ದಾವಣಗೆರೆ: ‘ಬೆಂಗಳೂರಿನಲ್ಲಿಯೇ ಹಲವು ಅಕಾಡೆಮಿಗಳು ನೆಲೆಗೊಂಡಿದ್ದು, ಅವುಗಳು ದಾವಣಗೆರೆಗೂ ಬರುವಂತಾಗಿ ವಿಕೇಂದ್ರೀಕರಣವಾಗಬೇಕಿದೆ’ ಎಂದು ಮೈಸೂರಿನ ಚಿಂತಕ, ಲೇಖಕ ಜಿ.ಪಿ. ಬಸವರಾಜು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ 20023-34ರ ಸಾಲಿನ ಪಠ್ಯಪೂರಕ ಚಟುವಟಿಕೆ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ದಾವಣಗೆರೆಯ ಒಬ್ಬ ಪ್ರತಿಭಾವಂತ ಗ್ರಾಮೀಣ ಪ್ರತಿಭೆ ಸಂಗೀತ ಕಲಿಯಬೇಕು ಎಂದರೆ ಅದಕ್ಕೆ ಅವಕಾಶವೇ ಇಲ್ಲ. ಹಾಗಾಗಿ ಮೈಸೂರು, ಧಾರವಾಡದಲ್ಲಿ ಇರುವಂತ ಸಂಗೀತ, ಜಾನಪದ ಅಕಾಡೆಮಿ, ವಿವಿಗಳು ಮಧ್ಯ ಕರ್ನಾಟಕ್ಕೂ ಬರಬೇಕು. ಜಾನಪದ ಅಕಾಡೆಮಿಗಳು ಇಲ್ಲಿನ ಚಿತ್ರಕಲಾ ವಿದ್ಯಾಲಯ ಎಲ್ಲ ಆಯಾಮಗಳಲ್ಲೂ ಬೆಳೆಯವಂತಾಗಬೇಕು. ಈ ಬಗ್ಗೆ ನಾಯಕರು, ಜನರು ಚಿಂತಿಸಿ ಕಾರ್ಯ ಪ್ರವೃತ್ತರಾಗಬೇಕು’’ ಎಂದು ಸಲಹೆ ನೀಡಿದರು.
ಈ ಹಿಂದೆ ದಾವಣಗೆರೆ ನಗರ ಹತ್ತಿ, ಎಣ್ಣೆ ಗಿರಣಿಗಳ ನಾಡಾಗಿತ್ತು. ಸಾವಿರಾರು ಕಾರ್ಮಿಕರಿಗೆ ಆಶ್ರಯ ಒದಗಿಸಿತ್ತು. ಇಲ್ಲಿನ ಕಮ್ಯುನಿಸ್ಟ್ ನಾಯಕರಾದ ಪಂಪಾಪತಿ ಅಂತವರು ಗಿಡ, ಮರಗಳನ್ನು ಬೆಳೆಸಿ ಹಸಿರು ನಗರ ಆಗಿಸಿದ್ದರು. ಆ ನಂತರ ಗಿರಣಿಗಳು ಹೋದವು. ಈಗ ಸ್ಮಾರ್ಟ್‌ಸಿಟಿ ಆಗುತ್ತಿದ್ದು, ಎಲ್ಲೆಲ್ಲೂ ಕಾಂಕ್ರಿಟೀಕರಣ ಆಗುತ್ತಿದೆ, ಮರ, ಗಿಡಗಳು ಬಲಿ ಆಗುತ್ತಿವೆ. ಮತ್ತೆ ಹಸಿರು ನಗರವನ್ನು ರೂಪಿಸಲು ಇಲ್ಲಿನ ಸಾರ್ವಜನಿಕರು, ರಾಜಕಾರಣಿಗಳು ಎಲ್ಲ ಸೇರಿ ಪ್ರಯತ್ನಿಸಬೇಕು’ ಎಂದು ಸಲಹೆ ನೀಡಿದರು.
‘ಮಧ್ಯ ಕರ್ನಾಟಕದ ಈ ನಗರ ರಾಜಧಾನಿ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿತ್ತು. ಈಗ ಶೈಕ್ಷಣಿಕ ನಗರಿಯಾಗಿಯೂ ಗುರುತಿಸಿಕೊಂಡಿದೆ. ಇಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ಇವುಗಳ ಜತೆಯಲ್ಲಿ ಇಲ್ಲಿನ ಸರ್ಕಾರಿ ಶಾಲಾ–ಕಾಲೇಜುಗಳು ಬೆಳೆಯಬೇಕು. ಮಧ್ಯ ಕರ್ನಾಟಕದ ದಾವಣಗೆರೆಯನ್ನು ಹಸಿರು ನಗರ, ಸಾಂಸ್ಕೃತಿಕ ನಗರಿಯಾಗಿ ಕಟ್ಟಲು ಚಿಂತಿಸಿ ಯೋಜನೆಗಳನ್ನು ರೂಪಿಸಬೇಕಿದೆ’ ಎಂದು ಹೇಳಿದರು.
‘ಕಾಲೇಜಿಗೆ ಒಂದು ಸಭಾ ಭವನದ ಅಗತ್ಯವಿದ್ದು, ಈ ಬಗ್ಗೆ ಸಂಬಂಧಪಟ್ಟವರು ಗಮನ ಹರಿಸಿದರೆ ನಾವು ಋಣಿಯಾಗಿರುತ್ತೇವೆ. ನಾಳೆ ಬೇಕಾದರೆ ನಾವು ಕಾರ್ಯಕ್ರಮ ಮಾಡಬಹುದು, ಮಳೆ ಬರಲಿ’ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎಂ.ಮಂಜಣ್ಣ ಆಶಿಸಿದರು.
ಈ ವೇಳೆ ಪ್ರಾಧ್ಯಾಪಕರಾದ ಕೆ. ಮಲ್ಲಿಕಾರ್ಜುನಗೌಡ ತೂಲಹಳ್ಳಿ, ಜಿ.ಎಸ್. ಸತೀಶ್, ಶಿವರಾಜ್, ಡಾ.ಭೀಮಪ್ಪ, ಅಧೀಕ್ಷಕ ಟಿ. ಶೇಷಪ್ಪ ಇದ್ದರು. ವಿದ್ಯಾರ್ಥಿಗಳಾದ ರಕ್ಷಿತಾ ಸಂಗಡಿಗರು ನಾಡಗೀತೆ ಹಾಡಿದರು. ನಯನ ಪ್ರತೀಕ್ಷ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.