ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಆಯ್ಕೆಯಾಗಿದ್ದು, ನೂತನ ಸಂಸದರಿಂದ ಕ್ಷೇತ್ರದ ಜನತೆ ಹಲವು ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ.
ದಂತ ವೈದ್ಯೆಯಾಗಿರುವ ನೂತನ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರು ವಿಶೇಷವಾಗಿ ಮಹಿಳೆಯರ ಆರ್ಥಿಕ ಪ್ರಗತಿಗೆ ಪೂರಕವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುದು ಮಹಿಳೆಯರ ಆಶಯವಾಗಿದೆ.
ದಾವಣಗೆರೆ ಜಿಲ್ಲೆ ಈಗಾಗಲೇ ಶೈಕ್ಷಣಿಕ ವಲಯದಲ್ಲಿ ಛಾಪು ಮೂಡಿಸಿದ್ದು, ಕೈಗಾರಿಕೆಗಳ ಸ್ಥಾಪನೆ ಆಗಬೇಕಿದೆ. ಅದರಲ್ಲೂ ಕೃಷಿ ಆಧಾರಿತ ಕೈಗಾರಿಕೆಗಳನ್ನು ಜಿಲ್ಲೆಗೆ ತರಬೇಕು. ಅಲ್ಲದೇ ಕೈಗಾರಿಕಾ ಕಾರಿಡಾರ್ ಆಗಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟು ಪರಿಣತಿ ಹೊಂದಿರುವ ಡಾ.ಪ್ರಭಾ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ತರುವಲ್ಲಿ ಒತ್ತು ನೀಡಬೇಕು ಎಂಬ ಆಗ್ರಹವೂ ಕೇಳಿಬಂದಿದೆ.
ಜಗಳೂರು ಭಾಗದಲ್ಲಿ ಸಾಕಷ್ಟು ಮಹಿಳೆಯರು ಗಾರ್ಮೆಂಟ್‌ಗಳಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಹೋಗುತ್ತಾರೆ. ಈ ನಿಟ್ಟಿನಲ್ಲಿ ಜಗಳೂರಿನಲ್ಲಿ ಗಾರ್ಮೆಂಟ್ ಫ್ಯಾಕ್ಟರಿ, ದಾವಣಗೆರೆಯಲ್ಲಿ ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ಸ್ಥಾಪಿಸಬೇಕು. ಮಹಿಳೆಯರು ಸ್ವಾವಲಂಬೀ ಜೀವನ ನಡೆಸಲು ಅನುಕೂಲವಾಗುವಂತೆ ಗಾರ್ಮೆಂಟ್ಸ್ ಮತ್ತು ಕರಕುಶಲ ಕೇಂದ್ರಗಳನ್ನು ಆರಂಭಿಸಬೇಕಿದೆ ಎಂಬ ನಿರೀಕ್ಷೆ ಮಹಿಳೆಯರದ್ದಾಗಿದೆ.
ಬೇಕು ಸರ್ಕಾರಿ ವೈದ್ಯಕೀಯ ಕಾಲೇಜು: ‘ವಿದ್ಯಾವಂತ ಮಹಿಳೆಯೊಬ್ಬರು ಸಂಸತ್‌ಗೆ ಆಯ್ಕೆಯಾಗಿರುವುದರಿಂದ ನಿರೀಕ್ಷೆಗಳು ಸಹಜವಾಗಿಯೇ ಹೆಚ್ಚಾಗಿವೆ. ಸರ್ಕಾರಿ ವೈದ್ಯಕೀಯ ಕಾಲೇಜು ಬೇಕೆಂಬುದು ಬಹಳ ದಿನಗಳ ಬೇಡಿಕೆ. ನೂತನ ಸಂಸದೆ ವೈದ್ಯರಾಗಿರುವುದರಿಂದ ಅದಕ್ಕೆ ಒತ್ತು ನೀಡುತ್ತಾರೆ ಎಂಬ ನಂಬಿಕೆ ಇದೆ’ ಎಂದು ರೈತಮುಖಂಡ ತೇಜಸ್ವಿ ಪಟೇಲ್ ತಿಳಿಸಿದರು.
‘ಚುನಾವಣೆಯಲ್ಲಿ ಅವರ ಪ್ರಚಾರದ ವೈಖರಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನಗಳನ್ನು ತರುವಲ್ಲಿ ಹೆಚ್ಚು ಒತ್ತಡ ಹಾಕಬೇಕು. ಪಕ್ಷದ ಕಾರಣದಿಂದ ಅದು ಸಾಧ್ಯವಾಗದಿರಬಹುದು. ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಈ ಚೌಕಟ್ಟನ್ನು ದಾಟಬೇಕು’ ಎಂದು ಅವರು ಸಲಹೆ ನೀಡಿದರು.
ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು, ಜಗಳೂರು ತಾಲ್ಲೂಕಿನ 22 ಕೆರೆ ತುಂಬಿಸುವ ಯೋಜನೆ, ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗಳಿಗೆ ಚಾಲನೆ ದೊರೆಯುವಂತೆ ಆಗಲು ಪ್ರಯತ್ನಿಸಬೇಕು. ಗ್ರಾಮೀಣ ಭಾಗದಿಂದ ಬಂದಿರುವ ಡಾ.ಪ್ರಭಾ ಅವರಿಗೆ ಹಳ್ಳಿಗಳ ವಿದ್ಯಾರ್ಥಿನಿಯರ ಕಷ್ಟ ತಿಳಿದಿದೆ. ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗದಂತೆ ಕಾರ್ಯಕ್ರಮ ರೂಪಿಸಬೇಕು. ಶಿಕ್ಷಣಕ್ಕೆ ಅವರದೇ ಆದ ಹೊಸ ವಿಚಾರಗಳನ್ನು ತರುತ್ತಾರೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕೈಗಾರಿಕಾ ಕಾರಿಡಾರ್ ಆಗಲಿ: ‘ಜಿಲ್ಲೆಯು ಶೈಕ್ಷಣಿಕ ಹಬ್ ಆಗಿರುವಂತೆ ಕೈಗಾರಿಕಾ ಕಾರಿಡಾರ್ ನಿರ್ಮಾಣವಾಗಬೇಕು. ವಿದ್ಯುತ್ ದರ ದುಬಾರಿಯಾಗಿದ್ದು, ಸ್ವಲ್ಪ ರಿಯಾಯಿತಿ ನೀಡಬೇಕು. ಭೂಮಿ ನೋಂದಣಿ ವೆಚ್ಚ ಕಡಿಮೆ ಮಾಡಿದರೆ ಕೈಗಾರಿಕೆಗಳನ್ನು ಸ್ಥಾಪಿಸಲು ಉದ್ಯಮಿಗಳು ಮುಂದೆ ಬರುತ್ತಾರೆ. ರಾಜ್ಯದ ಮಧ್ಯಭಾಗದಲ್ಲಿರುವ ದಾವಣಗೆರೆಗೆ ವಿಮಾನ ನಿಲ್ದಾಣ ಆಗಬೇಕು’ ಎಂದು ಜಿಲ್ಲಾ ವಾಣಿಜೋದ್ಯಮಗಳ ಸಂಸ್ಥೆಯ ಕಾರ್ಯದರ್ಶಿ ಅಜ್ಜಂಪುರ ಶೆಟ್ರ ಶಂಭುಲಿಂಗಪ್ಪ ಒತ್ತಾಯಿಸಿದರು.
‘ಜಿಲ್ಲೆಯ ನಿರುದ್ಯೋಗಿಗಳಿಗೆ ಸ್ಟಾರ್ಟ್ ಆ್ಯಪ್ ಆರಂಭಕ್ಕೆ ಹಣಕಾಸಿನ ನೆರವು ನೀಡುವಂತಾಗಬೇಕು. ಅಲ್ಲದೇ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೌಶಲ ಅಭಿವೃದ್ಧಿ ಕೇಂದ್ರ ಅಷ್ಟೊಂದು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ನಿಟ್ಟಿನಲ್ಲಿ ಅದರ ಪುನಶ್ಚೇತನಕ್ಕೆ ಕ್ರಮ ಆಗಬೇಕು’ ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಮೆಕ್ಕೆಜೋಳ ಪ್ರಮುಖ ಬೆಳೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕೈಗಾರಿಕೆಗಳನ್ನು ಜಿಲ್ಲೆಗೆ ತರಬೇಕು. ದಾವಣಗೆರೆಯು ಹಿಂದೆ ‘ಕರ್ನಾಟಕದ ಮ್ಯಾಂಚೆಸ್ಟರ್’ ಎಂದೇ ಹೆಸರಾಗಿತ್ತು. ಅದರಂತೆ ಜವಳಿ ಆಧರಿತ ಉದ್ಯಮ, ಐಟಿ–ಬಿಟಿ ಪಾರ್ಕ್ ಆರಂಭವಾಗಬೇಕು’ ಎಂದು ಅವರು ಆಶಯ ವ್ಯಕ್ತಪಡಿಸಿದರು.
ಮಹಿಳಾ ಸ್ವಾವಲಂಬನೆ ಯೋಜನೆ ರೂಪಿಸಲಿ
‘ಮೊದಲ ಬಾರಿಗೆ ಮಹಿಳೆಯೊಬ್ಬರು ಸಂಸದೆಯಾಗಿದ್ದು ಸಂತಸ ತಂದಿದೆ. ದಾವಣಗೆರೆ ಭಾಗದಲ್ಲಿ ಮಹಿಳಾ ಶಕ್ತಿಗೆ ಜನ ಮಹತ್ವ ನೀಡಿದ್ದಾರೆ. ಮಹಿಳೆಯರಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುವಂತೆ ಸಂಸದರ ಪ್ರಯತ್ನವಿರಬೇಕು. ಶಿಕ್ಷಣ ಆರೋಗ್ಯಕ್ಕೆ ಸಂಬಂಧಪಟ್ಟ ಯೋಜನೆಗಳು ಜಿಲ್ಲೆಯ ಮಹಿಳೆಯರಿಗೆ ತರುವ ನಿಟ್ಟಿನಲ್ಲಿ ಅವರು ಕೆಲಸ ಮಾಡಬೇಕು’ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಎಂ.ಬಿ.ಎ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಸುನೀತಾ ಆರ್. ಸಲಹೆ ನೀಡಿದರು. ‘ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿ ಮಹಿಳೆಯರ ಕಷ್ಟ–ಸುಖ ಆಲಿಸಿರುವ ಅವರು ಮಹಿಳೆಗೆ ಸಮಾನ ಕೂಲಿ ದೊರಕಿಸಿಕೊಡಲು ಸದನದಲ್ಲಿ ಧ್ವನಿ ಎತ್ತಬೇಕು’ ಎಂದು ಅವರು ಹೇಳಿದರು. ‘ಮಹಿಳೆಯರು ಉದ್ಯಮ ಆರಂಭಿಸಲು ಅನುಕೂಲ ಮಾಡಿಕೊಡುವ ಮೂಲಕ ಅವರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡಬೇಕು’ ಎಂದು ದಾವಣಗೆರೆ ವಿವಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸುಪ್ರಿಯಾ ಆರ್. ಅಭಿಪ್ರಾಯ ವ್ಯಕ್ತಪಡಿಸಿದರು.
ನೂತನ ಸಂಸದರು ಆರೋಗ್ಯ ಕ್ಷೇತ್ರಕ್ಕೆ ಒತ್ತು ನೀಡಬೇಕು. ಆರೋಗ್ಯ ಯೋಜನೆಗಳು ಬಡವರಿಗೆ ಸುಲಭವಾಗಿ ತಲುಪುವಂತೆ ಮಾಡಬೇಕು.–ಪ್ರೊ.ಸುಚಿತ್ರಾ, ಅರ್ಥಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ, ದಾವಣಗೆರೆ ವಿಶ್ವವಿದ್ಯಾಲಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.