ADVERTISEMENT

ಜಗಳೂರು | ತುಂಗಭದ್ರಾ ನದಿಯಲ್ಲಿ ಹೆಚ್ಚದ ನೀರಿನ ಹರಿವು

ಜಗಳೂರಿನ 57 ಕೆರೆ ತುಂಬಿಸುವ ಯೋಜನೆಗೆ ಹಿನ್ನಡೆ: ಪದೇ ಪದೇ ಟ್ರಯಲ್ ಆ್ಯಂಡ್‌ ರನ್ ಪ್ರಯೋಗಕ್ಕೆ ಆಕ್ಷೇಪ

ಡಿ.ಶ್ರೀನಿವಾಸ
Published 26 ಜೂನ್ 2024, 6:12 IST
Last Updated 26 ಜೂನ್ 2024, 6:12 IST
ಜಗಳೂರಿನ ಐತಿಹಾಸಿಕ ಕೆರೆಯ ಒಡಲು ನಾಲ್ಕು ದಶಕಗಳಿಂದ ಬರಿದಾಗಿದ್ದು, 57 ಕೆರೆ ತುಂಬಿಸುವ ಯೋಜನೆಯಡಿ ಭರ್ತಿಗಾಗಿ ಕಾಯುತ್ತಿದೆ 
ಜಗಳೂರಿನ ಐತಿಹಾಸಿಕ ಕೆರೆಯ ಒಡಲು ನಾಲ್ಕು ದಶಕಗಳಿಂದ ಬರಿದಾಗಿದ್ದು, 57 ಕೆರೆ ತುಂಬಿಸುವ ಯೋಜನೆಯಡಿ ಭರ್ತಿಗಾಗಿ ಕಾಯುತ್ತಿದೆ    

ಜಗಳೂರು: ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದರಿಂದ ಜಗಳೂರು ತಾಲ್ಲೂಕಿನ 57 ಕೆರೆಗಳನ್ನು ತುಂಬಿಸುವ ಯೋಜನೆಗೆ ಹಿನ್ನಡೆಯಾಗಿದೆ. ನೀರಿಲ್ಲದ ಕಾರಣಕ್ಕೆ ಮೊದಲನೇ ಹಂತದಲ್ಲಿ 16 ಕೆರೆಗಳಿಗೆ ನೀರು ಹರಿಸುವ ಪ್ರಾಯೋಗಿಕ ಪರೀಕ್ಷೆಯನ್ನು ಮುಂದೂಡಲಾಗಿದೆ.

ಹರಿಹರ ತಾಲ್ಲೂಕಿನ ದೀಟೂರು ಸಮೀಪ ತುಂಗಭದ್ರಾ ನದಿಯಿಂದ ನೀರೆತ್ತಿ 57 ಕೆರೆಗಳಿಗೆ ತುಂಬಿಸುವ ₹670 ಕೋಟಿ ವೆಚ್ಚದ ಮಹತ್ವದ ಯೋಜನೆ ಬಗ್ಗೆ ತಾಲ್ಲೂಕಿನ ರೈತರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ವಿವಿಧ ಕಾರಣಗಳಿಂದಾಗಿ ಈ ಯೋಜನೆ ವಿಳಂಬವಾಗುತ್ತಿದೆ.

ಕಳೆದ ಒಂದು ವರ್ಷದಿಂದ ತೀವ್ರಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದು, ಬಹುತೇಕ ಕೆರೆಗಳಿಗೆ ಪೈಪ್‌ಲೈನ್ ಅಳವಡಿಸುವ ಕಾರ್ಯ ಅಂತಿಮ ಹಂತದಲ್ಲಿದೆ. ಹರಿಹರ ತಾಲ್ಲೂಕಿನ ದೀಟೂರು ಸಮೀಪದ ಜಾಕ್‌ವೆಲ್‌ನಿಂದ ಹರಪನಹಳ್ಳಿ ತಾಲ್ಲೂಕಿನ ಚಟ್ನಹಳ್ಳಿ ಗುಡ್ಡಕ್ಕೆ ಸದ್ಯ ಎರಡು ಮೋಟಾರ್‌ಗಳ ಮೂಲಕ ನೀರು ಹರಿಸಲಾಗುತ್ತಿದೆ.

ADVERTISEMENT

ಪ್ರಸ್ತುತ ಮಳೆಗಾಲದಲ್ಲಿ ತಾಲ್ಲೂಕಿನ ಎಲ್ಲಾ ಕೆರೆಗಳಿಗೂ ಹಂತ ಹಂತವಾಗಿ, ಪ್ರಾಯೋಗಿಕವಾಗಿ (ಟ್ರಯಲ್ ಆ್ಯಂಡ್‌ ರನ್ ) ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಬೇಕಾಗಿತ್ತು. ಮಲೆನಾಡು ಮತ್ತು ತುಂಗಭದ್ರಾ ನದಿ ಜಲಾನಯನ ಪ್ರದೇಶದಲ್ಲಿ ಸಮೃದ್ಧ ಮಳೆ ಬಿದ್ದಿಲ್ಲ. ಹೀಗಾಗಿ ನದಿಯಲ್ಲಿ ನೀರಿನ ಹರಿವು ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಇದರಿಂದಾಗಿ ಜಾಕ್‌ವೆಲ್ ಮೂಲಕ ನೀರೆತ್ತಲು ಅಡ್ಡಿಯಾಗುತ್ತಿದೆ. ಮಂಗಳವಾರ ನಡೆಯಬೇಕಿದ್ದ 11 ಕೆರೆಗಳ ಪರೀಕ್ಷಾರ್ಥ ಪ್ರಯೋಗವನ್ನೂ ಮುಂದೂಡಲಾಗಿದೆ.

57 ಕೆರೆ ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿ ವಿಳಂಬವಾಗದಂತೆ ಎಚ್ಚರ ವಹಿಸಲಾಗಿದೆ. ನಿರಂತರವಾಗಿ ಕಾಮಗಾರಿ ಕೈಗೊಳ್ಳಲಾಗುತ್ತಿದ್ದು ಕಾಮಗಾರಿ ಬಹುತೇಕ ಮುಗಿದಿದೆ. ಉತ್ತಮ ಮಳೆಯಾಗಿ ನದಿಯಲ್ಲಿ‌ ನೀರಿನ ಹರಿವು ಜಾಸ್ತಿಯಾದರೆ ಪ್ರಸ್ತುತ ಮಳೆಗಾಲದಲ್ಲೇ ಎಲ್ಲಾ ಕೆರೆಗಳಿಗೂ ನೀರು ಹರಿಸಲು ಕ್ರಮ‌ ಕೈಗೊಳ್ಳುತ್ತೇವೆ. 
ಬಿ. ದೇವೇಂದ್ರಪ್ಪ, ಶಾಸಕ

‘ತುಂಗಭದ್ರಾ ನದಿಯಲ್ಲಿ ಪ್ರಸ್ತುತ ನೀರಿನ ಹರಿವು ಕಡಿಮೆ ಇದೆ. 1 ಸಾವಿರ ಕ್ಯುಸೆಕ್‌ಗಿಂತ ಕಡಿಮೆ ಪ್ರಮಾಣದ ನೀರು ಹರಿಯುತ್ತಿದೆ. ಇದರಿಂದಾಗಿ ಜಾಕ್‌ವೆಲ್‌ಗೆ ನೀರು ರಭಸವಾಗಿ ನುಗ್ಗುತ್ತಿಲ್ಲ. ಕೇವಲ 2 ಮೋಟಾರ್‌ಗಳ ಮೂಲಕ ನೀರನ್ನು ಪಂಪ್ ಮಾಡಲಾಗುತ್ತಿದೆ. ಈ ಕಾರಣಕ್ಕೆ ಮೊದಲನೇ ಹಂತದ 16 ಕೆರೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ’ ಎಂದು ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ನದಿಯಲ್ಲಿ ಕನಿಷ್ಠ 5 ಸಾವಿರ ಕ್ಯುಸೆಕ್‌ನಷ್ಟು ನೀರು ಹರಿದರೆ ನಾಲ್ಕೈದು ಮೋಟಾರ್‌ಗಳನ್ನಿಟ್ಟು ಹಂತ ಹಂತವಾಗಿ ಎಲ್ಲಾ ಕೆರೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಸಬಹುದು. ಉರ್ಲಕಟ್ಟೆ ಗ್ರಾಮದ ಕೆರೆಗೆ ನೀರು ಸರಬರಾಜು ಮಾಡಲಿರುವ ಪೈಪ್‌ಲೈನ್‌ನ ಏರ್ ವಾಲ್ವ್‌ನಲ್ಲಿ ಸ್ವಲ್ಪ ಸಮಸ್ಯೆ ಇದೆ. ಅದನ್ನು ಸರಿಪಡಿಸಲಾಗುತ್ತಿದೆ. ಕಾಮಗಾರಿ ಬಹುತೇಕ ಅಂತಿಮ ಹಂತದಲ್ಲಿದೆ. ನದಿಯಲ್ಲಿ ನೀರಿನ ಹರಿವು ಹೆಚ್ಚಳವಾದ ಕೂಡಲೇ ಜಗಳೂರು ಕೆರೆ, ಹಿರೇ ಅರಕೆರೆ, ಚಿಕ್ಕ ಅರಕೆರೆ, ರಸ್ತೆ ಮಾಚಿಕೆರೆ, ಬಿಸ್ತುವಳ್ಳಿ ಕೆರೆ, ಕೆಳಗೋಟೆ ಕೆರೆಗಳಿಗೆ ಪರೀಕ್ಷಾರ್ಥವಾಗಿ ನೀರು ಹರಿಸುತ್ತೇವೆ’ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣೆಗೂ ಮುನ್ನ ತುಪ್ಪದಹಳ್ಳಿ, ಅಸಗೋಡು, ಮರಿಕುಂಟೆ, ಬಿಳಿಚೋಡು, ಹಾಲೇಕಲ್ಲು ಸೇರಿದಂತೆ 11 ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲಾಗಿತ್ತು. ಹೆಚ್ಚು ಪ್ರಮಾಣದಲ್ಲಿ ನೀರು ಹರಿಸಿದ್ದರಿಂದ ಹಾಗೂ ಆ ಸಂದರ್ಭದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ಮಳೆ ಸುರಿದಿದ್ದ ಕಾರಣ ಬಹುತೇಕ ಕೆರೆಗಳು ಕೋಡಿ ಬಿದ್ದಿದ್ದವು.

‘2 ವರ್ಷದ ಹಿಂದೆಯೇ ಬಿಳಿಚೋಡು ಕೆರೆ ಸೇರಿ 11 ಕೆರೆಗಳಿಗೆ ಯಶಸ್ವಿಯಾಗಿ ನೀರು ಹರಿಸಲಾಗಿದೆ. ಇಷ್ಟಾದರೂ ಮತ್ತೆ ಈಗ ಅದೇ 11 ಕೆರೆಗಳು ಸೇರಿ ಒಟ್ಟು 16 ಕೆರೆಗಳಿಗೆ ಟ್ರಯಲ್‌ ಆ್ಯಂಡ್‌ ರನ್‌ ಮೂಲಕ ನೀರು ಹರಿಸಲು ಹೊರಟಿರುವ ನೀರಾವರಿ ಇಲಾಖೆಯ ಕ್ರಮ ಗೊಂದಲಕ್ಕೆ ಕಾರಣವಾಗಿದೆ. ಅಧಿಕಾರಿಗಳು ಪರೀಕ್ಷಾರ್ಥ ಪ್ರಯೋಗದಲ್ಲೇ ಕಾಲ ಕಳೆಯದೆ ಪ್ರಸಕ್ತ ಮಳೆ ಗಾಲದಲ್ಲೇ ಎಲ್ಲಾ ಕೆರೆಗಳಿಗೆ ನೀರು ಹರಿಸಬೇಕು. ಆ ಮೂಲಕ ಬರಪೀಡಿತ ತಾಲ್ಲೂಕಿನ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.