ADVERTISEMENT

ಸಿಲಿಂಡರ್‌ ಸೋರಿಕೆಗೆ ಜೀವತೆತ್ತ ತಾಯಿ; ನೆರವಿಗೆ ಧಾವಿಸಿದ ಕುಟುಂಬದಲ್ಲಿ ಸೂತಕ

ಜಿ.ಬಿ.ನಾಗರಾಜ್
Published 5 ಜುಲೈ 2024, 6:22 IST
Last Updated 5 ಜುಲೈ 2024, 6:22 IST
<div class="paragraphs"><p>ದಾವಣಗೆರೆಯ ರಾಮನಗರದ ಎಸ್‌ಒಜಿ ಕಾಲೊನಿಯಲ್ಲಿ ಸಂಭವಿಸಿದ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟದಲ್ಲಿ ಮನೆಯ ಚಾವಣಿಗೆ ಸಂಪೂರ್ಣ ಹಾನಿಯಾಗಿದೆ </p></div>

ದಾವಣಗೆರೆಯ ರಾಮನಗರದ ಎಸ್‌ಒಜಿ ಕಾಲೊನಿಯಲ್ಲಿ ಸಂಭವಿಸಿದ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟದಲ್ಲಿ ಮನೆಯ ಚಾವಣಿಗೆ ಸಂಪೂರ್ಣ ಹಾನಿಯಾಗಿದೆ

   

-ಪ್ರಜಾವಾಣಿ ಚಿತ್ರ

ದಾವಣಗೆರೆ: ವೃದ್ಧ ದಂಪತಿ ನೆಲೆಸಿದ್ದ ನೆರೆಮನೆಯನ್ನು ಆವರಿಸಿದ ಅಡುಗೆ ಅನಿಲದ ಜಾಡು ಹಿಡಿದು ನೆರವಿಗೆ ಧಾವಿಸಿದ ಕುಟುಂಬದಲ್ಲೀಗ ಸೂತಕ ಆವರಿಸಿದೆ. ಸಿಲಿಂಡರ್‌ ಸೋರಿಕೆ ಪತ್ತೆಗೆ ಮುಂದಾದಾಗ ಸಂಭವಿಸಿದ ಸ್ಫೋಟದಲ್ಲಿ ಗಾಯಗೊಂಡ ಒಂದೇ ಕುಟುಂಬದ ಮೂವರಲ್ಲಿ ತಾಯಿ ಮೃತಪಟ್ಟಿದ್ದು, ಸೊಸೆ–ಮಗ ಆಸ್ಪತ್ರೆಯ ಹಾಸಿಗೆಯಲ್ಲಿ ರೋದಿಸುತ್ತಿದ್ದಾರೆ.

ADVERTISEMENT

ಇಲ್ಲಿನ ರಾಮನಗರದ ಎಸ್‌ಒಜಿ ಕಾಲೊನಿಯಲ್ಲಿ ಸಂಭವಿಸಿದ ಅಡುಗೆ ಅನಿಲ ದುರಂತ ಸ್ಥಳೀಯರಲ್ಲಿ ದಿಗಿಲು ಮೂಡಿಸಿದೆ. ಪಕ್ಕದ ಮನೆಯ ಸಿಲಿಂಡರ್‌ ಸೋರಿಕೆಯನ್ನು ಪರಿಶೀಲಿಸಲು ತೆರಳಿ ಜೀವ ಕಳೆದುಕೊಂಡ ಕುಟುಂಬದ ಸ್ಥಿತಿ ಕಂಡು ಮರುಗುತ್ತಿದ್ದಾರೆ. ದುರಂತದಿಂದ ಪಾರಾಗಿರುವ ಇಬ್ಬರು ಮೊಮ್ಮಕ್ಕಳ ಭವಿಷ್ಯವನ್ನು ನೆನೆದು ಕಣ್ಣೀರಾಗಿದ್ದಾರೆ.

ಎಸ್‌ಒಜಿ ಕಾಲೊನಿಯ ಮಲ್ಲೇಶಪ್ಪ (64) ಹಾಗೂ ಲಲಿತಮ್ಮ (58) ದಂಪತಿಯ ಮನೆಯಲ್ಲಿ ಜುಲೈ 2ರಂದು ರಾತ್ರಿ ಸಂಭವಿಸಿದ ಸ್ಪೋಟದಲ್ಲಿ ಪಕ್ಕದ ಮನೆಯ ಪಾರ್ವತಮ್ಮ (50), ಮಗ ಪ್ರವೀಣ್‌ (35) ಹಾಗೂ ಸೊಸೆ ಸೌಭಾಗ್ಯ (33) ಗಾಯಗೊಂಡಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಪಾರ್ವತಮ್ಮ ಮೃತಪಟ್ಟಿದ್ದು, ಲಲಿತಮ್ಮ ಹಾಗೂ ಸೌಭಾಗ್ಯ ಸ್ಥಿತಿ ಗಂಭೀರವಾಗಿದೆ. ಮಲ್ಲೇಶಪ್ಪ ಮತ್ತು ಪ್ರವೀಣ್‌ ಚೇತರಿಸಿಕೊಳ್ಳುತ್ತಿದ್ದಾರೆ. ಪಾರ್ವತಮ್ಮ ಮೃತಪಟ್ಟ ಮಾಹಿತಿ ಪುತ್ರ, ಸೊಸೆ ಮತ್ತು ಕುಟುಂಬದಲ್ಲಿ ದಿಗ್ಭ್ರಮೆ ಮೂಡಿಸಿದೆ.

ನೆರವಿಗೆ ಧಾವಿಸಿದ್ದ ಕುಟುಂಬ: ಮೂಲತಃ ಚನ್ನಗಿರಿಯ ಮಲ್ಲೇಶಪ್ಪ ಎರಡು ವರ್ಷಗಳಿಂದ ಎಸ್‌ಒಜಿ ಕಾಲೊನಿಯ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಕ್ಕಳಿಂದ ಪ್ರತ್ಯೇಕವಾಗಿದ್ದ ವೃದ್ಧ ದಂಪತಿ ಇಳಿ ವಯಸ್ಸಿನಲ್ಲಿಯೂ ದುಡಿದು ಬದುಕು ಕಟ್ಟಿಕೊಂಡಿದ್ದರು. ಎಸ್‌.ಎಸ್‌.ಹೈಟೆಕ್‌ ಆಸ್ಪತ್ರೆಯಲ್ಲಿ ಮಲ್ಲೇಶಪ್ಪ ವಾಚ್‌ಮನ್‌ ಆಗಿದ್ದರೆ ಲಲಿತಮ್ಮ ಆಯಾ ಕೆಲಸದಲ್ಲಿದ್ದರು. ನಿತ್ಯ ಬೆಳಿಗ್ಗೆ 8ಕ್ಕೆ ಕೆಲಸಕ್ಕೆ ಹೊರಟರೆ ಮನೆಗೆ ಮರಳುವ ಹೊತ್ತಿಗೆ ಸಂಜೆ 7ಗಂಟೆಯಾಗಿರುತ್ತಿತ್ತು. ಜುಲೈ 2ರಂದು ಸಂಜೆ ಕೆಲಸ ಮುಗಿಸಿ ಮರಳಿದಾಗ ಮನೆ ಎಂದಿನಂತೆ ಇರಲಿಲ್ಲ.

ವೃದ್ಧ ದಂಪತಿ ಬಾಗಿಲು ತೆರೆದು ಮನೆ ಪ್ರವೇಶಿಸಿದ್ದರು. ಟೀ ಕುಡಿದು ಮುಂದಿನ ಕಾರ್ಯಕ್ಕೆ ಸಜ್ಜಾಗಲು ಅಡುಗೆ ಮನೆಯತ್ತ ಲಲಿತಮ್ಮ ಸಾಗಿದ್ದರು. ತೆರೆದ ಬಾಗಿಲಿನಿಂದ ಹೊರಬರುತ್ತಿದ್ದ ಅಡುಗೆ ಅನಿಲದ ವಾಸನೆಯ ಜಾಡು ಹಿಡಿದು ನೆರೆಮನೆಯ ಪಾರ್ವತಮ್ಮ ಧಾವಿಸಿದ್ದರು. ಸಿಲಿಂಡರ್‌ ಸೋರಿಕೆಯಾಗುತ್ತಿರುವ ಬಗ್ಗೆ ವೃದ್ಧ ದಂಪತಿಗೆ ತಿಳಿಹೇಳಲು ಪ್ರಯತ್ನಿಸಿದ್ದರು. ಮಗ ಪ್ರವೀಣ್‌ ಹಾಗೂ ಸೊಸೆ ಸೌಭಾಗ್ಯ ಕೂಡ ತಾಯಿಯನ್ನು ಹಿಂಬಾಲಿಸಿದ್ದರು. ಕತ್ತಲು ಆವರಿಸಿದ ಅಡುಗೆ ಮನೆಯ ವಿದ್ಯುತ್‌ ದೀಪವನ್ನು ಲಲಿತಮ್ಮ ಬೆಳಗಿದ ಕ್ಷಣಾರ್ಧದಲ್ಲಿ ಸ್ಫೋಟ ಸಂಭವಿಸಿತ್ತು.

ಅತ್ತೆ–ಸೊಸೆಗೆ ಗಂಭೀರ ಗಾಯ: ಸಿಲಿಂಡರ್‌ ಸ್ಫೋಟಕ್ಕೆ ಮನೆಯ ಚಾವಣಿ ಸಂಪೂರ್ಣ ಹಾರಿಹೋಗಿದೆ. ಪಕ್ಕದ ಮನೆ, ಮುಂಭಾಗದ ಸರ್ಕಾರಿ ಶಾಲೆಯ ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಮನೆಯ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಕಿವಿಗಡಚಿಕ್ಕುವ ಸ್ಫೋಟಕ್ಕೆ ಇಡೀ ಕಾಲೊನಿ ಬೆಚ್ಚಿಬಿದ್ದಿದೆ. ವೃದ್ಧ ದಂಪತಿಯ ನೆರವಿಗೆ ಬಂದಿದ್ದ ಪಾರ್ವತಮ್ಮ ಹಾಗೂ ಅವರ ಸೊಸೆ ಸೌಭಾಗ್ಯ ಅವರಿಗೆ ಶೇ 50ಕ್ಕಿಂತ ಹೆಚ್ಚು ಸುಟ್ಟದ ಗಾಯಗಳಾಗಿದ್ದವು. ಪ್ರವೀಣ್‌ ಅವರ ಕೈ ಹಾಗೂ ಕಾಲುಗಳು ಬೆಂದು ಹೋಗಿವೆ.

‘ವೃದ್ಧ ದಂಪತಿ ಎರಡು ವರ್ಷಗಳಿಂದ ಅಡುಗೆ ಅನಿಲದ ಸಿಲಿಂಡರ್‌ ಬಳಸುತ್ತಿದ್ದರು. ವಯೋಸಹಜ ನಿಶ್ಯಕ್ತಿಯ ಕಾರಣಕ್ಕೆ ಅಡುಗೆ ಅನಿಲದ ಸೋರಿಕೆ ಅವರಿಗೆ ಗೊತ್ತಾಗುತ್ತಿರಲಿಲ್ಲ. ಶ್ರವಣದೋಷ ಸೇರಿ ಹಲವು ಸಮಸ್ಯೆಗಳು ಅವರನ್ನು ಬಾಧಿಸಿದ್ದವು. ಸ್ಟೌ ಹಾಗೂ ಸಿಲಿಂಡರ್‌ ಜೋಡಿಸಿಕೊಡುವ ಕಾರ್ಯವನ್ನು ಅಕ್ಕಪಕ್ಕದ ಮನೆಯವರೇ ಮಾಡಿಕೊಡುತ್ತಿದ್ದರು. ಇದೇ ರೀತಿ ಪಾರ್ವತಮ್ಮ ಅಂದು ಸಹಾಯಹಸ್ತ ಚಾಚಿದ್ದರು’ ಎಂದು ಸ್ಮರಿಸುತ್ತಾರೆ ಕಾಲೊನಿಯ ಜನ.

ಕೋವಿಡ್‌ನಲ್ಲಿ ಮನೆಯೊಡೆಯ ಸಾವು: ಪಾರ್ವತಮ್ಮ ಅವರ ಪತಿ ಕಾಂತರಾಜ್‌ ಆಟೊಚಾಲಕರಾಗಿದ್ದರು. ಜಿಲ್ಲಾಧಿಕಾರಿಯಾಗಿದ್ದ ಕೆ.ಶಿವರಾಮ್‌ ರೂಪಿಸಿದ ಆಶ್ರಯ ಮನೆ ಯೋಜನೆಯಡಿ ಇವರಿಗೆ ವಸತಿ ಸೌಲಭ್ಯ ಸಿಕ್ಕಿತ್ತು. ಕೋವಿಡ್‌ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿ ಪ್ರಾಣ ಕಳೆದುಕೊಂಡರು. ತಂದೆಯ ವೃತ್ತಿಯನ್ನು ಪ್ರವೀಣ್‌ ಮುಂದುವರಿಸಿದ್ದರು. ಕಾರು ಚಾಲಕರಾಗಿ ಆಗಾಗ ಟ್ಯಾಕ್ಸಿಗಳನ್ನು ಓಡಿಸುತ್ತಿದ್ದರು. ಸೌಭಾಗ್ಯ ಅವರು ಸಮೀಪದ ಶಾಲೆಯೊಂದರಲ್ಲಿ ‘ಡಿ’ ದರ್ಜೆಯ ನೌಕರರಾಗಿ ಕೆಲಸ ಮಾಡುತ್ತಿದ್ದರು. ಪ್ರವೀಣ್‌ ಹಾಗೂ ಸೌಭಾಗ್ಯ ದಂಪತಿಗೆ 11 ಹಾಗೂ 13 ವರ್ಷದ ಇಬ್ಬರು ಪುತ್ರರಿದ್ದಾರೆ. ಕುಟುಂಬದ ದುರಂತ ಸ್ಥಿತಿ ಕಂಡು ಎಸ್‌.ಎಸ್‌.ಆಸ್ಪತ್ರೆಯ ಎದುರು ಸಂಬಂಧಿಕರು ರೋದಿಸುತ್ತಿದ್ದ ರೀತಿ ಮನಕಲಕುವಂತಿತ್ತು.

ದಾವಣಗೆರೆಯ ರಾಮನಗರದ ಎಸ್‌ಒಜಿ ಕಾಲೊನಿಯಲ್ಲಿ ಸಂಭವಿಸಿದ ಅಡುಗೆ ಅನಿಲ ಸಿಲಿಂಡರ್‌ ಸ್ಫೋಟದಲ್ಲಿ ಹಾನಿಗೀಡಾದ ಅಡುಗೆ ಮನೆಯ ಸ್ಥಿತಿ ಪ್ರಜಾವಾಣಿ ಚಿತ್ರ
ಅಡುಗೆ ಅನಿಲ ಸಿಲಿಂಡರ್‌ ಸ್ಫೋಟದಲ್ಲಿ ಮೃತಪಟ್ಟ ದಾವಣಗೆರೆಯ ರಾಮನಗರದ ಎಸ್‌ಒಜಿ ಕಾಲೊನಿ ಪಾರ್ವತಮ್ಮ ಕುಟುಂಬದ ಸಂಬಂಧಿಕರು ಎಸ್‌.ಎಸ್‌.ಆಸ್ಪತ್ರೆಯ ಆವರಣದಲ್ಲಿ ರೋದಿಸುತ್ತಿದ್ದ ಪರಿ ಮನಕಲಕುವಂತಿತ್ತು ಪ್ರಜಾವಾಣಿ ಚಿತ್ರ

ಗಾಯಾಳು ಸಾವು

ಅಡುಗೆ ಅನಿಲದ ಸಿಲಿಂಡರ್‌ ಸ್ಫೋಟಗೊಂಡು ಗಭೀರವಾಗಿ ಗಾಯಗೊಂಡಿದ್ದ ಐವರಲ್ಲಿ ಒಬ್ಬರು ಬುಧವಾರ ತಡರಾತ್ರಿ ಮೃತಪಟ್ಟಿದ್ದಾರೆ. ಪಾರ್ವತಮ್ಮ (45) ಮೃತ ಮಹಿಳೆ. ಇವರಿಗೆ ಶೇ 50ಕ್ಕಿಂತ ಹೆಚ್ಚು ಸುಟ್ಟ ಗಾಯಗಳಾಗಿದ್ದವು. ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗೆ ಎಸ್‌.ಎಸ್‌.ಹೈಟೆಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅನಿಲ ಕಂಪನಿ ವಿರುದ್ಧ ಕಿಡಿ

ಸಿಲಿಂಡರ್‌ ಸ್ಫೋಟಕ್ಕೆ ಸ್ಥಳೀಯರು ಅನಿಲ ಕಂಪನಿ ಹಾಗೂ ಏಜೆನ್ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಿಲಿಂಡರ್‌ ಸರಬರಾಜು ವೇಳೆ ಸುರಕ್ಷತೆಯ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ‘ಅಡುಗೆ ಅನಿಲ ಪೂರೈಕೆ ಮಾಡುವ ಕಂಪನಿ ಏಜೆನ್ಸಿಗಳು ಜನರ ಜೀವಗಳೊಂದಿಗೆ ಚೆಲ್ಲಾಟವಾಡುತ್ತಿವೆ. ರೆಗ್ಯೂಲೆಟರ್‌ ವಾಯ್ಶರ್‌ ಹಾಳಾದ ಸ್ಥಿತಿಯಲ್ಲಿದ್ದರೂ ಸಿಲಿಂಡರ್‌ಗಳನ್ನು ಪೂರೈಕೆ ಮಾಡುತ್ತಿವೆ. ವೃದ್ಧರಿಗೆ ಈ ಬಗ್ಗೆ ಅರಿವಿಲ್ಲದೇ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಈ ಸಂಬಂಧ ದೂರು ನೀಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ’ ಎಂದು ಸ್ಥಳೀಯ ನಿವಾಸಿ ಕೇದಾರಸ್ವಾಮಿ ದೂರಿದ್ದಾರೆ.

ಸಮೀಪದ ಉದ್ಯಾನದಲ್ಲಿ ವಾಯುವಿಹಾರ ಮಾಡುತ್ತಿದ್ದವರು ಸ್ಫೋಟದ ತೀವ್ರತೆ ಬೆಚ್ಚಿದರು. ಅಡುಗೆ ಅನಿಲ ಹೇಗೆ ಸೋರಿಕೆಯಾಯಿತು ಎಂಬುದು ಇನ್ನೂ ಖಚಿತವಾಗಿಲ್ಲ.
-ಪಾಮೇನಹಳ್ಳಿ ನಾಗರಾಜ್‌, ಮಹಾನಗರ ಪಾಲಿಕೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.