ದಾವಣಗೆರೆ: ಬಿಜೆಪಿಯವರು ಬರ ಅಧ್ಯಯನ ಪ್ರವಾಸ ಮಾಡುವುದನ್ನು ಬಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೋಗಿ ರಾಜ್ಯದ ಕಷ್ಟದ ಬಗ್ಗೆ ಹೇಳಿ ಅಗತ್ಯ ಇರುವ ಅನುದಾನ ತರಲಿ ಎಂದು ಎಸ್.ಎಸ್.ಮಲ್ಲಿಕಾರ್ಜುನ್ ಸವಾಲು ಹಾಕಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ಇದೇ ಕಾರಣಕ್ಕೆ ಬರ ಅಧ್ಯಯನ ಸೇರಿದಂತೆ ಹತ್ತಾರು ಪ್ರವಾಸ ಮಾಡುತ್ತಿದ್ದಾರೆ.
ಅವರಿಗೆ ಧೈರ್ಯ ಇದ್ದರೆ ಪ್ರಧಾನಿ ಬಳಿ ಹೋಗಿ ಮಂಡಿಯೂರಿ ಕುಳಿತುಕೊಳ್ಳುವುದನ್ನ ಬಿಟ್ಟು ಮಾತನಾಡಿ ಅನುದಾನ ತರಲಿ ಎಂದರು.
ನಾವು ಹಾಗೂ ನಮ್ಮ ಕುಟುಂಬ (ಕಾಂಗ್ರೆಸ್ ಶಾಸಕರು) ಚನ್ನಾಗಿದ್ದೇವೆ ಅವರಿಗ್ಯಾಕೆ ನಮ್ಮ ಚಿಂತೆ. ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆದರೆ ಜೆಡಿಎಸ್ ಬೆಂಬಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಕಾಂಗ್ರೆಸ್ ಅಂದರೆ ಒಂದು ಕುಟುಂಬ ಇದ್ದಂತೆ. ನಮ್ಮ ಸಮಸ್ಯೆ ನಾವು ಬಗೆಹರಿಸಿಕೊಳ್ಳುತ್ತೇವೆ ಎಂದು ತಿರುಗೇಟು ನೀಡಿದರು.
ಗೆದ್ದರೆ ಕೊರಳ ಪಟ್ಟಿ ಹಿಡಿಯುವುದು ಸೋತರೆ ಕಾಲು ಹಿಡಿಯುವುದು ಬಿಜೆಪಿ ನಾಯಕರ ಗುಣ. ಇಷ್ಟು ವರ್ಷ ಸಂಸದರಾಗಿ ದಾವಣಗೆರೆಗೆ ಏನು ಮಾಡಿದ್ದಾರೆ ಹೇಳಿಲಿ. ಅವರನ್ನು ಹೈಸ್ಕೂಲ್ ಮೈದಾನದಲ್ಲಿ ಸನ್ಮಾನಿಸುವೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರ ವಿರುದ್ಧ ಕಿಡಿಕಾರಿದರು.
ಎಲ್ಲಾ ಆಯಾಮಗಳಲ್ಲೂ ತನಿಖೆ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪ್ರತಿಮಾ ಅವರ ಹತ್ಯೆಯ ಬಗ್ಗೆ ಹಲವು ಸಂಶಯಗಳು ಇದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ,
ಕೆಲವರು ಕೌಟುಂಬಿಕ ಕಾರಣ, ಇಲಾಖೆ ವಿಚಾರ, ಮತ್ತೆ ಕೆಲವರು ಇಲಾಖೆ ಕಾರು ಚಾಲಕನನ್ನು ಸೇವೆಯಿಂದ ಬಿಡುಗಡೆಗೊಳಿಸಿರುವುದು ಕಾರಣ ಎಂದು ಹೇಳಲಾಗುತ್ತಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ.
ಅಕ್ರಮ ಗಣಿಗಾರಿಕೆಯ ಬಗ್ಗೆಯೂ ಆರೋಪ ಕೇಳಿ ಬಂದಿದೆ.
ಹೀಗಾಗಿ ಈ ಸಾವಿನ ಬಗ್ಗೆ ತನಿಖೆ ಆದ ಮೇಲೆ ಸ್ಪಷ್ಟವಾಗಿ ಹೇಳಲಾಗುವುದು ಎಂದರು.
ಶನಿವಾರ ಇಲಾಖೆಯ ವಿಡಿಯೊ ಕಾನ್ಪರೆನ್ಸ್ ನಲ್ಲಿ ಅವರು ಭಾಗಿಯಾಗಿದ್ದರು. ಒಳ್ಳೆಯ ಅಧಿಕಾರಿ ಎಂದು ಹೇಳಿದರು.
ಎಲ್ಲರಿಗೂ ಪೊಲೀಸ್ ಭದ್ರತೆ ಕಲ್ಪಿಸಲು ಆಗುವುದಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.