುವುದರಿಂದ ಕೆರೆ ಕಟ್ಟೆ ನಿಂತ ನೀರಿನಲ್ಲಿ ಸ್ನಾನ ಮಾಡಬಾರದು ಕುಡಿಯಲು ಬಳಸಬಾರದು. ಮಲೀನ ನೀರಿನಲ್ಲಿ ಹಣ್ಣು ತರಕಾರಿಗಳನ್ನು ತೊಳೆಯಬಾರದು. ಕುದಿಸಿ ಆರಿಸಿ ಸೋಸಿದ ನೀರನ್ನು ಸೇವಿಸಬೇಕು. ಬರಿಗಾಲಿನಲ್ಲಿ ತಿರುಗಾಡಬಾರದು ಮನೆಗಳನ್ನು ಸ್ವಚ್ಛವಾಗಿಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.