ದಾವಣಗೆರೆ: ಜಿಲ್ಲಾ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಸಹಾಯಕ ನಿರ್ದೇಶಕ ಕಮಲ್‌ರಾಜ್ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ. 3 ಮನೆ ಹಾಗೂ 3 ನಿವೇಶನ ಹೊಂದಿರುವುದು ಪರಿಶೀಲನೆಯಿಂದ ಗೊತ್ತಾಗಿದೆ.
ಅಕ್ರಮ ಆಸ್ತಿ ಸಂಪಾದನೆಯ ದೂರಿನ ಆಧಾರದ ಮೇರೆಗೆ ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್.ಕೌಲಾಪುರೆ ನೇತೃತ್ವದಲ್ಲಿ ಚಿತ್ರದುರ್ಗ ಹಾಗೂ ದಾವಣಗೆರೆಯ ಮನೆಗಳ ಮೇಲೆ ಮಂಗಳವಾರ ಬೆಳಿಗ್ಗೆ ದಾಳಿ ನಡೆಸಲಾಯಿತು. ಬಳಿಕ ಕಚೇರಿಯಲ್ಲಿಯೂ ಪರಿಶೀಲನೆ ನಡೆಸಲಾಯಿತು.
ದಾವಣಗೆರೆಯ ಶಕ್ತಿನಗರದ 3ನೇ ಕ್ರಾಸ್‌ನಲ್ಲಿರುವ ಮನೆಯಲ್ಲಿ ₹ 1 ಲಕ್ಷ ನಗದು, 100 ಗ್ರಾಂ ಚಿನ್ನಾಭರಣ ಪತ್ತೆಯಾಗಿವೆ. ಚಿತ್ರದುರ್ಗದಲ್ಲಿ 2 ಮನೆ, 3 ನಿವೇಶನ ಹಾಗೂ ದಾವಣಗೆರೆಯಲ್ಲಿ 1 ಮನೆ ಹೊಂದಿರುವುದು ಪರಿಶೀಲನೆಯ ವೇಳೆ ಗೊತ್ತಾಗಿದೆ. ಒಂದು ಇನ್ನೋವಾ ಕಾರು, ಬುಲೆಟ್ ಬೈಕ್ ಸೇರಿ ಇತರ ಸ್ವತ್ತು ಪತ್ತೆಯಾಗಿವೆ.
ಕಮಲ್‌ರಾಜ್ 1997ರಲ್ಲಿ ಅನುಕಂಪದ ಆಧಾರದ ಮೇರೆಗೆ ದ್ವಿತೀಯ ದರ್ಜೆ ಸಹಾಯಕರಾಗಿ ನೇಮಕಗೊಂಡಿದ್ದರು. ಹಲವು ಬಡ್ತಿಯ ಬಳಿಕ ಸಹಾಯಕ ನಿರ್ದೇಶಕರಾಗಿದ್ದರು ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ.
ದಾಳಿಯಲ್ಲಿ ಇನ್‌ಸ್ಪೆಕ್ಟರ್ ಮಧುಸೂದನ್ ಹಾಗೂ ಪ್ರಭು ಸೇರಿ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.