ADVERTISEMENT

ವಿಜಯೇಂದ್ರ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆ ಎದುರಿಸಲಿ: ಬಿಜೆಪಿ ಶಾಸಕ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2024, 8:55 IST
Last Updated 12 ಆಗಸ್ಟ್ 2024, 8:55 IST
<div class="paragraphs"><p> ಹರಿಹರ ಶಾಸಕ ಬಿ.ಪಿ.ಹರೀಶ್‌ </p></div>

ಹರಿಹರ ಶಾಸಕ ಬಿ.ಪಿ.ಹರೀಶ್‌

   

– ಪ್ರಜಾವಾಣಿ ಚಿತ್ರ

ದಾವಣಗೆರೆ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮರುಚುನಾವಣೆ ಎದುರಿಸಬೇಕು. ಚುನಾವಣೆಯ ಗೆಲುವು ಕಾಂಗ್ರೆಸ್‌ ಭಿಕ್ಷೆಯಲ್ಲ ಬಿಜೆಪಿಯ ಶಕ್ತಿ ಎಂಬುದನ್ನು ನಿರೂಪಿಸಬೇಕು ಎಂದು ಹರಿಹರ ಶಾಸಕ ಬಿ.ಪಿ.ಹರೀಶ್‌ ಒತ್ತಾಯಿಸಿದರು.

ADVERTISEMENT

‘ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್‌ ಭಿಕ್ಷೆ’ ಎಂಬ ಗಂಭೀರ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾಡಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರ ನಡುವಿನ ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ಇದು ಪುಷ್ಟಿ ನೀಡಿದೆ. ಇಂತಹ ಬ್ಲ್ಯಾಕ್‌ಮೇಲ್‌ಗೆ ಬಿ.ಎಸ್‌.ಯಡಿಯೂರಪ್ಪ ಕುಟುಂಬ ಸರಿಯಾಗಿ ಪ್ರತಿಕ್ರಿಯಿಸಬೇಕು. ಕಾಂಗ್ರೆಸ್‌ ಭಿಕ್ಷೆಯಿಂದ ಶಾಸಕರಾಗುವ ಅನಿವಾರ್ಯತೆ ಬಿಜೆಪಿ ನಾಯಕರಿಗೆ ಇಲ್ಲ ಎಂಬುದನ್ನು ತೋರಿಸಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

‘ಹೋರಾಟ, ಪಕ್ಷ ಸಂಘಟನೆಯಿಂದ ವಿಮುಖರಾಗಿರುವ ಬಿ.ಎಸ್.ಯಡಿಯೂರಪ್ಪ ಶ್ರೀಮಂತ ಕುಟುಂಬಗಳ ಸಖ್ಯ ಬಯಸುತ್ತಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಕುಟುಂಬದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕೃಷ್ಣಮೃಗ ಸಾಕಣೆ ಪ್ರಕರಣದಲ್ಲಿ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಅವರನ್ನು ರಕ್ಷಿಸಿದ್ದಾರೆ. ಸಂಸದ ಬಸವರಾಜ ಬೊಮ್ಮಾಯಿ ಕೂಡ ಇವರೊಂದಿಗೆ ಕೈಜೋಡಿಸಿದ್ದಾರೆ. ಈ ಬಗ್ಗೆ ಪಕ್ಷದ ವರಿಷ್ಠರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ಹೊಂದಾಣಿಕೆ ವಿರುದ್ಧ ಹೋರಾಟ:

‘ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕಾರಣ ಅಸಹ್ಯ ಹುಟ್ಟಿಸಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಾಯಕರು ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪರಸ್ಪರ ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಮುಖಂಡರಿಗೆ ತಕ್ಕ ಪಾಠ ಕಲಿಸಲಿದ್ದೇವೆ’ ಎಂದರು.

‘ಬಿಜೆಪಿಯ ಸಮಾನ ಮನಸ್ಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ಶೀಘ್ರದಲ್ಲೇ ಆಯೋಜಿಸಲಾಗುತ್ತಿದೆ. ಪಕ್ಷದ ಸಾಕಷ್ಟು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿ.ವೈ.ವಿಜಯೇಂದ್ರ ಮಾಡಿರುವ ತಪ್ಪುಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಪಕ್ಷಕ್ಕೆ ಪರ್ಯಾಯ ನಾಯಕರ ಅಗತ್ಯವಿದ್ದು, ಹೈಕಮಾಂಡ್‌ ಒಪ್ಪಿಗೆ ಪಡೆದು ಮುಂದುವರಿಯುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಹಿಂದೂಗಳ ಮೇಲಿನ ದಾಳಿ ನಿಲ್ಲಲಿ

‘ಬಾಂಗ್ಲಾ ದೇಶದಲ್ಲಿ ಹಿಂದೂಗಳು ಹಾಗೂ ದೇಗುಲಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ವಿಶ್ವದ ಹಲವು ರಾಷ್ಟ್ರಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂಗಳಿಗೆ ರಕ್ಷಣೆಯ ಅಗತ್ಯವಿದೆ. ಇಂತಹ ದೇಶಗಳಲ್ಲಿನ ಹಿಂದೂಗಳ ರಕ್ಷಣೆಯ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿದೆ. ಪ್ರಧಾನಿ ನರೇಂದ್ರ ಮೋದಿ ಹಿಂದೂಗಳ ರಕ್ಷಣೆಗೆ ಕಾರ್ಯೋನ್ಮುಖವಾಗಬೇಕು’ ಎಂದು ಮನವಿ ಮಾಡಿದರು.

‘ಬಾಂಗ್ಲಾ ದೇಶದಲ್ಲಿದ್ದ ಹಿಂದೂಗಳ ಸಂಖ್ಯೆ ಶೇ 32ರಿಂದ ಶೇ 8ಕ್ಕೆ ಕುಸಿದಿದೆ. ಅಲ್ಪಸಂಖ್ಯಾತರಾಗಿರುವ ಕ್ರಿಶ್ಚಿಯನ್‌ ಸಮುದಾಯ, ಪ್ರಾರ್ಥನಾ ಮಂದಿರಗಳ ಮೇಲೆಯೂ ದಾಳಿ ನಡೆದಿದೆ. ಕಾಂಗ್ರೆಸ್‌ ಓಲೈಕೆ ರಾಜಕಾರಣ ಬಿಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ಹಿಂದೂಗಳ ಪರವಾಗಿ ಧ್ವನಿ ಎತ್ತಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.