ADVERTISEMENT

‘ಸಿದ್ದರಾಮಯ್ಯ ತಮ್ಮ ಭವಿಷ್ಯ ನೋಡಿಕೊಳ್ಳಲಿ’; ಸಚಿವ ಬೈರತಿ ಬಸವರಾಜ ತಿರುಗೇಟು

ಈ ಸರ್ಕಾರ ಆರು ತಿಂಗಳಲ್ಲಿ ಬೀಳಲಿದೆ ಎಂದಿದ್ದ ಸಿದ್ದರಾಮಯ್ಯಗೆ ಸಚಿವ ಬೈರತಿ ಬಸವರಾಜ ತಿರುಗೇಟು

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 1:30 IST
Last Updated 16 ಆಗಸ್ಟ್ 2021, 1:30 IST
ಬೈರತಿ ಬಸವರಾಜ
ಬೈರತಿ ಬಸವರಾಜ   

ದಾವಣಗೆರೆ: ಸರ್ಕಾರ ಟೇಕಾಫ್ ಆಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ ಸರ್ಕಾರವೇನು ಆಕಾಶದಲ್ಲಿ ಹಾರಿ
ಕೊಂಡು ಹೋಗುತ್ತಿತ್ತಾ? ಆರು ತಿಂಗಳಲ್ಲಿ ಸರ್ಕಾರ ಪತನಗೊಳ್ಳಲಿದೆ ಎಂದು ಸುಮ್ಮನೆ ಭವಿಷ್ಯ ನುಡಿಯುವ ಮೊದಲು ಅವರ ಭವಿಷ್ಯವನ್ನು ಸಿದ್ದರಾಮಯ್ಯ ಯೋಚಿಸಲಿ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವ್ಯಂಗ್ಯವಾಡಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಿದ್ದರಾಮಯ್ಯ ಮುಂದೆ ಮುಖ್ಯಮಂತ್ರಿ ಆಗುತ್ತಾರಾ ಇಲ್ಲವಾ ಎಂದು ಮೊದಲು ಭವಿಷ್ಯ ನುಡಿಯಲಿ’ ಎಂದು ಹೇಳಿದರು.

ಬಸವರಾಜ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಇನ್ನೂ 8-10 ದಿನಗಳಾಗಿಲ್ಲ. ಆಗಲೇ ನಾಲ್ಕು ಜಿಲ್ಲೆಗಳ ಪ್ರವಾಸ ಮಾಡಿದ್ದಾರೆ. ಬೊಮ್ಮಾಯಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ADVERTISEMENT

‘ಗಡಿ ಜಿಲ್ಲೆಗಳಿಗೆ ಯಾರಾದರೂ ವಿರೋಧ ಪಕ್ಷದ ನಾಯಕರು ಹೋಗಿದ್ದಾರಾ, ವಸ್ತುಸ್ಥಿತಿ ಬಗ್ಗೆ ಮಾಹಿತಿ ಪಡೆದಿದ್ದಾರಾ, ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರಾ? ಎಲ್ಲೋ ಕುಳಿತು ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಟೀಕಿಸಿದರು.

‘ಸಚಿವ ಸಂಪುಟ ವಿಸ್ತರಣೆ ಸಂಬಂಧ ಯಾವುದೇ ಗೊಂದಲ ಇಲ್ಲ. ರಾಜ್ಯದ ಪ್ರಗತಿಗೆ ಬದ್ಧರಾಗಿದ್ದೇವೆ. ಅಸಮಾಧಾನ ಮುಗಿದಿದೆ. ಎಲ್ಲರೂ ಸಂತೋಷದಿಂದಿದ್ದೇವೆ’ ಎಂದರು.

‘ಮುಂದಿನ ಗುರುವಾರ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು, ಇಂದಿರಾ ಕ್ಯಾಂಟಿನ್ ಹೆಸರು ಬದಲಾವಣೆ ಸಾಧಕ-ಬಾಧಕ ಚರ್ಚೆ ಮಾಡುತ್ತೇವೆ. ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.