ADVERTISEMENT

ವಿಜಯೋತ್ಸವ ಆಚರಣೆಗೆ ಬರುವೆ: ಬಿಎಸ್‌ವೈ

ದಾವಣಗೆರೆ– ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಸಹಕಾರಿಗಳ ಸಮ್ಮಿಲನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2024, 16:30 IST
Last Updated 15 ಏಪ್ರಿಲ್ 2024, 16:30 IST
ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ ಸಹಕಾರಿಗಳ ಸಮ್ಮಿಲನ ಕಾರ್ಯಕ್ರಮವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು
–ಪ್ರಜಾವಾಣಿ ಚಿತ್ರ
ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಆಯೋಜಿಸಿದ್ದ ದಾವಣಗೆರೆ ಜಿಲ್ಲಾ ಸಹಕಾರಿಗಳ ಸಮ್ಮಿಲನ ಕಾರ್ಯಕ್ರಮವನ್ನು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ದೀಪ ಬೆಳಗಿಸಿ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ, ನಿಮ್ಮೊಂದಿಗೆ ವಿಜಯೋತ್ಸವ ಆಚರಿಸಲು ಬರುತ್ತೇನೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಇಲ್ಲಿನ ವಿನೋಬನಗರದಲ್ಲಿರುವ ದಾವಣಗೆರೆ– ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ನಡೆದ ಜಿಲ್ಲಾ ಸಹಕಾರಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಆರಂಭಿಸಿದೆ. ಸಹಕಾರಿ ಬ್ಯಾಂಕ್‌ಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮನಾಗಿ ಬೆಳೆದಿವೆ. ಸಹಕಾರಿ ಕ್ಷೇತ್ರಗಳಿಂದ ರೈತರಿಗೆ ಅನುಕೂಲವಾಗುವಂತಹ ನೆರವು ಸಿಗಲಿ’ ಎಂದರು.

ADVERTISEMENT

‘ಮೋದಿ, ದೇವೇಗೌಡರು ಒಗ್ಗಟ್ಟು ಪ್ರದರ್ಶಿಸಿದಂತೆ ಜೆಡಿಎಸ್‌– ಬಿಜೆಪಿ ಕಾರ್ಯಕರ್ತರು ಒಗ್ಗೂಡಿ ಕೆಲಸ ಮಾಡಬೇಕು’ ಎಂದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ನವರ ಹಾವಳಿ ಹೆಚ್ಚಾಗಿದೆ. ಹಣದ ಆಮಿಷದಿಂದ ಬಿಜೆಪಿಯ ಪಾಲಿಕೆ ಸದಸ್ಯರನ್ನು ಸೆಳೆಯುತ್ತಿದ್ದಾರೆ. ಪಕ್ಷದವರನ್ನೇ ಟಾರ್ಗೆಟ್‌ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ, ನಗರಸಭೆ, ಪಾಲಿಕೆ ಸದಸ್ಯರನ್ನು ಗುರಿಯಾಗಿಸಿಕೊಂಡಿದ್ದಾರೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ದೂರಿದರು.

‘ಅನಾರೋಗ್ಯದಿಂದ 2004ರಲ್ಲೇ ಸಾಯುತ್ತಾನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರು. ‘ಹೊರಗಿನವನು’ ಎಂಬುದು ಸೇರಿದಂತೆ ಹಲವು ವಿಷಯಗಳಲ್ಲಿ ಷಡ್ಯಂತ್ರ ಮಾಡಿದರು’ ಎಂದರು.

ದಾವಣಗೆರೆ– ಹರಿಹರ ಅರ್ಬನ್ ಬ್ಯಾಂಕ್‌ನ ಅಧ್ಯಕ್ಷ ಎನ್‌.ಎ.ಮುರುಗೇಶ್‌ ಮಾತನಾಡಿ, ಸಹಕಾರಿ ಕ್ಷೇತ್ರವು ರಾಜಕೀಯ ಕ್ಷೇತ್ರದ ಗರಡಿ ಮನೆ ಇದ್ದಂತೆ. ಸಹಕಾರಿ ಕ್ಷೇತ್ರಕ್ಕೆ ಬಿ.ಎಸ್‌.ಯಡಿಯೂರಪ್ಪ, ನರೇಂದ್ರ ಮೋದಿ, ಅಮಿತ್‌ ಶಾ ಕೊಡುಗೆ ಅಪಾರ’ ಎಂದರು.

ಮಾಜಿ ಸಚಿವ ಮುರುಗೇಶ್ ನಿರಾಣಿ, ಮುಖಂಡರಾದ ಓಂಕಾರಪ್ಪ, ಯಶವಂತರಾವ ಜಾಧವ್, ಶ್ರೀನಿವಾಸ ದಾಸ ಕರಿಯಪ್ಪ, ನಂಜನಗೌಡ, ದೇವರಮನೆ ಶಿವಕುಮಾರ್, ಲೋಕಿಕೆರೆ ನಾಗರಾಜ್, ರುದ್ರೇಗೌಡ, ಬಿ.ಜಿ.ಅಜಯಕುಮಾರ್, ಎಚ್‌.ಎಸ್‌.ಶಿವಶಂಕರ್, ರಾಜನಹಳ್ಳಿ ಶಿವಕುಮಾರ್, ಎಚ್‌.ಎಂ.ನಾಗರಾಜ, ಸತೀಶ ಕೊಳೇನಹಳ್ಳಿ, ಬಿ.ಶೇಖರಪ್ಪ, ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.