ಹರಿಹರ: ದಾವಣಗೆರೆಯಲ್ಲಿ ಶೀಘ್ರವಾಗಿ 3ನೇ ವಿಶ್ವಕನ್ನಡ ಸಮ್ಮೇಳನ ನಡೆಸಲು ಸರ್ಕಾರ ವಿಶೇಷಾಧಿಕಾರಿ ನೇಮಿಸಿ ಕ್ರಮ ವಹಿಸಬೇಕು ಸೇರಿದಂತೆ ಹಲವು ನಿರ್ಣಯಗಳನ್ನು 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಗೌರವಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ನಿರ್ಣಯಗಳನ್ನು ಮಂಡಿಸಿದರು.
‘ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವ ಸರ್ಕಾರ ಅದಕ್ಕೆ ಪೂರಕವಾಗಿ ನಾಡಿನಾದ್ಯಂತ ಬಸವಣ್ಣನ ಕುರಿತಾದ ಚರ್ಚೆ ಆಯೋಜಿಸಬೇಕು. ನಾಮಫಲಕಗಳಲ್ಲಿ ಕನಿಷ್ಠ ಶೇ 60ರಷ್ಟು ಕನ್ನಡ ಭಾಷೆ ಕಡ್ಡಾಯವೆಂಬ ಸರ್ಕಾರದ ಆದೇಶವನ್ನು ಅಧಿಕಾರಿಗಳು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯದ ಜೊತೆಗೆ 10ನೇ ತರಗತಿವರೆಗಿನ ಕನ್ನಡ ಮಾಧ್ಯಮ ಅಭ್ಯರ್ಥಿಗಳಿಗೆ ಎಲ್ಲಾ ಹಂತದ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು’ ಎಂದು ಆಗ್ರಹಿಸಿದರು.
‘ಜಿಲ್ಲೆಯಲ್ಲಿ ನೂತನ ಕೈಗಾರಿಕೆ ಸ್ಥಾಪಿಸಿ, ಸ್ಥಳೀಯವಾಗಿ ಉದ್ಯೋಗಾವಕಾಶ ಕಲ್ಪಿಸಬೇಕು, ವಿಶೇಷವಾಗಿ ಹರಿಹರ ತಾಲೂಕಿನಲ್ಲಿ ಭತ್ತ, ಮೆಕ್ಕೆಜೋಳ ಉತ್ಪನ್ನಾಧಾರಿತ ಕೈಗಾರಿಕೆ ಸ್ಥಾಪಿಸಬೇಕು. ಹರಿಹರ ತಾಲೂಕಿನಲ್ಲಿ ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸಬೇಕು, ಹರಿಹರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ನದಿಗೆ ಬ್ಯಾರೇಜ್ ನಿರ್ಮಿಸಬೇಕು. ಮಧ್ಯ ಕರ್ನಾಟಕದಲ್ಲಿ ವಿಶ್ವ ದರ್ಜೆ ಸ್ಥಾನಮಾನದ ಕ್ರೀಡಾಂಗಣ ನಿರ್ಮಿಸಬೇಕು. ಶಿಥಿಲಾವಸ್ಥೆಯಲ್ಲಿರುವ ಮಲೆಬೆನ್ನೂರಿನ ಬಾಪೂಜಿ ಹಾಲ್ ನವೀಕರಿಸಬೇಕು ಹಾಗೂ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಸುಸಜ್ಜಿತ ಕನ್ನಡ ಭವನ ನಿರ್ಮಿಸಲು ಸರ್ಕಾರ ನಿವೇಶನ, ಅಗತ್ಯ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.
ಹರಿಹರ: ಕನ್ನಡ ಕಲಿಕೆ ಕನ್ನಡ ಸಾಹಿತ್ಯದಿಂದ ಕೇವಲ ಅಕ್ಷರ ಜ್ಞಾನ ಮಾತ್ರ ಸಿಗುವುದಿಲ್ಲ ಅಮೂಲ್ಯ ಜೀವನ ಪಾಠವೂ ಲಭಿಸುತ್ತದೆ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಭೀಮಾಶಂಕರ್ ಜೋಯಿಸ್ ಅಭಿಪ್ರಾಯಪಟ್ಟರು.
‘ನಗರದಲ್ಲಿ ಮಂಗಳವಾರ ನಡೆದ 13ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ನೀವು ಇಂಗ್ಲಿಷ್ ಸೇರಿದಂತೆ ಎಷ್ಟೆ ಭಾಷೆಗಳನ್ನು ಕಲಿತು ಮಾತನಾಡಬಹುದು ಆದರೆ ಮಾತೃ ಭಾಷೆ ಕನ್ನಡ ಮಾತ್ರ ನಿಮ್ಮ ಹೃದಯದ ಭಾಷೆಯಾಗಲು ಸಾಧ್ಯ’ ಎಂದರು. ‘ಕೇವಲ ಭಾಷಣದಿಂದ ಕನ್ನಡ ಭಾಷೆ ಉಳಿಯುವುದಾಗಲಿ ಬೆಳೆಯುವುದಾಗಲಿ ಸಾಧ್ಯವಿಲ್ಲ ಕನ್ನಡ ನಮ್ಮ ಮನಸ್ಸಿನ ಗುಣವಾಗಬೇಕು. ರಾಜ್ಯ ಸರ್ಕಾರ ಆಡಳಿತ ಭಾಷೆ ಕನ್ನಡವನ್ನು ಎಲ್ಲಾ ಹಂತಗಳಲ್ಲೂ ಕಡ್ಡಾಯಗೊಳಿಸಬೇಕು. ಆಳುವವರು ಮಾತೃ ಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಎಂಬುದನ್ನು ಕಡತಗಳಿಗೆ ಸೀಮಿತಗೊಳಿಸದೆ ಅನುಷ್ಠಾನಗೊಳಿಸಬೇಕು’ ಎಂದರು.
‘ಸಮ್ಮೇಳನದಲ್ಲಿ ಸಮಾಜದ ವಿವಿಧ ವಿಚಾರಗಳ ಬಗೆಗಿನ 7 ಗೋಷ್ಠಿಗಳಲ್ಲಿ ಚಿಂತಕರು ಹಾಗೂ ಸಾಹಿತಿಗಳು ಉತ್ತಮ ಚರ್ಚೆ ಚರ್ಚೆ ನಡೆಸಿದ್ದಾರೆ. 50 ಕವಿಗಳು ಕವನಗಳನ್ನು ವಾಚಿಸಿದ್ದಾರೆ. ಇದೊಂದು ಅರ್ಥಪೂರ್ಣ ಸಮ್ಮೇಳನವಾಗಿದೆ. ಜಿಲ್ಲೆಯ ವಿವಿಧ ಕ್ಷೇತ್ರಗಳ 34 ಸಾಧಕರನ್ನು ಸನ್ಮಾನಿಸಿದ್ದು ಅವಿಸ್ಮರಣೀಯವಾಗಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ.ಸಿ.ವಿ.ಪಾಟೀಲ್ ಹೇಳಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಮುಖಂಡರಾದ ಎನ್.ಜಿ. ನಾಗನಗೌಡ್ರು ಚಂದ್ರಶೇಖರ್ ಪೂಜಾರ್ ನಂದಿಗಾವಿ ಶ್ರೀನಿವಾಸ್ ನಿಖಿಲ್ ಕೊಂಡಜ್ಜಿ ಕಸಾಪ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಚ್.ಹೂಗಾರ್ ಜಿಲ್ಲಾ ಕಸಾಪ ಪದಾಧಿಕಾರಿಗಳಾದ ರೇವಣಸಿದ್ದಪ್ಪ ಅಂಗಡಿ ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಡಿ.ಎಂ.ಮಂಜುನಾಥಯ್ಯ ಪದಾಧಿಕಾರಿಗಳಾದ ಜಿಗಳಿ ಪ್ರಕಾಶ್ ಚಿದಾನಂದ ಕಂಚಿಕೇರಿ ಬಸವರಾಜ್ ದೊಡ್ಡಮನಿ ಇದ್ದರು.
ಹರಿಹರ: ಪ್ರಸಕ್ತ ದಿನ ಕನ್ನಡ ಭಾಷೆ ನಾಡು ನುಡಿ ಉಳಿಸಿ ಬೆಳಸುವ ನಿಟ್ಟಿನಲ್ಲಿ ಪೋಷಕರ ಪಾತ್ರ ಮುಖ್ಯ ಅಗತ್ಯ ಎಂದು ಸಮ್ಮೇಳನದ ಅಧ್ಯಕ್ಷ ಸಿ.ವಿ. ಪಾಟೀಲ್ ಅಭಿಪ್ರಾಯಪಟ್ಟರು.
ದಾವಣಗೆರೆ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಸಮ್ಮೇಳಾನಾಧ್ಕಕ್ಷರೊಂದಿಗೆ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಸಂವಾದದಲ್ಲಿ ಪಾಲ್ಗೊಂಡವರ ಪ್ರಶ್ನೆಗಳಿಗೆ ಉತ್ತರಿಸಿದರು. ‘ಪೋಷಕರಿಗೆ ಪೂರ್ವ ಪ್ರಾಥಮಿಕ ಹಂತದಿಂದ ಮಾತೃಭಾಷೆ ಬದಲು ಆಂಗ್ಲ ಭಾಷೆ ಕಲಿಕಗೆ ಒತ್ತು ಹೆಚ್ಚಾಗಿದೆ. ಯುವಪೀಳಿಗೆಯಲ್ಲಿ ಸಾಹಿತ್ಯಸಕ್ತಿ ಕೊರತೆ ಕಾಡುತ್ತಿದೆ. ಉತ್ತಮ ಸಾಹಿತಿಗಳ ಕೊರತೆ ಕನ್ನಡ ಸಾಹಿತ್ಯಕ್ಕೆ ಕಾಡುತ್ತಿದೆ. ಬಂಡಾಯ ಸಾಹಿತ್ಯಕ್ಕೆ ಚೈತನ್ಯ ನೀಡಬೇಕಿದೆ’ ಎಂದು ಪ್ರತಿಪಾದಿಸಿದರು.
‘ಕಾಲಕ್ಕೆ ತಕ್ಕಂತೆ ಬದಲಾವಣೆ ಅಗತ್ಯ. ಇಂದು ಓದುವುದಕ್ಕಿಂತ ನೋಡುವ ಪ್ರವೃತ್ತಿ ಹೆಚ್ಚಾಗಿದೆ. ಜನರು ಇಂದು ಮೊಬೈಲ್ ಜಾಲದಲ್ಲಿ ಸಿಲುಕಿದ್ದಾರೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಪ್ಪುತಪ್ಪಾಗಿ ಕನ್ನಡ ಭಾಷೆ ಬಳಸುವ ಪ್ರವೃತ್ತಿಗೆ ಕಡಿವಾಣ ಅಗತ್ಯ’ ಎಂದು ಹೇಳಿದರು.
‘ಕೇಂದ್ರ ಹಾಗೂ ರಾಜ್ಯ ಶಿಕ್ಷಣ ವ್ಯವಸ್ಥೆ ಭಾಷಾ ಮಾಧ್ಯಮ ವ್ಯತಿರಿಕ್ತ ಪರಿಣಾಮ ಬೀರಿ ಗೊಂದಲ ಮೂಡಿಸುತ್ತಿದೆ. ಕನ್ನಡ ಭಾಷೆ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಸಾಹಿತ್ಯಾಭಿರುಚಿ ಬೆಳೆಸಬೇಕಿದೆ’ ಎಂದರು. ‘ಕನ್ನಡ ದೇಶ ಭಾಷೆ ಉಳಿಸಲು ಕಂಕಣ ತೊಟ್ಟ ಕನ್ನಡ ಸಾಹಿತ್ಯ ಪರಿಷತ್ ಜೊತೆಗೆ ಸರ್ಕಾರ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಿ ಸಹಕರಿಸಬೇಕು’ ಎಂದು ಮಾರ್ಮಿಕವಾಗಿ ನುಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.