ದಾವಣಗೆರೆ: ಪರಿಶಿಷ್ಟ ಜಾತಿಯಲ್ಲಿ ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡಲೇ ಆಯೋಗ ರಚಿಸಿ ಮೂರು ತಿಂಗಳ ಕಾಲಮಿತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಅಲ್ಲಿಯವರೆಗೆ ಸರ್ಕಾರದ ಯಾವುದೇ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಡೆಸಬಾರದು. ಪ್ರಕಟಿಸಿದ ಅಧಿಸೂಚನೆ ಕೂಡ ಹಿಂಪಡೆಯಬೇಕು ಎಂದು ಮಾದಿಗ ಸಮುದಾಯದ ಮಠಾಧೀಶರು ಒತ್ತಾಯಿಸಿದ್ದಾರೆ.
‘ಒಳಮೀಸಲಾತಿಗೆ ಮೂರು ದಶಕಗಳಿಂದ ನಡೆಯುತ್ತಿರುವ ಹೋರಾಟ ನಿರ್ಣಾಯಕ ಹಂತ ತಲುಪಿದೆ. ಇಷ್ಟವಿಲ್ಲದಿದ್ದರೂ ಮತ್ತೊಂದು ಆಯೋಗ ರಚಿಸುವ ಸರ್ಕಾರದ ನಿರ್ಧಾರವನ್ನು ಸಮುದಾಯ ಒಪ್ಪಿಕೊಂಡಿದೆ. ಇತ್ತ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಆರೋಗ್ಯ ಇಲಾಖೆ ಸೇರಿ ಸರ್ಕಾರದ ಹಲವು ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದೆ. ಈ ನೇಮಕಾತಿ ಪ್ರಕ್ರಿಯೆ ಕೂಡಲೇ ಸ್ಥಗಿತಗೊಳ್ಳಬೇಕು’ ಎಂದು ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.
‘ದತ್ತಾಂಶ ಸಂಗ್ರಹಿಸುವ ನೆಪದಲ್ಲಿ ಆಯೋಗ ರಚಿಸಿ ಕಾಲಾಹರಣ ಮಾಡಬಾರದು ಎಂಬ ಕೋರಿಕೆ ಸಮುದಾಯದ್ದಾಗಿತ್ತು. ಆದರೆ, ರಾಜ್ಯ ಸರ್ಕಾರ ಆಯೋಗ ರಚಿಸಲು ಈಗಾಗಲೇ ತೀರ್ಮಾನಿಸಿದೆ. ವರದಿ ಸಿದ್ಧಪಡಿಸಲು ಮೂರು ತಿಂಗಳ ಗಡುವು ನೀಡುವುದಾಗಿ ಮುಖ್ಯಮಂತ್ರಿ ಮಾಹಿತಿ ನೀಡಿದ್ದಾರೆ. ಕೂಡಲೇ ಆಯೋಗ ರಚಿಸಿ ವಿಳಂಬ ಮಾಡದೇ ವರದಿ ಪಡೆದು ತೀರ್ಮಾನ ಕೈಗೊಳ್ಳಬೇಕು’ ಎಂದರು.
‘ಬಡತನ, ಹಸಿವು, ದೌರ್ಜನ್ಯವನ್ನು ಅನುಭವಿಸುತ್ತಿರುವ ಮಾದಿಗ ಸಮುದಾಯ ನಿರಂತರವಾಗಿ ಶೋಷಣೆ ಅನುಭವಿಸಿದೆ. ರಾಜಕೀಯ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಕ್ಷೇತ್ರದಲ್ಲಿ ಸಮುದಾಯಕ್ಕೆ ಅನ್ಯಾಯವಾಗಿದೆ. ವಂಚನೆಗೆ ಒಳಗಾದ ಮಾದಿಗ ಸಮುದಾಯಕ್ಕೆ ಸರಿಯಾದ ಪಾಲು ಸಿಕ್ಕಾಗ ಸಶಕ್ತಗೊಳ್ಳಲು ಸಾಧ್ಯವಾಗಲಿದೆ. ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು, ಶಿಕ್ಷಣ ಪಡೆಯಲು ಒಳಮೀಸಲು ಅತ್ಯಗತ್ಯವಾಗಿದೆ’ ಎಂದು ಆದಿಜಾಂಬವ ಮಠದ ಷಡಕ್ಷರಮುನಿ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಜ್ಯ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ರವಿ ನಾರಾಯಣ, ಸಮುದಾಯದ ಮುಖಂಡರಾದ ಬಿ.ಎಂ.ರಾಮಸ್ವಾಮಿ, ನಿರಂಜನಮೂರ್ತಿ, ರಾಜಣ್ಣ, ಎಸ್.ಮಲ್ಲಿಕಾರ್ಜುನ್ ಹಾಜರಿದ್ದರು.
ನೀಡಿದ ಆಶ್ವಾಸನೆಯಂತೆ ನಡೆದುಕೊಳ್ಳದಿದ್ದರೆ ಮಾತು ತಪ್ಪಿದ ಆರೋಪವನ್ನು ಸರ್ಕಾರ ಎದುರಿಸಬೇಕಾಗುತ್ತದೆ. ಮೂರು ತಿಂಗಳ ಕಾಲಮಿತಿಯಲ್ಲಿ ಈಗಾಗಲೇ ಎರಡು ವಾರ ಕಳೆದಿವೆ.–ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಚನ್ನಯ್ಯ ಗುರುಪೀಠ, ಚಿತ್ರದುರ್ಗ
ನೇಮಕಾತಿ ಪ್ರಕ್ರಿಯೆ ಶುರು ಮಾಡಿದರೆ ಶೋಷಿತ ಸಮುದಾಯ ಮತ್ತೆ ವಂಚನೆಗೆ ಒಳಗಾಗಲಿದೆ. ಎಡಗೈಯಲ್ಲಿ ನೀಡಿ ಬಲಗೈಯಲ್ಲಿ ಕಸಿದುಕೊಳ್ಳುವುದು ಘೋರ ಅನ್ಯಾಯ.– ಷಡಕ್ಷರಮುನಿ ಸ್ವಾಮೀಜಿ, ಆದಿಜಾಂಬವ ಮಠ ಹಿರಿಯೂರು
ಸಮಾವೇಶಕ್ಕೆ 25 ಸಾವಿರ ಜನ
ಡಿ.15ರಂದು ಆದಿ ಕರ್ನಾಟಕ ವಿದ್ಯಾರ್ಥಿನಿಲಯದ ಮೈದಾನದಲ್ಲಿ ಹಮ್ಮಿಕೊಂಡಿರುವ ಜಿಲ್ಲಾ ಮಾದಿಗ ಸಮಾಜದ ಸಮಾವೇಶಕ್ಕೆ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ 25 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ ಎಂದು ಗುರು ರಾಮದಾಸಸ್ವಾಮಿ ಆಧ್ಯಾತ್ಮಕ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ ತಿಳಿಸಿದರು.
‘ಪೂರ್ವಭಾವಿ ಸಭೆಯಲ್ಲಿ ಸಮಾವೇಶ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವದ ಕುರಿತು ಚರ್ಚಿಸಲಾಗಿದೆ. ಭಿನ್ನಾಭಿಪ್ರಾಯ ಮರೆತು ಸಮುದಾಯದ ಹಿತಾಸಕ್ತಿಗಾಗಿ ಎಲ್ಲರೂ ಒಗ್ಗೂಡುವ ಅಗತ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಲಾಗುತ್ತಿದೆ. ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಇದೊಂದು ಅವಕಾಶ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.