ಬಸವಾಪಟ್ಟಣ: ಕಳೆದ ವರ್ಷ ಇದೇ ತಿಂಗಳಲ್ಲಿ ಕ್ವಿಂಟಲ್‌ಗೆ 50,000ವರೆಗೆ ಇದ್ದ ಅಡಿಕೆ ದರ ಈಗ ಕ್ವಿಂಟಲ್‌ಗೆ ₹36,000–₹37,000ಕ್ಕೆ ಇಳಿದಿದೆ. ಕೆಲವು ಕೇಣಿದಾರರು ಕಳಪೆ ಅಡಿಕೆಯನ್ನು ಸಗಟು ಖರೀದಿದಾರರಿಗೆ ಪೂರೈಕೆ ಮಾಡುತ್ತಿರುವದರಿಂದ ದರದಲ್ಲಿ ಕುಸಿತ ಉಂಟಾಗಿದೆ. ಇದರಿಂದ ಪ್ರಾಮಾಣಿಕ ಕೇಣಿದಾರರು ಮತ್ತು ರೈತರಿಗೆ ಭಾರೀ ನಷ್ಟ ಉಂಟಾಗುತ್ತಿದೆ ಎಂದು ಈ ಭಾಗದ ಅಡಿಕೆ ಬೆಳೆಗಾರರು ಮತ್ತು ಕೇಣಿದಾರರು ಆರೋಪಿಸಿದ್ದಾರೆ.
ಶೇ40ರಷ್ಟು ಕೇಣಿದಾರರು ರೈತರಿಗೆ ಕಳಪೆ ಅಡಿಕೆ ಮಿಶ್ರಣ ಮಾಡಿ ಕೊಡುತ್ತಿರುವುದರಿಂದ ಸಗಟು ಖರೀದಿದಾರರು, ಎಲ್ಲ ಅಡಿಕೆಯನ್ನು ಕಳಪೆ ಎಂದು ನಿರ್ಧರಿಸಿ ವಾಪಸ್ ಕಳಿಸುತ್ತಿದ್ದಾರೆ. ಅಡಿಕೆ ಮಾರಾಟ ಸಹಕಾರಿ ಸಂಘಗಳು ಮತ್ತು ಸರ್ಕಾರ ಮಧ್ಯಪ್ರವೇಶಿಸಿ ಉತ್ತಮ ಗುಣಮಟ್ಟದ ಅಡಿಕೆಗೆ ನಿರ್ದಿಷ್ಟ ಬೆಲೆ ನಿಗದಿಗೊಳಿಸಿ ರೈತರನ್ನು ಮತ್ತು ಕೇಣಿದಾರರನ್ನು ರಕ್ಷಿಸಬೇಕು ಎಂದು ಸಮೀಪದ ದಾಗಿನಕಟ್ಟೆಯ ಕೇಣಿದಾರರಾದ ಎಂ.ಜಿ.ಕಿರಣ್, ಬಿ.ಮಹೇಶ್ವರಪ್ಪ, ಆಗ್ರಹಿಸಿದ್ದಾರೆ.
ಚನ್ನಗಿರಿ ತಾಲ್ಲೂಕಿನಲ್ಲಿ 38,000 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಉತ್ತಮ ದರ ನಿರೀಕ್ಷೆಯಲ್ಲಿದ್ದ ರೈತರಿಗೆ ದರ ಕುಸಿತ ಆಘಾತ ತಂದಿದೆ. ಹೆಚ್ಚು ಬಂಡವಾಳ ಹೂಡಿ, ಅಡಿಕೆ ತೋಟಗಳನ್ನು ಕೇಣಿ ಪಡೆದ ಕೇಣಿದಾರರು ಭಾರೀ ನಷ್ಟಕ್ಕೆ ಸಿಲುಕಿದ್ದಾರೆ. ಇದಕ್ಕೆ ಕೂಡಲೇ ಸರಿಪಡಿಸದಿದ್ದಲ್ಲಿ ಕೇಣಿದಾರರು ಮತ್ತು ರೈತರು ಆತ್ಮ ಹತ್ಯಗೆ ಶರಣಾಗಬೇಕಾಗುತ್ತದೆ ಎಂದು ಕಣಿವೆಬಿಳಚಿಯ ಕೇಣಿದಾರ ಎಸ್.ಅಣ್ಣೋಜಿರಾವ್ ಹೇಳಿದ್ದಾರೆ.
ಕಳಪೆ ಅಡಿಕೆಯಿಂದ ಪಾನ್ ಮಸಾಲ ತಯಾರಿಕೆ ಅಸಾಧ್ಯವಾಗಿರುವುದರಿಂದ, ಆ ಕಂಪನಿಗಳು ಅಡಿಕೆಯನ್ನು ಖರೀದಿಸುತ್ತಿಲ್ಲ. ಕೆಲವು ಕೇಣಿದಾರರು ರೈತರಿಗೆ ಕಳಪೆ ಗುಣಮಟ್ಟದ ಅಡಿಕೆ ನೀಡುತ್ತಿರುವುದರಿಂದ ಈ ಸಮಸ್ಯೆ ಉಂಟಾಗಿದೆ. ಕೇಣಿದಾರರ ಈ ತಪ್ಪಿನಿಂದ ಎಲ್ಲ ರೈತರಿಗೆ ಅನ್ಯಾಯ ವಾಗುತ್ತಿದೆ. ಇದನ್ನು ಸರಿಪಡಿಸದಿದ್ದರೆ ರೈತರು ಸಾಮೂಹಿಕವಾಗಿ ಅಡಿಕೆ ಬೆಳೆಯನ್ನು ನಾಶ ಮಾಡಬೇಕಾಗುತ್ತದೆ ಎಂದು ಈ ಭಾಗದ ರೈತರಾದ ಬಿ.ನಾಗರಾಜಪ್ಪ, ವೀರಪ್ಪ, ಮಂಜುನಾಥ್ ಮತ್ತು ಸಿದ್ದಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.