ADVERTISEMENT

ಪ್ರೀತಿಗಾಗಿ ಕನವರಿಸುವ ಜೀವಗಳು

ಅನಿತಾ ಎಚ್.
Published 21 ಮಾರ್ಚ್ 2022, 5:20 IST
Last Updated 21 ಮಾರ್ಚ್ 2022, 5:20 IST
ದಾವಣಗೆರೆ ತಾಲ್ಲೂಕಿನ ಮೈತ್ರಿ ವೃದ್ಧಾಶ್ರಮದಲ್ಲಿ ಅಡುಗೆಯಲ್ಲಿ ತೊಡಗಿಕೊಂಡಿರುವ ಆಶ್ರಮವಾಸಿಗಳು.
ದಾವಣಗೆರೆ ತಾಲ್ಲೂಕಿನ ಮೈತ್ರಿ ವೃದ್ಧಾಶ್ರಮದಲ್ಲಿ ಅಡುಗೆಯಲ್ಲಿ ತೊಡಗಿಕೊಂಡಿರುವ ಆಶ್ರಮವಾಸಿಗಳು.   

ದಾವಣಗೆರೆ: ಸಪ್ಪೆ ಮೋರೆ, ಏನನ್ನೋ ಕಳೆದುಕೊಂಡವರಂತೆ ತದೇಕಚಿತ್ತ ನೋಟ, ಯಾರನ್ನಾದರೂ ನೋಡಿದರೆ ಸಾಕು ಕಣ್ಣಾಲಿಗಳಲ್ಲಿ ನೀರು, ಅಸಹಾಯಕತೆ, ನಿರಾಶ ಭಾವ...

ಜಿಲ್ಲೆಯ ವಿವಿಧ ವೃದ್ಧಾಶ್ರಮಗಳಲ್ಲಿರುವ ವೃದ್ಧರ ಮುಖದಲ್ಲಿನ ಭಾವಗಳಿವು. ವೃದ್ಧಾಶ್ರಮಗಳಲ್ಲಿ ನಿತ್ಯವೂ ಮೃಷ್ಟಾನ ಭೋಜನವನ್ನೇ ಉಣಬಡಿಸಿದರೂ, ಈ ವಯಸ್ಸಾದ ಜೀವಗಳು ತಮ್ಮವರ ಪ್ರೀತಿಗಾಗಿ ಕನವರಿಸುತ್ತಿವೆ. ವಯಸ್ಸಿರುವಾಗ ಮಕ್ಕಳು, ಕುಟುಂಬಕ್ಕಾಗಿ ದುಡಿದ ಜೀವಗಳು ವಯಸ್ಸಾದ ನಂತರ ಬೇರೊಬ್ಬರ ಆಶ್ರಯ ಪಡೆದು ಜೀವಿಸಬೇಕಾದ ಪರಿಸ್ಥಿತಿಯನ್ನು ಅವರ ಮೌನವೇ ಕಟ್ಟಿಕೊಡುತ್ತದೆ.

ದಿಕ್ಕುದೆಸೆ ಇಲ್ಲದವರು, ಮಕ್ಕಳು, ಸಂಬಂಧಿಗಳಿದ್ದೂ ಸರಿಯಾಗಿ ನೋಡಿಕೊಳ್ಳದಿರುವುದು, ಮಗ ಮತ್ತು ಸೊಸೆ ಇಬ್ಬರೂ ಉದ್ಯೋಗದಲ್ಲಿದ್ದು ನೋಡಿಕೊಳ್ಳಲು ಸಾಧ್ಯವಾಗದಿರುವುದು, ಸೊಸೆ ಜತೆ ಹೊಂದಾಣಿಕೆ ಮಾಡಿಕೊಳ್ಳಲಾಗದಿರುವುದು... ಹೀಗೆ ನಾನಾ ಕಾರಣಗಳಿಂದಾಗಿ ವೃದ್ಧಾಶ್ರಮ ಸೇರಿರುವ ಒಬ್ಬೊಬ್ಬರ ಕಥೆ–ವ್ಯಥೆ ಮನಸ್ಸನ್ನು ಗಾಸಿಗೊಳಿಸುತ್ತದೆ.

ADVERTISEMENT

ಜಿಲ್ಲೆಯಲ್ಲಿ ಮೂರು ಅನುದಾನಿತ ವೃದ್ಧಾಶ್ರಮಗಳು, 4–5 ಖಾಸಗಿ ವೃದ್ಧಾಶ್ರಮಗಳು ಕಾರ್ಯನಿರ್ವಹಿಸುತ್ತಿವೆ. ದಾವಣಗೆರೆ ತಾಲ್ಲೂಕಿನ ದೊಡ್ಡಬಾತಿಯಲ್ಲಿರುವ ಮೈತ್ರಿ ವೃದ್ಧಾಶ್ರಮ 1994ರಿಂದ ಕಾರ್ಯನಿರ್ವಹಿಸುತ್ತಿದೆ. ಇದು 1997ರಲ್ಲಿ ಸರ್ಕಾರದ ಅನುದಾನಕ್ಕೆ ಒಳಪಟ್ಟಿದ್ದು, ಇದುವರೆಗೆ 377 ವೃದ್ಧರಿಗೆ ಆಶ್ರಯ ನೀಡಿದೆ. ಪ್ರಸ್ತುತ 32 ಜನರಿದ್ದು, ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ತಿಂಡಿ ಮತ್ತು ಊಟ, ಔಷಧೋಪಚಾರ ನೀಡಲಾಗುತ್ತಿದೆ. ಕೆಲವರು ಅಡುಗೆ ಸಿಬ್ಬಂದಿಗೆ ತಮ್ಮ ಕೈಲಾದ ಕೆಲಸ ಮಾಡಿಕೊಡುತ್ತಾರೆ. ಭಜನೆ, ಪ್ರಾರ್ಥನೆಯಲ್ಲೂ ಅವರನ್ನು ತೊಡಗಿಸಲಾಗುತ್ತಿದೆ. ಸುಸಜ್ಜಿತವಾದ ಕೊಠಡಿ, ಮಂಚ, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯಗಳನ್ನು ಒದಗಿಸಲಾಗಿದೆ.

ವೃದ್ಧಾಶ್ರಮದಿಂದಲೇ ಅಂತ್ಯಸಂಸ್ಕಾರ: ವೃದ್ಧಾಶ್ರಮದಲ್ಲಿರುವವರು ಮೃತಪಟ್ಟರೆ ಕೆಲವರ ಮಕ್ಕಳು ಅಥವಾ ಸಂಬಂಧಿಗಳು ಬಂದು ಶವವನ್ನು ತೆಗೆದುಕೊಂಡು ಹೋಗುತ್ತಾರೆ. ಮತ್ತೆ ಕೆಲವರು ವೃದ್ಧಾಶ್ರಮಕ್ಕೇ ಬಂದು ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನೂ ಕೆಲವರು ಬರುವುದೇ ಇಲ್ಲ. ಅಂತಹ ಸಂದರ್ಭಗಳಲ್ಲಿ ವೃದ್ಧಾಶ್ರಮದ ವತಿಯಿಂದಲೇ ಅವರವರ ಜಾತಿ, ಧರ್ಮ, ಸಂಪ್ರದಾಯಕ್ಕೆ ಅನುಸಾರವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ. ಇಂತಹ 50ಕ್ಕೂ ಹೆಚ್ಚು ವೃದ್ಧರ ಅಂತ್ಯಕ್ರಿಯೆಯನ್ನು ಮೈತ್ರಿ ವೃದ್ಧಾಶ್ರಮದಲ್ಲಿ ನೆರವೇರಿಸಲಾಗಿದೆ. ವೃದ್ಧಾಶ್ರಮದ ಮೇಲ್ವಿಚಾರಕರಾಗಿರುವ ವೀರಪ್ಪ ಪಂಚಪ್ಪ ಮಹಾದೇವಪ್ಪನವರ್‌ ಅವರು ತಮ್ಮ 20 ವರ್ಷಗಳ ಸೇವಾವಧಿಯಲ್ಲಿ 16 ಜನರ ಅಂತ್ಯಸಂಸ್ಕಾರವನ್ನು ಮಗನ ಸ್ಥಾನದಲ್ಲಿ ನಿಂತು ನೆರವೇರಿಸಿದ್ದಾರೆ.

ದಾನಿಗಳ ನೆರವು: ಕೆಲ ಸಾರ್ವಜನಿಕರು ಹುಟ್ಟುಹಬ್ಬ ಆಚರಣೆ ಇತರೆ ಕಾರ್ಯಕ್ರಮಗಳಿಗೆ ದುಂದುವೆಚ್ಚ ಮಾಡುವ ಬದಲು ವೃದ್ಧಾಶ್ರಮಗಳಿಗೆ ಬಂದು ದಾನ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಸ್ವೆಟರ್‌, ಟೋಪಿ ಸ್ಕಾರ್ಫ್‌, ಕುಡಿಯುವ ನೀರಿನ ಬಾಟಲಿಗಳು, ಬೆಡ್‌ಶೀಟ್‌, ಕುರ್ಚಿ ಇತ್ಯಾದಿ ವಸ್ತುಗಳನ್ನು ದಾನವಾಗಿ ನೀಡಿದ್ದಾರೆ.

ಮಕ್ಕಳಿಗೂ ಆಶ್ರಯ: ‘ಸರ್ಕಾರ, ಅನುದಾನಿತ ಸೇರಿ ಹೆಣ್ಣುಮಕ್ಕಳು, ಗಂಡುಮಕ್ಕಳ ಪ್ರತ್ಯೇಕ ಒಟ್ಟು 19 ಅನಾಥಾಶ್ರಮಗಳಲ್ಲಿ 159 ಮಕ್ಕಳು ಆಶ್ರಯ ಪಡೆದುಕೊಂಡಿದ್ದಾರೆ. ಅನಾಥರು, ಒಬ್ಬಂಟಿ ಪೋಷಕರು, ಕಡುಬಡತನವಿರುವವರ ಮಕ್ಕಳು ಮತ್ತು ಕಾನೂನಿನ ಸಂಘರ್ಷಕ್ಕೆ ಒಳಪಟ್ಟ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರುಪಡಿಸಿ ವಸತಿ ಕಲ್ಪಿಸಲಾಗುತ್ತದೆ. ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತದೆ. ಊಟ, ಬಟ್ಟೆ, ಆಟ–ಪಾಠವನ್ನು ನಿಯಮಾನುಸಾರ ನೀಡುತ್ತೇವೆ. ಪೋಕ್ಸೊ ಅಥವಾ ಬಾಲ್ಯವಿವಾಹ ಪ್ರಕರಣಗಳಡಿ ಬಾಲಕಿಯರ ಮಂದಿರಕ್ಕೆ ಬರುವ ಹೆಣ್ಣುಮಕ್ಕಳನ್ನು ಹೊರಗೆ ಕಳುಹಿಸಲಾಗದ ಕಾರಣ ಹೊಲಿಗೆ, ಕಸೂತಿ, ಕಂಪ್ಯೂಟರ್‌ ಇತರೆ ಜೀವನ ಕೌಶಲ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಬಿ.ಎಸ್‌. ಪ್ರಕಾಶ್‌.

‘ವನಿತಾ ಸಮಾಜದ ‘ಪ್ರೇಮಾಲಯ’ ಅನಾಥಾಶ್ರಮ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ಅನುದಾನ ಪಡೆಯಲು ಸಂಸ್ಥೆಯ ಮರು ನೋಂದಣಿ ಕಡ್ಡಾಯವಾಗಿದ್ದು, ಕಾರಣಾಂತರಗಳಿಂದ ಮರು ನೋಂದಣಿ ವಿಳಂಬವಾಗುತ್ತಿದೆ. ಆದಕಾರಣ ಎರಡು ವರ್ಷಗಳಿಂದ ಅನುದಾನ ಬಿಡುಗಡೆಯಾಗಿಲ್ಲ. ಸಮಾಜದ ವತಿಯಿಂದಲೇ ಸಂಸ್ಥೆ ಮುನ್ನಡೆಸುತ್ತಿದ್ದೇವೆ’ ಎನ್ನುತ್ತಾರೆ ‘ಪ್ರೇಮಾಲಯ’ದ ವೀಕ್ಷಕಿ ಮಂಗಳಾ.

* ಜಿಲ್ಲೆಯಲ್ಲಿರುವ ವೃದ್ಧಾಶ್ರಮಗಳಿಗೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸುತ್ತೇವೆ. ಮೂರೂ ವೃದ್ಧಾಶ್ರಮಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿರುವವರ ಸಂಖ್ಯೆಗೆ ಅನುಗುಣವಾಗಿ ಕೇಂದ್ರದಿಂದಲೇ ಅನುದಾನ ಬಿಡುಗಡೆಯಾಗುತ್ತದೆ.

-ಡಾ.ಕೆ.ಕೆ. ಪ್ರಕಾಶ್‌, ಜಿಲ್ಲಾ ಅಧಿಕಾರಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

* ವೃದ್ಧಾಶ್ರಮ ಭಾವನಾತ್ಮಕವಾಗಿ ಬೇಡವೆನಿಸಿದರೂ, ವಾಸ್ತವಿಕವಾಗಿ ಅತ್ಯಗತ್ಯ. ಮನುಷ್ಯನ ಜೀವಿತಾವಧಿ ಹೆಚ್ಚಾಗಿರುವ ಕಾರಣ ವೃದ್ಧರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಮಗ, ಸೊಸೆ ಇಬ್ಬರೂ ಉದ್ಯೋಗದಲ್ಲಿರುವ ಅಥವಾ ನಿರ್ಲಕ್ಷ್ಯದ ಕಾರಣ ಇಲ್ಲಿಗೆ ಬರುವುದು ಅನಿವಾರ್ಯವಾಗುತ್ತದೆ. 20 ವರ್ಷಗಳಿಂದ ವರ್ಷಕ್ಕೆ ₹ 1.76 ಲಕ್ಷ ಮಾತ್ರ ರಾಜ್ಯ ಸರ್ಕಾರದಿಂದ ಅನುದಾನ ಸಿಗುತ್ತಿತ್ತು. ಎರಡು ವರ್ಷಗಳಿಂದ ಪ್ರಧಾನಮಂತ್ರಿ ಘಟಕವು ವೃದ್ಧಾಶ್ರಮಗಳ ನಿರ್ವಹಣೆ ಮಾಡುತ್ತಿದ್ದು, ₹ 9 ಲಕ್ಷ ಅನುದಾನ ಸಿಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ವಿಶ್ವಾಸವಿದೆ.

–ಡಾ.ಶಂಕರ ಪಾಟೀಲ ಬಿ.ಜಿ.,ಕಾರ್ಯದರ್ಶಿ, ಮೈತ್ರಿ ವೃದ್ಧಾಶ್ರಮ, ದೊಡ್ಡಬಾತಿ, ದಾವಣಗೆರೆ ತಾಲ್ಲೂಕು.

* ನಮ್ಮ ವೃದ್ಧಾಶ್ರಮದಲ್ಲಿ 30 ವೃದ್ಧರಿದ್ದು, 24 ಮಂದಿ ಮಹಿಳೆಯರಿದ್ದಾರೆ. ಬಹುತೇಕರು ಅನಾಥರು. ವೃದ್ಧಾಶ್ರಮವನ್ನು ಸರ್ಕಾರದ ಅನುದಾನಕ್ಕೆ ಒಳಪಡಿಸುವಂತೆ ಐದು ವರ್ಷಗಳಿಂದ ಪ್ರಯತ್ನ ನಡೆಸುತ್ತಿದ್ದರೂ, ಅಧಿಕಾರಿಗಳು ಹಲವು ನೆಪವೊಡ್ಡಿ ತಳ್ಳಿ ಹಾಕುತ್ತಿದ್ದಾರೆ. ಆಶ್ರಮ ಗ್ರಾಮದಿಂದ ಒಂದು ಕಿ.ಮೀ. ದೂರವಿದ್ದು, ಮಣ್ಣಿನ ರಸ್ತೆ ಸಂಪೂರ್ಣ ಹಾಳಾಗಿದೆ. ಡಾಂಬರ್‌ ಅಥವಾ ಸಿಮೆಂಟ್‌ ರಸ್ತೆ ಮಾಡಿಸಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಮನ್ನಣೆ ನೀಡಿಲ್ಲ.

–ಜಿ. ಬೆನಕಪ್ಪ,ಅಧ್ಯಕ್ಷ, ಸಿದ್ಧಾರೂಢ ವೃದ್ಧಾಶ್ರಮ, ಬಸವಾಪಟ್ಟಣ

ಅನುದಾನದ ಮೊತ್ತ ಹೆಚ್ಚಿಸಬೇಕಿದೆ

ಇನಾಯತ್‌ ಉಲ್ಲಾ ಟಿ.

ಹರಿಹರ: ನಗರದ ಗುತ್ತೂರು ಕಾಲೊನಿಯಲ್ಲಿ ಶ್ರೀ ಶಕ್ತಿ ಅಸೋಸಿಯೇಷನ್ ನಡೆಸುತ್ತಿರುವ ಶ್ರೀ ಶಕ್ತಿ ಹಿರಿಯ ನಾಗರಿಕರ ವಸತಿನಿಲಯ ಮತ್ತು ಅಮರಾವತಿಯಲ್ಲಿ ಕ್ರೈಸ್ತ ಸಮುದಾಯದವರು ನಡೆಸುತ್ತಿರುವ ‘ಸುಧಾಮ’ ವೃದ್ಧಾಶ್ರಮ ಹಾಗೂ ಅನಾಥಾಲಯವಿದೆ.

ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ 27 ಮಹಿಳೆಯರು, 23 ಪುರುಷರು, ಮೂವರು ಬಾಲಕಿಯರು ಆಶ್ರಯ ಪಡೆದಿದ್ದಾರೆ. ಸುಧಾಮದಲ್ಲಿ 27 ಜನ ಮಹಿಳೆಯರಿದ್ದಾರೆ. ಶ್ರೀ ಶಕ್ತಿ ವೃದ್ಧಾಶ್ರಮ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ. ‘ಸುಧಾಮ’ ಖಾಸಗಿ ವೃದ್ಧಾಶ್ರಮವಾಗಿದ್ದು, ಬೀದಿ ಪಾಲಾದವರು, ಅಂಗವಿಕಲರಿಗೂ ಆಶ್ರಯ ನೀಡಿದೆ.

‘ನಾನು ದಾವಣಗೆರೆಯ ಜಯದೇವ ವೃತ್ತದಲ್ಲಿ ಸ್ವೀಟ್ ಅಂಗಡಿ ನಡೆಸುತ್ತಿದ್ದೆ. ಹತ್ತಾರು ಜನ ಕಾರ್ಮಿಕರಿಗೆ ಆಶ್ರಯ ನೀಡಿದ್ದೆ. ನನ್ನ ಪುತ್ರ ಮಾಡಿದ ಮೋಸದಿಂದ ಬೀದಿ ಪಾಲಾಗಿದ್ದೇನೆ’ ಎಂದು ಶಕ್ತಿ ವೃದ್ಧಾಶ್ರಮದ ವಾಸುದೇವ ಶ್ರೇಷ್ಠಿ ಅವರು ನೋವು ತೋಡಿಕೊಂಡರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೃದ್ಧಾಶ್ರಮಗಳ ಅನುದಾನದ ಮೊತ್ತ ಹೆಚ್ಚಿಸುವ ಭರವಸೆ ನೀಡಿದ್ದರು. ಆದರೆ, ಬಜೆಟ್‌ನಲ್ಲಿ ಘೋಷಣೆ ಮಾಡಿಲ್ಲ. ಈಗಿನ ಖರ್ಚು, ವೆಚ್ಚಗಳಿಗೆ ಹೋಲಿಸಿದರೆ ಒಬ್ಬರಿಗೆ ಒಂದು ದಿನಕ್ಕೆ ಕನಿಷ್ಠ ₹ 100 ಅಗತ್ಯವಿದೆ’ ಎನ್ನುತ್ತಾರೆ ಶ್ರೀ ಶಕ್ತಿ ಅಸೋಸಿಯೇಷನ್ ಮುಖ್ಯಸ್ಥ ಡಾ.ಶಶಿಕುಮಾರ್.

ನೋವು ಮರೆಸುವ ಸಿಬ್ಬಂದಿ ಪ್ರೀತಿ

ಮಂಜುನಾಥ ಎಸ್‌.ಎಂ.

ಮಾಯಕೊಂಡ: ಇಲ್ಲಿ 1998ರಲ್ಲಿ ಪ್ರಾರಂಭವಾದ ವಿವೇಕಾನಂದ ವೃದ್ಧಾಶ್ರಮದಲ್ಲಿ 26 ಮಂದಿ ಇದ್ದಾರೆ. ವೃದ್ಧಾಶ್ರಮವು 2003ರಿಂದ ಸರ್ಕಾರದ ಅನುದಾನಕ್ಕೆ ಒಳಪಟ್ಟಿದೆ.

ಆಶ್ರಮವು ಹಚ್ಚಹಸಿರಿನ ಪರಿಸರ ಹೊಂದಿದ್ದು, ಬೇಸರ ಕಳೆಯಲು ಆಟಿಕೆಗಳು, ಓದಲು ಪುಸ್ತಕ, ದಿನಪತ್ರಿಕೆ, ಸಮಯಕ್ಕೆ ಸರಿಯಾಗಿ ಊಟ, ತಿಂಡಿ, ವೈದ್ಯರು ಆರೋಗ್ಯ ತಪಾಸಣೆ ನಡೆಸುತ್ತಾರೆ. ಐವತ್ತಕ್ಕೂ ಹೆಚ್ಚು ಜನರ ಅಂತ್ಯಕ್ರಿಯೆಯನ್ನೂ ಇಲ್ಲಿಯವರೇ ನೆರವೇರಿಸಿ, ಮುಕ್ತಿ ನೀಡಿದ್ದಾರೆ.

‘ಆಶ್ರಮದಲ್ಲಿ ಊಟೋಪಚಾರದ ಜೊತೆ ಕಾರ್ಯದರ್ಶಿ ಮತ್ತು ಸಿಬ್ಬಂದಿ ತೋರುವ ಪ್ರೀತಿಯಿಂದ ನಮ್ಮ ನೋವು ಮರೆತು ಜೀವಿಸುತ್ತಿದ್ದೇವೆ‘ ಎನ್ನುತ್ತಾರೆ ವೃದ್ಧರಾದ ಕರಿಬಸಮ್ಮ, ಹನುಮಂತಪ್ಪ.

‘ವೃದ್ಧರ ಚಿಕಿತ್ಸೆಗೆ ದಾವಣಗೆರೆ ಜಿಲ್ಲೆಯಲ್ಲಿ ಸುಸಜ್ಜಿತವಾದ ಜಿರಾಟಿಕ್ ಸೆಂಟರ್ ಅಗತ್ಯವಿದೆ. ವೃದ್ಧಾಶ್ರಮಕ್ಕೆ ತುರ್ತು ಸೇವೆಗೆ ಒಂದು ಆಂಬುಲೆನ್ಸ್ ಅಗತ್ಯವಿದೆ’ ಎನ್ನುತ್ತಾರೆ ವಿವೇಕಾನಂದ ವೃದ್ಧಾಶ್ರಮದ ಕಾರ್ಯದರ್ಶಿ ಕೆ.ಪಿ. ಮರಿಯಾಚಾರ್.

ನೆರವಿನ ನಿರೀಕ್ಷೆಯಲ್ಲಿ ಅಂಗವಿಕಲರ ಸಂಸ್ಥೆಗಳು

ಎನ್‌.ಕೆ. ಆಂಜನೇಯ

ಹೊನ್ನಾಳಿ: ನಗರದಲ್ಲಿ ಅರುಣೋದಯ ಶಿಕ್ಷಣ ಸಂಸ್ಥೆಯಡಿ ಶ್ರೀ ಮಂಜುನಾಥೇಶ್ವರ ವಿಶೇಷ ಮಕ್ಕಳ ವಸತಿಶಾಲೆ ಇದೆ. ಇಲ್ಲಿ 6ರಿಂದ 30 ವರ್ಷದೊಳಗಿನ ಒಟ್ಟು 28 ಮಂದಿ ಇದ್ದು ಶಾಲೆಯಲ್ಲಿ ತರಬೇತಿ ಮತ್ತು ಶಿಕ್ಷಣ ಪಡೆಯುತ್ತಿದ್ದಾರೆ.

ಸಂಸ್ಥೆಗೆ ದಾನಿಗಳ ಸಹಕಾರವಿದೆ. ಆರೋಗ್ಯ ಇಲಾಖೆಯವರು ಎರಡು, ಮೂರು ತಿಂಗಳಿಗೊಮ್ಮೆ ಅಕ್ಕಿ, ಗೋಧಿ ನೀಡುತ್ತಾರೆ. ಬಾಡಿಗೆ ಕಟ್ಟಡದಲ್ಲಿ ಸಂಸ್ಥೆ ನಡೆಸುತ್ತಿದ್ದು, ಪ್ರತಿ ತಿಂಗಳು ಬಾಡಿಗೆ ಕಟ್ಟುವುದು ಕಷ್ಟವಾಗುತ್ತಿದೆ. ಸರ್ಕಾರ ನೆರವು ನೀಡಬೇಕು ಎಂದು ಮನವಿ ಮಾಡುತ್ತಾರೆ ಸಂಸ್ಥೆಯ ಮುಖ್ಯಸ್ಥ ಮಂಜುನಾಥ್ ಕಬ್ಬಕ್ಕಿ ಮತ್ತು ಅವರ ಪತ್ನಿ ಜಯಮ್ಮ ಕಬ್ಬಕ್ಕಿ.

ಸಂತೃಪ್ತಿ ಅಂಧರ ಸೇವಾ ಸಂಸ್ಥೆಯಲ್ಲಿ 18ರಿಂದ 26 ವರ್ಷದೊಳಗಿನ ಸುಮಾರು 25 ಜನ ಇದ್ದಾರೆ. ಇವರ ಪೈಕಿ ನಾಲ್ಕೈದು ಜನ ಮಾತ್ರ ಶಾಲೆಗೆ ಹೋಗುತ್ತಾರೆ.

ಸಂಸ್ಥೆಗೆ ದಾನಿಗಳ ಸಹಕಾರವಿದೆ. ಸರ್ಕಾರದಿಂದ ಕನಿಷ್ಠ 60X100 ಅಡಿಯ ನಿವೇಶನ ನೀಡಿ, ಕಟ್ಟಡ ಕಟ್ಟಲು ಹಣಕಾಸಿನ ನೆರವು ನೀಡಬೇಕು. ಅಂಧರು ಕಂಪ್ಯೂಟರ್ ಕಲಿಯುವ ಮಹದಾಸೆ ಹೊಂದಿದ್ದು, ನೆರವು ಸಿಕ್ಕರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಅಣ್ಣಪ್ಪ.

ಸಂಪರ್ಕ ಸಂಖ್ಯೆ: 9916075752

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.