ADVERTISEMENT

‘ಮದ್ರಾಸ್ ಐ’ ಮುನ್ನೆಚ್ಚರಿಕೆಯೇ ಮದ್ದು

ಜಿಲ್ಲೆಯಲ್ಲಿ ಬಾಧಿಸುತ್ತಿರುವ ‘ಕಂಜಕ್ಟಿವೈಟಿಸ್’* ಶಾಲಾ–ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್ಚು

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 6:12 IST
Last Updated 25 ಜುಲೈ 2023, 6:12 IST
ಮದ್ರಾಸ್ ಐ (ಸಂಗ್ರಹ ಚಿತ್ರ)
ಮದ್ರಾಸ್ ಐ (ಸಂಗ್ರಹ ಚಿತ್ರ)   

ದಾವಣಗೆರೆ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕಾಣಿಸಿಕೊಂಡಿರುವ ‘ಕಂಜಕ್ಟಿವೈಟಿಸ್’ ಅಥವಾ ‘ಮದ್ರಾಸ್ ಐ’ ರೋಗದಿಂದ ಜನರು ಕಂಗಾಲಾಗಿದ್ದಾರೆ.

ಶಾಲಾ–ಕಾಲೇಜು, ಹಾಸ್ಟೆಲ್‌ ವಿದ್ಯಾರ್ಥಿಗಳಲ್ಲಿ ವೇಗವಾಗಿ ಹರಡುತ್ತಿದ್ದು, ಕಣ್ಣಿನ ಆಸ್ಪತ್ರೆಗಳಲ್ಲಿ ಜನರು ಸಾಲುಗಟ್ಟಿ ನಿಂತಿರುವುದು ಅಲ್ಲಲ್ಲಿ ಕಂಡುಬರುತ್ತಿದೆ. ಚಿಗಟೇರಿ ಜಿಲ್ಲಾಸ್ಪತ್ರೆಯ ಕಣ್ಣಿನ ವಿಭಾಗದಲ್ಲಿ ಒಂದು ವಾರದಲ್ಲಿ 345 ಜನರಲ್ಲಿ ‘ಮದ್ರಾಸ್‌ ಐ’ ಕಂಡು ಬಂದಿವೆ. ಪ್ರತಿನಿತ್ಯ 40ರಿಂದ 50 ಪ್ರಕರಣಗಳು ಪತ್ತೆಯಾಗುತ್ತಿವೆ.

ತೇವಾಂಶ ಹೆಚ್ಚಾದಾಗ ಅಥವಾ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆ ಮಳೆಗಾಲದಲ್ಲಿಯೇ ಕಾಣಿಸಿಕೊಂಡಿವೆ. ಚಳಿಯ ವಾತಾವರಣದಲ್ಲಿ ಹುಟ್ಟಿಕೊಳ್ಳುವ ಈ ವೈರಾಣುಗಳು ವೇಗವಾಗಿ ಹರಡುತ್ತಿವೆ. ರಾಜ್ಯದಲ್ಲಿ ಮಳೆಯಾಗುತ್ತಿದ್ದು, ಇದರ ಪರಿಣಾಮ ಬಿಸಿಲು ಇಲ್ಲದಂತಾಗಿದ್ದು, ಇದರ ಪರಿಣಾಮ ತೇವಾಂಶ ಹೆಚ್ಚಾಗಿ ಅವಧಿಗೂ ಮೊದಲೇ ಈ ವೈರಾಣು ದಾಂಗುಡಿ ಇರಿಸಿದೆ.

ADVERTISEMENT

‘ಮದ್ರಾಸ್ ಐ’ ಹಿರಿಯರಿಗಿಂತಲೂ ಮಕ್ಕಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಕಣ್ಣಿನ ಸಮಸ್ಯೆ ಇರುವ ಮಕ್ಕಳು ಶಾಲಾ–ಕಾಲೇಜುಗಳು ಹಾಗೂ ಹಾಸ್ಟೆಲ್‌ಗಳಿಗೆ ಹೋಗುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ. ಒಟ್ಟಿಗೆ ಕೂರುವುದು, ಪೆನ್, ಪುಸ್ತಕಗಳನ್ನು ಒಬ್ಬರಿಗೊಬ್ಬರು ಹಂಚಿಕೊಳ್ಳುವುದರಿಂದ ವೈರಾಣುಗಳು ವ್ಯಾಪಕವಾಗಿ ಹರಡುತ್ತಿವೆ. ಮಕ್ಕಳಿಂದ ಶಾಲೆಯ ಪೋಷಕರಿಗೂ ಹರಡುತ್ತಿವೆ’ ಎಂದು ವೈದ್ಯರು ತಿಳಿಸಿದ್ದಾರೆ.

ವೈದ್ಯರಿಂದ ಕಣ್ಣಿನ ತಪಾಸಣೆ

ರೋಗ ಹರಡುವ ಬಗೆ:

‘ರೋಗಿಯ ಕಣ್ಣೀರಿನಲ್ಲಿ ಅಥವಾ ಪಿಸುರುನಲ್ಲಿ ಈ ರೋಗಾಣುಗಳು ಇರುವುದರಿಂದ ರೋಗಿಯು ಕೈಗಳು, ಟವಲ್, ಕರವಸ್ತ್ರಗಳಿಂದ ಒರಸಿಕೊಂಡ ಇಟ್ಟಾಗ ಅದನ್ನು ಮುಟ್ಟಿದ ಮತ್ತೊಬ್ಬರಿಗೆ ರೋಗ ಬರುತ್ತದೆ. ರೋಗಿಯು ತನ್ನ ಕೈಗಳಿಂದ ಕಣ್ಣನ್ನು ಮುಟ್ಟಿ ಅದೇ ಕೈಗಳಿಂದ ಟೇಬಲ್, ಕುರ್ಚಿಗಳು, ಟೀವಿ ರಿಮೋಟ್, ಕಿಟಕಿ, ಬಾಗಿಲು  ಮುಟ್ಟುತ್ತಾನೆ. ಅದೇ ವಸ್ತುಗಳನ್ನು ಆರೋಗ್ಯವಂತ ವ್ಯಕ್ತಿಗಳು ಮುಟ್ಟಿದಾಗ ಸೋಂಕು ಹರಡುತ್ತದೆ’ ಎಂದು ಚಿಗಟೇರಿ ಆಸ್ಪತ್ರೆಯ ನೇತ್ರ ತಜ್ಞ ಎಸ್.ಎಸ್. ಕೋಳಕೂರ ತಿಳಿಸಿದರು. 

‘ಮದ್ರಾಸ್ ಐ ಇರುವವರು ಗಾಳಿಯಲ್ಲಿ ತಿರುಗಾಡಬಾರದು, ದ್ವಿಚಕ್ರ ವಾಹನ ಓಡಿಸಬಾರದು, ಕಣ್ಣಿಗೆ ವಿಶ್ರಾಂತಿ ಕೊಡಬೇಕು’ ಎಂದು ಅವರು ಸಲಹೆ ನೀಡಿದರು.

ಮದ್ರಾಸ್‌ ಐ ಒಂದು ತಿಂಗಳ ತನಕ ಇದ್ದು ತನ್ನಿಂದ ತಾನೇ ಹೋಗುತ್ತದೆ. ಅಲ್ಲಿಯ ತನಕ ಜಾಗರೂಕತೆ ವಹಿಸಬೇಕು. ಲಕ್ಷಣಗಳು ಇರುವ ಮಕ್ಕಳನ್ನು ಪೋಷಕರು ಶಾಲೆಗೆ ಕಳುಹಿಸಬಾರದು
. ಡಾ.ಜಿ.ಡಿ. ರಾಘವನ್ ಜಿಲ್ಲಾ ಸರ್ವೇಕ್ಷಣಾಧಿಕಾರಿ
ದಿನಕ್ಕೆ 30ರಿಂದ 40 ರೋಗಿಗಳು ಬರುತ್ತಿದ್ದು ಕಳೆದ 10 ದಿನಗಳಲ್ಲಿ 500 ಜನರಲ್ಲಿ ಮದ್ರಾಸ್ ಐ ಕಾಣಿಸಿಕೊಂಡಿದೆ. ಈ ಬಾರಿಯ ‘ಕಂಜಕ್ಟಿವೈಟಿಸ್’ ವೈರಸ್ ಶಾಂತವಾಗಿದ್ದು ಯಾರಿಗೂ ದೃಷ್ಟಿ ಹಾನಿಯಾಗುವುದಿಲ್ಲ. ವೈದ್ಯರನ್ನು ಸಂಪರ್ಕಿಸಿ ಔಷಧಗಳನ್ನು ಪಡೆದರೆ ಸಾಕು. ಹೆದರುವ ಅವಶ್ಯಕತೆ ಇಲ್ಲ.
ಡಾ.ಎಚ್.ಎಂ. ರವೀಂದ್ರನಾಥ್ ನೇತ್ರತಜ್ಞ ದೃಷ್ಟಿ ಕಣ್ಣಿನ ಆಸ್ಪತ್ರೆ
ಇದೊಂದು ಅಂಟು ರೋಗವಾಗಿದ್ದು ರೋಗ ಬಂದ ಬಳಿಕ ಆಸ್ಪತ್ರೆಗೆ ಹೋಗುವುದಕ್ಕಿಂತ ರೋಗ ಹರಡದಂತೆ ಮುಂಜಾಗ್ರತೆ ವಹಿಸಬೇಕು.
ಡಾ.ಎಸ್.ಎಸ್.ಕೋಳಕೂರ್ ನೇತ್ರ ತಜ್ಞ ಚಿಗಟೇರಿ ಆಸ್ಪತ್ರೆ

ರೋಗದ ಲಕ್ಷಣಗಳು

ಕಣ್ಣುಗಳು ಕೆಂಪಾಗುವುದು ನೀರು ಬರುವುದು ಕಣ್ಣುಗಳಲ್ಲಿ ಪಿಸುರು (ಪಿಚ್ಚು) ಬರುವುದು ದೃಷ್ಟಿ ಕಡಿಮೆ ಆಗುವುದು ಬಿಸಿಲಿಗೆ ಕಣ್ಣುಗಳು ಕುಕ್ಕುವುದು ಕಣ್ಣುಗಳನ್ನು ಬಿಡಲು ಆಗದಿರುವುದು ರೋಗದ ಪ್ರಮುಖ ಲಕ್ಷಣಗಳಾಗಿವೆ’ ಎಂದು ಚಿಗಟೇರಿ ಆಸ್ಪತ್ರೆಯ ನೇತ್ರ ತಜ್ಞ ಎಸ್.ಎಸ್. ಕೊಳಕೂರ ತಿಳಿಸಿದರು.

ಮುಂಜಾಗೃತಾ ಕ್ರಮಗಳು

*ರೋಗಿಯು ಬಳಸಿದ ವಸ್ತುಗಳನ್ನು ಮುಟ್ಟಬಾರದು

*ಪದೇ ಪದೇ ಕೈಗಳನ್ನು ಸ್ಯಾನಿಟೈಸರ್‌ನಿಂದ ತೊಳೆದುಕೊಳ್ಳಬೇಕು

*ವೈರಸ್ ಕಾಣಿಸಿಕೊಂಡಾಗ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಸಲಹೆ ಪಡೆಯಬೇಕು

*ವೈದ್ಯರಿಂದ ತಪಾಸಣೆ ಮಾಡಿಸದೇ ಮೆಡಿಕಲ್ ಸ್ಟೋರ್‌ನಲ್ಲಿ ಸಿಗುವ ಡ್ರಾಪ್ಸ್‌ಗಳನ್ನು ಬಳಸಬಾರದು

*ವೈದ್ಯರು ಸಲಹೆ ಮಾಡಿದ ಕಣ್ಣಿನ ಔಷಧಗಳನ್ನು ಬಳಸುವುದು ಸೂಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.